Mangaluru Crime: ಮಂಗಳೂರಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ನಶೆ ಹಿಡಿಸಲು ಹೊರಟಿದ್ರಾ ನೈಜೀರಿಯನ್ ಪೆಡ್ಲರ್‌ಗಳು?; ಯಾರು ಈ ಪೀಟರ್ ಐಕೇಡಿ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime: ಮಂಗಳೂರಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ನಶೆ ಹಿಡಿಸಲು ಹೊರಟಿದ್ರಾ ನೈಜೀರಿಯನ್ ಪೆಡ್ಲರ್‌ಗಳು?; ಯಾರು ಈ ಪೀಟರ್ ಐಕೇಡಿ

Mangaluru Crime: ಮಂಗಳೂರಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ನಶೆ ಹಿಡಿಸಲು ಹೊರಟಿದ್ರಾ ನೈಜೀರಿಯನ್ ಪೆಡ್ಲರ್‌ಗಳು?; ಯಾರು ಈ ಪೀಟರ್ ಐಕೇಡಿ

ಮಂಗಳೂರಿನಲ್ಲಿ 6 ಕೋಟಿ ರೂ ಮೌಲ್ಯದ ಡ್ರಗ್ ಸಹಿತ ನೈಜೀರಿಯಾ ಪ್ರಜೆ ಪೀಟರ್ ಐಕೇಡಿ ಬೆಲನೊವ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಪ್ರಕರಣ ಗಮನಸೆಳೆದಿತ್ತು. ಮಂಗಳೂರಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ನಶೆ ಹಿಡಿಸಲು ಹೊರಟಿದ್ರಾ ನೈಜೀರಿಯನ್ ಪೆಡ್ಲರ್‌ಗಳು? ಯಾರು ಈ ಪೀಟರ್ ಐಕೇಡಿ- ವಿವರ ಇಲ್ಲಿದೆ (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ನಶೆ ಹಿಡಿಸಲು ಹೊರಟಿದ್ರಾ ನೈಜೀರಿಯನ್ ಪೆಡ್ಲರ್‌ಗಳು ಎಂಬ ಸಂದೇಹ ವ್ಯಾಪಕವಾಗಿದೆ. (ಸಾಂಕೇತಿಕ ಚಿತ್ರ)
ಮಂಗಳೂರಲ್ಲಿ ದೊಡ್ಡ ಪ್ರಮಾಣದ ಡ್ರಗ್ಸ್ ನಶೆ ಹಿಡಿಸಲು ಹೊರಟಿದ್ರಾ ನೈಜೀರಿಯನ್ ಪೆಡ್ಲರ್‌ಗಳು ಎಂಬ ಸಂದೇಹ ವ್ಯಾಪಕವಾಗಿದೆ. (ಸಾಂಕೇತಿಕ ಚಿತ್ರ) (canva)

ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ 6 ಕೋಟಿ ರೂ ಮೌಲ್ಯದ ಡ್ರಗ್ ಸಹಿತ ನೈಜೀರಿಯಾ ಪ್ರಜೆ ಪೀಟರ್ ಐಕೇಡಿ ಬೆಲನೊವ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದಿತ್ತು. ಇದು ಮಂಗಳೂರಿನ ಮಟ್ಟಿಗೆ ಡ್ರಗ್ಸ್ ದಂಧೆಯಲ್ಲಿ ಅತ್ಯಂತ ದೊಡ್ಡ ಕ್ಯಾಚ್ ಆಗಿದ್ದರೆ, ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಪ್ರಕರಣವಾಗಿತ್ತು. ಇದೀಗ ಪೊಲೀಸರು ಇದರ ಬುಡ ಶೋಧನಾ ಕಾರ್ಯ ನಡೆಸುತ್ತಿದ್ದಾರೆ. 6 ಕೋಟಿ ರೂ ಮೌಲ್ಯದ ಡ್ರಗ್ ಯಾರ ಕೈ ಬದಲಾಯಿಸಿಕೊಂಡು ನೈಜೀರಿಯಾ ಪ್ರಜೆಗೆ ಬಂದಿತ್ತು ಎಂಬ ವಿಚಾರವಿನ್ನೂ ಗೊತ್ತಾಗಿಲ್ಲ. ಆದರೆ ಎಂಡಿಎಂಎ ಡ್ರಗ್ ಈಗ ಯಾರ ಕೈಗೆ ಬೇಕಾದರೂ ಸಿಗುವಂಥದ್ದು, ಇದರ ಜಾಡು ಹಿಡಿಯುವುದು ಅಷ್ಟು ಸುಲಭವಲ್ಲ ಎಂಬುದಂತೂ ಸ್ಪಷ್ಟ. ಕಡಲ ತೀರವಾದ ಮಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಸುಲಭ. ತಪ್ಪಿಸಿಕೊಂಡು ಹೋಗುವುದೂ ಸುಲಭ. ಹೀಗಾಗಿ ಮಂಗಳೂರನ್ನು ಡ್ರಗ್ಸ್ ದಂಧೆಯ ಹಬ್ ಮಾಡಲು ಹೊರಟಿದ್ದರಾ ಎಂಬುದು ಇನ್ನಷ್ಟೇ ತನಿಖೆಯಿಂದ ಬಯಲಾಗಬೇಕಾಗಿದೆ.

ಯಾರು ಈ ಪೀಟರ್ ಐಕೇಡಿ?

ಬಂಧಿತ ಪೀಟರ್ ಐಕೇಡಿ 2019ರಲ್ಲಿ ಬಿಸಿನೆಸ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಬೆಂಗಳೂರಿನಲ್ಲಿ ರಾಜ್ಯದ ಹಲವು ಭಾಗಗಳಿಗೆ ಎಂಡಿಎಂಎನಂಥ ಮಾದಕವಸ್ತುವನ್ನು ವಿತರಣೆ ಮಾಡಿಕೊಂಡಿರುವುದು ಈತನ ಕಾಯಕವಾಗಿತ್ತು. ಈತ ಬೆಂಗಳೂರಿಗೆ ಬಂದು ಎರಡು ತಿಂಗಳಲ್ಲಿ ಬಿಸಿನೆಸ್ ವೀಸಾ ಅವಧಿ ಮುಗಿದಿತ್ತು. ಆದರೆ ಇಲ್ಲೇ ಇದ್ದು ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಅಲ್ಲದೆ, ಈಶಾನ್ಯ ಭಾರತದ ಬ್ಯುಟಿಷಿಯನ್ ಕೆಲಸ ಮಾಡಿಕೊಂಡಿದ್ದ ಯುವತಿಯನ್ನುಜ ಮದುವೆಯಾಗಿದ್ದ. ಯಾರೊಂದಿಗೂ ನೇರವಾಗಿ ವಹಿವಾಟು ಮಾಡದೆ, ಈತ ಡ್ರಗ್ ವಿತರಣಾ ಜಾಲ ನಿರ್ವಹಿಸುತ್ತಿದ್ದ. ಎರಡು ತಿಂಗಳಿಗೊಮ್ಮೆ ದೂರವಾಣಿ ಸಂಖ್ಯೆ ಬದಲಾಯಿಸುತ್ತಿದ್ದ ಪೀಟರ್, ವರ್ಚುವಲ್ ಫೋನ್ ನಂಬ್ರ ಬಳಸುತ್ತಿದ್ದ. ನೈಜೀರಿಯಾದಲ್ಲಿರುವ ತನ್ನ ಸ್ನೇಹಿತರಿಂದ ಅಲ್ಲಿ ಸಿಮ್ ಪಡೆದು, ವಾಟ್ಸಾಪ್ ಅಪ್ಡೇಟ್ ಮಾಡಿ, ಸಿಮ್ ಇಲ್ಲದೇ ಇಲ್ಲಿ ಬಳಕೆ ಮಾಡುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ನೈಜೀರಿಯನ್ ಪ್ರಜೆಗಳ ಡ್ರಗ್ಸ್ ದಂಧೆ ಇದೇ ಮೊದಲಲ್ಲ

ಕ್ರೈಮ್ ರೆಕಾರ್ಡ್ ಹುಡುಕುತ್ತಾ ಹೋದರೆ, ರಾಜ್ಯದಲ್ಲಿ ನೈಜೀರಿಯನ್ ಪ್ರಜೆಗಳು ಡ್ರಗ್ಸ್ ದಂಧೆಯಲ್ಲಿ ದೊಡ್ಡ ನೆಟ್ವರ್ಕ್ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ. 2021ರ ಫೆಬ್ರವರಿ 22ರಂದು ಬೆಂಗಳೂರಿನ ಆರ್.ಟಿ.ನಗರದಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿತ್ತು. ಆಗ 20 ಗ್ರಾಮ್ ಕೊಕೇನ್, 12 ಗ್ರಾಮ್ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.

2021ರ ಸೆ.30ರಂದು ನೈಜೀರಿಯಾದಲ್ಲಿ 20 ಸಿನಿಮಾಗಳಲ್ಲಿ ನಟಿಸಿದ್ದ ನಟ ಮೆಲ್ವಿನ್ ಸಹಿತ 8 ಲಕ್ಷ ರೂಜಗಳ ಮೌಲ್ಯದ ಡ್ರಗ್ಸ್ ಬೆಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿತ್ತು.

2022ರ ಜನವರಿ 19ರಂದು ಬೆಂಗಳೂರಿನ ಎನ್.ಸಿ.ಬಿ. ಘಟಕಾಧಿಕಾರಿಗಳು ನೈಜೀರಿಯಾ ಪ್ರಜೆಯೊಬ್ಬನನ್ನು ಬಂಧಿಸಿ, 84 ಗ್ರಾಮ್ ಕೊಕೇನ್, 40 ಗ್ರಾಮ್ ಎಂಡಿಎಂಎ ವಶಪಡಿಸಿಕೊಂಡಿದ್ದರು. 2022ರ ಜೂನ್ 12ರಂದು ಬೆಂಗಳೂರಿನ ಬಂಜಾರ ಬಡಾವಣೆಯಲ್ಲಿ 32 ಗ್ರಾಂ ಎಂಡಿಎಂಎ ಹೊಂದಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದರು.

2023ರ ನವೆಂಬರ್ 10ರಂದು ಬೆಂಗಳೂರಿನ ಮನೆಯೊಂದರಲ್ಲಿ ಪ್ರೆಶರ್ ಕುಕ್ಕರ್ ಮೂಲಕ ಸಿಂಥೆಟಿಕ್ ಡ್ರಗ್ಸ್ ತಯಾರಿ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬೆಂಜಮಿನ್ ಬಂಧಿಸಿ 10 ಕೋಟಿ ರೂ ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದರು. ಇದು ರಾಜ್ಯದ ಅತಿ ದೊಡ್ಡ ಡ್ರಗ್ ಬೇಟೆ.

2024ರ ಜುಲೈ 27ರಂದು ಬೆಂಗಳೂರಲ್ಲಿ ನೈಜೀರಿಯಾ ಪ್ರಜೆ ಸಹಿತ 6 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾದರೆ, 2024 ಸೆ.14ರಂದು ಧಾರವಾಡದ ಮಾಳಮಡ್ಡಿಯಲ್ಲಿ ಡ್ರಗ್ಸ್ ದಂಧೆ ನಿರತ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿತ್ತು. 2024ರ ಅ.7ರಂದು ಮತ್ತೊಂದು ಪ್ರಕರಣದಲ್ಲಿ ಎಂಡಿಎಂಎ ಆರು ಕೋಟಿ ಮೌಲ್ಯದ ಡ್ರಗ್ಸ್ ಹೊಂದಿದ್ದ ನೈಜೀರಿಯಾ ಪ್ರಜೆಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.

ನೈಜೀರಿಯಾದವರನ್ನು ಮುಂದಿಟ್ಟು ನಮ್ಮವರೇ ಆಟವಾಡ್ತಿದ್ದಾರಾ?

ಭಾರತದಲ್ಲಿ ಸುಲಭ ದಂಧೆ ಮಾಡಲು ನಾನಾ ದಾರಿಗಳನ್ನು ಹುಡುಕುವ ಗೋಮುಖ ವ್ಯಾಘ್ರರು ಇದ್ದಾರೆ. ಇಂಥವರು ತಾವು ಸುಬಗರಂತೆ ವರ್ತಿಸಿ, ನೈಜೀರಿಯಾ ಪ್ರಜೆಗಳನ್ನು ಮುಂದಿಟ್ಟು ಡ್ರಗ್ಸ್ ದಂಧೆ ಮಾಡ್ತಿದ್ದಾರಾ ಎಂಬ ವಿಚಾರದ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ. ಆದರೆ ಈ ತನಿಖೆ ಅಂತ್ಯಗೊಳ್ಳುವ ವೇಳೆ ಯಾವುದೆಲ್ಲಾ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿ. ಏಕೆಂದರೆ ನೈಜೀರಿಯಾ ಯುವಕರು ಶಿಕ್ಷಣಕ್ಕೆಂದು ಬಂದವರು. ಅವರನ್ನು ಡ್ರಗ್ಸ್ ಜಾಲದಲ್ಲಿ ಸಿಲುಕಿಸಿ, ಹಣದ ಆಮಿಷವೊಡ್ಡಿ ಕೆಲಸ ಮಾಡಿಸುತ್ತಿದ್ದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಹಿಂದೆಲ್ಲಾ ಗಾಂಜಾ ಮಾರಾಟ ಯಥೇಚ್ಛವಾಗಿತ್ತು. ಆದರೆ ಗಾಂಜಾ ಬದಲು ಸಿಂಥೆಟಿಕ್ ಡ್ರಗ್ ಗೆ ಬೇಡಿಕೆ ಬಂತು. ಆನ್ಲೈನ್, ಸೋಶಿಯಲ್ ಮೀಡಿಯಾ ಮೂಲಕ ಆರ್ಡರ್ ಮಾಡಿ ಪಡೆದುಕೊಳ್ಳುವ ವ್ಯವಸ್ಥೆವರೆಗೆ ಹೋಯಿತು. ನೈಜೀರಿಯಾ ಪ್ರಜೆಗಳ ನೆಟ್ವರ್ಕ್ ಹೇಗಿದೆ ಎಂದರೆ ಡ್ರಗ್ಸ್ ಪ್ಯಾಕೆಟ್ಅನ್ನು ಕಸದ ರಾಶಿಗೆ ಎಸೆದು ಅದರ ಫೊಟೋವನ್ನು ಗ್ರಾಹಕರಿಗೆ ಕಳುಹಿಸುತ್ತಾರಂತೆ. ಆ ಆಧಾರದಲ್ಲಿ ಗ್ರಾಹಕರು ಡ್ರಗ್ಸ್ ಪ್ಯಾಕೆಟ್ ಪಡೆದುಕೊಳ್ಳುತ್ತಾರೆ ಎಂಬ ವಿಚಾರಗಳೆಲ್ಲಾ ತನಿಖೆ ಸಂದರ್ಭ ಬಯಲಾಗುತ್ತಿದೆ.

ಎಂಡಿಎಂಎ ತಯಾರಿ ಸುಲಭವೇ?

ಮೂಲಗಳ ಪ್ರಕಾರ ಎಂಡಿಎಂಎ ತಯಾರಿ ಸುಲಭವಂತೆ. ಭಾರತದಲ್ಲಿ ಇವನ್ನು ತಯಾರಿಸುವ ಘಟಕಗಳೂ ಇರುತ್ತವೆ ಎಂದು ನಂಬಲಾಗಿದೆ. ಮೆಥಾಂಫೆಟಮೈನ್ (ಮೆಥ್) ಎಂದು ಕರೆಯಲಾಗುವ ರಾಸಾಯನಿಕವನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿ ಎಂಡಿಎಂಎ ತಯಾರಿಸಲಾಗುತ್ತದೆ. ಬೆಂಗಳೂರಿನಲ್ಲಿ 10 ಕೋಟಿ ರೂ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡ ಸಂದರ್ಭ ನೈಜೀರಿಯಾ ಪ್ರಜೆ ಬಂಧಿತನಾಗಿದ್ದ. ಆತ ಕುಕ್ಕರ್ ಉಪಯೋಗಿಸಿ ಎಂಡಿಎಂಎ ತಯಾರಿಸುತ್ತಿದ್ದ ಎಂಬೆಲ್ಲ ಅಂಶಗಳು ಬಹಿರಂಗವಾಗುತ್ತಿವೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner