ಮೈಸೂರಿನ ಮುಂದಿನ ಅಭಿವೃದ್ದಿ ಹೇಗಿರಬೇಕು: ಸಚಿವ, ಶಾಸಕ, ಸಂಸದರ ಸಹಿತ ಪ್ರಮುಖರ ಪ್ರಗತಿಯ ಜನಪ್ರತಿನಿಧಿಗಳ ನೋಟ ಹೇಗಿದೆ
Mysore City Development Plan: ಮೈಸೂರು ನಗರದ ಮುಂದಿನ ಅಭಿವೃದ್ದಿಯ ಯೋಜನೆ ರೂಪಿಸುವ ಸಂಬಂಧ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು ನೀಡಿದ ಪ್ರಮುಖ ಸಲಹೆ,ಸೂಚನೆಗಳು ಹೀಗಿದ್ದವು.
Mysore City Development Plan: ಮೈಸೂರಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಏನನ್ನಾದರೂ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದಾರೆ. ನಾಲ್ಕು ದಶಕದಿಂದ ರಾಜಕೀಯದಲ್ಲಿದ್ದರೂ ಮೈಸೂರಿನ ಪ್ರಗತಿ ಇನ್ನಷ್ಟು ಆಗಬೇಕಿತ್ತು. ಈಗಲೇ ಅದಕ್ಕೆ ಅಡಿಪಾಯ ಹಾಕಿದರೆ ಮುಂದಿನ ಒಂದೆರಡು ದಶಕಗಳಲ್ಲಿ ಪ್ರಗತಿಯ ನೋಟ ಸ್ಪಷ್ಟವಾಗಿರಲಿದೆ ಎನ್ನುವ ಆಶಯದೊಂದಿಗೆ ಸಲಹೆ ಪಡೆಯುವ ಪ್ರಕ್ರಿಯೆಯನ್ನು ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶುರು ಮಾಡಿದ್ಧಾರೆ. ಮೈಸೂರಿನ ಪ್ರಗತಿ ವಿಚಾರವಾಗಿ ಹಿರಿಯ ಸಚಿವರು, ಶಾಸಕರು, ಸಂಸದರ ಸಹಿತ ಹಲವು ಜನಪ್ರತಿನಿಧಿಗಳು ತಮ್ಮದೇ ಅಭಿಪ್ರಾಯ, ಸಲಹೆ, ನೋಟಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ಅಭಿಪ್ರಾಯಗಳು ಹೀಗಿವೆ.
ಬೃಹತ್ ಮೈಸೂರು ಈಗ ಬೇಡ
ಮೈಸೂರು ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣರಾಜ ದತ್ತ ಒಡೆಯರ್ ಅವರು ಮಾತನಾಡಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವುದು ತುಂಬಾ ಅವಶ್ಯಕ. ಏಕೆಂದರೆ ಇದರಿಂದ ಕೇಂದ್ರ ಸರಕಾರದ ಹಲವು ಯೋಜನೆಗಳು ಹಾಗೂ ಅನುದಾನ ಬರುತ್ತದೆ. ಇದಕ್ಕೂ ಮುಂಚೆ ಮೈಸೂರು ನಗರದಲ್ಲಿ ಇರುವ ಹಲವು ಸಮಸ್ಯೆಗಳಿಗೆ ಮೊದಲು ಪರಿಹಾರ ನೀಡಿ ನಂತರ ಬೃಹತ್ ಮೈಸೂರು ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಬಡಾವಣೆಗಳ ಅಭಿವೃದ್ದಿ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿ ಮೈಸೂರು ನಗರದಲ್ಲಿ ಸುಮಾರು 150 ಬಡಾವಣೆಗಳು ಆಗಿವೆ. ಆದರೆ ಅವುಗಳ ಅಭಿವೃದ್ಧಿ ಆಗಬೇಕಿದೆ. ಕ್ರಮಬದ್ಧವಾಗಿ ಬಡಾವಣೆಗಳ ನಿರ್ಮಾಣ ಆಗಿಲ್ಲ. ಇವುಗಳನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಕೈಗಾರಿಕೆಗಳ ಬೆಳವಣಿಗೆ
ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ ಮೈಸೂರು ಐತಿಹಾಸಿಕ ನಗರ. ರಾಜ ಮಹಾರಾಜರ ಆಳ್ವಿಕೆಯಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ನಗರವನ್ನು ಮಹಾರಾಜರು ಕಟ್ಟಿದ್ದಾರೆ. ಮೈಸೂರು ನಗರದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ ಎಂದು ಹೇಳಿದರು.
ಬಡಾವಣೆ ಸಕ್ರಮ
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ಅವರು ಮಾತನಾಡಿ ರೆವಿನ್ಯೂ ಬಡಾವಣೆಗಳನ್ನು ಅಕ್ರಮ ಇರುವುದನ್ನು ಸಕ್ರಮ ಮಾಡಲು ಸರ್ಕಾರ ಕ್ರಮ ವಹಿಸಬೇಕು. ಮೂಡಾ ವತಿಯಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳು ವಿಶಾಲವಾಗಿ ಇವೆ. ಇದೇ ರೀತಿ ವಿಶಾಲ ರಸ್ತೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಸಚಿವರ ಅಭಿಪ್ರಾಯ ಹೀಗಿತ್ತು
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಡಾ.ಮಹದೇವಪ್ಪ, ಸ್ವಾತಂತ್ರ್ಯ ಪೂರ್ವದಲ್ಲಿ 35 ಕೋಟಿ ಇದ್ದ ಭಾರತದ ಜನಸಂಖ್ಯೆ ಇಂದು 140 ಕೋಟಿ ಮೀರಿದೆ. ಆದರೆ ಬೌಗೋಳಿಕ ಪ್ರದೇಶ ಅಷ್ಟೇ ಇದೆ. ಅದೇ ರೀತಿ ಮೈಸೂರು ಜನಸಂಖ್ಯೆ 3 ಪಟ್ಟು ಹೆಚ್ಚಳ ಆಗಿದೆ. ಮೈಸೂರು ನಗರ ವೇಗವಾಗಿ ಬೆಳೆಯುತ್ತಿರುವ ನಗರ. ಅದೇ ರೀತಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿದೆ. ಆದ್ದರಿಂದ ಸಲಹೆ ಸೂಚನೆಗಳನ್ನು ಸ್ವೀಕಾರ ಮಾಡಲು ಈ ಚಿಂತನ ಮಂಥನ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಹಾಗೂ ನಿರ್ದೇಶನದ ಮೇರೆಗೆ ಮೈಸೂರು ಅಭಿವೃದ್ಧಿಯ ಅನುಗುಣವಾಗಿ ಭೌಗೋಳಿಕ ವಿಸ್ತೀರ್ಣ ಅಷ್ಟೇ ಇದೆ. ಜನ ಸಂಖ್ಯೆ ಹೆಚ್ಚಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸವಲತ್ತು ನೀಡಲು ಮೈಸೂರನ್ನು ಯೋಜನಾಬದ್ಧವಾಗಿ ಅಭಿವೃದ್ಧಿ ಪಡೆಸಲು ಸಾರ್ವಜನಿಕರಿಂದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಲಹೆಗಳನ್ನು ನೀಡಬೇಕು. ಐತಿಹಾಸಿಕ ಮೈಸೂರು ನಗರದಲ್ಲಿ ಇನ್ನಷ್ಟು ಸುಂದರವಾಗಿ ನಿರ್ಮಾಣ ಮಾಡಲು ದೂರದೃಷ್ಟಿ ಇಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ ಎನ್ನುವ ವಿವರಣೆ ನೀಡಿದರು.
ಹೆಚ್ಚಿನ ಅನುದಾನ
ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಿನ ಅನುದಾನ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆ ನಿರ್ಮಾಣ, ಕಾವೇರಿ ಕಬಿನಿ ಕುಡಿಯುವ ನೀರಿನ ಪೂರೈಕೆ, ದೊಡ್ಡಕೆರೆ ರಸ್ತೆ ಅಭಿವೃದ್ದಿ, ಜಂಬೂಸವಾರಿ ಮಾರ್ಗದ ರಸ್ತೆ ಕಾಂಕ್ರಿಟ್ ಮಾಡಿರುವುದು ಹೀಗೆ ಹತ್ತು ಹಲವು ಅಭಿವೃದ್ಧಿ ಗಳನ್ನು ಮಾಡಲಾಗಿದೆ ಎಂದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ ಬಹಳ ಜನ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದೀರಿ. ಮೈಸೂರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸೌಲಭ್ಯಗಳಲ್ಲಿ ಬೆಳವಣಿಗೆ ಆಗಬೇಕು. ತಮ್ಮ ಸಲಹೆಗಳನ್ನು ಪಡೆದು ಕ್ರಮವಹಿಸಲಾಗುವುದು. ಮೈಸೂರು ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ.ಈ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಅಡಗೂರು ವಿಶ್ವನಾಥ್, ಡಿ ತಿಮ್ಮಯ್ಯ, ಡಾ. ಯತಿಂದ್ರ ಸಿದ್ದರಾಮಯ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಪ್ರಾದೇಶಿಕ ಆಯುಕ್ತರಾದ ಡಾ.ರಮೇಶ್, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.