Mysore Crime: ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿ ಕೊಲೆ ಪ್ರಕರಣ; ಸುಪಾರಿ ಪಡೆದಿದ್ದ ರೌಡಿಶೀಟರ್ ಬಂಧನ
ಮೈಸೂರು ಅಪರಾಧ ಸುದ್ದಿ: ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪಾರಿ ಪಡೆದಿದ್ದ ರೌಡಿಶೀಟರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಪತಿ ಕೊಲೆ ಪ್ರಕರಣವನ್ನು ಭೇದಿಸಿರುವ ನಂಜನಗೂಡು ಗ್ರಾಮಾಂತರ ಪೊಲೀಸರು, ರೌಡಿಶೀಟರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ದಿನಗಳ ಹಿಂದೆ ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ (36) ಸೇರಿದಂತೆ ನಾಲ್ವರ ಬಂಧನವಾಗಿತ್ತು. ಇದೀಗ ಒಟ್ಟಾರೆ ಐವರು ಬಂಧನಕ್ಕೆ ಒಳಪಟ್ಟಿದ್ದಾರೆ. ನಂಜನಗೂಡಿನ ನೀಲಕಂಠನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆಎಚ್‌ಬಿ ಕಾಲೋನಿ ನಿವಾಸಿ ಮಹೇಂದ್ರ (25) ಬಂಧನವಾಗಿತ್ತು. ಇದೀಗ ಪ್ರಮುಖ ಆರೋಪಿ ಧನರಾಜ್ ಆಲಿಯಾಸ್ ಭೋಲಾ ಬಂಧನಕ್ಕೆ ಒಳಗಾಗಿದ್ದಾರೆ.
ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದಿದ್ದ ಧನರಾಜ್ ಹತ್ಯೆ ಕೇಸ್ನಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ಇದೇ ಪ್ರಕರಣದಲ್ಲಿ ಕೊಲೆ ಆರೋಪಿಯೂ ಆಗಿರುವ ಬಿಜೆಪಿ ಮುಖಂಡ ಗೋವರ್ಧನ್, ಧನರಾಜ್ ಸ್ನೇಹಿತ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 6ರಂದು ನಂಜನಗೂಡಿನ ದೇವರಸನಹಳ್ಳಿಯಲ್ಲಿ ಕೊಲೆ ನಡೆದಿತ್ತು. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಸೌಭಾಗ್ಯ ಪತಿ ನಂಜುಂಡಸ್ವಾಮಿ ಹತ್ಯೆಗೆ ಒಳಗಾದವರು. ಅಧಿಕಾರ, ಅನುದಾನ ಬಳಕೆಗೆ ತಮ್ಮ ಆಪ್ತೆ ಸುಮತಿ ಎಂಬವರನ್ನು ಅಧ್ಯಕ್ಷೆಯನ್ನಾಗಿ ಮಾಡಿದ್ದ ಹಾಲಿ ಸದಸ್ಯ ಗೋವರ್ಧನ್, ಸುಫಾರಿ ನೀಡಿದ್ದರು ಎನ್ನಲಾಗಿದೆ.
ಅಕ್ಟೋಬರ್ 6ರಂದು ದೇವರಸನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸೌಭಾಗ್ಯ ಪತಿ ಕೆಬ್ಬೇಪುರ ಗ್ರಾಮದ ನಂಜುಂಡಸ್ವಾಮಿ (47) ಶವ ಹೊಸೂರು ಸಮೀಪ ಪತ್ತೆಯಾಗಿತ್ತು. ಕೈಕಾಲು ಮುರಿದು, ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಆತನ ದೇಹದ ಮೇಲೆ ಕಂಡು ಬಂದಿತ್ತು. ಭತ್ತದ ಗದ್ದೆಯಲ್ಲಿ ಬಿಸಾಡಿ ಅಪಘಾತ ಎಂಬಂತೆ ಬಿಂಬಿಸಿದ್ದರು. ಈ ಸಂಬಂಧ ತನ್ನ ಪತಿಯನ್ನು ರಾಜಕೀಯ ಪ್ರೇರಿತವಾಗಿ ಕೊಲೆ ಮಾಡಿದ್ದಾರೆ ಎಂದು ಪತ್ನಿ ದೂರು ದಾಖಲಿಸಿದ್ದರು. ಸೌಭಾಗ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರಿಗೆ ಅಧಿಕಾರ ನೀಡಿದರೆ ತನ್ನ ಅಸ್ತಿತ್ವ ಹೋಗುತ್ತದೆ ಎಂದುಕೊಂಡಿದ್ದ ಗೋವರ್ಧನ್, ಗ್ರಾ.ಪಂಗೆ ಬಂದ ಕೋಟಿ ಕೋಟಿ ರೂಪಾಯಿ ಅನುದಾನದ ಕಮೀಷನ್ ಕೈ ತಪ್ಪುತ್ತದೆ ಎಂಬ ಆತಂಕದಲ್ಲಿದ್ದರು. ಈ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.