ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ನಿತ್ಯ ವಿಶೇಷ ಪೂಜೆ ಭಕ್ತರ ದರ್ಶನಕ್ಕೆ ಇತಿಹಾಸ ಪ್ರಸಿದ್ಧ ಗೂಳೂರು ಗಣಪ ರೆಡಿ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ನಿತ್ಯ ವಿಶೇಷ ಪೂಜೆ ಭಕ್ತರ ದರ್ಶನಕ್ಕೆ ಇತಿಹಾಸ ಪ್ರಸಿದ್ಧ ಗೂಳೂರು ಗಣಪ ರೆಡಿ

ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ನಿತ್ಯ ವಿಶೇಷ ಪೂಜೆ ಭಕ್ತರ ದರ್ಶನಕ್ಕೆ ಇತಿಹಾಸ ಪ್ರಸಿದ್ಧ ಗೂಳೂರು ಗಣಪ ರೆಡಿ

Guluru Ganapathi: ಐತಿಹಾಸಿಕ ಹಿನ್ನೆಲೆ ಹೊಂದಿರುವ ಗೂಳೂರು ಮಹಾಗಣಪತಿಯನ್ನು ಬಲಿಪಾಡ್ಯಮಿ ದಿನ ಪ್ರತಿಷ್ಠಾಪಿಸಿ, ವಿಶೇಷ ಪೂಜಾ ಕೈಂಕರ್ಯದೊಂದಿಗೆ ಭಕ್ತರ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಈ ಬೃಹತ್ ಮಹಾಗಣಪತಿಗೆ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ನಿತ್ಯ ವಿಶೇಷ ಪೂಜೆ ಭಕ್ತರ ದರ್ಶನಕ್ಕೆ ಇತಿಹಾಸ ಪ್ರಸಿದ್ಧ ಗೂಳೂರು ಗಣಪ ರೆಡಿ
ತುಮಕೂರಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ; ನಿತ್ಯ ವಿಶೇಷ ಪೂಜೆ ಭಕ್ತರ ದರ್ಶನಕ್ಕೆ ಇತಿಹಾಸ ಪ್ರಸಿದ್ಧ ಗೂಳೂರು ಗಣಪ ರೆಡಿ

ತುಮಕೂರು: ಜಿಲ್ಲೆಯ ಗೂಳೂರಿನಲ್ಲಿ ಗಣೇಶನ ಹಬ್ಬ ಆರಂಭವಾಗುವುದೇ ದೀಪಾವಳಿ ಹಬ್ಬದ ಮುಗಿದ ಮೇಲೆ! ಹೌದು, ಪ್ರತಿ ವರ್ಷದಂತೆ ಈ ಬಾರಿಯೂ ಇತಿಹಾಸ ಪ್ರಸಿದ್ದ ಗೂಳೂರು ಮಹಾ ಗಣಪತಿ ಮೂರ್ತಿಯನ್ನು ಬಲಿಪಾಡ್ಯಮಿ ದಿನದಂದು ಧಾರ್ಮಿಕ ವಿಧಿ ವಿಧಾನ ಹಾಗೂ ಸಂಪ್ರದಾಯದೊಂದಿಗೆ ಪ್ರತಿಷ್ಠಾಪಿಸಲಾಗಿದೆ. ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ್ದು, ಒಂದು ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಗೂಳೂರು ಮಹಾ ಗಣಪತಿಯನ್ನು ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿಶೇಷ ಪೂಜೆ ನಡೆಸಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ಬಲಿಪಾಡ್ಯಮಿ ದಿನದಂದು ಗಣೇಶಮೂರ್ತಿಗೆ ವಿಶೇಷ ಪೂಜೆಯೊಂದಿಗೆ ಕಣ್ಣುಧಾರಣೆ ಮಾಡಲಾಯಿತು. ನಂತರ ಗಣೇಶಮೂರ್ತಿಯ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಇನ್ನು ಒಂದು ತಿಂಗಳ ಕಾಲ ಪ್ರತಿನಿತ್ಯ ಪೂಜೆ ಪುನಸ್ಕಾರ ನೆರವೇರಲಿದೆ. ಈ ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು.

ಪ್ರತಿದಿನ ರಾತ್ರಿ 9 ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ. 18 ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸಲಿದ್ದಾರೆ. ಗಣೇಶ ಚೌತಿ ಸಂದರ್ಭದ ಬದಲು ಕಾರ್ತಿಕ ಮಾಸದಲ್ಲಿ ಗೂಳೂರಿನಲ್ಲಿ ಗಣೇಶ ಉತ್ಸವ ನಡೆಯುವುದು ವಿಶೇಷ. ಗಣೇಶ ಚೌತಿಯಂದು ಗಣೇಶಮೂರ್ತಿ ನಿರ್ಮಾಣ ಆರಂಭವಾಗಲಿದ್ದು, ಆಯುಧಪೂಜೆ, ವಿಜಯದಶಮಿ ಹೊತ್ತಿಗೆ ಮೂರ್ತಿ ಒಂದು ಆಕಾರಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ಅದರ ನಾಬಿಯೊಳಗೆ ಚಿಕ್ಕಗಣಪತಿ ಕೂರಿಸಲಾಗುವುದು. ಕಾರ್ತಿಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರ ಭೂಷಿತನಾಗಿ ರೂಪುಗೊಂಡು ಬಲಿಪಾಡ್ಯಮಿಯಿಂದ ಭಕ್ತರಿಗೆ ದರ್ಶನ ಭಾಗ್ಯ ಪ್ರಾಪ್ತಿಯಾಗುತ್ತಿದೆ.

ಎರಡು ದಿನ ಜಾತ್ರೆ

ಬಲಿಪಾಡ್ಯಮಿ ದಿನದಿಂದ ಹಿಡಿದು ಡಿ​ 7 ಮತ್ತು 8ರವರೆಗೆ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಗಮ ಸಂಗೀತ, ಪೌರಾಣಿಕ ನಾಟಕ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನೆರವೇರಲಿವೆ ಎಂದು ಗೂಳೂರು ಶ್ರೀಮಹಾಗಣಪತಿ ಭಕ್ತ ಮಂಡಳಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಜಿಎಸ್ ಶಿವಕುಮಾರ್ ಹಾಗೂ ದೇವಾಲಯದ ಅರ್ಚಕ ಶಿವಕುಮಾರ ಶಾಸ್ತ್ರಿಗಳು ತಿಳಿಸಿದ್ದಾರೆ. ಡಿ.7 ಮತ್ತು 8 ರಂದು ಗಣೇಶ ಜಾತ್ರೆ ನಡೆಯಲಿದ್ದು, ಊರಿನ ಎಲ್ಲಾ ಕೋಮಿನವರು ಸೇರಿ ಜಾತ್ರಾ ಮಹೋತ್ಸವ ನೆರವೇರಿಸಲಿದ್ದಾರೆ. ಈ ವರ್ಷವೂ ಗೂಳೂರು ಕೆರೆ ಭರ್ತಿಯಾಗಿದ್ದು, ಅತ್ಯಾಕರ್ಷಕ ಸಿಡಿಮದ್ದಿನ ಪ್ರದರ್ಶನದೊಂದಿಗೆ ಡಿ.8 ರಂದು ರಾತ್ರಿ ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ನಡೆಯಲಿದೆ ಎಂದರು.

ಡಿಸೆಂಬರ್ 8ರಂದು ಗೂಳೂರು ಕೆರೆಯಲ್ಲಿ ವಿಸರ್ಜನೆ

ಡಿ.7 ರಂದು ರಾತ್ರಿ 18 ಕೋಮಿನ ಜನರ ಸಮ್ಮುಖದಲ್ಲಿ ಗಣೇಶ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಲಾಗುವುದು. ಡಿ.8 ರಂದು ಸಂಜೆ 5 ಗಂಟೆಯ ನಂತರ ಗೂಳೂರು ಕೆರೆಯಲ್ಲಿ ವೈಭವಯುತವಾಗಿ ವಿಸರ್ಜಿಸಲಾಗುವುದು. ಒಂದು ತಿಂಗಳ ಕಾಲ ಗಣೇಶ ಮೂರ್ತಿಯ ದರ್ಶನೋತ್ಸವಕ್ಕೆ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಬರುತ್ತಾರೆ ಎಂದು ತಿಳಿಸಿದ್ದಾರೆ.

Whats_app_banner