Mangalore News: ಮಹಾಶಿವರಾತ್ರಿ; ಬಂಟ್ವಾಳದ ನೇತ್ರಾವತಿ ಸನ್ನಿಧಿಯಲ್ಲಿರುವ ಭಯಂಕೇಶ್ವರನ ಮಹತ್ವ ತಿಳಿಯಿರಿ-mangalore news mahashivratri famous bhayankeshwar temple near bantwal netravati know the significance rmy ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಹಾಶಿವರಾತ್ರಿ; ಬಂಟ್ವಾಳದ ನೇತ್ರಾವತಿ ಸನ್ನಿಧಿಯಲ್ಲಿರುವ ಭಯಂಕೇಶ್ವರನ ಮಹತ್ವ ತಿಳಿಯಿರಿ

Mangalore News: ಮಹಾಶಿವರಾತ್ರಿ; ಬಂಟ್ವಾಳದ ನೇತ್ರಾವತಿ ಸನ್ನಿಧಿಯಲ್ಲಿರುವ ಭಯಂಕೇಶ್ವರನ ಮಹತ್ವ ತಿಳಿಯಿರಿ

Bhayankeshwar Temple: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ, ಕದ್ರಿ ದೇವಸ್ಥಾನಗಳು ಅಲ್ಲದೆ, ಅಲ್ಲಲ್ಲಿ ನಾನಾ ರೂಪಗಳಲ್ಲಿ ಕಾಣಿಸುವ ಈಶ್ವರನ ಸನ್ನಿಧಿಗಳಿವೆ. ಅವುಗಳಲ್ಲಿ ಗಮನ ಸೆಳೆಯುವುದು ಭಯಂಕೇಶ್ವರ. ಈ ದೇವಾಲಯದ ಮಹತ್ವ ತಿಳಿಯಿರಿ.

ಬಂಟ್ವಾಳದ ನೇತ್ರಾವತಿ ಸನ್ನಿಧಿಯಲ್ಲಿರುವ ಭಯಂಕೇಶ್ವರ ದೇವಾಲಯ.
ಬಂಟ್ವಾಳದ ನೇತ್ರಾವತಿ ಸನ್ನಿಧಿಯಲ್ಲಿರುವ ಭಯಂಕೇಶ್ವರ ದೇವಾಲಯ.

ಮಂಗಳೂರು (ದಕ್ಷಿಣ ಕನ್ನಡ): ದೇಶದಾದ್ಯಂತ ಇಂದು (ಮಾರ್ಚ್ 8, ಶುಕ್ರವಾರ) ಮಹಾಶಿವರಾತ್ರಿ (Mahashivratri 2024) ಆಚರಿಸಲಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಇರುವ ಶಿವನ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಶಿವನ ದೇವಸ್ಥಾನಗಳನ್ನು ಹುಡುಕಲು ಹೋದರೆ, ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ, ಕದ್ರಿ ದೇವಸ್ಥಾನಗಳು ಅಲ್ಲಲ್ಲಿ ನಾನಾ ರೂಪಗಳಲ್ಲಿ ಕಾಣಿಸುವ ಈಶ್ವರನ ಸನ್ನಿಧಿಗಳಿವೆ. ಅವುಗಳಲ್ಲಿ ಗಮನ ಸೆಳೆಯುವುದು ಭಯಂಕೇಶ್ವರ.

ಭಯಂಕೇಶ್ವರ ಆಗಿದ್ದು ಹೇಗೆ? ಮಹತ್ವವನ್ನ ತಿಳಿಯಿರಿ

ಸಂತತಿ ಇಲ್ಲದೆ ವ್ಯಾಕುಲತೆಗೆ ಒಳಗಾದ ಬಯಂಕ ಸಪಲ್ಯ ಎಂಬ ವ್ಯಕ್ತಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡ ಶಿವ, ನೇತ್ರಾವತಿ ನದಿಯ ದಡದಲ್ಲಿ ಪಶ್ಚಿಮಾಭಿಮುಖವಾಗಿ ತನಗೆ ಗುಡಿಯೊಂದನ್ನು ನಿರ್ಮಿಸಿ, ಪೂಜಿಸಿಕೊಂಡು ಬಂದಲ್ಲಿ ಸಂತತಿಯಾಗುವುದು ಎಂದು ಅಭಯ ನೀಡಿದ, ಈತ ಬಯಂಕರನಿಗೆ ಅಭಯ ನೀಡಿದ ಅಭಯಂಕೇಶ್ವರನಾದ, ಬಳಿಕ ಅಭಯಂಕೇಶ್ವರ ಹೋಗಿ, ಭಯಂಕೇಶ್ವರನಾದ ಎಂದು ಹೇಳಲಾಗುವ ಈ ದೇವರ ಸನ್ನಿಧಿ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪ ನೇತ್ರಾವತಿ ನದಿಯ ದಡದಲ್ಲಿ. ತುಳುವ ನಾಡನ್ನು ಆಳಿದ ಮಧ್ಯಯುಗದ ಅಳುಪ ಅರಸರ ಕಾಲಕ್ಕೆ ಸೇರಿದ ಈ ದೇವಸ್ಥಾನವನ್ನು ಅಳುಪ ದೊರೆ ಬಂಕಿದೇವ ಕಟ್ಟಿಸಿದ ಎಂಬ ವಿಚಾರವೂ ಇದೆ. ಕ್ರಿ.ಶ.1200ರಿಂದ 1300ರ ಅವಧಿಯಲ್ಲಿ ನಿರ್ಮಾಣಗೊಂಡ ದೇವಸ್ಥಾನಕ್ಕೆ ಏಳುನೂರು ವರ್ಷಗಳ ಇತಿಹಾಸವಿದೆ.

ಅಂತರ್ಛಾವಣಿ ಇರುವ ಈ ದೇವಾಲಯದ ಗರ್ಭಗುಡಿ, ಇದಕ್ಕೆ ತಾಗಿಕೊಂಡಂತೆ ಅಗಲಕಿರಿದಾದ ಪ್ರದಕ್ಷಿಣ ಪಥ, ತೀರ್ಥಮಂಟಪ ಒಳಗೊಂಡಿರುವ ದೇವಸ್ಥಾನದ ನೈಋತ್ಯ ಭಾಗದಲ್ಲಿ ಹೊರಾಂಗಣದಲ್ಲಿ ಗಣಪತಿ ಗುಡಿ ಇತ್ತು. ನೇತ್ರಾವತಿ ನದಿಯಲ್ಲಿ ಬಂದ ದೊಡ್ಡ ನೆರೆಗೆ ಈ ದೇವಸ್ಥಾನದ ರಥ ತೇಲಿ ಹೋಗಿತ್ತು.

ಎಲ್ಲಿದೆ ದೇವಸ್ಥಾನ: ಬಿ.ಸಿ.ರೋಡಿನಿಂದ ಕೇವಲ 3 ಕಿ.ಮೀ. ದೂರದಲ್ಲಿದೆ ಈ ದೇವಸ್ಥಾನ. ಬಿ.ಸಿ.ರೋಡ್ ಪೇಟೆಯಿಂದ ಪಾಣೆಮಂಗಳೂರು ಹಳೇ ಸೇತುವೆಗೆ ಗೂಡಿನಬಳಿ ಮಾರ್ಗದ ಮೂಲಕವಾಗಿ ಬಂದರೆ, ಸೇತುವೆಯ ಇನ್ನೊಂದು ತುದಿಯ ಎಡಭಾಗದಲ್ಲಿ ಭಯಂಕೇಶ್ವರ ದೇವರ ಸನ್ನಿಧಿ. ಇಲ್ಲಿ ಬಂದು ಧ್ಯಾನಿಸಿದರೆ, ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. (ವರದಿ: ಹರೀಶ ಮಾಂಬಾಡಿ)

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point