Mangalore news: ಶಿವರಾತ್ರಿಯಂದೇ ಶಿವನ ಪಾದ ಸೇರಿದ ಧರ್ಮಸ್ಥಳದ ‘ಲತಾ’ ಹೆಸರಿನ 60 ವರ್ಷದ ಆನೆ
ಧರ್ಮಸ್ಥಳದ 60 ವರ್ಷ ಪ್ರಾಯದ ಹೆಣ್ಣಾನೆ ಶಿವರಾತ್ರಿ ದಿನದಂದೇ ಕಣ್ಮುಚ್ಚಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಲತಾ ಹೆಸರಿನ ಈ ಆನೆಗೆ ಚಿಕಿತ್ಸೆ ನಡೆಯುತ್ತಿದ್ದರೂ, ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ನಿಧನಹೊಂದಿದೆ.
ಮಂಗಳೂರು: ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಹಿತ ಎಲ್ಲರಿಗೂ ಅಚ್ಚುಮೆಚ್ಚಿನ ಈ ಹೆಣ್ಣಾನೆಯ ಹೆಸರು ಲತಾ. ಧರ್ಮಸ್ಥಳದಲ್ಲಿ 50 ವರ್ಷ ಸೇವೆ ಮಾಡಿದ ಈ 60 ವರ್ಷದ ಆನೆ, ಶುಕ್ರವಾರ ಶಿವರಾತ್ರಿಯ ದಿನವೇ ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿತು.
ಲಕ್ಷದೀಪೋತ್ಸವ, ವರ್ಷಾವಧಿ ಜಾತ್ರೆ, ನಡಾವಳಿ, ಮೊದಲಾದ ವಿಶೇಷ ಸಂದರ್ಭಗಳಲ್ಲಿ, ಈ ಆನೆ ಉತ್ತಮ ಸೇವೆ ನೀಡಿ ಸೌಮ್ಯ ಸ್ವಭಾವದೊಂದಿಗೆ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿತ್ತು. ಅರಣ್ಯ ಇಲಾಖಾ ಅಧಿಕಾರಿಗಳು ಮತ್ತು ಧರ್ಮಸ್ಥಳದ ಪಶುವೈದ್ಯಾಧಿಕಾರಿ ಡಾ. ಯತೀಶ್ ಕುಮಾರ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ದಫನ ಮಾಡಲಾಯಿತು.
ಧರ್ಮಸ್ಥಳದಲ್ಲಿ ಸದ್ಯ ಲಕ್ಷ್ಮಿ, ಶಿವಾನಿ ಎಂಬ ಎರಡು ಆನೆಗಳಿವೆ. ಲತಾ ಆನೆ ಈ ಎರಡು ಆನೆಗಳಿಗೂ ತಾಯಿ, ಅಜ್ಜಿಯಾಗಿ ಪ್ರೀತಿಯಿಂದ ವರ್ತಿಸುತ್ತಿತ್ತು. ಶಿವಾನಿ ಆನೆ, ತಾಯಿ ಲಕ್ಷ್ಮಿ ಆನೆಗಿಂತಲೂ ಹೆಚ್ಚು ಲತಾ ಆನೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿತ್ತು. ಇದೀಗ ಲತಾ ನೆನಪು ಮಾತ್ರ. ಕಳೆದ 50 ವರ್ಷಗಳ ಅವಧಿಯಲ್ಲಿ ಧರ್ಮಸ್ಥಳ ದೇವಸ್ಥಾನದ ಜಾತ್ರಾಮಹೋತ್ಸವದಲ್ಲಿ ಈ ಲತಾ ಆನೆ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಚಿತ್ತ ಸೆಳೆಯುತ್ತಿತ್ತು.
ಶಿವಾನಿ ಹಾಗೂ ಲಕ್ಷ್ಮಿ ಕ್ಷೇತ್ರದಲ್ಲಿ ಇದ್ದರೂ ಕೂಡಾ ಲತಾ ನಡೆದುಕೊಂಡಂತೆ ಆಕೆಯನ್ನು ಅನುಸರಿಸುತ್ತಿದ್ದವು. ಲತಾಳಿಗೆ ಜನಿಸಿದವಳು ಲಕ್ಷ್ಮಿಯಾಗಿದ್ದರೆ, ಲಕ್ಷ್ಮಿಯಲ್ಲಿ ಜನಿಸಿದ ಆನೆ ಶಿವಾನಿ. ಶಿವಾನಿ ಜನನವಾದ ಬಳಿಕ ಲಕ್ಷ್ಮೀ ಉತ್ಸವದಲ್ಲಿ ಭಾಗವಹಿಸುತ್ತಿರಲಿಲ್ಲವಾಗಿದ್ರೂ, ಲತಾ ಮಾತ್ರ ನಿರಂತರವಾಗಿ ದೇವರ ಸೇವೆಯಲ್ಲಿ ಭಾಗಿಯಾಗಿದ್ದಳು. ವಯಸ್ಸಾಗಿರೋ ಲತಾ ಶಿವರಾತ್ರಿಯಂದೇ ಶಿವನ ಪಾದ ಸೇರಿದ್ದು, ಧರ್ಮಸ್ಥಳ ಕ್ಷೇತ್ರದ ಜನರು ಕಂಬನಿ ಮಿಡಿದಿದ್ದಾರೆ.