Gold Chain Theft : ಯಮಲೂರು ಚೌಡೇಶ್ವರಿ ದೇವಿಯ ತಾಳಿಯನ್ನೇ ಕದ್ದೊಯ್ದಿದ್ದ ಈತ!
ಸರಗಳ್ಳರು ದೇವರನ್ನೂ ಬಿಡಲ್ಲ ಎಂಬುದಕ್ಕೆ ಈ ಕಳ್ಳತನ ಪ್ರಕರಣವೇ ನಿದರ್ಶನ. ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣ ಇದು. ಯಮಲೂರು ಚೌಡೇಶ್ವರಿ ದೇವಿಯ ತಾಳಿಯನ್ನು ಕಳವು ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳತನ ಹೊಸದೇನಲ್ಲ. ಪೊಲೀಸರು ಪದೇಪದೆ ಎಚ್ಚರಿಸುತ್ತಲೂ ಇದ್ದಾರೆ. ಆದರೂ, ಅಲ್ಲಲ್ಲಿ ಸರಗಳ್ಳತನ, ಸರ ಸೆಳೆದೋಡುವ ಕಳ್ಳರು ತಮ್ಮ ವೃತ್ತಿ ಮುಂದುವರಿಸಿಕೊಂಡು ಹೋಗುತ್ತಿರುವುದೂ ವಾಸ್ತವ. ಆದರೆ ಈ ಕಳ್ಳ ಎಲ್ಲರಂತಲ್ಲ. ದೇವಸ್ಥಾನವನ್ನೇ ಆಯ್ಕೆ ಮಾಡಿಕೊಂಡಿದ್ದ. ದೇವಿಯ ಕೊರಳಲ್ಲಿದ್ದ ತಾಳಿಯೇ ಆತನ ಕಣ್ಣು ಕೋರೈಸಿತ್ತು. ಯಾರೂ ಇಲ್ಲದ ಸಂದರ್ಭ ನೋಡಿ, ಆತ ದೇವಿಯ ತಾಳಿ ಕಳವು ಮಾಡಿ ಓಡಿ ಹೋಗಿದ್ದ. ಆದರೆ ಅದೃಷ್ಟ ಕೈಕೊಟ್ಟಿತ್ತು.
ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯಮಲೂರು ಚೌಡೇಶ್ವರಿ ದೇವಸ್ಥಾನದಲ್ಲಿ ದೇವಿಯ ತಾಳಿ ಹಾರ ಜುಲೈ 4ರಂದು ಕಳವಾಗಿತ್ತು. ಜುಲೈ 7ರಂದು (ಗುರುವಾರ) ದೇವಿಯ ತಾಳಿ ಹಾರ ಕಳವು ಮಾಡಿದ ಕಳ್ಳನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದರು.
ಬಂಧಿತನನ್ನು ಚಂದ್ರಶೇಖರ ಬಿನ್ ವೆಂಕಟಯ್ಯ ಎಂದು ಗುರುತಿಸಲಾಗಿದೆ. ಬೆಂಗಳೂರು ಜೆಪಿನಗರ ಜರಗನಹಳ್ಳಿಯ ಶಿವನ ದೇವಸ್ಥಾನದ ಸಮೀಪದ ನಿವಾಸಿ ಈತ. ಮೂವತ್ತೈದು ವರ್ಷದ ಈ ಆರೋಪಿಯ ಬಳಿ ಇದ್ದ 3 ಲಕ್ಷ ರೂಪಾಯಿ ಬೆಲೆಬಾಳುವ 65 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕು ಸಂತೆಕೋಡಿಹಳ್ಳಿ ಮಲ್ಲಾಪುರ ಗ್ರಾಮದವನು.
ಆರೋಪಿ ಹೇಳಿದ್ದೇನು?
ಬಂಧಿತ ಆರೋಪಿ ಚಂದ್ರಶೇಖರ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ನೀಡಿದ ಹೇಳಿಕೆ ಇಷ್ಟು - ಯಮಲೂರು ಮುಖ್ಯರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನದ ಒಳಕ್ಕೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಗರ್ಭಗುಡಿ ತೆರೆದಿತ್ತು. ಚೌಡೇಶ್ವರಿ ದೇವಿಯ ಕೊರಳಿನಲ್ಲಿ ಚಿನ್ನದ ತಾಳಿ ಇರುವುದು ಕಂಡಿತು.
ಸುತ್ತಮುತ್ತ ಒಂದು ರೌಂಡ್ ನೋಡಿಕೊಂಡು ಬಂದೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಗರ್ಭಗುಡಿಯ ಒಳಕ್ಕೆ ಹೋದೆ. ಅಲ್ಲಿ ದೇವಿಯ ಕತ್ತಿನಲ್ಲಿದ್ದ ತಾಳಿಯನ್ನು ಎತ್ತಿಕೊಂಡು ಓಡಿ ಹೋದೆ.
ಪೊಲೀಸರಿಗೆ ಬಂದಿರುವ ದೂರಿನ ಪ್ರಕಾರ, ಚೌಡೇಶ್ವರಿ ದೇವಿಯ ತಾಳಿ ಹಾರದ ತೂಕ 48 ಗ್ರಾಂ ಇತ್ತು. ತಾಳಿ ಹಾರ ಕಳವಾದ ದಿನವೇ ಪೊಲೀಸ್ ದೂರು ದಾಖಲಾಗಿತ್ತು. ಎಫ್‌ಐಆರ್ ದಾಖಲಿಸಿದ ಪೊಲೀಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದರು. ಗುರುವಾರ ಈತ ಪತ್ತೆಯಾಗಿದ್ದು, ಕೂಡಲೇ ವಶಕ್ಕೆ ತೆಗೆದುಕೊಂಡಿದ್ದರು.
ಇನ್ನೂ ಎರಡು ಕಳವು ಪ್ರಕರಣ
ಬಂಧಿತ ಚಂದ್ರಶೇಖರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ ವೇಳೆ, ಆತ ಇನ್ನೂ ಎರಡು ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ಧಾನೆ. ಆತನ ಬಳಿ ಒಟ್ಟು 65 ಗ್ರಾಂ ಚಿನ್ನಾಭರಣ ಇದ್ದವು. ಅವುಗಳ ಒಟ್ಟು ಮೌಲ್ಯ 3 ಲಕ್ಷ ರೂಪಾಯಿ ಎಂದು ಮಾರತ್ತಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಿಶೋರ್ ಭರಣಿ ತಿಳಿಸಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎಲ್.ಆರ್ ರೆಡ್ಡಿ, ಪಿಎಸ್‌ಐ ಮಂಜುನಾಥ ಸ್ವಾಮಿ ಜೆ., ಎಎಸ್‌ಐ ಹರಿನಾಥ ಹಾಗೂ ಸಿಬ್ಬಂದಿಗಳಾದ ರೋಷನ್, ಅರ್ಜುನ್ ನಾಯ್ಕ್, ಮಹಿಬೂಬ್, ಮಹಾದೇವ ನಾಯ್ಕ್, ರಾಜು, ಮಂಜುನಾಥ್ ಪಾಟೀಲ ಮತ್ತು ಮಹೇಶ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.