Davangere News: ಏಷಿಯಾದ ಅತಿದೊಡ್ಡ ಶಾಂತಿಸಾಗರ ಕೆರೆಗೆ ಬೇಕಾಗಿದೆ ಹೊಸ ನೀರು: ಕಲುಷಿತಗೊಂಡ ನಂತರ ಹೆಚ್ಚಿದ ಪುನರುಜ್ಜೀವನ ಕೂಗು
Shantisagar Lake Development ಏಷಿಯಾದಲ್ಲಿಯೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶಾಂತಿಸಾಗರ ಕಲುಷಿತಗೊಂಡು ಸುದ್ದಿಯಲ್ಲಿದೆ. ಚಿತ್ರದುರ್ಗ ನಗರದಲ್ಲಿ ಆರು ಮಂದಿ ಇಲ್ಲಿನ ಕೆರೆಯಿಂದ ಸರಬರಾಜಾದ ನೀರನ್ನು ಸೇವಿಸಿ ಮೃತಪಟ್ಟಿದ್ದಾರೆ. ವಿಶಾಲವಾದ ಕೆರೆಯ ಹೂಳು ತೆಗೆಸಿ ಮಲಿನತೆ ತಗ್ಗಿಸಲು ಈಗಲೇ ಯೋಜನೆ ರೂಪಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ದಾವಣಗೆರೆ: ಮಧ್ಯ ಕರ್ನಾಟಕದ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಜತೆಗೆ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿರುವ ಏಷಿಯಾದ ಅತಿದೊಡ್ಡ ಶಾಂತಿಸಾಗರ (ಸೂಳೆಕೆರೆ) ಕಲುಷಿತಗೊಂಡಿರುವುದು ದೃಢಪಟ್ಟಿದೆ. ಇದರಿಂದ ವಿಶಾಲ ಕೆರೆಯ ಶುದ್ದತೆಯ ಒತ್ತಾಯ ಗಟ್ಟಿಯಾಗಿಯೇ ಕೇಳಿ ಬರುತ್ತಿದೆ.
ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿ ಸೇರಿದಂತೆ ಹಲವು ಕಡೆ ಮಲಿನಗೊಂಡು ಕುಡಿಯುವ ನೀರು ಸರಬರಾಜುಗೊಂಡು ಆರು ಮಂದಿ ಮೃತಪಟ್ಟು, ಹಲವರು ಅಸ್ವಸ್ಥಗೊಂಡು ಚೇತರಿಸಿಕೊಂಡಿದ್ದಾರೆ. ಈ ಭಾಗಕ್ಕೆ ಶಾಂತಿಸಾಗರದಿಂದಲೇ ನೀರು ಸರಬರಾಜಾಗುತ್ತಿದ್ದುದರಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. ಕೆರೆ ನೀರಿನ ಶುದ್ದತೆ ಪರಿಶೀಲನೆ ಪ್ರಕ್ರಿಯೆಯೂ ನಡೆಯುತ್ತಿದೆ.
ವಿಶಾಲ ಕೆರೆ
ಅಗಾಧವಾದ ಕೆರೆ ತನ್ನ ಸುತ್ತಲಿನ ರಮಣೀಯ ಪರಿಸರ, ನೀರಿನ ಸಮೃದ್ಧಿ ಮತ್ತು ತಾಂತ್ರಿಕ ನಿರ್ಮಾಣಗಳ ಮೂಲಕ ಏಷ್ಯಾ ಖಂಡದಲ್ಲೇ ಎರಡನೆ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಕೆರೆಗೆ ಸೂಳೆ ಕೆರೆ ಎಂಬ ಹೆಸರು ಬರಲು ಐತಿಹ್ಯವೂ ಇದೆ. ಶಾಂತಿಸಾಗರಕ್ಕಿಂತ ಸೂಳೆಕೆರೆ ಎಂದು ಈ ಭಾಗದ ಜನರಲ್ಲಿ ಇದು ಜನಪ್ರಿಯ.
ದಾವಣಗೆರೆಯಿಂದ ಶಿವಮೊಗ್ಗ- ಚನ್ನಗಿರಿ- ಹೊನ್ನಾಳಿ ಕಡೆಗೆ ಹೋಗುವ ಸಂಗಮದಂತಿದೆ ಶಾಂತಿಸಾಗರ. ದಾವಣಗೆರೆಯಿಂದ 40 ಕಿ.ಮಿ ದೂರದಲ್ಲಿ, ಚನ್ನಗಿರಿಯಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ 18 ಕಿ.ಮೀ ದೂರದಲ್ಲಿದೆ. ಈ ಕೆರೆ ನೊಡುವುದಕ್ಕೆ ಅಗಾಧವಾದ ಸಾಗರದಂತೆಯೇ ಕಾಣುತ್ತದೆ. 4416 ಎಕರೆ ವಿಸ್ತೀರ್ಣದ ಈ ಕೆರೆ, ಚಿತ್ರದುರ್ಗ ನಗರವೂ ಸೇರಿ 15 ರಿಂದ 20 ಹಳ್ಳಿಗಳ 2000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ. ಎರಡು ಬೆಟ್ಟಗಳ ನಡುವೆ ಸುಮಾರು 950 ಅಡಿ ಉದ್ದಕ್ಕೆ ಬದುವನ್ನು ಕಟ್ಟಿ ನಡುವೆ ನೀರು ತಡೆದು ನಿಲ್ಲಿಸಿ ಕೆರೆ ನಿರ್ಮಿಸಿರಿವುದು ಇದರ ವಿಶೇಷ. ಒಂದು ಪಾರ್ಶ್ವ 60 ಅಡಿ, ಇನ್ನೊಂದೆಡೆ 80 ಅಡಿ ಅಗಲವಿದ್ದು ಬೆಟ್ಟಗಳ ನಡುವಿರುವ ಕೆರೆಗೆ ಸುತ್ತಲಿನ ನೂರಾರು ಹಳ್ಳಿಗಳಲ್ಲಿ ಬೀಳುವ ಮಳೆ ನೀರು ಹರಿದು ಬರುವ ವ್ಯವಸ್ಥೆ ಚೆನ್ನಾಗಿದೆ. ಕೆರೆಯ ಉತ್ತರದಲ್ಲಿ ಸಿದ್ಧ ನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆಗಳಿದ್ದು ಈ ಕೆರೆಯಿಂದ ಮೂರು ತೂಬುಗಳ ಮೂಲಕ ನೀರು ಹೊರಗೆ ಹರಿದು ಹೋಗುವ ವ್ಯವಸ್ಥೆಯಿದೆ. ಅದರಲ್ಲೂ ಜೆಎಚ್‌ಪಟೇಲ್ ಅವರು ಸಿಎಂ ಆಗಿದ್ದಾಗ ಈ ಕೆರೆಗೆ ಭದ್ರಾ ಬಲದಂಡೆ ನಾಲೆಯಿಂದ ನೀರು ಹರಿಯುವಂತೆ ಮಾಡಿ ವರ್ಷವಿಡೀ ಜೀವಜಲ ಇರುವಂತೆ ಮಾಡಿದ್ದರು.
ಜೆಎಚ್‌ಪಟೇಲ್ ಶ್ರಮ
ಇದು ನಿಜಕ್ಕೂ ವಿಶಾಲ ಕೆರೆ. ನೀರಾವರಿಗೂ ಬಳಕೆ ಮಾಡಲಾಗುತ್ತದೆ. ಕುಡಿಯುವ ನೀರಿಗೂ ಬಳಕೆ ಮಾಡಿದರೂ ಸೀಮಿತ ಪ್ರದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಕೆರೆಗೆ ಮಲಿನ ನೀರು ಹರಿಯುವುದನ್ನು ತಪ್ಪಿಸುವ ಜತೆಗೆ ಕೆರೆಯಲ್ಲಿ ತುಂಬಿರುವ ಹೂಳು ತೆಗೆಸಬೇಕು. ಇಲ್ಲದೇ ಇದ್ದರೆ ನೀರಿನ ಶುದ್ದತೆ ಉಳಿಯುವುದಿಲ್ಲ. ವಿಶೇಷ ಅನುದಾನ ನೀಡಿ ಕೆರೆಯ ಶುದ್ದತೆ, ಉಳಿವಿಗೆ ಒತ್ತು ನೀಡಿ ಜೆ.ಎಚ್.ಪಟೇಲ್ ಸಹಿತ ಹಲವರ ಆಗಿನ ಪ್ರಯತ್ನಕ್ಕೆ ಜೀವನೀಡಬೇಕು ಎನ್ನುವುದು ಶಾಂತಿಸಾಗರ ಸಮೀಪದ ಕಬ್ಬಳ ಗ್ರಾಮದವರಾಗಿರುವ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ಚನ್ನಪ್ಪನಾಯಕ್ ಅವರ ಸಲಹೆ.
ವರದಿ ಬಂದ ನಂತರ ಸೂಕ್ತ ಕ್ರಮ
ಇದೇ ವಿಚಾರವಾಗಿ ಮಾತನಾಡಿರುವ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ದಾವಣಗೆರೆ ಜಿಲ್ಲೆಯ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ತಾಣವಾಗಿರುವ ಸೂಳೆಕೆರೆಯ ನೀರು ಕಲುಷಿತಗೊಂಡಿರುವುದರಿಂದ ಕುಡಿಯಲು ಯೋಗ್ಯವಲ್ಲ ಎಂಬ ಮಾತುಗಳು ಕೇಳಿಬಂದಿರುವುದರಿಂದ ಈಗಾಗಲೇ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ.
, ಸೂಳೆಕೆರೆ ನೀರು ಸಾಕಷ್ಟು ಗ್ರಾಮಗಳಿಗೆ ನೀರು ಸರಬರಾಜಾಗುತ್ತಿತ್ತು. ಆದರೆ, ನೀರು ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಾಗಿಲ್ಲ ಎನ್ನಲಾಗಿರುವುದರಿಂದ ಗ್ರಾಮಗಳಿಗೆ ಕುಡಿಯಲು ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಲು ಈಗಾಗಲೇ ಜಿಪಂ ಸಿಇಒ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಾರೆ.
ಸ್ವಾಮೀಜಿ ಮಾತಿಗೂ ಗೌರವ
ಪಾಂಡೊಮಟ್ಟಿ ಸ್ವಾಮೀಜಿ ಸೂಳೆಕೆರೆ ನೀರು ಕಲುಷಿತಗೊಳ್ಳುವುದನ್ನು ತಡೆಯಲು ತ್ಯಾಜ್ಯವನ್ನು ಬೇರೆ ಕಡೆಗೆ ತಿರುಗಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ಕ್ರಮ ವಹಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೂಳೆಕೆರೆ ನೀರನ್ನೇ ನಂಬಿದ ಗ್ರಾಮಗಳಿಗೆ ಶೀಘ್ರ ಪರಿಹಾರ ಹುಡುಕಲಾಗುವುದು ಎನ್ನುತ್ತಾರೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ.
ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮತ್ತು ಮುಖ್ಯವಾಗಿ ಜಿಲ್ಲೆಯಾದ್ಯಂತ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ತಂದು ರೈತರಿಗೆ ಉಪಯೋಗವಾಗುವ ಕೆಲಸಗಳನ್ನು ಮಾಡಲು ವಿಶ್ವಾಸವಿಟ್ಟು ಜನರು ನಮ್ಮನ್ನು ಚುನಾಯಿಸಿದ್ದು, ಜನರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ ಎನ್ನುವುದು ಅವರ ಭರವಸೆ ನುಡಿ.
(ವರದಿ: ಅದಿತಿ ದಾವಣಗೆರೆ)
==============