Karnataka Drought: ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಕುಸಿದ ನೀರಿನ ಮಟ್ಟ, ಕೆಆರ್‌ಎಸ್‌ನಲ್ಲಿ ಹಿಂದಿನ ವರ್ಷಕ್ಕಿಂತ 19 ಅಡಿ ಕಡಿಮೆ
Dam levels ಕಾವೇರಿ ಕೊಳ್ಳದ ಕೃಷ್ಣರಾಜ ಸಾಗರ, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೇಗಿದೆ. ಇಲ್ಲಿದೆ ವರದಿ..
ಮೈಸೂರು: ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಮಟ್ಟ ಕುಸಿದಿದೆ. ಈಗಾಗಲೇ ಬೆಂಗಳೂರು, ಮೈಸೂರು ಸಹಿತ ಕಾವೇರಿ ಕಣಿವೆ ಭಾಗದಲ್ಲಿ ಅಲ್ಲಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ. ಬೆಂಗಳೂರು ನಗರದಲ್ಲೇ ಕೆಲವು ಕಡೆ ಸಮಸ್ಯೆ ನಿಧಾನವಾಗಿ ಆಗುತ್ತಿದೆ. ಆದರೂ ಜಲಸಂಪನ್ಮೂಲ ಇಲಾಖೆ ಕಾವೇರಿ ಕಣಿವೆಯ ಕೃಷ್ಣರಾಜಸಾಗರ, ಕಬಿನಿ. ಹಾರಂಗಿ ಜಲಾಶಯದಲ್ಲಿ ಮೂರು ತಿಂಗಳಿನಿಂದಲೂ ನೀರಿನ ನಿರ್ವಹಣೆಯಲ್ಲಿ ತೊಡಗಿದೆ. ಕೃಷಿಗೆ ಈಗಾಗಲೇ ಸಂಪೂರ್ಣ ನೀರು ನಿಲುಗಡೆ ಮಾಡಿ ಕುಡಿಯುವ ನೀರಿಗೆ ಜಲಾಶಯದ ನೀರನ್ನು ಬಳಸಲಾಗುತ್ತದೆ. ಬೇಸಿಗೆವರೆಗೆ ನೀರಿನ ಭಾರೀ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಕೆಆರ್‌ಎಸ್‌ನಲ್ಲಿ ಕುಸಿತ
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಕೃಷ್ಣರಾಜಸಾಗರ ದೊಡ್ಡದು. ಕೆಆರ್‌ಎಸ್ ಜಲಾಶಯದಿಂದ ಬೆಂಗಳೂರು- ಮೈಸೂರು ಭಾಗದ ಬಹುತೇಕ ಊರುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ವಿಶೇಷವಾಗಿ ಬೆಂಗಳೂರು, ಮಂಡ್ಯ, ಮೈಸೂರು ನಗರಗಳು, ತಾಲ್ಲೂಕು ಕೇಂದ್ರಗಳಿಗೆ ಜಲಾಶಯದಿಂದಲೇ ನೀರು ಹರಿದು ನಲ್ಲಿಗಳನ್ನು ತಲುಪಬೇಕು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೃಷ್ಣರಾಜಸಾಗರ ಜಲಾಶಯ ತುಂಬಲೇ ಇಲ್ಲ. ಇನೂ ಹತ್ತು ಅಡಿ ಇರುವಾಗಲೇ ಮಳೆಗಾಲ ಮುಗಿದಿದ್ದರಿಂದ ಜಲಾಶಯಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಹರಿದು ಬರಲೇ ಇಲ್ಲ.
ಬುಧವಾರ ಕೆಆರ್‌ಎಸ್ ಜಲಾಶಯದಲ್ಲಿ 90.76 ಅಡಿ ನೀರಿತ್ತು. ಒಟ್ಟು 16.396 ಟಿಎಂಟಿ ನೀರು ಜಲಾಶಯದಲ್ಲಿ ಸದ್ಯ ಸಂಗ್ರಹವಿದೆ. ಇಲ್ಲಿ ಬಳಸಲು ಯೋಗ್ಯವಿರುವ ಲೈವ್ ಸಂಗ್ರಹ 8.017 ಟಿಎಂಸಿ. ಒಳ ಹರಿವು ಬರೀ 421 ಕ್ಯೂಸೆಕ್ ಇದ್ದರೆ, ಹೊರ ಹರಿವು 757 ಕ್ಯೂಸೆಕ್‌ನಷ್ಟಿದೆ. ಇದು ಕುಡಿಯುವ ನೀರಿಗೆ ಹರಿಸಲಾಗುತ್ತಿದೆ.
ಕೆಆರ್‌ಎಸ್ ಜಲಾಶಯದಲ್ಲಿ ಹಿಂದಿನ ವರ್ಷ ಇದೇ ದಿನ 109.76 ಅಡಿಯಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಹುತೇಕ 19 ಅಡಿಯಷ್ಟು ನೀರಿನ ಕೊರತೆ ಎದುರಾಗಿದೆ.
ಹಿಂದಿನ ವರ್ಷ ಜಲಾಶಯ ತುಂಬಿತ್ತು. ಈ ಬಾರಿ ತುಂಬುವಷ್ಟು ಮಳೆಯೇ ಬರಲಿಲ್ಲ. ಜತೆಗೆ ಬಿಸಿಲು ಶುರುವಾಗಿದೆ. ಇದರಿಂದ ನೀರಿನ ಮಟ್ಟದಲ್ಲಿ ಕುಸಿತವಾಗಿದೆ. ಹಾರಂಗಿ ಹಾಗೂ ಹೇಮಾವತಿಯಿಂದಲೂ ನೀರು ಅಗತ್ಯ ಬಿದ್ದರೆ ಪಡೆಯುತ್ತೇವೆ. ಆದರೂ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಬೇಸಿಗೆವರೆಗೂ ನೀರಿನ ಲಭ್ಯತೆ ಇರಲಿದೆ ಎನ್ನುವುದು ಜಲಾಶಯದ ಅಧಿಕಾರಿಯೊಬ್ಬರ ವಿವರಣೆ
ಕಬಿನಿಯಲ್ಲೂ ಇಳಿಕೆ
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಮಟ್ಟ 2270.73 ಅಡಿಯಷ್ಟಿದೆ. ಸದ್ಯ 12.04 ಟಿಎಂಸಿ ನೀರು ಲಭ್ಯವಿದೆ. ಬಳಸಲು ಯೋಗ್ಯವಿರುವ ಲೈವ್ ಸಂಗ್ರಹ 2.23 ಟಿಎಂಸಿ ಮಾತ್ರ. ಕಳೆದ ವರ್ಷ ಇದೇ ವೇಳೆ 2270 ಅಡಿಯಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ನೀರು ಇದೆ.
ಕಬಿನಿ ಭಾಗದಲ್ಲಿ ಈ ಬಾರಿ ಮಳೆಯಾಗಿ ಜಲಾಶಯ ತುಂಬಿತ್ತು. ಇದರಿಂದಾಗಿ ಈಗಲೂ ನೀರಿನ ಲಭ್ಯತೆಯಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ ಭಾಗದ ಊರುಗಳಿಗೆ ಕಬಿನಿ ಜಲಾಶಯದಿಂದ ನೀರು ಹೋಗುತ್ತದೆ.
ಕೇರಳದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ತುಂಬಿತ್ತು. ಈ ಬಾರಿಯೂ ನೀರಿನ ನಿರ್ವಹಣೆ ಮಾಡಲಾಗುತ್ತಿದೆ. ಕೃಷಿಗೆ ನೀರು ಹರಿಸದೇ ನಿರ್ವಹಣೆ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.
ಹಾರಂಗಿ ಹೇಮಾವತಿ
ಕೊಡಗಿನ ಹಾರಂಗಿ ಜಲಾಶಯ ಹಾಗೂ ಹಾಸನದ ಹೇಮಾವತಿ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಿದೆ. ಹಾರಂಗಿಯಲ್ಲಿ 101.15 ಅಡಿ, ಹೇಮಾವತಿಯಲ್ಲಿ 84.72 ಅಡಿ ನೀರು ಲಭ್ಯವಿದೆ. ಕಳೆದ ವರ್ಷ ಹಾರಂಗಿಯಲ್ಲಿ 98.62 ಅಡಿ ಹಾಗೂ ಹೇಮಾವತಿಯಲ್ಲಿ 98.4 ಅಡಿ ನೀರಿತ್ತು. ಈ ಬಾರಿ ಹಾರಂಗಿಗೆ ಹೋಲಿಸಿದರೆ ಹೇಮಾವತಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಹಾರಂಗಿಯಿಂದ ಕೊಡಗು, ಹೇಮಾವತಿಯಿಂದ ಹಾಸನ, ತುಮಕೂರು ಭಾಗಕ್ಕೆ ನೀರು ಒದಗಿಸಲಾಗುತ್ತದೆ. ಈ ಭಾಗದಲ್ಲೂ ಬೇಸಿಗೆ ಹೆಚ್ಚಿ ನೀರಿಗೆ ಬೇಡಿಕೆ ಅಧಿಕವಾಗಿದೆ.
ಈಗಷ್ಟೇ ಬೇಸಿಗೆ ಆರಂಭವಾಗುತ್ತಿರುವುದರಿಂದ ಅಲ್ಲಲ್ಲಿ ನೀರಿನ ಸಮಸ್ಯೆ ಕಾಣಿಸುತ್ತಿದೆ. ಏಪ್ರಿಲ್, ಮೇನಲ್ಲಿ ಕೊಂಚ ಹೆಚ್ಚಬಹುದು. ಬೇಗನೇ ಮಳೆ ಶುರುವಾದರೆ ಸಮಸ್ಯೆ ತಪ್ಪಲಿದೆ ಎನ್ನುತ್ತಾರೆ ಸ್ಥಳೀಯರು.