ಮೈಸೂರು ಬೆಂಗಳೂರು ರೈಲುಗಳ ವೇಗ ಹೆಚ್ಚಿಸಿ ಸ್ವಾಮಿ; ಉಭಯ ನಗರಗಳ ನಡುವೆ ನಿತ್ಯ ಸಂಚರಿಸುವ ಪ್ರಯಾಣಿಕರ ಬೇಡಿಕೆ
ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವಿನ ರೈಲುಗಳ ಸಂಚಾರ ವೇಗ ಹೆಚ್ಚಿಸುವ ಬೇಡಿಕೆ ಪ್ರಯಾಣಿಕರಿಂದ ಕೇಳಿ ಬಂದಿದೆ. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮೈಸೂರಿನಲ್ಲಿ ಮನವಿಯೂ ಸಲ್ಲಿಕೆಯಾಗಿದೆ.
ಬೆಂಗಳೂರು: ಬೆಂಗಳೂರು- ಮೈಸೂರು ನಗರಗಳ ನಡುವೆ ಸಂಚಾರ ಈಗ ಕಷ್ಟವಲ್ಲ. ರೈಲುಗಳ ಸೇವೆ ಜತೆಗೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಈ ನಗರಗಳ ನಡುವಿನ ಅಂತರವನ್ನು ತಗ್ಗಿಸಿದೆ. ಜನ ಒಂದರಿಂದ ಎರಡು ಗಂಟೆ ಒಳಗೆ ಬೆಂಗಳೂರು ಹಾಗೂ ಮೈಸೂರು ನಗರಗಳನ್ನು ತಲುಪಲು ಸಾಧ್ಯವಾಗಿದೆ. ಹೀಗಿದ್ದರೂ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸಲು ನಿತ್ಯ 20ಕ್ಕೂ ಅಧಿಕ ರೈಲುಗಳಿವೆ. ಕೆಲವು ರೈಲುಗಳಂತೂ ನಿಧಾನವಾಗಿ ಚಲಿಸುವುದರಿಂದ ಪ್ರಯಾಣ ಮಾತ್ರ ವಿಳಂಬ ಎನ್ನಿಸುತ್ತಿದೆ. ಎಲ್ಲಾ ರೈಲುಗಳ ವೇಗವನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ಪ್ರಯಾಣಿಕರಿಂದ ಕೇಳಿ ಬಂದಿದೆ. ಬೆಂಗಳೂರು-ಮೈಸೂರು ವಿಭಾಗದಲ್ಲಿ ರೈಲುಗಳ ವೇಗವನ್ನು ಹೆಚ್ಚಿಸುವಂತೆ ರೈಲು ಬಳಕೆದಾರರು ಮತ್ತು ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಕೋರಿದ್ದಾರೆ.
ಬೆಂಗಳೂರು ಹಾಗೂ ಮೈಸೂರು ನಡುವೆ ಸಾಕಷ್ಟು ರೈಲುಗಳಿದ್ದು, ಈಗ ಸುಧಾರಣೆಗಳು ಆಗಿವೆ. ಜನ ರೈಲು ಸೇವೆಯನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಹೀಗಿದ್ದರೂ ಎರಡು ನಗರಗಳ ನಡುವಿನ ಕೆಲವು ರೈಲು ಸಮಯದಲ್ಲಿ ಬದಲಾವಣೆ ಆಗಿಲ್ಲ. ನಿಧಾನಗತಿ ಹಾಗೆಯೇ ಇದೆ. ಮೈಸೂರು ಮತ್ತು ಬೆಂಗಳೂರು ನಡುವೆ ಚಲಿಸಲು ಅನೇಕ ಎಕ್ಸ್ಪ್ರೆಸ್ ರೈಲುಗಳು ಇನ್ನೂ ಮೂರು ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದನ್ನು ಬದಲಿಸಬೇಕು. ಸಮಯದಲ್ಲಿ ಪರಿಷ್ಕರಣೆ ಮಾಡಿ ಬೇಗ ಎರಡೂ ನಗರಗಳ ನಡುವೆ ಸಂಚರಿಸುವಂತೆ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆ.
ಈಗ ಎಐ ಆಧರಿತ ಸಿಗ್ನಲ್ ವ್ಯವಸ್ಥೆ ಎಲ್ಲೆಡೆ ಬಂದಿದೆ. ಮೈಸೂರು ಹಾಗೂ ಬೆಂಗಳೂರು ನಡುವಿನ ಕೆಲವೆಡೆ ಬಳಕೆಗೆ ಸಿದ್ದತೆಗಳು ಆಗುತ್ತಿವೆ. ಹೀಗಿರುವಾಗ ರೈಲುಗಳ ಸಂಚಾರದ ಸಮಯದಲ್ಲೂ ಬದಲಾವಣೆ ಆಗುವುದು ಸೂಕ್ ಎಂಬುದು ಹಲವರ ಸಲಹೆ.
ಎರಡು ನಗರಗಳ ನಡುವಿನ ವಿದ್ಯುದ್ದೀಕೃತ ಡಬಲ್ ಲೈನ್ ಮಾರ್ಗದ ಕಾಮಗಾರಿಯೂ ಮುಗಿಯುವ ಹಂತದಲ್ಲಿದೆ. ಇದರ ಪ್ರಯೋಜನಗಳನ್ನು ಇನ್ನೂ ಬಳಸಿಕೊಳ್ಳಬೇಕಾಗಿಲ್ಲ, ಇದನ್ನೂ ಬೇಗನೇ ಮುಗಿಸಿ ಬಳಕೆಗೆ ಅವಕಾಶ ಮಾಡಿಕೊಡಬೇಕು. ಇದೂ ಕೂಡ ಸಮಯದ ಮಿತಿಯನ್ನು ತಗ್ಗಿಸಲಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.
ಮೈಸೂರು ಗ್ರಾಹಕರ ಪರಿಷತ್ ಅಧ್ಯಕ್ಷರಾದ ಶೋಭನಾ, ಕಾರ್ಯಾಧ್ಯಕ್ಷ ಶ್ರೀಶೈಲ ರಾಮಣ್ಣವರ್ ಅವರ ಪ್ರಕಾರ, ಹಳಿ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದೀಕರಣದ ಪ್ರಯೋಜನಗಳನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ, ರೈಲುಗಳ ವೇಗವನ್ನು ಹೆಚ್ಚಿಸಬೇಕು. ಇದಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸುಧಾರಣೆಗೆ ಮುಂದಾಗಬೇಕು. ಇದರಿಂದ ಬೆಂಗಳೂರು ಹಾಗೂ ಮೈಸೂರು ಸಂಚಾರ ಸುಲಭವಾಗಲಿದೆ ಎಂದು ಹೇಳುತ್ತಾರೆ.
ಮೆಮು ರೈಲುಗಳ ವಿಸ್ತರಣೆಯೊಂದಿಗೆ ಮರುರೂಪಿಸಿದ ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಶೀಘ್ರವಾಗಿ ಕಾರ್ಯಗತಗೊಳಿಸಬೇಕು. ಈ ನಿಲ್ದಾಣವು ಮೈಸೂರು ನಗರದ ಎರಡನೇ ಟರ್ಮಿನಲ್ ಆಗಲು ಸಜ್ಜಾಗಿದೆ, ಇದರಲ್ಲಿ ಆರು ಪ್ಲಾಟ್ಫಾರ್ಮ್ಗಳು ಮತ್ತು ಶ್ರೀರಾಂಪುರದಲ್ಲಿ ಹೊಸ ಹೆಚ್ಚುವರಿ ಪ್ರವೇಶವಿದೆ. ಇದು ದಕ್ಷಿಣ ಮೈಸೂರು ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡಲಿದೆ. ಆದರೆ ಬೋಗಿಗಳಿಗೆ ನೀರು ತುಂಬಲು ಮತ್ತು ಯಾರ್ಡ್ ವಿದ್ಯುದೀಕರಣಕ್ಕೆ ಅನುಕೂಲವಾಗುವಂತೆ ಓವರ್ಹೆಡ್ ಟ್ಯಾಂಕ್ಗಳಂತಹ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಆದ್ದರಿಂದ ಕೆಲಸಗಳನ್ನು ತ್ವರಿತಗೊಳಿಸಬೇಕು ಎನ್ನುವುದು ರೈಲ್ವೆ ಹೋರಾಟ ಸಮಿತಿಯ ಯೋಗೇಂದ್ರ ಒತ್ತಾಯಿಸುತ್ತಾರೆ.
ಇದಲ್ಲದೇ ಮೈಸೂರು ಕೇಂದ್ರೀಕೃತವಾಗಿ ನಂಜನಗೂಡು, ಚಾಮರಾಜನಗರ ರೈಲುಗಳ ಸೇವೆ ವಿಸ್ತರಣೆ, ಗುಜರಾತ್‌ನ ರಾಜ್ ಕೋಟ್‌ಗೆ ರೈಲು, ಮುಂಬೈಗೆ ರೈಲು ಸೇರಿದಂತೆ ಹಲವಾರು ಬೇಡಿಕೆಗಳ ಪಟ್ಟಿಯನ್ನು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್ ಅವರ ಉಪಸ್ಥಿತಿಯಲ್ಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ವಿ. ಸೋಮಣ್ಣ , ಬೆಂಗಳೂರು ಮೈಸೂರು ರೈಲ್ವೆ ಜಾಲ ಬಲಪಡಿಸಿ ಸೇವೆ ವಿಸ್ತರಿಸುವುದು, ರೈಲುಗಳ ವೇಗ ಹೆಚ್ಚಿಸುವುದೂ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.