ಕನ್ನಡ ಸುದ್ದಿ  /  ಕರ್ನಾಟಕ  /  Mangaluru Tragedy: ಮಂಗಳೂರು ಕಟ್ಟಡ ಕುಸಿತದಲ್ಲಿ ಕಾರ್ಮಿಕ ಸಾವು, ಮಳೆಗಾಲದವರೆಗೆ ಕಾಮಗಾರಿ ಸ್ಥಗಿತ: ದುರಂತದ ಬೆನ್ನಲ್ಲೇ ಪಾಲಿಕೆ ಸೂಚನೆ

Mangaluru Tragedy: ಮಂಗಳೂರು ಕಟ್ಟಡ ಕುಸಿತದಲ್ಲಿ ಕಾರ್ಮಿಕ ಸಾವು, ಮಳೆಗಾಲದವರೆಗೆ ಕಾಮಗಾರಿ ಸ್ಥಗಿತ: ದುರಂತದ ಬೆನ್ನಲ್ಲೇ ಪಾಲಿಕೆ ಸೂಚನೆ

Mangalore News ಮಂಗಳೂರು ನಗರದಲ್ಲಿ ನಡೆದ ಕಟ್ಟಡ ಕುಸಿತದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ವರದಿ: ಹರೀಶ ಮಾಂಬಾಡಿ ಮಂಗಳೂರು

ಮಂಗಳೂರು ದುರಂತದಲ್ಲಿ ಮೃತಪಟ್ಟ ಕಾರ್ಮಿಕನ ದೇಹ ಸಾಗಿಸಲಾಯಿತು.
ಮಂಗಳೂರು ದುರಂತದಲ್ಲಿ ಮೃತಪಟ್ಟ ಕಾರ್ಮಿಕನ ದೇಹ ಸಾಗಿಸಲಾಯಿತು.

ಮಂಗಳೂರು: ಮಂಗಳೂರು ಬಲ್ಮಠದಲ್ಲಿ ಕಟ್ಟಡ ಕಾಮಗಾರಿ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ ಮಳೆಗೆ ಭೂಕುಸಿತ ಉಂಟಾಗಿ ಕಾರ್ಮಿಕನೋರ್ವ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಸೂಚನೆಯೊಂದನ್ನು ಹೊರಡಿಸಿದ್ದು, ಮಳೆಗಾಲ ಮುಕ್ತಾಯದವರೆಗೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮುಂದೆ ಅನಾಹುತ ಆಗುವುದನ್ನು ತಪ್ಪಿಸಬೇಕು. ಆದೇಶ ಪಾಲಿಸದೇ ಇದ್ದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಮಂಗಳೂರು ಮಹಾ ನಗರ ಪಾಲಿಕೆಯು ಸೂಚಿಸಿದೆ.

ಬಲ್ಮಠದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ, ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ಗುರುತಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯು್ತಿದ್ದ ವೇಳೆ ಭೂಕುಸಿತ ಸಂಭವಿಸಿತ್ತು. ಆ ಸಂದರ್ಭ ಮಳೆಯೊಂದಿಗೆ ಗಾಳಿಯೂ ಇತ್ತು. ಈ ಸಂದರ್ಭ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಘಟನೆ ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ, ಎನ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್ ತಂಡ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿತ್ತು. ಆದರೆ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆ ಕಾರ್ಯಾಚರಣೆ ನಡೆದಿತ್ತು. ರಾತ್ರಿವರೆಗೂ ಅಂದರೆ ಸುಮಾರು ಏಳು ತಾಸುಗಳ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಏಳು ಗಂಟೆ ವೇಳೆ ಮೃತದೇಹವನ್ನು ಎನ್.ಡಿ.ಆರ್.ಎಫ್. ತಂಡ ಹೊರತೆಗೆಯಿತು.

ವಾಣಿಜ್ಯ ಕಟ್ಟಡದ ತಳಪಾಯದ ಕೆಲಸಕ್ಕಾಗಿ 20 ಅಡಿ ಆಳಕ್ಕೆ ಅಗೆಯಲಾಗಿದೆ. ಹೊಂಡದಲ್ಲಿ ಒಂದು ಕಡೆಯಿಂದತಳಪಾಯದ ಕಾಂಕ್ರೀಟ್ ಕೆಲಸ ಮಾಡಲಾಗುತ್ತಿತ್ತು. ಇದರ ಮಧ್ಯೆ ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ಭೂಕುಸಿತ ಉಂಟಾಯಿತು. ಸುಮಾರು ಎಂಟು ಅಡಿ ಎತ್ತರಕ್ಕೆ ಇದ್ದ ಜಾಗದಲ್ಲಿ ಮಣ್ಣು ಕುಸಿಯಿತು. ಆ ವೇಳೆ ಬಿಹಾರ ಮೂಲದ ಒಬ್ಬರು ಮತ್ತು ಉತ್ತರ ಪ್ರದೇಶದ ಮತ್ತೊಬ್ಬ ಕಾರ್ಮಿಕರು ಸಿಲುಕಿದರು. ಸತತ ಕಾರ್ಯಾಚರಣೆಯಲ್ಲಿ ರಾಜಕುಮಾರ್ ಎಂಬಾತನನ್ನು ರಕ್ಷಣೆ ಮಾಡಲಾಯಿತು. ಆತನೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುಮಾರು 2 ಗಂಟೆ ವೇಳೆಗೆ ಆತನನ್ನು ಹೊರತೆಗೆಯಲಾಗಿತ್ತು. ಆದರೆ ಮತ್ತೊಬ್ಬ ಕಾರ್ಮಿಕ ಸತತ ಏಳು ಗಂಟೆಯ ಪ್ರಯತ್ನದ ಬಳಿಕವೂ ಬದುಕುಳಿಯಲಿಲ್ಲ.

ಸೂಚನೆ ಹೊರಡಿಸಿದ ಪಾಲಿಕೆ

ಘಟನೆ ತರುವಾಯ ಮಂಗಳೂರು ಮಹಾನಗರಪಾಲಿಕೆ ಸೂಚನೆಯೊಂದನ್ನು ಹೊರಡಿಸಿತು. 

ಮಂಗಳೂರು ಮಹಾನಗರಪಾಲಿಕೆ ವ್ಯ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆದಂತಹ ಕಟ್ಟಡ ನಿರ್ಮಾಣದಾರರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅವೈಜ್ಞಾನಿಕವಾಗಿ ಭೂಅಗೆತ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವುದರಿಂದ ಭೂಕುಸಿತ ಉಂಟಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾಗುತ್ತಿರುವ ಪ್ರಕರಣಗಳು ಕಂಡುಬಂದಿದ್ದು ಹಾಗೂ ಜೀವಹಾನಿಯೂ ಸಂಭವಿಸಿರುತ್ತದೆ. 

ಈ ನಿಟ್ಟಿನಲ್ಲಿ ಪ್ರಸ್ತುತ ಮುಂಗಾರಿಗೆ ಅತ್ಯಧಿಕ ಮಳೆಯಾಗುವ ಸಾದ್ಯತೆಗಳೊಂದಿಗೆ ರೆಡ್ , ಆರೆಂಜ್, ಎಲ್ಲೊ ಅಲರ್ಟ್, ಬಗ್ಗೆ ಹವಾಮಾನ ಇಲಾಖೆಯಿಂದ ನಿರಂತರವಾಗಿ ಮುನ್ಸೂಚನೆ ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಮುಕ್ತಾಯವಾಗುವವರೆಗೆ ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದೆ. ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯುಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

--