MLAs Property: ಜೂನ್ 30 ರೊಳಗೆ ಆಸ್ತಿ ವಿವರ ಸಲ್ಲಿಸಲು ಕರ್ನಾಟಕ ಶಾಸಕರಿಗೆ ಲೋಕಾಯುಕ್ತ ಗಡುವು; ತಪ್ಪಿದಲ್ಲಿ ಶಿಸ್ತು ಕ್ರಮ-karnataka mlas should submit property details to lokayukta bs patil by june 30 legislative assembly members mgb ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mlas Property: ಜೂನ್ 30 ರೊಳಗೆ ಆಸ್ತಿ ವಿವರ ಸಲ್ಲಿಸಲು ಕರ್ನಾಟಕ ಶಾಸಕರಿಗೆ ಲೋಕಾಯುಕ್ತ ಗಡುವು; ತಪ್ಪಿದಲ್ಲಿ ಶಿಸ್ತು ಕ್ರಮ

MLAs Property: ಜೂನ್ 30 ರೊಳಗೆ ಆಸ್ತಿ ವಿವರ ಸಲ್ಲಿಸಲು ಕರ್ನಾಟಕ ಶಾಸಕರಿಗೆ ಲೋಕಾಯುಕ್ತ ಗಡುವು; ತಪ್ಪಿದಲ್ಲಿ ಶಿಸ್ತು ಕ್ರಮ

Karnataka MLAs property details: ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಸೇರಿದಂತೆ ಮರು ಆಯ್ಕೆಯಾಗಿರುವ ಶಾಸಕರೂ ಸಹ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಹಿಂದೆ ಆಸ್ತಿ ವಿವರ ಸಲ್ಲಿಸಿದ್ದೇವೆ, ಮತ್ತೊಮ್ಮೆ ಸಲ್ಲಿಸುವ ಅಗತ್ಯ ಇಲ್ಲ ಎಂದು ಸುಮ್ಮನೆ ಇರುವಂತಿಲ್ಲ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು: ರಾಜ್ಯ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಎಲ್ಲ 224 ಶಾಸಕರು ಜೂನ್​ 30 ರೊಳಗಾಗಿ ಲೋಕಾಯುಕ್ತರಿಗೆ (Lokayukta) ಆಸ್ತಿ ವಿವರ ಸಲ್ಲಿಸಬೇಕಿದೆ.

ಎಲ್ಲ ಶಾಸಕರು ಕಡ್ಡಾಯವಾಗಿ ನಿಗದಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ಅವರು ಸೂಚಿಸಿದ್ದಾರೆ. ಈ ಸಂಬಂಧ ಅವರು ಎಲ್ಲಾ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮೌಖಿಕ ಸೂಚನೆ ನೀಡಿದ್ದಾರೆ.

ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಸೇರಿದಂತೆ ಮರು ಆಯ್ಕೆಯಾಗಿರುವ ಶಾಸಕರೂ ಸಹ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕಿದೆ. ಹಿಂದೆ ಆಸ್ತಿ ವಿವರ ಸಲ್ಲಿಸಿದ್ದೇವೆ, ಮತ್ತೊಮ್ಮೆ ಸಲ್ಲಿಸುವ ಅಗತ್ಯ ಇಲ್ಲ ಎಂದು ಸುಮ್ಮನೆ ಇರುವಂತಿಲ್ಲ. ಹೊಸದಾಗಿ ಆಯ್ಕೆಯಾದ ಮತ್ತು ಈ ಹಿಂದೆ ವಿಧಾನಸಭೆಗೆ ಆಯ್ಕೆಯಾಗಿದ್ದವರೆಲ್ಲರೂ ಕಡ್ಡಾಯವಾಗಿ ಹೊಸದಾಗಿ ಆಸ್ತಿ ವಿವರ ಸಲ್ಲಿಸಬೇಕು.

ಈಗಾಗಲೇ ಆಸ್ತಿ ವಿವರ ಸಲ್ಲಿಸುವಂತೆ ಆದೇಶ ಹೊರಡಿಸಿ 15 ದಿನ ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜೂನ್ 30ರೊಳಗೆ ಎಲ್ಲ ಶಾಸಕರು ತಮ್ಮ ಆಸ್ತಿ ವಿವರವನ್ನು ಸಲ್ಲಿಸುವಂತೆ ಮತ್ತೊಂದು ಅದೇಶ ಹೊರಡಿಸಲಾಗಿದೆ.

ಪ್ರತಿ ವರ್ಷವೂ ಜನಪ್ರತಿನಿಧಿಗಳು ನಿಗಧಿತ ಅವಧಿಯೊಳಗೆ ಆಸ್ತಿ ವಿವರ ಸಲ್ಲಿಸದೆ ಕಾನೂನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಈ ಬಾರಿ ಜೂ.30ರೊಳಗೆ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಎಚ್ಚರಿಕೆ ನೀಡಿದೆ. ಆಸ್ತಿ ವಿವರ ಸಲ್ಲಿಸುವಾಗ ಶಾಸಕರು ಅಗತ್ಯ ದಾಖಲೆಗಳನ್ನು ಒಡಗಿಸುತ್ತಿರಲಿಲ್ಲ. ಆದ್ದರಿಂದ ಈ ವರ್ಷ ಪ್ರತಿಯೊಂದು ಅಸ್ತಿಗೂ ಕಡ್ಡಾಯವಾಗಿ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳಲು ಅವಕಾಶವಿದ್ದು, ಈ ಬಾರಿ ಅಷ್ಟು ವಿವರ ಸಲ್ಲಿಸದ ಶಾಸಕರ ವಿರುದ್ಧ ಶಾಸನಬದ್ದ ಅಧಿಕಾರ ಚಲಿಯಿಸುವುದಾಗಿಯೂ ಲೋಕಾಯುಕ್ತ ತಿಳಿಸಿದೆ.

ಲೋಕಾಯುಕ್ತ ನಿಯಮ ಹೇಳುವುದೇನು?

ಕರ್ನಾಟಕ ಲೋಕಾಯುಕ್ತ ಕಾಯಿದೆ 1984ರ ಕಲಂ 22(1), ಕಲಂ 7ರ ಉಪಕಲಂ (1)ರಂತೆ ಸರಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕರ ನೌಕರ ಈ ಕಾಯಿದೆಯಂತೆ, ಈ ಅಧಿನಿಯಮ ಜಾರಿಗೆ ಬಂದ ಮೂರು ತಿಂಗಳೊಳಗೆ ಮತ್ತು ಜೂನ್‍ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ಪ್ರತಿ ವರ್ಷ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕೆಂಬ ನಿಯಮವಿದೆ.

ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದಲ್ಲಿ ಸಾರ್ವಜನಿಕ ಸೇವಕರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಕ್ಷಮ ಪ್ರಾಧಿಕಾರ (ರಾಜ್ಯಪಾಲರು) ವರದಿ ಸಲ್ಲಿಸಬೇಕು. ಅಂತಹ ಶಾಸಕರ ಹೆಸರುಗಳನ್ನು ರಾಜ್ಯದಾದ್ಯಂತ ಪ್ರಸರಣ ಹೊಂದಿರುವ ಮೂರು ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಆದರೂ ಶಾಸಕರು ಆಸ್ತಿ ವಿವರ ಸಲ್ಲಿಸದೆ ಇರುವ ಪ್ರಕರಣಗಳು ಹೆಚ್ಚುತ್ತಿವೆ. ಶಾಸಕರು ಬಿಡಿ, ಸಚಿವರೂ ಸಬೂಬುಗಳನ್ನು ಹೇಳಿ ವಿಳಂಬ ನೀತಿ ಅನುಸರಿಸುತ್ತಾ ಬರುತ್ತಿದ್ದಾರೆ. ಲೋಕಾಯುಕ್ತರು ನೋಟಿಸ್ ನೀಡಿದರೂ, ಜನಪ್ರತಿನಿಧಿಗಳು ಉದಾಸೀನ ಮನೋಭಾವ ತೋರಿಸುತ್ತಾ ಬಂದಿದ್ದಾರೆ. ಲೋಕಾಯುಕ್ತ ಒಂದು ರೀತಿಯಲ್ಲಿ ಹಲ್ಲಿಲ್ಲದ ಹಾವಿನಂತೆ ಆಗಿರುವುದೇ ಅವರ ಉದಾಸೀನ ಕ್ಕೆ ಕಾರಣವಾಗಿದೆ.

ರದ್ದಾಗಿದ್ದ ಲೋಕಾಯುಕ್ತ ಮರು ಸ್ಥಾಪನೆಯಾಗಿದೆ. ಹಿಂದಿನ ಅಧಿಕಾರಗಳನ್ನು ಪಡೆದುಕೊಂಡಿದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ನ್ಯಾಯಮೂರ್ತಿ ವೆಂಕಟಾಚಲ ಅವರ ನಂತರ ಖಡಕ್ ಆಗಿರುವ ಲೋಕಾಯುಕ್ತರು ನೇಮಕ ಆಗದಿರುವುದು ಭ್ರಷ್ಟ ಅಧಿಕಾರಿಗಳಿಗೆ ವರದಾನವಾಗಿದೆ.

ವರದಿ: ಎಚ್​ ಮಾರುತಿ

mysore-dasara_Entry_Point