Karnataka Rains: ಕರ್ನಾಟಕದಲ್ಲಿ ಮಳೆ ಅನಾಹುತ: ಗೋಡೆ ಕುಸಿದು ದಾವಣಗೆರೆ, ಹಾವೇರಿಯಲ್ಲಿ ಮಕ್ಕಳ ಸಾವು, ಕರಾವಳಿಯಲ್ಲಿ ಮೂವರ ಪ್ರಾಣ ಹಾನಿ
Karnataka Rain ಕರ್ನಾಟಕದಲ್ಲಿ ಭಾರೀ ಮಳೆಯಿಂದ ದಾವಣಗೆರೆ( Davangere) ಹಾಗೂ ಹಾವೇರಿ(Haveri) ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕರಾವಳಿಯಲ್ಲೂ ಜೀವಹಾನಿಯಾಗಿದೆ. ಮಳೆ ಅನಾಹುತಗಳ ಕುರಿತ ಮಾಹಿತಿ ಇಲ್ಲಿದೆ.
ಹಾವೇರಿ/ ದಾವಣಗೆರೆ/ಮಂಗಳೂರು: ಕರ್ನಾಟಕದಲ್ಲಿ ಎಡಬಿಡದೇ ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳೂ ಸೇರಿ ಐವರು ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿಸಂಭವಿಸಿದ ಪ್ರಕರಣಗಳಲ್ಲಿ ಮೂರು ಹಾಗೂ ಒಂದು ವರ್ಷದ ಇಬ್ಬರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ನಿರಂತರ ಮಳೆಯಿಂದಮನೆ ಗೋಡೆ ಕುಸಿದು ದುರಂತ ಸಂಭವಿಸಿದೆ.
ಹಾವೇರಿಯಲ್ಲಿ ದುರ್ಘಟನೆ
ಹಾವೇರಿ ತಾಲೂಕಿನ ಮಾಳಪುರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಮನೆಕುಸಿದು ಗಾಯಗೊಂಡಿದ್ದ ಮೂರು ವರ್ಷದ ಮಗು ಭಾಗ್ಯಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ಪ ಅಮ್ಮನ ಎದುರೇ ಮಗು ಸಾವು
ದಾವಣಗೆರೆ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಪರಿಣಾಮ ಮನೆಯ ಗೋಡೆ ಕುಸಿದು ಹೆಣ್ಣು ಮಗು ಸಾವು ಕಂಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ.
ಸ್ಪೂರ್ತಿ (1ವರ್ಷ) ಸಾವನ್ನಪ್ಪಿದ ಹೆಣ್ಣು ಮಗು. ಮಗುವಿನ ತಂದೆ ಕೆಂಚಪ್ಪ (32) ಗೋಡೆ ಕುಸಿತದಿಂದ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
]ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಪರಿಣಾಮದಿಂದ ಶಿಥಿಲಗೊಂಡಿದ್ದ ಮನೆಯ ಗೋಡೆ ಮಲಗಿದ್ದ ದಂಪತಿ ಮತ್ತು ಮಗುವಿನ ಮೇಲೆ ಬಿದ್ದಿದ್ದು, ಕೆಂಚಪ್ಪಗೆ ತೀವ್ರ ಗಾಯಗಳಾಗಿದೆ. ಅವರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವಿನ ತಾಯಿ ಲಕ್ಷ್ಮೀಅದೃಷ್ಠವಶಾತ್ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಮಗು ಗೋಡೆ ಕುಸಿತದಿಂದ ಸಾವನ್ನಪ್ಪಿರುವುದರಿಂದ ಹೆತ್ತವರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಕರಾವಳಿಯಲ್ಲೂ ಅನಾಹುತ
ಉಡುಪಿ ಜಿಲ್ಲೆಯ ಸಿದ್ಧಾಪುರ ಬಳಿಯ ಶೇಡಿಮನೆ ಎಂಬಲ್ಲಿ ಹೊಳೆಗೆ ಬಿದ್ದು ಕೊಚ್ಚಿಹೋಗಿ, ರಚನಾ (13) ಸಾವನ್ನಪ್ಪಿದ್ದಾಳೆ. ಆಕೆ ಮೃತದೇಹ ಘಟನಾ ಸ್ಥಳದಿಂದ 2 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಕೋಟ ಸಮೀಪ ಹಳ್ಳಾಡಿ – ಹರ್ಕಾಡಿ ಬಳಿ ತೋಡಿಗೆ ಬಿದ್ದು, ಗೋಕುಲದಾಸ ಪ್ರಭು (54) ಸಾವನ್ನಪ್ಪಿದ್ದಾರೆ. ಕೊಲ್ಲೂರು ಬಳಿ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ತೆರಳಿದ್ದ ಭದ್ರಾವತಿಯ ಶರತ್ ಕುಮಾರ್ (23) ನೀರುಪಾಲಾದ ದೃಶ್ಯ ನಿನ್ನೆ ವೈರಲ್ ಆಗಿತ್ತು. ಇಂದೂ ಆತನ ಶೋಧ ಕಾರ್ಯ ನಡೆಯುತ್ತಿದೆ.
ಕರಾವಳಿಯಲ್ಲಿ ಬೀಚ್, ಜಲಪಾತ ವೀಕ್ಷಣೆಗೆ ನಿಷೇಧ
ಕರಾವಳಿ ಕರ್ನಾಟಕದಲ್ಲಿ ಸೋಮವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮಳೆಯ ಅನಾಹುತಗಳಿಂದಾಗಿ ಓರ್ವ ಬಾಲಕಿ ಸಹಿತ ಇಬ್ಬರು ಮೃತಪಟ್ಟಿದ್ದು, ಯುವಕ ನಾಪತ್ತೆಯಾಗಿದ್ದಾನೆ.
ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮಂಗಳವಾರ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿದೆ.ನೇತ್ರಾವತಿ ನದಿ ನೀರಿನ ಮಟ್ಟ ಮಂಗಳವಾರ ಅಪಾಯದ ಮಟ್ಟದಿಂದ ಕೆಳಗಿತ್ತು. ಸುಬ್ರಹ್ಮಣ್ಯ ಸ್ನಾನಘಟ್ಟದಲ್ಲಿ ನೀರು ಇಳಿಮುಖವಾಗಿದೆ. ರಸ್ತೆಗಳು ಬ್ಲಾಕ್ ಆಗಿದ್ದುದು ಕ್ಲಿಯರ್ ಆಗಿದೆ.
ವಿ.ವಿ.ಪರೀಕ್ಷೆ ಮುಂದೂಡಿಕೆ
ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 25ರಂದು ನಿಗದಿಯಾಗಿದ್ದ ಮಂಗಳೂರು ವಿವಿಯ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕೃತ ದಿನಾಂಕವನ್ನು ಮರುನಿಗದಿಗೊಳಿಸಲಾಗುವುದು ಎಂದು ಮಂಗಳೂರು ವಿವಿ ಪ್ರಕಟಣೆ ತಿಳಿಸಿದೆ.
ಜಲಪಾತ, ಬೀಚ್ ಭೇಟಿ ನಿಷೇಧ
ಮಂಗಳೂರು, ಉಡುಪಿ ಸಹಿತ ದಕ, ಉಡುಪಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಲಪಾತ, ಬೀಚ್ ಗಳಿಗೆ ತೆರಳದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದು, ನಿಷೇಧ ಹೇರಿದ್ದಾರೆ. ಇಲ್ಲಿ ನದಿ, ಜಲಪಾತಗಳ ಬಳಿ ತೆರಳುವುದು, ಫೊಟೋ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಕಲ್ಲು, ಗುಂಡಿ, ಸುಳಿಗಳು ಇರುವ ಕಡೆ ತೆರಳದಂತೆ ಸ್ಥಳೀಯರು ಎಚ್ಚರಿಕೆ ನೀಡಿದರೂ ಕೇಳದ ಪ್ರವಾಸಿಗರು ಅನಾಹುತಗಳಿಗೆ ದಾರಿಮಾಡಿಕೊಡುತ್ತಿದ್ದಾರೆ.
ಕೊಡಗಲ್ಲಿ ಭಾರೀ ಮಳೆ, ಸಚಿವರ ಭೇಟಿ
ಕೊಡಗಿನ ಶನಿವಾರ ಸಂತೆಯಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಆಲೂರು ಸಿದ್ದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಲಂಬಿಯಲ್ಲಿ ಮಳೆಯಿಂದಾಗಿ ವೇದಾವತಿ,. ಅಯ್ಯಪ್ಪ ಎಂಬುವವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆಯ ಗೋಡೆ ಕುಸಿತು ಬಿದ್ದುದರಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಕೊಡಗಿಗೆ ಭೇಟಿ ನೀಡಿದರು. ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಲವು ಸ್ಥಳ, ಮಳೆಯಿಂದ ನೀರು ನುಗ್ಗಿರುವ ಪ್ರದೇಶಗಳಿಗೂ ಭೇಟಿ ನೀಡಿದರು.
ಸಚಿವ ಕೃಷ್ಣಭೈರೇಗೌಡ ಭಾಗಮಂಡಲದಲ್ಲಿ ನೆರೆ ಪರಿಸ್ಥಿತಿ ವೀಕ್ಷಣೆ ಮಾಡಿದರು. ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್‌ಗೌಡ, ವಿಪತ್ತು ನಿರ್ವಹಣೆ ಆಯುಕ್ತ ಸುನೀಲ್ ಕುಮಾರ್, ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜು, ಮಡಿಕೇರಿ ಎಸಿ ಯತೀಶ್ ಉಳ್ಳಾಲ್ ಉಪಸ್ಥಿತರಿದ್ದರು.
ಜಿಲ್ಲೆಗಳಿಗೆ ಭೇಟಿ: ಸಿಎಂ ಸೂಚನೆ
ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದೆ ಜೂನ್ ತಿಂಗಳಲ್ಲಿ ಸ್ವಲ್ಪ ಕೊರತೆಯಾಗಿತ್ತು. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಮಳೆ ಹೆಚ್ಚಾಗಿ ಬಿದ್ದಿರುವ ಕಡೆ ತಂಡಗಳನ್ನು ಮಾಡಿಕೊಂಡು ಭೇಟಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹಾವೇರಿಯಲ್ಲಿ ರೈತರು ಮರಣಹೊಂದಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.