ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲುಗಳು ಮತ್ತು ಸಾಧ್ಯತೆಗಳು: ಡಾ.ಉದಯ ಶಂಕರ ಪುರಾಣಿಕ ಅಭಿಮತ
ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ತಾಣವು ರಾಜ್ಯದ ಇತಿಹಾಸ, ವರ್ತಮಾನ ಮತ್ತು ನಾಳೆಗಳ ಕುರಿತ ಸರಣಿ ಬರಹ ಪ್ರಕಟಿಸುತ್ತ ಬಂದಿದೆ. ಅದರ ಭಾಗವಾಗಿ ವಿಜ್ಞಾನಿ, ವಿಜ್ಞಾನ ಲೇಖಕ ಡಾ. ಉದಯ ಶಂಕರ ಪುರಾಣಿಕ ಅವರು ಕನ್ನಡ ಸಾಹಿತ್ಯದಲ್ಲಿ AI ಆಧಾರಿತ ಅನುವಾದ- ಸವಾಲು ಮತ್ತು ಸಾಧ್ಯತೆಗಳ ಕುರಿತು ಬೆಳಕು ಚೆಲ್ಲಿದ ಲೇಖನ ಇಲ್ಲಿದೆ.
ವಿವಿಧ ಕ್ಷೇತ್ರಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ ಮತ್ತು ಭಾಷಾ ಅನುವಾದ ಕ್ಷೇತ್ರವು ಇದಕ್ಕೆ ಹೊರತಾಗಿಲ್ಲ. ವಿಶ್ವದ ಹಲವು ಭಾಷೆಗಳಲ್ಲಿ ನಡೆದಿರುವಂತೆ, ಶಾಸ್ತ್ರೀಯ ಭಾಷೆ ಕನ್ನಡದಲ್ಲಿ ಕೂಡ AI ಆಧಾರಿತ ಅನುವಾದ ಸೌಲಭ್ಯಗಳ ಅಭಿವೃದ್ದಿ ಮತ್ತು ಬಳಕೆಯ ಅಗತ್ಯವಿದೆ. ಯಾವ ಭಾಷೆಗಳ ಸಾಹಿತ್ಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಅನುವಾದ ಸೌಲಭ್ಯಗಳಿವೆ ಎನ್ನುವ ಪ್ರಶ್ನೆಗೆ, ಕೆಲವು ಉದಾಹರಣೆಗಳು ಹೀಗಿವೆ;
ಇಂಗ್ಲಿಷ್: ಹೆಚ್ಚಿನ ಎಐ ತಂತ್ರಜ್ಞಾನ ಆಧಾರಿತ ಅನುವಾದ ಸೌಲಭ್ಯಗಳು ಇಂಗ್ಲಿಷ್‌ಗೆ ಮತ್ತು ಇಂಗ್ಲಿಷ್‌ನಿಂದ ಅನುವಾದಿಸಲು ನೆರವಾಗುತ್ತಿವೆ.
ಫ್ರೆಂಚ್, ಸ್ಪ್ಯಾನಿಷ್, ಜರ್ಮನ್: ಇವು ಯುರೋಪಿನ ಪ್ರಮುಖ ಭಾಷೆಗಳಾಗಿದ್ದು, ಇವುಗಳಿಗೆ ಮತ್ತು ಇವುಗಳಿಂದ ಇಂಗ್ಲಿಷ್‌ಗೆ ಅನುವಾದಿಸಲು ಹಲವಾರು ಉತ್ತಮ ಗುಣಮಟ್ಟದ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಲಭ್ಯವಿದೆ.
ಚೀನೀ, ಜಪಾನೀಸ್, ಕೊರಿಯನ್: ಏಷ್ಯಾದ ಪ್ರಮುಖ ಭಾಷೆಗಳಾದ ಇವುಗಳಿಗೂ ಎಐ ತಂತ್ರಜ್ಞಾನ ಆಧಾರಿತ ಅನುವಾದ ಸೌಲಭ್ಯಗಳು ಲಭ್ಯವಿದೆ.
ರಷ್ಯನ್, ಅರೇಬಿಕ್: ಈ ಭಾಷೆಗಳಿಗೆ ಮತ್ತು ಇವುಗಳಿಂದ ಇಂಗ್ಲಿಷ್‌ಗೆ ಅನುವಾದಿಸಲು ಹಲವಾರು ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಲಭ್ಯವಿದೆ.
ಭಾರತೀಯ ಭಾಷೆಗಳು: ರಾಷ್ಟ್ರೀಯ ಭಾಷಾ ತಂತ್ರಜ್ಞಾನ ಮಿಷನ್ (NLTM) ಮೊದಲಾದ ಸಂಸ್ಥೆಗಳ ಮೂಲಕ ಭಾರತೀಯ ಭಾಷೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಅನುವಾದ ಸೌಲಭ್ಯಗಳ ಅಭಿವೃದ್ಧಿ ನಡೆದಿದೆ. ಕನ್ನಡ ಸೇರಿದಂತೆ ಕೆಲವು ರಾಷ್ಟ್ರೀಯ ಭಾಷೆಗಳಲ್ಲಿ ಎಐ ಆಧಾರಿತ ಅನುವಾದ ಸೌಲಭ್ಯವನ್ನು ನೀಡಲು “ಭಾಷಿಣಿ” ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೂ, ವಿಶ್ವದ ಪ್ರಮುಖ ಭಾಷೆಗಳಲ್ಲಿ ಲಭ್ಯವಿರುವ ಎಐ ಆಧಾರಿತ ಸೌಲಭ್ಯಗಳಿಗೆ ಹೋಲಿಸಿದರೆ ಭಾರತೀಯ ಭಾಷೆಗಳಿಗೆ ಲಭ್ಯವಿರುವ ಸೌಲಭ್ಯಗಳಲ್ಲಿ ಸುಧಾರಣೆಗೆ ಇನ್ನೂ ಅವಕಾಶವಿದೆ.
ಎಐ ತಂತ್ರಜ್ಞಾನ ಮತ್ತು ಕರ್ನಾಟಕ ಸರ್ಕಾರ ಗಮನಿಸಬೇಕಾದ ಅಂಶಗಳು
ಎಐ ತಂತ್ರಜ್ಞಾನ ಕ್ಷೇತ್ರದಲ್ಲಿರುವ ದೇಶಿಯ ಮತ್ತು ವಿದೇಶಿ ಸಂಸ್ಥೆಗಳು, ಕನ್ನಡ ಸಾಹಿತ್ಯಕ್ಕಾಗಿ ಎಐ ಆಧಾರಿತ ಅನುವಾದ ಸೌಲಭ್ಯ ಅಭಿವೃದ್ಧಿ ಪಡಿಸಬಹುದು. ಏಕೆಂದರೆ, ಎಐ ತಂತ್ರಜ್ಞಾನಕ್ಕೆ ಅಗತ್ಯವಾದ ತಂತ್ರಾಂಶಗಳು, ಮೂಲಭೂತ ಸೌಲಭ್ಯಗಳು, ತಂತ್ರಜ್ಞರು ಮತ್ತು ಗುಣಮಟ್ಟ ಪರೀಕ್ಷೆ ಸೌಲಭ್ಯಗಳು ಇಂತಹ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಆದರೆ ಕನ್ನಡ ಸಾಹಿತ್ಯಕ್ಕಾಗಿ ಎಐ ತಂತ್ರಜ್ಞಾನ ಆಧರಿತ ಅನುವಾದ ಸೌಲಭ್ಯವನ್ನು ಅಭಿವೃದ್ಧಿಪಡಿಸಿ ಎಂದು ಈ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ಈ ಅಂಶಗಳನ್ನು ಬಳಸಿಕೊಳ್ಳಬೇಕು.
ಕನ್ನಡದ ಜನಪ್ರಿಯತೆ: ಸಾಮಾನ್ಯವಾಗಿ ಹೆಚ್ಚು ಜನರು ಬಳಸುವ ಭಾಷೆಗಳಿಗೆ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು, ಐಟಿ ಕಂಪನಿಗಳು ಆಸಕ್ತಿ ತೋರಿಸುತ್ತವೆ.
ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಕನ್ನಡದ ಹಿರಿಮೆ, ಗರಿಮೆ ಮತ್ತು ಕರ್ನಾಟಕ ರಾಜ್ಯವಲ್ಲದೆ, ದೇಶದ ಬೇರೆ ರಾಜ್ಯಗಳಲ್ಲಿ ಮತ್ತು ದೇಶಗಳಲ್ಲಿರುವ ಕನ್ನಡಿಗರನ್ನು ಕುರಿತು ಅಂಕಿ ಅಂಶಗಳೊಡನೆ ಐಟಿ ಕಂಪನಿಗಳ ಮನವೊಲಿಸಲು ರಾಜ್ಯ ಸರ್ಕಾರ ಪ್ರಯತ್ನಿಸಬಹುದು.
ಆರ್ಥಿಕ ಮಹತ್ವ: ಸಾಮಾನ್ಯವಾಗಿ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಬಳಸುವ ಭಾಷೆಗಳಿಗೆ ಎಐ ಆಧಾರಿತ ಅನುವಾದ ಸೌಲಭ್ಯವನ್ನು ಅಭಿವೃದ್ದಿ ಪಡಿಸಲು ಐಟಿ ಕಂಪನಿಗಳು ಹೆಚ್ಚು ಆಸಕ್ತಿ ತೋರಿಸುತ್ತವೆ.
ಕನ್ನಡ ಸಾಹಿತ್ಯಕ್ಕೆ ದೇಶ ವಿದೇಶದಲ್ಲಿರುವ ಬೇಡಿಕೆಯನ್ನು ಮತ್ತು ಎಐ ಆಧಾರಿತ ಅನುವಾದ ಸೌಲಭ್ಯಕ್ಕೆ ದೊರೆಯುವ ಬೇಡಿಕೆಯನ್ನು ಕುರಿತು ಐಟಿ ಕಂಪನಿಗಳಿಗೆ ಮನವರಿಕೆ ಮಾಡಿಕೊಡಬಹುದು.
ಕನ್ನಡ ಯೋಜನೆಗೆ ನೆರವು: ಕನ್ನಡ ಸಾಹಿತ್ಯಕ್ಕೆ ಅಗತ್ಯವಾದ ಎಐ ಆಧಾರಿತ ಅನುವಾದ ಸೌಲಭ್ಯಗಳ ಅಭಿವೃದ್ಧಿ ಮಾಡುವ ಐಟಿ ಕಂಪನಿಗಳಿಗೆ, ಭಾಷೆಯ ದೃಷ್ಟಿಯಿಂದ ಅಗತ್ಯ ಮಾರ್ಗದರ್ಶನ ಮತ್ತು ಸಹಭಾಗಿತ್ವವನ್ನು ಕನ್ನಡ ವಿಶ್ವವಿದ್ಯಾಲಯ ಮತ್ತು ಕನ್ನಡ ವಿದ್ವಾಂಸರ ಮೂಲಕ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು.
ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು, ಪದಕೋಶಗಳು ಮೊದಲಾದ ಸೌಲಭ್ಯಗಳನ್ನು ಬಳಸಿಕೊಳ್ಳಲು , ಎಐ ಆಧಾರಿತ ಅನುವಾದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಐಟಿ ಕಂಪನಿಗಳಿಗೆ, ಅಗತ್ಯ ಅನುಮತಿಯನ್ನು ರಾಜ್ಯ ಸರ್ಕಾರ ನೀಡಬೇಕು.
ಕನ್ನಡ ಸಾಹಿತ್ಯಕ್ಕಾಗಿ ಅಗತ್ಯವಾದ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯ ಅಭಿವೃದ್ಧಿಪಡಿಸುವ ಐಟಿ ಕಂಪನಿಗಳಿಗೆ ಅಗತ್ಯವಾದ ಅರ್ಥಿಕ ನೆರವನ್ನು ಅಥವಾ ತೆರಿಗೆ ರಿಯಾಯತಿಯಂತಹ ಸೌಕರ್ಯಗಳನ್ನು ರಾಜ್ಯ ಸರ್ಕಾರ ನೀಡಬಹುದು.
ಕನ್ನಡ ಸಾಹಿತ್ಯಕ್ಕಾಗಿ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಭಿವೃದ್ದಿಪಡಿಸಲು ಅಪಾರ ಪ್ರಮಾಣದಲ್ಲಿ ಡೇಟಾ ಸಂಗ್ರಹಣೆ, ವಿಶ್ಲೇಷಣೆ ಮತ್ತು ಡೇಟಾ ಸೆಟ್‌ಗಳನ್ನು ರಚಿಸಬೇಕಾಗುತ್ತದೆ. ಈ ಕೆಲಸಕ್ಕಾಗಿ ಸೂಕ್ತ ವೇತನ ನೀಡಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಅಗತ್ಯ ಅರ್ಹತೆಯನ್ನು ಹೊಂದಿರುವ ಕನ್ನಡಿಗ ಯುವಕ-ಯುವತಿಯರಿಗೆ ಉದ್ಯೋಗವನ್ನು ರಾಜ್ಯ ಸರ್ಕಾರ ನೀಡಬಹುದು.
ತಜ್ಞರ ನೆರವು ಪಡೆಯಲು ಸರ್ಕಾರ ಹಿಂದೇಟು ಹಾಕುವುದೇಕೆ
ಸಾಮಾನ್ಯವಾಗಿ ರಾಜ್ಯ ಸರ್ಕಾರ ಘೋಷಿಸುವ ಕನ್ನಡ ತಂತ್ರಾಂಶವೆಂದರೆ, ಅದನ್ನು ಎನ್‌ಐಸಿ, ಇ-ಅಡಳಿತ ಇಲಾಖೆ ಮೊದಲಾದ ಸರ್ಕಾರಿ ಸಂಸ್ಥೆಗಳ ಮೂಲಕ ಅಭಿವೃದ್ಧಿ ಪಡಿಸುವ ಕೆಲಸವಾಗುತ್ತದೆ. ಆದರೆ, ಇದುವರೆಗೂ, ಕನ್ನಡದ ಮೇಲಿರುವ ಅಭಿಮಾನದಿಂದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಅಭಿವೃದ್ಧಿಪಡಿಸುವ ಕನ್ನಡ ತಂತ್ರಾಂಶಗಳಿಗೆ ರಾಜ್ಯ ಸರ್ಕಾರ ಯಾವುದೇ ಆರ್ಥಿಕ ನೆರವು ನೀಡುತ್ತಿಲ್ಲ ಮತ್ತು ಇಂತಹ ಕೆಲಸ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿಲ್ಲ.
ಹೀಗಾಗಿ, ಕನ್ನಡದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ಅನುವಾದ ಸೌಲಭ್ಯ ಅಭಿವೃದ್ಧಿ ಯೋಜನೆಗಳಲ್ಲಿ, ಎಐ ಕ್ಷೇತ್ರದಲ್ಲಿ ಅನುಭವ ಮತ್ತು ಕನ್ನಡ ಭಾಷೆಗಾಗಿ ಈ ತಂತ್ರಜ್ಞಾನವನ್ನು ಬಳಸಲು ಅಗತ್ಯವಾದ ಕೌಶಲವನ್ನು ಹೊಂದಿರುವ ತಜ್ಞರ ನೆರವು ಪಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು.
ಕನ್ನಡ ಸಾಹಿತ್ಯ ಮತ್ತು ವಿಶೇಷವಾಗಿ ಅನುವಾದ ಕ್ಷೇತ್ರಕ್ಕೆ ಅಗತ್ಯವಾದ ಅರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ತಂತ್ರಾಂಶಗಳು ಮತ್ತು ಸೌಲಭ್ಯಗಳನ್ನು ಅಭಿವೃದ್ದಿಪಡಿಸಲು, ಅವುಗಳ ಗುಣಮಟ್ಟ ಪರೀಕ್ಷೆ ಮಾಡಲು ಮತ್ತು ಸಾರ್ವಜನಿಕರಿಗೆ ಅಗತ್ಯ ತರಬೇತಿ ಮತ್ತು ತಾಂತ್ರಿಕ ನೆರವು ನೀಡಲು ಕಾರ್ಯಯೋಜನೆ ಮೊದಲು ಸಿದ್ಧವಾಗಬೇಕು. ಈ ಯೋಜನೆಗೆ ಅಗತ್ಯವಾದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಕೊಡಬೇಕು.
AI ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಮತ್ತು ಆವಿಷ್ಕಾರಗಳನ್ನು ಯಶಸ್ವಿಯಾಗಿ ಬಳಸಿಕೊಂಡರೆ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯನ್ನು ವಿಶ್ವಮಟ್ಟಕ್ಕೆ ತಲುಪಿಸಲು ಸಾಧ್ಯವಿದೆ. ಈ ಯೋಜನೆಯ ಅನುಷ್ಠಾನದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕನ್ನಡಿಗರಿಗೆ ಮತ್ತು ವಿಶೇಷವಾಗಿ ಕನ್ನಡದಲ್ಲಿ ಪದವಿ, ಸ್ನಾತಕ್ಕೋತ್ತರ ಪದವಿ ಪಡೆದವರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.
ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಪ್ರಯೋಜನಗಳಿವು
ಕನ್ನಡ ಸಾಹಿತ್ಯಕ್ಕಾಗಿ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳಿಂದ ದೊರೆಯುವ ಕೆಲವು ಪ್ರಯೋಜನಗಳು ಹೀಗಿವೆ;
೧) ಭಾಷೆ ಮತ್ತು ಗಡಿಗಳನ್ನು ಮೀರಿ, ಕನ್ನಡ ಸಾಹಿತ್ಯವನ್ನು ವಿಶ್ವದ ಪ್ರಮುಖ ಭಾಷೆಗಳಲ್ಲಿ ದೊರೆಯುವಂತೆ ಮಾಡಬಹುದು.
೨) AI ಆಧಾರಿತ ಅನುವಾದ ಸೌಲಭ್ಯಗಳಿಂದ ಹಳಗನ್ನಡ ಮೊದಲಗೊಂಡು ಕನ್ನಡದಲ್ಲಿ ಲಭ್ಯವಿರುವ ಎಲ್ಲಾ ಸಾಹಿತ್ಯವನ್ನು ಬೇರೆ ಭಾಷೆಗಳಿಗೆ ನಿಖರವಾಗಿ ಭಾಷಾಂತರಿಸಬಹುದು. ಜಾನಪದ ಮತ್ತು ಕನ್ನಡದ ಸಹೋದರ ಭಾಷೆಗಳಾದ ತುಳು, ಕೊಡವ, ಬ್ಯಾರಿ, ಕೊಂಕಣಿ ಮೊದಲಾದ ಭಾಷೆಗಳಲ್ಲಿರುವ ಸಾಹಿತ್ಯಕ್ಕೆ ಕೂಡ ಈ ಸೌಲಭ್ಯವನ್ನು ನೀಡಬಹುದು.
೩) ಇದು ಕನ್ನಡ ಸಾಹಿತ್ಯವನ್ನು ಬೇರೆ ಭಾಷಿಕರು ಓದಲು ಮತ್ತು ಮೆಚ್ಚಲು ನೆರವಾಗುತ್ತದೆ. ಕನ್ನಡ ಮತ್ತು ಬೇರೆ ಭಾಷೆಗಳ ಸಾಹಿತಿಗಳ ನಡುವೆ ಸಂಪರ್ಕ ಮತ್ತು ಸಹಭಾಗಿತ್ವವನ್ನು ಬೆಳೆಸಬಹುದು.
೪) ತಾಳೆಗರಿ, ಹಸ್ತಪ್ರತಿ ಮೊದಲಾದ ಮಾಧ್ಯಮಗಳಲ್ಲಿ ಲಭ್ಯವಿರುವ ಕನ್ನಡ ಕೃತಿಗಳು ಮತ್ತು ದಾಖಲೆಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸುವ ಮೂಲಕ ಮತ್ತು ಡಿಜಿಟಲ್ ಆರ್ಕೈವ್‌ಗಳನ್ನು ರಚಿಸುವ ಮೂಲಕ ಈ ಕೃತಿಗಳನ್ನು ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಯಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ತಜ್ಞರು ಭಾಗವಹಿಸಲು ಸಾಧ್ಯವಾಗುತ್ತದೆ.
೫) AI-ತಂತ್ರಜ್ಞಾನ ಆಧಾರಿತ ಭಾಷಾ ಮಾದರಿಗಳಲ್ಲಿ ಹೆಚ್ಚು ಅಭಿವೃದ್ಧಿ ನಡೆಯುತ್ತಿದೆ ಮತ್ತು ಹೊಸ ಆವಿಷ್ಕಾರಗಳು ಲಭ್ಯವಾಗುತ್ತಿವೆ. ಹೀಗಾಗಿ, ಮೂಲ ಕೃತಿಯ ಸೂಕ್ಷ್ಮ ವ್ಯತ್ಯಾಸಗಳು ಮತ್ತು ಸೌಂದರ್ಯವನ್ನು ಸೆರೆಹಿಡಿಯುವ ಸೃಜನಶೀಲ ಅನುವಾದಗಳನ್ನು ರಚಿಸಲು AI ಅನ್ನು ಬಳಸಬಹುದು.
೬) ಅನುವಾದವಾದ ಕನ್ನಡ ಕೃತಿಗಳ ದೊಡ್ಡ ಡೇಟಾಸೆಟ್‌ಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ವಿಶ್ಲೇಷಿಸುವ ಮೂಲಕ , AI ಮಾದರಿಗಳು ಮತ್ತು ಶೈಲಿಯ ಅಂಶಗಳನ್ನು ಗುರುತಿಸಲು ಕಲಿಯಬಹುದು. ಹೀಗೆ ಮಾಡುವುದರಿಂದ ಹೆಚ್ಚು ನಿಖರವಾದ ಮತ್ತು ಸಾಂಸ್ಕೃತಿಕವಾಗಿ ಸೂಕ್ತವಾದ ಅನುವಾದ ಮಾಡಲು ಸೂಕ್ತವಾಗುವಂತೆ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ.
ಎಐ ಸೌಲಭ್ಯ ಅಭಿವೃದ್ಧಿಗೆ ಹಲವು ಸವಾಲುಗಳಿವೆ
ಕನ್ನಡ ಸಾಹಿತ್ಯಕ್ಕಾಗಿ ಅಗತ್ಯವಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಹಲವು ಸವಾಲುಗಳಿವೆ.
೧) ಕನ್ನಡ ಸಾಹಿತ್ಯ ಅನುವಾದಕ್ಕಾಗಿ ಅಭಿವೃದ್ಧಿಪಡಿಸುವ AI ಅಲ್ಗಾರಿದಮ್‌ಗಳಲ್ಲಿ, ಯಾವುದೇ ವ್ಯಕ್ತಿ, ಸಮುದಾಯ ಮತ್ತು ಕೃತಿಯನ್ನು ಕುರಿತು ಪೂರ್ವಾಗ್ರಹ ಚಿಂತನೆಗಳು ಹಾಗೂ ಪಕ್ಷಪಾತದ ಧೋರಣೆ ಮೂಡದಂತೆ ಎಚ್ಚರಿಕೆವಹಿಸಬೇಕು.
೨) ಕನ್ನಡ ಸಾಹಿತ್ಯ ಅನುವಾದಕ್ಕಾಗಿ ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಭಿವೃದ್ಧಿ ಪಡಿಸುವಾಗ, ತರಬೇತಿ ಉದ್ದೇಶಕ್ಕಾಗಿ ದೊಡ್ಡ ಮಟ್ಟದಲ್ಲಿ ಡೇಟಾ ಬಳಸಲಾಗುತ್ತದೆ. ಒಂದು ವೇಳೆ ಈ ಡೇಟಾದಲ್ಲಿ ತಪ್ಪಿದ್ದರೆ ಅಥವಾ ಪೂರ್ವಾಗ್ರಹ ಚಿಂತನೆ ಮತ್ತು ಪಕ್ಷಪಾತ ಸೃಷ್ಟಿಸಲು ಪೂರಕವಾದ ಅಂಶಗಳಿದ್ದರೆ, AI ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಮಾಡುವ ಅನುವಾದದಲ್ಲಿ ಪೂರ್ವಾಗ್ರಹ ಚಿಂತನೆಗಳು ಮತ್ತು ತಪ್ಪುಗಳನ್ನು ಶಾಶ್ವತವಾಗುತ್ತವೆ.
ಹೀಗಾಗದಂತೆ ತಡೆಯಲು ಕನ್ನಡ ಸಾಹಿತ್ಯಕ್ಕಾಗಿ ಅಭಿವೃದ್ಧಿಪಡಿಸುವ AI ತಂತ್ರಜ್ಞಾನ ಆಧಾರಿತ ಅನುವಾದ ವ್ಯವಸ್ಥೆಗಳು ತಪ್ಪಿಲ್ಲದ, ವೈವಿಧ್ಯಮಯ ಮತ್ತು ಪ್ರಾತಿನಿಧಿಕ ಡೇಟಾಸೆಟ್‌ಗಳಲ್ಲಿ ತರಬೇತಿ ಪಡೆದಿವೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
೩) ಕನ್ನಡ ಸಾಹಿತ್ಯ ಕೃತಿಗಳ ಅನುವಾದದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು AI ಸಂಪೂರ್ಣವಾಗಿ ಗ್ರಹಿಸದ ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸಿ, ಸೂಕ್ತ ಮಾರ್ಗದರ್ಶನ ನೀಡಲು ಕನ್ನಡ ಸಾಹಿತಿಗಳ ಮತ್ತು ವಿದ್ವಾಂಸರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿರುತ್ತದೆ.
ಕನ್ನಡ ಸಾಹಿತ್ಯಕ್ಕಾಗಿ AI ತಂತ್ರಜ್ಞಾನ ಆಧಾರಿತ ಅನುವಾದ ಸೌಲಭ್ಯದ ಅಗತ್ಯವಿದೆ. ಆದರೆ ಈ ತಂತ್ರಜ್ಞಾನವನ್ನು ಎಚ್ಚರಿಕೆಯಿಂದ ಬಳಸಿಕೊಳ್ಳುವುದು ಮುಖ್ಯವಾಗಿದೆ. ಕನ್ನಡ ಕುರಿತು ಈಗ AI ತಂತ್ರಜ್ಞಾನಕ್ಕಿರುವ ಸಾಮರ್ಥ್ಯವನ್ನು ಮತ್ತು ಇತಿಮಿತಿಗಳನ್ನು ಗುರುತಿಸುವ ಮೂಲಕ, ಡಿಜಿಟಲ್ ಯುಗದಲ್ಲಿ, ವಿಶ್ವಮಟ್ಟದಲ್ಲಿ ಕನ್ನಡ ಸಾಹಿತ್ಯವು ಪ್ರವರ್ಧಮಾನಕ್ಕೆ ಬರುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು.
AI ತಂತ್ರಜ್ಞಾನ ಆಧಾರಿತ ಸೌಲಭ್ಯ ಅಭಿವೃದ್ಧಿ ಪಡಿಸಲು ನೆರವಾಗುವ ತಂತ್ರಾಂಶಗಳಿವು
ಕನ್ನಡ ಸಾಹಿತ್ಯದ ಅನುವಾದಕ್ಕಾಗಿ AI ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಭಿವೃದ್ಧಿಪಡಿಸಲು, ಬಳಸುವ ಕೆಲವು ತಂತ್ರಾಂಶಗಳು ಮತ್ತು ತಂತ್ರಜ್ಞಾನಗಳು ಹೀಗಿವೆ.
ಮೆಷೀನ್ ಲರ್ನಿಂಗ್: ಇದನ್ನು ಸೂಕ್ತವಾಗಿ ಬಳಸುವ ಮೂಲಕ ಕನ್ನಡ ಸಾಹಿತ್ಯದ ಕೃತಿಗಳು ಮತ್ತು ದೊಡ್ಡ ಸಂಪುಟಗಳನ್ನು ಬೇರೆ ಭಾಷೆಗಳಿಗೆ ತ್ವರಿತವಾಗಿ ಮತ್ತು ತಪ್ಪಿಲ್ಲದಂತೆ ಭಾಷಾಂತರಿಸಬಹುದು.
ಭಾಷಾ ಕಲಿಕೆ: AI ತಂತ್ರಜ್ಞಾನ ಆಧಾರಿತ ಭಾಷಾ ಕಲಿಕೆಯ ತಂತ್ರಾಂಶಗಳು, ಪರಭಾಷಿಕರಿಗೆ ಕನ್ನಡವನ್ನು ಕಲಿಯಲು ಮತ್ತು ಸಾಹಿತ್ಯದ ಕೃತಿಗಳು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ಇದರಿಂದಾಗಿ ಪರಭಾಷಿಕರಲ್ಲಿ ಕನ್ನಡ ಸಾಹಿತ್ಯ ಕುರಿತು ಆಸಕ್ತಿ ಮತ್ತು ಬೇಡಿಕೆ ಹೆಚ್ಚಾಗುತ್ತದೆ.
ಪಠ್ಯ ವಿಶ್ಲೇಷಣೆ: ಕನ್ನಡ ಸಾಹಿತ್ಯದ ಕೃತಿಗಳನ್ನು ಪಠ್ಯಗಳನ್ನು ಥೀಮ್‌ಗಳು, ಲಕ್ಷಣಗಳು ಮತ್ತು ಶೈಲಿಯ ಅಂಶಗಳನ್ನು ಗುರುತಿಸಲು ಎಐ ತಂತ್ರಜ್ಞಾನ ಬಳಸಿ ವಿಶ್ಲೇಷಿಸಿ , ಬೇರೆ ಭಾಷೆಯ ವಿದ್ವಾಂಸರು ಮತ್ತು ವಿಮರ್ಶಕರಿಗೆ, ಕನ್ನಡ ಸಾಹಿತಿಗಳು ಮತ್ತು ಸಾಹಿತ್ಯ ಕುರಿತು ಅಮೂಲ್ಯವಾದ ಒಳನೋಟಗಳನ್ನು ನೀಡಬಹುದು.
ಡಿಜಿಟಲ್ ಸಂರಕ್ಷಣೆ: ಅನುವಾದಕ್ಕಾಗಿ ಬಳಸುವ ಹಳೆಯ ಕನ್ನಡ ಹಸ್ತಪ್ರತಿಗಳನ್ನು, ಪುಸ್ತಕಗಳನ್ನು, ತಾಳೆಗರಿಗಳನ್ನು ಸಂರಕ್ಷಿಸಲು ಮತ್ತು ಡಿಜಿಟಲೀಕರಣ ಮಾಡಲು ಎಐ ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಸಹಾಯ ಮಾಡುತ್ತವೆ.
ಕನ್ನಡ ಸಾಹಿತ್ಯ ಕೃತಿಗಳನ್ನು ಅನುವಾದ ಮಾಡಿ ಬೇರೆ ಭಾಷೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಅಲೆಕ್ಸಾದಂತಹ ಸೌಲಭ್ಯಗಳಲ್ಲಿ ಬಳಸಲು ಸೂಕ್ತವಾಗುವಂತೆ ಕೃತಿಗಳು, ಆಡಿಯೋಬುಕ್‌ಗಳು ಮತ್ತು ಬ್ರೈಲ್ ಕೃತಿಗಳನ್ನು ರಚಿಸಲು AI ತಂತ್ರಜ್ಞಾನ ಆಧಾರಿತ ಅನುವಾದ ಸೌಲಭ್ಯವನ್ನು ಬಳಸಬಹುದು.
ಕನ್ನಡ ಸಾಹಿತ್ಯ ಅನುವಾದ ಕ್ಷೇತ್ರದಲ್ಲಿ ಸೂಕ್ತವಾಗುವಂತೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಬಳಸುವ ಮೂಲಕ, ಕನ್ನಡವನ್ನು ವಿಶ್ವಕನ್ನಡ ಮಾಡುವ ಅಭಿಯಾನದಲ್ಲಿ ಮಹತ್ವದ ಕೊಡುಗೆಯನ್ನು ನೀಡಲು ಸಾಧ್ಯವಿದೆ.
ಡಾ ಉದಯಶಂಕರ ಪುರಾಣಿಕ, ಎಐ ಮತ್ತು ಸೈಬರ್ ಸೆಕ್ಯುರಿಟಿ ಎಂಜಿಐ, ಯುಎಸ್‌ಎಯ ನಿರ್ದೇಶಕ ಮತ್ತು ಹಿರಿಯ ಅನುಭವಿ ವಿಜ್ಞಾನ ಲೇಖಕ.
ಡಾ ಉದಯಶಂಕರ ಪುರಾಣಿಕ ಅವರು ಕರ್ನಾಟಕಕ್ಕೆ, ಕನ್ನಡ ಭಾಷೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ಕೊಡುತ್ತಿರುವವರು. ಐವಿಆರ್‌ಎಸ್ ಕರೆಗಳಲ್ಲಿ ಕನ್ನಡ ಬಳಕೆಗೆ ತರುವಲ್ಲಿ ಇವರ ಪ್ರಯತ್ನ ಮಹತ್ವದ್ದು. ಇದೇ ರೀತಿ ಬ್ಯಾಂಕ್ ಎಟಿಎಂ ಪರದೆ ಮೇಲೆ ಕನ್ನಡ ಅಕ್ಷರಗಳು ಮೂಡುವಂತೆ ಮಾಡಿದ್ದರ ಹಿಂದೆಯೂ ಇವರ ಪರಿಶ್ರಮವಿದೆ. ಹಾಗೆಯೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಕನ್ನಡದಲ್ಲಿ ಮುದ್ರಿಸುವ ವಿಚಾರದಲ್ಲಿ ಪುರಾಣಿಕರ ಪಾತ್ರ ಮಹತ್ವದ್ದು.