HD Kumaraswamy: ನಿಮ್ಮನ್ನು ಮುಗಿಸುತ್ತೇವೆ ಎಂದು ಸಚಿವರಿಂದ ಶಾಸಕರಿಗೆ ಬೆದರಿಕೆ ಹಾಕಿಸಲಾಗಿದೆ; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ
ವಿಧಾನಸಭೆಯಲ್ಲಿ ಶಾಸಕರನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ದೂರಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.
HD Kumaraswamy: ವಿಧಾನಸಭೆಯಲ್ಲಿ ಪ್ರತಿಪಕ್ಷ ಶಾಸಕರನ್ನು ಕಲಾಪದಿಂದ ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜೊತೆ ಪ್ರತಿಭಟನೆಗೆ ಕುಳಿತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಬಳಿ ಮಾಧ್ಯಮಗಳ ಜತೆ ಈ ಬಗ್ಗೆ ಮಾತನಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇದು ಪ್ರಜಾಪ್ರಭುತ್ವದ ಕಗ್ಗೊಲೆ
ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಮುಖ್ಯಮಂತ್ರಿಯ ಸನ್ನೆ ಮೇರೆಗೆ ಸ್ಪೀಕರ್ ಹುಡುಗಾಟಿಕೆ ಮಾಡಿದ್ದಾರೆ. ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟು, ಇವತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ. ಸರ್ಕಾರದ ಬಲ್ಡೋಜ್ ನೀತಿ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪೀಠದಲ್ಲಿ ದಲಿತರು ಕುಳಿತುಕೊಂಡಿದ್ದಾರೆ ಅನ್ನುವ ಕಾಂಗ್ರೆಸ್ ಆರೋಪದ ಬಗ್ಗೆ ಕೆಂಡಾಮಂಡಲರಾದ ಎಚ್‌ಡಿಕೆ, ಇದು ಕ್ಷುಲ್ಲಕ, ಕೀಳು ಮಟ್ಟದ ಅಭಿರುಚಿ. ದಲಿತರ ಅನುಕಂಪ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಆ ಪೀಠದಲ್ಲಿ ಕುಳಿತಿರೋರು ಉಪ ಸಭಾಧ್ಯಕ್ಷರು. ಆ ವಿಷಯವನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜಕೀಯ ಸಭೆಗೆ IAS ಅಧಿಕಾರಿಗಳ ಬಳಕೆ ಸರಿಯಲ್ಲ
ಕಳೆದ ಎರಡು ದಿನಗಳ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಹಾ ಘಟಬಂಧನ್ ಸಭೆಗೆ ಬಂದಿದ್ದ ಹೊರ ರಾಜ್ಯಗಳ ರಾಜಕಾರಣಿಗಳಿಗೆ ಶಿಷ್ಟಾಚಾರ ಬದಿಗೊತ್ತಿ, ರಾಜ್ಯದ ಘನತೆಯನ್ನು ಹತ್ತಿಕ್ಕಿ ಐಎಎಸ್ ಚಾಕರಿಗೆ ನಿಯೋಜಿಸಿದ್ದು ಸರಿಯಲ್ಲ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಐಎಎಸ್ ಅಧಿಕಾರಿಗಳನ್ನು ರಾಜಕೀಯ ಸಭೆಗೆ ಬಳಸಿಕೊಂಡಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ನಮ್ಮ ಸಮಯದಲ್ಲಿ ಹೀಗಾಗಿರಲಿಲ್ಲ
ಸದನದಲ್ಲಿ ಇವತ್ತು ಈ ವಿಚಾರವಾಗಿ ಜೆಡಿಎಸ್, ಬಿಜೆಪಿ ಶಾಸಕರು ಸೇರಿ ಚರ್ಚೆ ನಡೆಸಲು ಮುಂದಾದೆವು. ಪ್ರತಿಷ್ಠೆಯಿಂದ ನಾವು ಮಾಡಿದ್ದೆ ಸರಿ ಎನ್ನುತ್ತಿದ್ದಾರೆ ಕಾಂಗ್ರೆಸ್‌ನವರು. ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಯಾವುದೇ ರೀತಿಯ ಗಣ್ಯರಿಗೆ ಸೇವೆ ಮಾಡಲು ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. 2018ರಲ್ಲಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಅವರನ್ನು ಕಳಿಸಿ ಗಣ್ಯರನ್ನು ಬರ ಮಾಡಿಕೊಂಡಿಲ್ಲ ಎಂದು ಅವರು ತಿಳಿಸಿದರು.
ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ಅಧಿಕಾರಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡು ಅಧಿಕಾರಿಗಳನ್ನು ಯಾರ ಮನೆ ಬಾಗಿಲಿಗೂ ಕಳುಹಿಸಿಲ್ಲ. ಈ ಸರ್ಕಾರ ಸುಳ್ಳು ಹೇಳಿದೆ. ವಿರೋಧ ಪಕ್ಷಗಳ ಬಲ್ಡೋಜ್ ಮಾಡಲು ಹೊರಟಿರೋದು ಸರ್ಕಾರದ ಉದ್ಧಟತನ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಬಿಜೆಪಿ ನಾವು ಸೇರಿ ಹೋರಾಟ ಮಾಡ್ತಾ ಇದ್ದೇವೆ ಎಂದು ಅವರು ಘೋಷಣೆ ಮಾಡಿದರು.
ಕೆಲವು ಮಂತ್ರಿಗಳು ಶಾಸಕರನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ನಿಮ್ಮನ್ನು ಮುಗಿಸುವುದಾಗಿ ಸದನದಲ್ಲಿ ಬೆದರಿಕೆ ಹಾಕಿದ್ದಾರೆ. ಇದು ಪ್ರಜಾಪ್ರಭುತ್ವವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.