ಲೋಕಸಭಾ ಚುನಾವಣೆ 2024; ಕರ್ನಾಟಕ ಬಿಜೆಪಿ, ಕಾಂಗ್ರೆಸ್‌ ನಾಯಕರು ದೆಹಲಿಗೆ, ಮಾರ್ಚ್‌ 10 ರೊಳಗೆ ಮೊದಲ ಪಟ್ಟಿಯ ನಿರೀಕ್ಷೆ-lok sabha polls 2024 karnataka bjp congress leaders in delhi to finalise candidates list check dets bengaluru news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ 2024; ಕರ್ನಾಟಕ ಬಿಜೆಪಿ, ಕಾಂಗ್ರೆಸ್‌ ನಾಯಕರು ದೆಹಲಿಗೆ, ಮಾರ್ಚ್‌ 10 ರೊಳಗೆ ಮೊದಲ ಪಟ್ಟಿಯ ನಿರೀಕ್ಷೆ

ಲೋಕಸಭಾ ಚುನಾವಣೆ 2024; ಕರ್ನಾಟಕ ಬಿಜೆಪಿ, ಕಾಂಗ್ರೆಸ್‌ ನಾಯಕರು ದೆಹಲಿಗೆ, ಮಾರ್ಚ್‌ 10 ರೊಳಗೆ ಮೊದಲ ಪಟ್ಟಿಯ ನಿರೀಕ್ಷೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ದೆಹಲಿಯಲ್ಲಿ ಇಂದು (ಮಾರ್ಚ್‌ 6) ಬಿಜೆಪಿ ಸಭೆ, ನಾಳೆ (ಮಾರ್ಚ್‌ 7) ಕಾಂಗ್ರೆಸ್ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಮೊದಲ ಪಟ್ಟಿ ಮಾ.10ರೊಳಗೆ ಬಿಡುಗಡೆಯಾಗಬಹುದು. (ವರದಿ -ಎಚ್.ಮಾರುತಿ, ಬೆಂಗಳೂರು)

ಎಡದಿಂದ ಬಲಕ್ಕೆ (1) ಮುಖ್ಯಮಂತ್ರಿ ಸಿದ್ದರಾಮಯ್ಯ (2) ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, (3) ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, (4) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ಎಡದಿಂದ ಬಲಕ್ಕೆ (1) ಮುಖ್ಯಮಂತ್ರಿ ಸಿದ್ದರಾಮಯ್ಯ (2) ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, (3) ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, (4) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದು, ಅಭ್ಯರ್ಥಿಗಳ ಘೋಷಣೆ ಮಾಡಲು ಎರಡೂ ರಾಷ್ಟ್ರೀಯ ಪಕ್ಷಗಳೂ ಮೀನಮೇಷ ಎಣಿಸುತ್ತಿವೆ. ಅತ್ತ ಆಕಾಂಕ್ಷಿಗಳು ಬೇಗ ಅಧಿಕೃತವಾಗಿ ಹೆಸರು ಪ್ರಕಟವಾದರೆ ತಯಾರಿಗೆ ಕಾಲಾವಕಾಶ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಕೊನೆಗೂ ಬಿಜೆಪಿ ಕಾಂಗ್ರೆಸ್ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ದಿಲ್ಲಿಯಲ್ಲಿ ಸಭೆ ಕರೆದಿವೆ. ಬಿಜೆಪಿ ಮಾ.6ರಂದು ಮತ್ತು ಕಾಂಗ್ರೆಸ್ ಮಾ.7ರಂದು ಸಭೆ ಆಯೋಜಿಸಿವೆ.

ಬಹುಶಃ ಎರಡೂ ಪಕ್ಷಗಳ ಮೊದಲ ಹಂತದ ಪಟ್ಟಿ ಮಾ.10ರೊಳಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಹಜವಾಗಿಯೇ ಒಬ್ಬರೇ ಅಭ್ಯರ್ಥಿ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗೆಯಾಗಬಹುದು. ಕಗ್ಗಂಟು ಅಥವಾ ಆಕಾಂಕ್ಷಿಗಳು ಹೆಚ್ಚಿರುವ ಕ್ಷೇತ್ರಗಳ ಪಟ್ಟಿ ನಿಧಾನವಾಗಲಿದೆ.

ದೆಹಲಿಯಲ್ಲಿ ಬುಧವಾರ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಭಾಗವಹಿಸಲು ಮಾಜಿ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ಮರುದಿನ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ.ನಡ್ಡಾ ಮೊದಲಾದವರು ಪಟ್ಟಿಗೆ ಅಂತಿಮ ಮುದ್ರೆ ಒತ್ತಲಿದ್ದಾರೆ.

ಇನ್ನು ಕಾಂಗ್ರೆಸ್ ಸಭೆ ದೆಹಲಿಯಲ್ಲಿ ಮಾ.7ರಂದು ನಡೆಯಲಿದ್ದು, ಪ್ರತಿರೋಧ ಎದುರಾಗದ ಕ್ಷೇತ್ರಗಳ ಪಟ್ಟಿಯನ್ನು ಘೋಷಿಸುವ ಸಾಧ್ಯತೆಗಳಿವೆ. ಪಕ್ಷದ ಮೂಲಗಳ ಪ್ರಕಾರ 8-10 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಇಬ್ಬರೂ ಮುಖಂಡರು ಭಾಗವಹಿಸಲಿದ್ದಾರೆ.

ಲೋಕಸಭಾ ಚುನಾವಣೆಗೆ ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ವಿವರ

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು: ಪ್ರಹ್ಲಾದ ಜೋಷಿ(ಧಾರವಾಡ), ಶಿವಮೊಗ್ಗ (ಬಿ,ವೈ.ರಾಘವೇಂದ್ರ), ವಿ.ಸೋಮಣ್ಣ (ತುಮಕೂರು), ಜಗದೀಶ ಶೆಟ್ಟರ್ (ಬೆಳಗಾವಿ),ಅಣ್ಣಾ ಸಾಹೇಬ್ ಜೊಲ್ಲೆ(ಚಿಕ್ಕೋಡಿ), ಕಲಬುರಗಿ(ಉಮೇಶ್ ಜಾಧವ್), ತೇಜಸ್ವಿ ಸೂರ್ಯ(ಬೆಂಗಳೂರು ದಕ್ಷಿಣ), ಪಿ.ಸಿ.ಮೋಹನ್ (ಬೆಂಗಳೂರು ಸೆಂಟ್ರಲ್), ಡಾ.ಸಿಎನ್.ಮಂಜುನಾಥ್ (ಬೆಂಗಳೂರು ಗ್ರಾಮಾಂತರ).

ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು: ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ), ಸ್ಟಾರ್ ಚಂದ್ರು(ಮಂಡ್ಯ), ರಕ್ಷಾ ರಾಮಯ್ಯ (ಚಿಕ್ಕಬಳ್ಳಾಪುರ), ಸಚಿವ ಕೆ.ಹೆಚ್.ಮುನಿಯಪ್ಪ (ಕೋಲಾರ), ಜಯಪ್ರಕಾಶ್ ಹೆಗ್ಟೆ(ಉಡುಪಿ ಚಿಕ್ಕಮಗಳೂರು), ಎನ್.ಎ. ಹ್ಯಾರಿಸ್ (ಬೆಂಗಳೂರು ಸೆಂಟ್ರಲ್), ಬೆಂಗಳೂರು ದಕ್ಷಿಣ(ಸೌಮ್ಯ ರೆಡ್ಡಿ), ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ),ಕಲಬುರಗಿ (ರಾಧಾಕೃಷ್ಣ), ಎನ್.ಚಂದ್ರಪ್ಪ (ಚಿತ್ರದುರ್ಗ), ವಿಜಯಪುರ (ರಾಜು ಅಲಗೂರ).

ಇವರ ಸ್ಪರ್ಧೆಗೆ ಯಾರ ವಿರೋಧವೂ ಇಲ್ಲದ ಕಾರಣ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರಗಳ ಅಭ್ಯರ್ಥಿಗಳು ಕಾಣಿಸಿಕೊಳ್ಳಲಿದ್ದಾರೆ.

ಕರ್ನಾಟಕದಲ್ಲಿ ಕುತೂಹಲ ಕೆರಳಿಸಿರುವ ಲೋಕಸಭಾ ಕ್ಷೇತ್ರಗಳು

ಇನ್ನು ಬಿಜೆಪಿ ಮಂಡ್ಯ ಹಾಸನ ಕೋಲಾರ ಕ್ಷೇತ್ರಗಳನ್ನು ತನ್ನ ಮಿತ್ರಪಕ್ಷ ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ. ಎರಡೂ ಪಕ್ಷಗಳ ರಾಜ್ಯ ಅಧ್ಯಕ್ಷರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಯ ವರಿಷ್ಠರಿಗೆ ರವಾನಿಸಿದ್ದಾರೆ. ಬಿಜೆಪಿ ವರಿಷ್ಠರು ತಮ್ಮದೇ ಮೂಲಗಳಿಂದ ಪ್ರತ್ಯೇಕ ಪಟ್ಟಿಯನ್ನು ಸಿದ್ದಪಡಿಸಿಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

2019 ರಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೂ 28 ರಲ್ಲಿ ಬಿಜೆಪಿ ಬರೋಬ್ಬರಿ 25 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ ಬೆಂಬಲಿತ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಗೆಲುವಿನ ನಗೆ ಬೀರಿದ್ದರು. ಇದೀಗ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜೆಡಿಎಸ್ ಬಿಜೆಪಿಯ ಜೊತೆ ಸಾಗಿದೆ. 7 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚಿಸಿದೆ.

ಸಂಪುಟದಲ್ಲಿ ಸ್ಥಾನ ಸಿಗದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮುನಿಸಿಕೊಂಡಿರುವ ಬಿ.ಕೆ.ಹರಿಪ್ರಸಾದ್ ಮತ್ತೆ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಅವರು ಬೆಂಗಳೂರು ಸೆಂಟ್ರಲ್ ನಿಂದ ಟಿಕೆಟ್ ಬಯಿಸಿದ್ದಾರೆ. ಆದರೆ ಈ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ವಾಡಿಕೆಯಾಗಿದೆ.

ಕಲಬುರಗಿಯಿಂದ ಎಐಸಿಸಿ ಅಧ್ಯಕ್ಷ ಮಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಸ್ಪರ್ಧೆ ಬಹುತೇಕ ಖಚಿತ ಎಂದು ತಿಳಿದು ಬಂದಿದೆ. ಸಚಿವ ಎಚ್.ಕೆ.ಪಾಟೀಲ್ ಅವರು ತಮ್ಮ ಸಹೋದರ ಡಿ.ಆರ್. ಪಾಟೀಲ್ ಅವರಿಗೆ ಟಿಕೆಟ್ ಕೇಳಿದ್ದಾರೆ. ಚುನಾವಣೆ ಎಂದರೆ ಹಾವು ಏಣಿ ಆಟ ಇದ್ದ ಹಾಗೆ. ಇದಮಿತ್ಥಂ ಎಂದು ಹೇಳಲು ಬರುವುದಿಲ್ಲ. ಇಂದು ಇದ್ದ ಹೆಸರು ನಾಳೆ ಕೇಳಿ ಬರುವುದಿಲ್ಲ. ಹಾಗೆಯೇ ವರಿಷ್ಠರು ಧುತ್ತೆಂದು ಎಲ್ಲಿಂದಲೋ ಒಬ್ಬ ಅಭ್ಯರ್ಥಿಯನ್ನು ತಂದು ನಿಲ್ಲಿಸುತ್ತಾರೆ. ಕಾರ್ಯಕರ್ತರು ಒಪ್ಪಿಕೊಳ್ಳಲೇಬೇಕು.

(ವರದಿ -ಎಚ್.ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)