ಕರ್ನಾಟಕ ಲೋಕಸಭಾ ಚುನಾವಣೆ ಕುತೂಹಲಕಾರಿ ಅಂಶಗಳು, 3 ದಶಕಗಳಲ್ಲಿ ಕಾಂಗ್ರೆಸ್ ಎರಡಂಕಿ ದಾಟಿಲ್ಲ,ಬಿಜೆಪಿ ಹಿಂತಿರುಗಿ ನೋಡಿಲ್ಲ !
Karnataka politics ಕರ್ನಾಟಕದಲ್ಲಿ ಮೂರು ದಶಕದಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಸಂಖ್ಯೆ ಏರುತ್ತಲೇ ಇದೆ. ಕಾಂಗ್ರೆಸ್ ಮಾತ್ರ ಕುಸಿಯುತ್ತಲೇ ಇದೆ. ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆವರದಿ:ಎಚ್.ಮಾರುತಿ. ಬೆಂಗಳೂರು
ಬೆಂಗಳೂರು: ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯ ಕರ್ನಾಟಕದ ಇತಿಹಾಸವನ್ನು ಕೆದಕುತ್ತಾ ಹೋದಂತೆ ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುತ್ತಾ ಹೋಗುತ್ತವೆ. ಕಳೆದ ಮೂರು ದಶಕಗಳ ಇತಿಹಾಸದಲ್ಲಿ ಎರಡು ಪಕ್ಷಗಳು ಮಾತ್ರ 25ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿವೆ. 2019ರ ಚುನಾವಣೆಯಲ್ಲಿ ಬಿಜೆಪಿ 28ಕ್ಕೆ 25 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿತ್ತು. ಕಾಂಗ್ರೆಸ್ 1989ರಲ್ಲಿ 28ಕ್ಕೆ 27 ಸ್ಥಾನಗಳನ್ನು ಗಳಿಸುವ ಮೂಲಕ ಆಗ ದಿಗ್ವಿಜಯ ಸಾಧಿಸಿತ್ತು. ಅಲ್ಲಿಂದೀಚೆಗೆ ಕಾಂಗ್ರೆಸ್ ಅಂತಹ ಗೆಲುವನ್ನು ದಾಖಲಿಸಿಲು ಇದುವರೆಗೂ ಸಾಧ್ಯವಾಗಿಲ್ಲ.1989 ರಿಂದೀಚೆಗೆ ಕಾಂಗ್ರೆಸ್ ಸಾಧನೆ ಚುನಾವಣೆಯಿಂದ ಚುನಾವಣೆಗೆ ಕುಗ್ಗುತ್ತಾ ಹೋಗಿದೆ.
2009 ರಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆಗ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಒಂದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಮೋದಿ ಅಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಚ್ಚಿಕೊಂಡು ಹೋಗಿದ್ದವು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಡಿಕೆ ಸುರೇಶ್ ಮತ್ತು ಹಾಸನದಿಂದ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಬಿಜೆಪಿಯ ಈ ಗೆಲುವು ದಕ್ಷಿಣ ಭಾರತದ ಮೊದಲ ಐತಿಹಾಸಿಕ ಗೆಲುವು ಎಂದೇ ಬಿಂಬಿತವಾಗಿತ್ತು.
1991 ರಲ್ಲಿ ಬಿಜೆಪಿ ರಾಜ್ಯದಲ್ಲಿ ತನ್ನ ಖಾತೆ ತೆರೆಯಲು ಅರಂಭಿಸಿತು. ಅಲ್ಲಿಂದೀಚೆಗೆ ಪಕ್ಷ ಹಿಂತಿರುಗಿ ನೋಡಿಯೇ ಇಲ್ಲ. ಆಗ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆ. ವೆಂಕಟಗಿರಿಗೌಡ, ಅಂದಿನ ಮಂಗಳೂರು ಕ್ಷೇತ್ರದಿಂದ ವಿ.ಧನಂಜಯ ಕುಮಾರ್, ಮತ್ತು ತುಮಕೂರು ಕ್ಷೇತ್ರದಿಂದ ಎಸ್. ಮಲ್ಲಿಕಾರ್ಜುನಯ್ಯ ಆಯ್ಕೆಯಾಗಿದ್ದರು. 1996ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು 7ಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಯಿತು. 90ರ ದಶಕದಲ್ಲಿ ಜನತಾದಳ ಇಬ್ಬಾಗವಾಗುತ್ತಾ ಹೋದಂತೆಲ್ಲಾ ಬಿಜೆಪಿ ಶಕ್ತಿ ವೃದ್ಧಿಸುತ್ತಾ ಹೋಯಿತು ಎಂದರೆ ತಪ್ಪಾಗಲಿಕ್ಕಿಲ್ಲ.
1998 ರಲ್ಲಿ ಮೊದಲ ಬಾರಿಗೆ ಬಿಜೆಪಿ ಎರಡಂಕಿ ಸ್ಥಾನಗಳನ್ನು ಗೆದ್ದು ಗೆಲುವಿನ ನಗೆ ಬೀರಿತ್ತು. ಸಂಯುಕ್ತ ಜನತಾ ದಳ ಬಿಜೆಪಿಯೊಂದಿಗೆ ವಿಲೀನಗೊಂಡ ನಂತರ ನಡೆದ 2004ರ
ಚುನಾವಣೆಯಲ್ಲಿ ಬಿಜೆಪಿ ಸಂಖ್ಯಾಬಲ 18ಕ್ಕೆ ವೃದ್ದಿಯಾಯಿತು. ಅಲ್ಲಿಂದೀಚೆಗೆ ಬಿಜೆಪಿ ವಿಶೇಷವಾಗಿ ವೀರಶೈವ ಲಿಂಗಾಯತ ಪ್ರಾಬಲ್ಯವಿರುವ ಉತ್ತರ ಕರ್ನಾಟಕದಲ್ಲಿ ಗಟ್ಟಿಯಾಗಿ ನೆಲೆಯೂರಿತು. ಬಿಜೆಪಿ 2009 ರಲ್ಲಿ ನಡೆದ ಚುನಾವಣೆಯಲ್ಲಿ 19 ಮತ್ತು 2014 ರ ಚುನಾವಣೆಯಲ್ಲಿ 17 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2014 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಎರಡಂಕಿ ದಾಟಲೇ ಇಲ್ಲ.
ಒಂದು ಕಡೆ ಬಿಜೆಪಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆಲ್ಲಾ ಕಾಂಗ್ರೆಸ್ ಬಲ ಕುಂದುತ್ತಾ ಹೋಯಿತು. 1998 ರಿಂದೀಚೆಗೆ ಕಾಂಗ್ರೆಸ್ 9 ಸ್ಥಾನಗಳನ್ನು ದಾಟಿಲ್ಲ. 1998 ಮತ್ತು 204ರಲ್ಲಿ ತಲಾ 9 ಸ್ಥಾನಗಳನ್ನು ಗೆದ್ದಿದ್ದೇ ದೊಡ್ಡ ಗೆಲುವಾಗಿತ್ತು. 2019ರಲ್ಲಿ ತಲಾ ಒಂದು ಸ್ಥಾನ ಗೆದ್ದಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ನ ಕಳಪೆ ಸಾಧನೆಯಾಗಿತ್ತು. 2004ರಲ್ಲಿ ಕಾಂಗ್ರೆಸ್ 8 ಮತ್ತು ಜೆಡಿಎಸ್ 2 ಸ್ಥಾನಗಳನ್ನು ಗೆದ್ದಿದ್ದವು. 2009 ರಲ್ಲಿ ಕಾಂಗ್ರೆಸ್ 6 ಮತ್ತು ಜೆಡಿಎಸ್ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದವು. 2014ರಲ್ಲಿ ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇದೀಗ ಮತ್ತೊಂದು ಮಹಾ ಸಮರ ಆರಂಭವಾಗಿದೆ. ಈ ಬಾರಿಯೂ ಬಿಜೆಪಿ ತನ್ನ 2019ರ ಗೆಲುವನ್ನು ಪುನರಾವರ್ತನೆ ಮಾಡುವುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ ಅದು
ಅಷ್ಟೊಂದು ಸುಲಭವಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಐದು ಗ್ಯಾರಂಟಿಗಳು ಕೈ ಹಿಡಿಯುವ ನಿರೀಕ್ಷೆಯಲ್ಲಿದೆ. ಬಿಜೆಪಿ ಎಂದಿನಂತೆ ಮೋದಿಯ ನಾಮಬಲವನ್ನು ನೆಚ್ಚಿಕೊಂಡಿದೆ. 25 ಸ್ಥಾನಗಳಲ್ಲಿ ಗೆಲುವು ದಾಖಲಿಸುವುದಿಲ್ಲ ಎನ್ನುವುದು ನಿಜವಾದರೂ ಬಿಜೆಪಿ ಮೊದಲ ಸಂಖ್ಯಾಬಲದಲ್ಲಿ ಮೊದಲ ಸ್ಥಾನದಲ್ಲಿ ಇರಲಿದೆ ಎಂದು ನಿಶ್ಚಿತವಾಗಿ ಹೇಳಬಹುದು. ಕಾಂಗ್ರೆಸ್ ಪಕ್ಷವೂ ಎರಡಂಕಿ ದಾಟುವ ಭರವಸೆ ಹೊಂದಿದೆ. ಹಿಂದಿನ ಬಾರಿ ಕಾಂಗ್ರೆಸ್ ಸಖ್ಯದೊಂದಿಗೆ ಹಿನ್ನಡೆ ಅನುಭವಿಸಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಜತೆ ಸೇರಿ ಬಲ ವೃದ್ದಿಕೊಳ್ಳಿಸುವ ಯೋಚನೆಯಲ್ಲಿದೆ. ಜೂನ್4 ರ ಫಲಿತಾಂಶದಲ್ಲಿ ಉತ್ತರ ಅಡಗಿದೆ.
(ವಿಶೇಷ ವರದಿ: ಎಚ್.ಮಾರುತಿ, ಬೆಂಗಳೂರು)