ತಾರಸಿ ತೋಟ, ಮನೆಯಲ್ಲೇ ಹಣ್ಣು, ತರಕಾರಿ ಬೆಳೆಯುತ್ತೀರಾ; ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದಿಂದ ಸಿಗಲಿವೆ ಈ ಸಸಿ, ಬೀಜಗಳು
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು ನಿಮ್ಮ ತಾರಸಿ ತೋಟ, ಮನೆಯಂಗಳದ ತೋಟದ ಹಣ್ಣು, ತರಕಾರಿ, ಔಷಧೀಯ ಸಸ್ಯಗಳ ಬೆಳೆಗೆ ಬೇಕಾದ ಬೀಜ, ಸಸಿಗಳನ್ನು ನೀಡಲಿದೆ. ಇದರ ಮಾಹಿತಿ ಇಲ್ಲಿದೆ
ಬೆಂಗಳೂರು:ಮನೆಯಲ್ಲಿ ತಾರಸಿ ತೋಟ ಮಾಡುವ ಬಯಕೆಯೇ, ಟೊಮಟೋ, ಮೆಣಸಿನಕಾಯಿ, ಹೂವು,. ಹಣ್ಣಗಳನ್ನು ಮನೆಯ ಮೇಲ್ಭಾಗ ಇಲ್ಲವೇ ಅಂಗಳದಲ್ಲಿ ಬೆಳೆಯವ ಆಸಕ್ತಿಯಿದೆಯೇ, ಇದಕ್ಕಾಗಿ ಸೂಕ್ತವಾದ ಬೀಜ, ಸಸಿಗಳ ಜತೆಗೆ ಮಾರ್ಗದರ್ಶನವೂ ನಿಮಗೆ ಬೇಕೇ. ಬಾಗಲಕೋಟದಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಇದಕ್ಕಾಗಿ ಅಗತ್ಯ ಹಣ್ಣು,ತರಕಾರಿ, ಹೂವುಗಳ ಬೀಜ, ಸಸಿಗಳನ್ನು ನೀಡಲು ಮುಂದಾಗಿದೆ. ಅಲ್ಲದೇ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ತೋಟಗಾರಿಕೆ ತಜ್ಞರು, ಸಿಬ್ಬಂದಿಗಳು ನಿಮಗೆ ಬೇಕಾದ ರೀತಿ ಮಾರ್ಗದರ್ಶನವನ್ನೂ ಮಾಡಲಿದ್ದಾರೆ. ಸಸಿಗಳನ್ನು ನೀವು ತರಿಸಿಕೊಳ್ಳಲು ಅವಕಾಶವಿದೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯವು ಕರ್ನಾಟಕದ ಬೆಂಗಳೂರು, ಮೈಸೂರು, ಗೋಕಾಕ್, ವಿಜಯಪುರದ ತಿಡಗುಂದಿ, ಮೂಡಿಗೆರೆ ಸಹಿತ ಹಲವು ಕಡೆಗಳಲ್ಲಿ ಪ್ರಾದೇಶಿಕ ತೋಟಗಾರಿಕೆ ಕೇಂದ್ರಗಳನ್ನು ಹೊಂದಿದೆ. ಅಲ್ಲಿಯೂ ಮಾಹಿತಿ ಪಡೆಯಬಹುದು.
ಎರಡು ದಶಕದ ಹಿಂದೆ ಆರಂಭಗೊಂಡಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು ತೋಟಗಾರಿಕೆಗಳ ಬೆಳೆಗಳಿಗೆ ಉತ್ತೇಜನ ನೀಡುತ್ತಾ ಬಂದಿದೆ. ಅದರಲ್ಲೂ ಹೊಸತಳಿಗಳ ಸಂಶೋಧನೆ, ಅದಕ್ಕೆ ಬೇಕಾದ ಮಾರ್ಗದರ್ಶನ ನೀಡುತ್ತದೆ. ವಿಶೇಷವಾಗಿ ಮನೆಯಲ್ಲಿಯೇ ತೋಟಗಾರಿಕೆ ಮಾಡಿ ಅಡುಗೆ, ನಿತ್ಯ ಬದುಕಿಗೆ ಬೇಕಾದಷ್ಟು ಬೆಳೆದುಕೊಳ್ಳುವ ಮನೆ ತೋಟಗಾರಿಕೆಗೂ ಉತ್ತೇಜನ ನೀಡುತ್ತಾ ಬಂದಿದೆ.
ಯಾವ್ಯಾವ ಬೀಜಗಳುಂಟು
ಕಿಚ್ಚನ್ ಗಾರ್ಡನ್ ಕಿಟ್ಸೀಡ್ ಅಡಿ 10 ವಿವಿಧ ತರಕಾರಿ ಬೀಜಗಳ ಕಿಟ್ ಅನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಅಣಿಗೊಳಿಸಿದೆ. ಅದನ್ನು ತೆಗೆದುಕೊಂಡು ಮನೆಯಲ್ಲಿಯೇ ತರಕಾರಿ ಸುಲಭವಾಗಿ ಬೆಳೆಯಬಹುದು. ಇದರೊಟ್ಟಿಗೆ ನುಗ್ಗೆ ಬೀಜ ಭಾಗ್ಯ (ಕೆಡಿಎಮ್-1), ಮೆಣಸಿನಕಾಯಿ ಬ್ಯಾಡಗಿ ರುದ್ರಾ ಮತ್ತು ಬ್ಯಾಡಗಿ ಡಬ್ಬಿ, ಟೊಮ್ಯಾಟೋಶಾಂತ್ (ಆರ್. ಎಪ್.ಟಿ-ಎಸ್-1), ಸವತೆ ಧಾರವಾಡ ಲೋಕಲ್, ಬೆಂಡೆಬೀಜ ಅರ್ಕಾ ಅನಾಮಿಕಾ, ಚವಳೆ ಪೂಸಾ ನವಬಾಹರ, ಸೊಂಪು ಎ.ಎಫ್-1, ಕೊತ್ತಂಬರಿ ಜೆ.ಡಿ.ಎಲ್.ಸಿ-1, ಗಜ್ಜರಿ ಜತ್ತ ಲೋಕಲ್, ಸೆಣಬು ಲೋಕಲ್ ಬೀಜ, ಸಸಿ ಪಡೆಯಬಹುದು.
ಔಷಧೀಯ ಸಸ್ಯಗಳೂ ಉಂಟು
ತೋಟಗಾರಿಕೆ ವಿಶ್ವವಿದ್ಯಾನಿಲಯ ಔಷಧೀಯ ಸಸ್ಯಗಳನ್ನು ಮನೆಯಂಗಳದಲ್ಲಿ ಬೆಳೆಯುವವರಿಗೆ ನೀಡಲಿದೆ. ಇದರಲ್ಲಿ ಲಿಂಬೆ ಹುಲ್ಲು, ಸರ್ಪಗಂಧ, ಬಾಸುಮತಿ, ತುಳಸಿ, ಜಪನಿಸ್‌ಮಿಂಟ್, ಬ್ರಾಹ್ಮಿ, ದೊಡ್ಡಪತ್ರೆ, ಮೇಹಂದಿ, ಸುಗಂಧರಾಜ, ಚಕ್ರಮಿನಿ, ಹಿಪ್ಪಲಿ, ಬ್ರಯೊಪಿಲಂ, ಕರಿಬೇವು, ಪಾರಿಜಾತ, ದಾಸವಾಳ, ಇನ್ಸುಲಿನ್, ಕಾಡು ಜಿರಗೆ, ಬಸಳೆ, ಗಳಂಗಮ ರೋಸ್‌ಮೆರಿ, ಆಡುಸೋಗೆ, ಬಿಳಿ ಚಿತ್ರಮೂಲ, ಮುಂಗರವಳ್ಳಿ, ಅಲೋವೆರಾ, ಅಮೃತಬಳ್ಳಿ, ಮಾಂಗಣಿಗಳಿಗೆ ಪೂರಕವಾದ ಸಸಿಗಳನ್ನು ಒದಗಿಸಲಿದೆ. ಇದನ್ನು ಮನೆಯಲ್ಲಿ ಬೆಳೆಯಲು ಅವಕಾಶವಿದೆ.
ಅಲಂಕಾರಿಕ ಸಸಿಗಳು ಬೇಕೇ
ಮನೆಯಲ್ಲಿ ಔಷಧಿ, ತರಕಾರಿ ಸಸಿ, ಬೀಜಗಳ ಜತೆಯಲ್ಲಿ ಅಲಂಕಾರಿಕ ಸಸ್ಯಗಳೂ ನಿಮಗೆ ಸಿಗಲಿವೆ. ತೋಟಗಾರಿಕೆ ವಿಶ್ವವಿದ್ಯಾನಿಲಯವು ಇಂತಹ ಸಸ್ಯಗಳನ್ನು ನಿರಂತರವಾಗಿ ಒದಗಿಸುತ್ತಾ ಬಂದಿದೆ.
ಅರೆಕಾಫಾಮ್, ಟೇಬಲ್‌ಫಾಮ್, ಫಿಸ್ಟಲ್ ಫಾಮ್, ದಾಸವಾಳ, ಕಣಗಿಲ, ಅರೇಲಿಯಾ, ಡೇಸಿನಾ, ಹಿಮಿಲಿಯಾ, ರೇವಡಿಸ್‌ಕಲರ್, ಬ್ರಯೋಪಿಲ್ಮ, ಕಣಕಾಂಗರ, ಕನಕಾಂಬರ ನಿಮಗೆ ಇಲ್ಲಿ ಸಿಗಲಿದೆ.
ತಿಡಗುಂದಿಯಲ್ಲಿ ಹಣ್ಣುಗಳು
ವಿಜಯಪುರಿಂದ ಸೊಲ್ಲಾಪುರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ತಿಡಗುಂದಿಯ ತೋಟಗಾರಿಕೆ ವಿವಿ ಫಾರ್ಮ್‌ನಲ್ಲೂ ನಿಮಗೆ ಹಣ್ಣಿನ ಗಿಡಗಳು ಸಿಗಲಿವೆ. ಅದರಲ್ಲಿ ಮುಖ್ಯವಾಗಿ ಲಿಂಬೆ ಸಸಿಗಳು, ಕಾಗ್ಜಿ, ಸೀತಾಫಲ ಕಸಿ ಗಿಡಗಳು, ಪೇರು ಲೇಯರ್, ದ್ರಾಕ್ಷಿ ಬೇರು ಕಾಂಡ ಸಸಿಗಳು, ಡಾಗ್‌ರಿಡ್ಜ, ಹುಣಸೆ ಕಸಿ ಗಿಡಗಳು, ಡ್ರಾಗನ್ ಹಣ್ಣಿನ ಗಿಡಗಳು, ಚಿಕ್ಕು ಕಸಿ ಗಿಡಗಳು, ಕಾಲಿಪತ್ತಿ ಮತ್ತು ಕ್ರಿಕೇಟ್ ಬಾಲ್, ಮಾವಿನ ಕಸಿ ಗಿಡಗಳು ಮಲ್ಲಿಕಾ, ತೆಂಗಿನ ಸಸಿಗಳು, ಇನ್ಸುಲಿನ್ ಸಸಿಗಳು, ಈರುಳ್ಳಿ ಅರ್ಕಾ ಕಲ್ಯಾಣದ ಬೀಜ ಹಾಗೂ ಸಸಿಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ವಿಶೇಷಾಧಿಕಾರಿಗಳು ಬೀಜ ಘಟಕ, ತೋ.ವಿ.ವಿ., ಬಾಗಲಕೋಟ
ಉದ್ಯಾನ ಸಹಾಯ ವಾಣಿ ಸಂಖ್ಯೆ: 1800 425 7910.
ಸಂಪರ್ಕಿಸಿ : ಬೀಜ ಘಟಕ - 7899504323 / 9740883577 / 9480696394
ಡಾ. ಆನಂದ ನಂಜಪ್ಪವರ, ಕ್ಷೇತ್ರ ಅಧೀಕ್ಷಕರು: 9845320045
ಶೃತಿ ಕಕಮರಿ : 8147353467
ಪ್ರಶಾಂತ್ ತೆವರಟ್ಟಿ ಮೊ. 9741129415ಗೆ