ಸಂತ್ರಸ್ತೆಯ ಅಪಹರಣ ಕೇಸ್; ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್, ಪ್ರಜ್ವಲ್ ರೇವಣ್ಣ ತಾಯಿಗೆ ಕೊಂಚ ರಿಲೀಫ್
ಸಂತ್ರಸ್ತೆ ಮಹಿಳೆಯ ಅಪಹರಣ ಕೇಸ್‌ನಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯರು ಕ್ರಿಮಿನಲ್ ಕೇಸ್ ದಾಖಲಿಸದಂತೆ ತಡೆಯಲು ಪ್ರಯತ್ನಿಸಿದ್ದರು ಎಂಬ ಆರೋಪ ಭವಾನಿ ರೇವಣ್ಣ ಮೇಲಿದೆ.
ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸಂತ್ರಸ್ತೆಯರನ್ನು ಕೇಸ್ ದಾಖಲಿಸದಂತೆ ತಡೆಯಲು ಪ್ರಯತ್ನಿಸಿದ ಆರೋಪವನ್ನು ಭವಾನಿ ರೇವಣ್ಣ ಎದುರಿಸುತ್ತಿದ್ದಾರೆ.
ಭವಾನಿ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಸಂಬಂಧ ಜೂ.14ರಂದು ವಾದ - ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ತೀರ್ಪುನ್ನು ಕಾಯ್ದಿರಿಸಿತ್ತು. ಇಂದು ಅವರ ನ್ಯಾಯಪೀಠ, ಭವಾನಿ ರೇವಣ್ಣ ಅವರಿಗೆ ಷರತ್ತುಬದ್ದ ಜಾಮೀನು ನೀಡಿ ಆದೇಶ ಮಾಡಿದೆ. ಆದರೆ, ವಿಚಾರಣೆಗೆ ಕರೆ ಕಳುಹಿಸಿದಾಗ ಅದಕ್ಕೆ ಹಾಜರಾಗಬೇಕು. ಮೈಸೂರು, ಹಾಸನಕ್ಕೆ ತನಿಖೆಗೆ ಸೂಚಿಸಿದಾಗ ಮಾತ್ರ ಹೋಗಬೇಕು ಎಂದು ಪೀಠ ನಿರ್ದೇಶಿಸಿದೆ.
ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ
ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್‌ನಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ದೂರಿನ ಪ್ರಕಾರ, ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ದ ಎಫ್‌ಐಆರ್ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಮೈಸೂರು ಜಿಲ್ಲೆ ಕೆಆರ್‌ನಗರ ತಾಲ್ಲೂಕಿನ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪಕ್ಕಾಗಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಕೂಡ ಆರೋಪಿಯಾಗಿರುವುದು ದೃಢಪಟ್ಟ ಕಾರಣ, ಅವರಿಗೂ ವಿಶೇಷ ತನಿಖಾ ತಂಡ ನೊಟೀಸ್ ಜಾರಿ ಮಾಡಿತ್ತು.
ಆದರೆ ಭವಾನಿ ರೇವಣ್ಣ ಮಧ್ಯಂತರ ಜಾಮೀನು ಸಿಗುವ ತನಕವೂ ಅಂದರೆ ಜೂನ್ 7 ರ ತನಕವೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಪ್ರಕರಣದಲ್ಲಿ ಎಸ್‌ಐಟಿ ಬಂಧಿಸಬಹುದು ಎನ್ನುವ ಭೀತಿಯಿಂದ ಭವಾನಿ ರೇವಣ್ಣ ಅವರು ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ನನ್ನ ಕಕ್ಷಿದಾರರು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೂ ಅವರಿಗೆ ನೊಟೀಸ್ ಅನ್ನು ನೀಡಲಾಗಿದೆ. ಇದೇ ಪ್ರಕರಣದಲ್ಲಿ ಬಂಧಿಸುವ ಆತಂಕವೂ ಇದೆ. ಈ ಕಾರಣದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಪರಿಗಣಿಸಬೇಕು ಎಂದು ಭವಾನಿ ರೇವಣ್ಣ ಪರ ವಕೀಲರು ವಾದಿಸಿದರು. ಅಲ್ಲದೇ ಪ್ರತಿವಾದವನ್ನೂ ಆಲಿಸಿದ ಕೋರ್ಟ್ ಬಳಿಕ ಜೂನ್ ಆರಂಭದಲ್ಲಿ ಮಧ್ಯಂತರ ಜಾಮೀನು ನೀಡಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.