ಕನ್ನಡ ಸುದ್ದಿ  /  Karnataka  /  Karnataka Bjp Election Defeat Introspection Meeting In Bengaluru Opposition Leader State President Delayed Rmy

BJP Meeting: ಬಿಜೆಪಿ ಚುನಾವಣಾ ಸೋಲಿನ ಆತ್ಮಾವಲೋಕನ ಸಭೆ; ಸುಧಾಕರ್ ವಿರುದ್ಧ ಎಂಟಿಬಿ ವಾಗ್ದಾಳಿ; ವಿಪಕ್ಷ ನಾಯಕ,ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆ ನಡೆಸಿರುವ ಬಿಜೆಪಿ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟದ ಬಗ್ಗೆ ಚರ್ಚಿಸಿದೆ. ಪರಾಜಿತ ಅಭ್ಯರ್ಥಿಗಳು ಸೋಲಿಗೆ ಪಕ್ಷದ ನಾಯಕರೇ ಕಾರಣ ಎಂದು ಬೊಟ್ಟು ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋಲು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ (ಜೂನ್ 8) ಪಕ್ಷದ ನಾಯಕರು ಆತ್ಮಾವಲೋಕನ ಸಭೆ ನಡೆಸಿದರು.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ (ಜೂನ್ 8) ಪಕ್ಷದ ನಾಯಕರು ಆತ್ಮಾವಲೋಕನ ಸಭೆ ನಡೆಸಿದರು.

ಬೆಂಗಳೂರು: ಬಿಜೆಪಿಯ ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಜತೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಆತ್ಮಾವಲೋಕನ ಸಭೆ (BJP Meeting) ಗುರುವಾರ (ಜೂನ್ 8) ಪಕ್ಷದ ಕಚೇರಿಯಲ್ಲಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಬೆಳಗ್ಗೆ ನೂತನ ಶಾಸಕರ ಸಭೆ (MLA Meeting) ನಡೆದಿದ್ದರೆ ಮಧ್ಯಾಹ್ನ ಪರಾಜಿತ ಅಭ್ಯರ್ಥಿಗಳ ಸಭೆ ನಡೆದಿದ್ದು ಸೋಲಿನ ಕುರಿತು ಆತ್ಮಾವಲೋಕನ ನಡೆದಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಲು ರಾಜ್ಯ ನಾಯಕರು, ಸಚಿವರು ಪ್ರಮುಖ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಮ್ಮ ನಮ್ಮ ಕ್ಷೇತ್ರಗಳ ಉಸ್ತುವಾರಿಯನ್ನು ನಮಗೆ ಬಿಟ್ಟಿದ್ದರೂ ಸೋಲು ಕಾಣುತ್ತಿರಲಿಲ್ಲ ಎಂದು ಕೆಲವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಮೇಲೆ ಇನ್ನೊಬ್ಬರನ್ನು ತಂದು ಕೂರಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಕೆಲವು ಪರಾಜಿತ ನಾಯಕರು ಸರ್ಕಾರ ಇದ್ದಾಗ ಸಚಿವರು ಸ್ಪಂದಿಸದೆ ಇದ್ದದ್ದು, ಕ್ಷೇತ್ರಗಳ ಸಮಸ್ಯೆಗಳಿಗೆ ಸೂಕ್ತ ಮತ್ತು ಅಗತ್ಯವಿದ್ದದಷ್ಟು ಅನುದಾನ ನೀಡದೆ ಇದ್ದದ್ದು ಸೋಲಿಗೆ ಕಾರಣವಾಗಿದೆ ಎಂದು ಸಭೆಯಲ್ಲಿ ನೋವನ್ನು ತೋಡಿಕೊಂಡಿದ್ದಾರೆ.

ಮಧ್ಯಾಹ್ನ ನಡೆದ ಸೋತ ಅಭ್ಯರ್ಥಿಗಳ ಸಭೆಗೆ ಹಿರಿಯ ಮುಖಂಡರಾದ ವಿ.ಸೋಮಣ್ಣ, ಡಾ.ಕೆ.ಸುಧಾಕರ್, ಜೆ.ಸಿ.ಮಾಧುಸ್ವಾಮಿ ಗೈರು ಹಾಜರಾಗಿರುವುದು ಕುತೂಹಲ ಮೂಡಿಸಿದೆ. ಸುಧಾಕರ್ ಉದ್ದೇಶಪೂರ್ವಕವಾಗಿ ವಿದೇಶ ಪ್ರವಾಸ ಕೈಗೊಂಡಿದ್ದರೆ, ನಾಯಕರ ಮೇಲಿನ ಸಿಟ್ಟಿನಿಂದ ವಿ.ಸೋಮಣ್ಣ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿ.ಸಿ. ನಾಗೇಶ್, ಬಿ.ಸಿ. ಪಾಟೀಲ್, ಶ್ರೀರಾಮುಲು ಮತ್ತು ಕೆ.ಸಿ. ನಾರಾಯಣ ಗೌಡ ಸಭೆಯಲ್ಲಿ ಭಾಗವಹಿಸಿದ್ದರು.

ಮಾಜಿ ಸಚಿವ ಸುಧಾಕರ್ ವಿರುದ್ಧ ಎಂಟಿಬಿ ನಾಗರಾಜ್ ಆಕ್ರೋಶ

ಸಭೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರು ಸೋಲಿಗೆ ನೇರವಾಗಿ ಯಾರತ್ತಲೂ ಬೊಟ್ಟು ಮಾಡದಿದ್ದರೂ ಪರೋಕ್ಷವಾಗಿ ಪ್ರಸ್ತಾಪ ಮಾಡಿರುವುದಾಗಿ ತಿಳಿದು ಬಂದಿದೆ. ಅದರಲ್ಲೂ ಮುಖ್ಯವಾಗಿ ಹೊಸಕೋಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ನೇರವಾಗಿ ಆರೋಪ ಮಾಡಿದ್ದಾರೆ. ನನ್ನ ಸೋಲಿಗೆ ಡಾ.ಕೆ ಸುಧಾಕರ್ ಕಾರಣ. ಆತನೂ ಸೋತು ನನ್ನನ್ನೂ ಸೋಲಿಸಿದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಂತಾಮಣಿ ಕ್ಷೇತ್ರದಲ್ಲೂ ಬಿಜೆಪಿ ಸೋಲಿಗೆ ಸುಧಾಕರ್ ಕಾರಣನಾದ ಎಂದು ನೇರವಾಗಿ ಆರೋಪಿಸಿದ್ದಾರೆ. ಸುಧಾಕರ್ ಸಮರ್ಪಕವಾಗಿ ಉಸ್ತುವಾರಿಯನ್ನು ನಿಭಾಯಿಸಿದ್ದರೆ ಈ ಸ್ಥಿತಿಗೆ ಬರುತ್ತಿರಲಿಲ್ಲ. ಕಾಂಗ್ರೆಸ್‌ನಲ್ಲಿ ಮೂರು ಬಾರಿ ಗೆದ್ದಿದ್ದೆ. ಆದರೆ ಬಿಜೆಪಿಯಲ್ಲಿ ಎರಡು ಬಾರಿಯೂ ಸೋಲಬೇಕಾಯಿತು ಎಂದು ಕಿಡಿ ಕಾರಿದ್ದಾರೆ. ಪಕ್ಷದ ಸೋಲಿಗೆ ಪಕ್ಷದ ನೀತಿಗಳ ಕೊಡುಗೆಯೂ ಇದೆ. ಉದಾಹರಣೆಗೆ ಕಾಂಗ್ರೆಸ್ ಸರ್ಕಾರ ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತಿತ್ತು. ಆದರೆ ನಮ್ಮ ಸರ್ಕಾರ ಅದನ್ನು 6 ಕೆಜಿಗೆ ಇಳಿಸಿತ್ತು. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಮತದಾರರು ಇದನ್ನೇ ಪ್ರಶ್ನಿಸುತ್ತಿದ್ದರು ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ ಅನೇಕ ನಾಯಕರು ಸೋಲಿಗೆ ಹತ್ತು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ, 40 ಪರ್ಸೆಂಟ್ ಕಮಿಷನ್ ಆರೋಪ ಮತ್ತು ಇದನ್ನು ಕಾಂಗ್ರೆಸ್ ಬಳಸಿಕೊಂಡ ರೀತಿ, ಜಿಲ್ಲಾ ಉಸ್ತುವಾರಿ ಸಚಿವರ ನಿರಾಸಕ್ತಿ, ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು, ಟಿಕೆಟ್ ಹಂಚಿಕೆಯಲ್ಲಿ ಆದ ವಿಳಂಬ ಮತ್ತು ಪ್ರಮಾದಗಳು, ಬಂಡಾಯ ಶಮನ ಮಾಡದೆ ಕೈ ಚೆಲ್ಲಿ ಕುಳಿತಿದ್ದು, ಶೆಟ್ಟರ್, ಸವದಿ ಅವರಂತಹ ಪ್ರಮುಖ ನಾಯಕರ ನಿರ್ಗಮನ, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದ್ದು ಮತ್ತು ಅತಿಯಾದ ರಾಷ್ಟ್ರೀಯ ನಾಯಕರ ಅವಲಂಬನೆ ಕಾರಣ ಎಂದು ಪಟ್ಟಿ ಮಾಡಿದ್ದಾರೆ.

ಇಡೀ ಚುನಾವಣಾ ಪ್ರಕ್ರಿಯೆಯನ್ನು ರಾಜ್ಯ ಅಥವಾ ಸ್ಥಳಿಯ ನಾಯಕರಿಗೆ ಬಿಡದೆ ಪ್ರಚಾರ, ರೋಡ್ ಶೋ, ಸ್ಥಳಿಯ ನಾಯಕರಿಗೆ ಆದ್ಯತೆ ನೀಡದಿದ್ದದ್ದು, ಮತ್ತು ಎಲ್ಲ ನಿರ್ಧಾರಗಳನ್ನು ಹೈಕಮಾಂಡ್ ತಂಡ ನಿರ್ವಹಿಸಿದ್ದೂ ಕೂಡಾ ಕಾರಣ ಎಂದು ಕೆಲವು ಅಭ್ಯರ್ಥಿಗಳು ಹೇಳಿದ್ದಾಗಿ ತಿಳಿದು ಬಂದಿದೆ.

ಅಂತಿಮವಾಗಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಯಾರ ವಿರುದ್ಧವೂ ಆರೋಪ ಮಾಡದೆ ಸೋಲಿಗೆ ಕಾರಣಗಳನ್ನು ಹೇಳುವ ಗೋಜಿಗೆ ಹೋಗಲಿಲ್ಲ. ಕೇವಲ ಇಬ್ಬರು ಶಾಸಕರಿದ್ದಾಗಲೂ ಪಕ್ಷ ಸಂಘಟನೆ ಮಾಡಿದ್ದೇನೆ. ನನ್ನ ಜತೆಗಿದ್ದ ವಸಂತ್ ಬಂಗೇರಾ ಪಕ್ಷ ಬಿಟ್ಟು ಹೋದಾಗ ನಾನೊಬ್ಬನೇ ಪಕ್ಷ ಕಟ್ಟಿದ್ದೇನೆ, ಪ್ರವಾಸ ಮಾಡಿದ್ದೇನೆ ಎಂಬ ಮಾತುಗಳನ್ನಾಡಿ ಭವಿಷ್ಯದಲ್ಲಿ ಪಕ್ಷ ಸಂಘಟಿಸೋಣ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ: ಬೆಳಗ್ಗೆ ನಡೆದ ನೂತನ ಶಾಸಕರ ಸಭೆಯಲ್ಲಿ 22 ಹೊಸ ಶಾಸಕರ ಪರಿಚಯ ಮಾಡಿಕೊಡಲಾಗಿದೆ. ನಂತರ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ನಡೆಸಬಹುದಾದ ಹೋರಾಟ, ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 9 ವರ್ಷಗಳಾಗಿದ್ದು, ರಾಜ್ಯಾದ್ಯಂತ ಆಚರಣೆ ನಡೆಸುವುದು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ಕುರಿತು ಸಭೆಯಲ್ಲಿ ಹೆಚ್ಚಿನ ಸಮಯ ಮೀಸಲಿಡಲಾಗಿತ್ತು ಎಂದು ತಿಳಿದು ಬಂದಿದೆ.

ಆದರೆ ಪ್ರತಿಪಕ್ಷ ನಾಯಕರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಈ ಹುದ್ದೆೆಯ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್, ಡಾ.ಅಶ್ವಥ್ ನಾರಾಯಣ್, ಸುನೀಲ್ ಕುಮಾರ್ ಕಣ್ಣಿಟ್ಟಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮರ್ಥರೊಬ್ಬರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ತಲಾಶ್ ನಡೆದಿದೆ. ಈ ಸ್ಥಾನದ ಮೇಲೆ ಸಿ.ಟಿ. ರವಿ, ಸುನೀಲ್ ಕುಮಾರ್ ಮತ್ತು ಆರ್.ಅಶೋಕ್ ಆಕಾಂಕ್ಷಿಗಳಾಗಿದ್ದಾರೆ. ಅಂತಿಮವಾಗಿ ವಿಪಕ್ಷ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಸಮರ್ಥರನ್ನು ಅಯ್ಕೆ ಮಾಡಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ತಿಳಿಸಿದ್ದಾರೆ. (ವರದಿ ಎಚ್ ಮಾರುತಿ)