ಕನ್ನಡ ಕಲಿಯಬೇಕೇ, ಭಾಷಾ ಕೌಶಲ ಇನ್ನಷ್ಟು ಸುಧಾರಿಸಬೇಕೇ; ಅನ್ಯ ಭಾಷಿಕರು ಸುಲಭವಾಗಿ ಕನ್ನಡ ಕಲಿಯಲು ಇಲ್ಲಿವೆ 5 ವೇದಿಕೆಗಳು
Learn Kannada Basics: ನೀವು ಬೆಂಗಳೂರಿಗೆ ಹೊಸಬರಾಗಿರಲಿ ಅಥವಾ ನಿಮ್ಮ ಕನ್ನಡ ಕೌಶಲ್ಯ ಸುಧಾರಿಸಿಕೊಳ್ಳಲು ಬಯಸುತ್ತಿರುವವರಿಗೆ ಕೆಲವೊಂದು ವೇದಿಕೆಗಳಿದ್ದು, ಅನ್ಯ ಭಾಷಿಕರು ಬೇಸಿಕ್ ಕನ್ನಡವನ್ನು ಕಲಿಯಲು ಇವು ತುಂಬಾ ನೆರವಾಗಬಹುದು.
ಬೆಂಗಳೂರು: ಕರ್ನಾಟಕ ಅಥವಾ ಬೆಂಗಳೂರಿನಲ್ಲಿ ಕನ್ನಡಿಗರು ಮತ್ತು ಕನ್ನಡೇತರರ ನಡುವೆ ಭಾಷಾ ಸಮಸ್ಯೆ ಕಾರಣದಿಂದಾಗಿ ಗಲಾಟೆಗಳು ಮತ್ತು ವಿವಾದಗಳು ಸರ್ವೇ ಸಾಮಾನ್ಯ. ನಗರದಲ್ಲಿ ಕನ್ನಡ ಮತ್ತು ಹಿಂದಿ ಬಗ್ಗೆ ಹೆಚ್ಚುತ್ತಿರುವ ಚರ್ಚೆಯ ಮಧ್ಯೆ ಎಷ್ಟೋ ಮಂದಿ, ಕನ್ನಡಿಗರನ್ನೇ ನಾಚಿಸುವಂತೆ ಕನ್ನಡ ಕಲಿತು ಅಚ್ಚರಿ ಮೂಡಿಸಿರುವ ಘಟನೆಗಳೂ ನಡೆದಿವೆ. ಕೆಲವರು ಕಲಿಕಾ ಹಂತದಲ್ಲಿದ್ದಾರೆ. ಅಂತಹವರು ಇನ್ನಷ್ಟು ವೇಗವಾಗಿ ಕನ್ನಡ ಕಲಿಯಲು ಇಲ್ಲೊಂದಿಷ್ಟು ವೇದಿಕೆಗಳಿದ್ದು, ಅವು ಪರ ಭಾಷಿಕರಿಗೆ ನೆರವಾಗಬಹುದು.
ಅನ್ಯ ಭಾಷಿಕರು ಕನ್ನಡ ಕಲಿಯುವುದು ಹಿಂದೆಂದಿಗಿಂತಲೂ ಸುಲಭ ಎಂದರೆ ತಪ್ಪಾಗಲ್ಲ. ಏಕೆಂದರೆ ಸೋಷಿಯಲ್ ಮೀಡಿಯಾಗಳ ಮೂಲಕ ಕನ್ನಡ ಕಲಿಸುವ ಅನೇಕ ವೇದಿಕೆಗಳು ಹುಟ್ಟಿಕೊಂಡಿವೆ. ಅವುಗಳ ಮೂಲಕ ಬೆಂಗಳೂರಿಗೆ ಹೊಸಬರು ಆಗಿದ್ದರೆ ಅಥವಾ ಕನ್ನಡ ಕೌಶಲ್ಯ ಸುಧಾರಿಸಲು ಬಯಸುತ್ತಿರುವವರು ಈ ವೇದಿಕೆಗಳು ನೆರವಾಗಬಹುದು. ಈ ವೇದಿಕೆಗಳಲ್ಲಿ ಸ್ಥಳೀಯ ಭಾಷಿಕರು ಬೇಸಿಕ್ನಿಂದ ಹಿಡಿದು ಸಂಪೂರ್ಣ ವ್ಯಾಕರಣ, ಸಾಹಿತ್ಯದವರೆಗೂ ಕನ್ನಡ ಕಲಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸುಲಭವಾಗಿ ಕನ್ನಡ ಕಲಿಯಲು ಇಲ್ಲಿವೆ ನಿಮಗೆ ವೇದಿಕೆಗಳು.
‘ಸಾಕ್ಷಿ ಬೈದ್ - @morethankannadagottilla’
ಬೆಂಗಳೂರು ಮೂಲದ ಡಿಜಿಟಲ್ ಕ್ರಿಯೇಟರ್ ಸಾಕ್ಷಿ ಬೈದ್ ಅವರು ಸ್ವತಃ ಉತ್ತರ ಭಾರತೀಯರಾಗಿದ್ದರೂ ಕನ್ನಡ ಕಲಿಸುವ ಮೂಲಕ ಭಾಷಾ ಅಂತರವನ್ನು ಕಡಿಮೆ ಮಾಡುತ್ತಿದ್ದಾರೆ. ಸಾಕ್ಷಿ ಅವರು ಕನ್ನಡವನ್ನಷ್ಟೇ ಗಮನ ಹರಿಸುವುದಿಲ್ಲ, ವರ್ಣಮಾಲೆ ಸೇರಿದಂತೆ ಬೇಸಿಕ್ ಜ್ಞಾನವನ್ನು ಕಲಿಸುತ್ತಿದ್ದಾರೆ. ಆನ್ಲೈನ್ ಪಾಠಗಳ ಜೊತೆಗೆ ಅವರು ಕಬ್ಬನ್ ಪಾರ್ಕ್ನಂತಹ ಸ್ಥಳಗಳಲ್ಲಿ ವೈಯಕ್ತಿಕ ತರಗತಿಗಳನ್ನೂ ಉಚಿತವಾಗಿ ಆಯೋಜಿಸುತ್ತಿದ್ದಾರೆ. ಬೆಂಗಳೂರಿಗೆ ಹೊಸಬರಾಗಿದ್ದರೆ ಅಥವಾ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದರೆ, ಕನ್ನಡ ಭಾಷಾ ಕಲಿಕೆಗೆ ಈ ಪುಟವನ್ನು ಪರಿಶೀಲಿಸಿ!
‘ರಾಶಿ ರೈ’
ರಾಶಿ ರೈ ಕನ್ನಡ ಮತ್ತು ಹಿಂದಿ ಎರಡನ್ನೂ ಕಲಿಸುವ ವ್ಯಕ್ತಿಗಳಲ್ಲಿ ಒಬ್ಬರು. ಸುಲಭವಾಗಿ ಅರ್ಥವಾಗುವ ಮೂಲಕ ಭಾಷಾ ಕಲಿಕೆಯನ್ನು ಸರಳಗೊಳಿಸುತ್ತಿದ್ದಾರೆ. ನುಡಿಗಟ್ಟುಗಳ ಜತೆಗೆ ಸಂಪೂರ್ಣ ವ್ಯಾಕರಣವನ್ನೂ ಹೇಳಿಕೊಡುತ್ತಾರೆ. ಇದಕ್ಕೆ ಸಂಬಂಧಿಸಿದ ರಾಶಿ ರಾಶಿ ವಿಡಿಯೋಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ.
‘ಕನ್ನಡ್ ಅಲ್ಲಾ, ಕನ್ನಡ’
ಇನ್ಸ್ಟ್ರಾಂನಲ್ಲಿ ಕನ್ನಡ್ ಅಲ್ಲಾ, ಕನ್ನಡ ಎಂಬ ಪುಟವನ್ನು ನವ್ಯ ಎಂಬವರು ತೆರೆದಿದ್ದು, 4 ವರ್ಷಗಳಿಂದ ಕನ್ನಡ ಸೇವೆಯಲ್ಲಿ ತೊಡಗಿದ್ದಾರೆ. ಕೋರ್ಸ್ಗಳ ಮೂಲಕ ಯಶಸ್ವಿ ಮಾರ್ಗದರ್ಶನ ನೀಡುತ್ತಿದ್ದು, ಕೆಲವೊಂದು ದುಡ್ಡು ನೀಡುವ ಕೋರ್ಸ್ಗಳಿದ್ದರೂ ಅವುಗಳನ್ನು ತನ್ನ ಖಾತೆಯಲ್ಲಿ ಉಚಿತವಾಗಿ ಮಾಹಿತಿ ನೀಡುತ್ತಿದ್ದಾರೆ. ಇದು ತಮ್ಮ ಕನ್ನಡ ಕಲಿಯಲು ಪ್ರಾರಂಭಿಸುವವರಿಗೆ ಇದು ಸೂಕ್ತವಾಗಿದೆ.
‘ಕನ್ನಡ ಗೊತಿಲ್ಲಾ ಪಾಡ್ಕಾಸ್ಟ್ -ಸ್ಪಾಟಿಫೈ’
ಇದು ಕನ್ನಡವನ್ನು ಕಲಿಯುವ ಪಾಡ್ಪಾಸ್ಟ್ ಆಗಿದೆ. ದೈನಂದಿನ ಸನ್ನಿವೇಶಗಳಲ್ಲಿ ಕನ್ನಡ ಹೇಗೆ ಬಳಸಬಹುದು ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಅರವಿಂದ್ ಮತ್ತು ಆಕಾಶ್ ಎಂಬವರು ಈ ಪಾಡ್ಕಾಸ್ಟ್ ನಡೆಸುತ್ತಿದ್ದಾರೆ. ಅವರು ಒಟ್ಟಾಗಿ ನಿಜ ಜೀವನದ ಸಂದರ್ಭಗಳ ಮೂಲಕ ಕನ್ನಡವನ್ನು ವಿವರಿಸುತ್ತಾರೆ. ಇದು ಕಲಿಯುವವರಿಗೆ ಮೂಲ ಕನ್ನಡವನ್ನು ಸುಲಭವಾಗಿ ಗ್ರಹಿಸಲು ನೆರವಾಗುತ್ತದೆ.
‘ಕನ್ನಡ ಗೊತ್ತಿಲ್ಲ’
ಕನ್ನಡ ಗೊತ್ತಿಲ್ಲ ಎಂಬುದು ಕನ್ನಡದ ಬೇಸಿಕ್ ಕಲಿಸುವ ಮತ್ತು ಸರಳವಾಗಿ ಕಲಿಸಲು ತೆರೆಯಲಾದ ಆನ್ಲೈನ್ ವೇದಿಕೆಯಾಗಿದೆ. ಅನೂಪ್ ಮೈಯಾ ಸ್ಥಾಪಿಸಿದ ಇದು ಎಂಟು ವರ್ಷಗಳ ಹಿಂದೆ ವಾಟ್ಸಾಪ್ ಗ್ರೂಪ್ ಪಾಠಗಳೊಂದಿಗೆ ಪ್ರಾರಂಭವಾಯಿತು. ಇಂದು, ‘ನನಗೆ ಕನ್ನಡ ಗೊತ್ತಿಲ್ಲ’ ಎಂಬ ಹೆಸರಿನ ಈ ಪ್ಲಾಟ್ಫಾರ್ಮ್ ಟ್ವಿಟರ್, ಫೇಸ್ಬುಕ್ ಮತ್ತು ವಾಟ್ಸಾಪ್ನಲ್ಲಿ ದೈನಂದಿನ ಭಾಷಾ ಬೋಧನೆ ನೀಡುತ್ತಿದೆ. ಇಲ್ಲಿ ಕೋರ್ಸ್ಗಳು ಉಚಿತವಲ್ಲದಿದ್ದರೂ, ಕಡಿಮೆ ಬೆಲೆ ಇರಲಿದೆ. ಹೆಚ್ಚಿನ ಮಾಹಿತಿಗೆ ಅವರ ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ ಕನ್ನಡ ಕಲಿಕೆಯ ಪ್ರಯಾಣವನ್ನು ಇಂದೇ ಪ್ರಾರಂಭಿಸಿ.