Hubli Crime: ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ಕಾಲೇಜಿನಲ್ಲಿ ಭೀಕರ ಹತ್ಯೆ,
ಹುಬ್ಬಳ್ಳಿಯಲ್ಲಿ ಹಾಡ ಹಗಲೇ ಯುವತಿಯನ್ನು ಕೊಲೆ ಮಾಡಿರುವ ಘಟನೆ ಬಿವಿಬಿ ಕಾಲೇಜಿನಲ್ಲಿ ನಡೆದಿದೆ.
ಹುಬ್ಬಳ್ಳಿ: ಕಾಲೇಜು ಅಂಗಳದಲ್ಲಿಯೇ ವಿದ್ಯಾರ್ಥಿನಿಯೊಬ್ಬಳನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಗುರುವಾರ ನಡೆದಿದೆ. ಹುಬ್ಬಳ್ಳಿ ನಗರದ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಅಂಗಳದಲ್ಲಿ ಘಟನೆ ನಡೆದಿದ್ದು,ಕೊಲೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಹುಬ್ಬಳ್ಳಿ ನಗರದ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಎಂಬುವವರ ಪುತ್ರಿ ನೇಹಾ ಹಿರೇಮಠ ಕೊಲೆಯಾದ ಯುವತಿ. ಈಕೆಯನ್ನು ಬೆಳಗಾವಿ ಜಿಲ್ಲೆ ಸವದತ್ತಿ ನಿವಾಸಿ ಫಯಾಜ್ ಎಂಬಾತ ಕೊಲೆ ಮಾಡಿದ್ದು ಆತನನ್ನು ಬಂಧಿಸಲಾಗಿದೆ., ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಬಿವಿಬಿ ಕಾಲೇಜಿನಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿದ್ದ ನೇಹಾ ಹಿರೇಮಠ ಗುರುವಾರ ತರಗತಿ ಮುಗಿಸಿ ವಾಪಾಸ್ ಬರುವಾಗ ಏಕಾಏಕಿ ದಾಳಿ ಮಾಡಿದ ಆರೋಪಿ ಚಾಕುವಿನಿಂದ ಹಲವು ಬಾರಿ ಕುತ್ತಿಗೆ ಹಾಗೂ ಇತರೆ ಭಾಗಕ್ಕೆ ತಿವಿದಿದ್ಧಾನೆ, ಆಕೆ ನರಳಾಡಿ ಚೀರಿಕೊಂಡರೂ ಬಿಟ್ಟಿಲ್ಲ.ಅಲ್ಲಿದ್ದ ಸಿಬ್ಬಂದಿ ಬರುವ ಹೊತ್ತಿಗೆ ಅಲ್ಲಿಂದ ಪರಾರಿಯಾಗಲು ಆರೋಪಿ ಫಯಾಜ್ ಯತ್ನಿಸಿದ್ದಾನೆ. ಅಲ್ಲಿದ್ದವರನ್ನು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇಹಾ ಅಲ್ಲಿಯೇ ಮೃತಪಟ್ಟಿದ್ದಾಳೆ. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ ಪ್ರಾಣ ಹೋಗಿತ್ತು ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ನೇಹಾ ದೇಹ ಸ್ಥಳಾಂತರಿಸಲು ನೆರವಾದರು. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷ ದರ್ಶಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಸಹಪಾಠಿಗಳಿಂದ ವಿವರವನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಅಲ್ಲದೇ ಕಾಲೇಜು ಆವರಣದಲ್ಲಿದ್ದ ಸಿಸಿ ಕ್ಯಾಮರಾ ಫೂಟೇಜ್ ಸಹ ಕೂಡ ಸಂಗ್ರಹಿಸಿದ್ದಾರೆ. ಇದರಲ್ಲಿ ಫಯಾಜ್ ಆಕೆಯನ್ನು ಹಿಂಬಾಲಿಸಿರುವುದು, ಕೊಲೆ ಮಾಡಿರುವುದು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಯಾಜ್ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿಯವನು.ಇದೇ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ. ನೇಹಾ ಜತೆಗೆ ಪರಿಚಯವಾಗಿತ್ತು. ಆಕೆಯನ್ನು ಪ್ರೀತಿಸುವುದಾಗಿ ಹೇಳಿದ್ದ. ಆದರೆ ಆಕೆ ಅದಕ್ಕೆ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಹಣಕಾಸಿನ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿದ್ದವು. ಗುರುವಾರ ಕೂಡ ಕಾಲೇಜಿಗೆ ಬಂದಾಗ ಜಗಳವಾಡಿ ಕೊಲೆ ಮಾಡಿದ್ದಾನೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಆತ ಮಗಳನ್ನು ಪ್ರೀತಿಸುವುದು ತಂದೆ ಹಾಗೂ ಕುಟುಂಬದವರಿಗೆ ತಿಳಿದಿತ್ತು. ಆದರೆ ಕುಟುಂಬದವರು ಒಪ್ಪಿರಲಿಲ್ಲ. ಇತ್ತೀಚಿಗೆ ನೇಹಾ ಆತನೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಇದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್, ಡಿಸಿಪಿಗಳಾದ ಎಂ.ರಾಜೀವ್, ರವೀಶ್, ಎಸಿಪಿ ಶಿವಪ್ರಕಾಶ್ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)