ಕನ್ನಡ ಸುದ್ದಿ  /  Karnataka  /  Mysuru News No Demand For Colorful Kadakola Mats, Why Mats Are Not Being Woven Now, Ht Kannada Special Report Pcp

HT Kannada Special: ಕಳೆಗುಂದುತ್ತಿರುವ ವರ್ಣರಂಜಿತ ಕಡಕೊಳ ಚಾಪೆಗಳು, ಕಡಕೊಳದಲ್ಲಿ ತಮಿಳುನಾಡು ಚಾಪೆಗಳ ರಾಜ್ಯಭಾರ

ಒಂದಾನೊಂದು ಕಾಲದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಉತ್ಪಾದನೆಯಾಗಿ ರಫ್ತಾಗುತ್ತಿದ್ದ ಕಡಕೊಳ ಚಾಪೆಯನ್ನು ಈಗ ಕೇಳುವವರಿಲ್ಲ. ತನ್ನದೇ ಆದ ವೈಭವ, ಇತಿಹಾಸ, ಬೆಲೆ ಹೊಂದಿದ್ದ ಕಲರ್‌ಫುಲ್‌ ಕಡಕೊಳ ಚಾಪೆ ಉದ್ಯಮ ನೆಲಕಚ್ಚಲು ಕಾರಣವಾದ ಕತೆಯನ್ನು ಎಚ್‌ಟಿ ಕನ್ನಡದ ಮೈಸೂರು ಪ್ರತಿನಿಧಿ ಧಾತ್ರಿ ಭಾರದ್ವಾಜ್‌ ಇಲ್ಲಿ ಬಿಚ್ಚಿಟ್ಟಿದ್ದಾರೆ.

HT Kannada Special: ಕಳೆಗುಂದುತ್ತಿರುವ ವರ್ಣರಂಜಿತ ಕಡಕೊಳ ಚಾಪೆಗಳು
HT Kannada Special: ಕಳೆಗುಂದುತ್ತಿರುವ ವರ್ಣರಂಜಿತ ಕಡಕೊಳ ಚಾಪೆಗಳು

ಮೈಸೂರು: ಚಾಪೆಯ ಮೇಲೆ ಮೂಡುತ್ತಿದ್ದ ಚಿತ್ತಾರ ಕಳೆಗುಂದಿದೆ, ಚಾಖೆಯ ಮೇಲೆ ಮೂಡುತ್ತಿದ್ದ ಬಣ್ಣಗಳು ವಿವರ್ಣವಾಗಿವೆ. ಬದುಕು ಕಟ್ಟಿಕೊಡುತ್ತಿದ್ದ ಚಾಪೆ ಹೆಣೆಯುವ ಉಪಕರಣಗಳು ಅಟ್ಟ ಸೇರಿ ದೂಳು ಹಿಡಿದು ಕೂತಿವೆ. ಆತ್ಮನಿರ್ಬರ ಭಾರತ ನಿರ್ಮಾಣವಾಗಬೇಕು, ಫೋಕಲ್ ಫಾರ್ ಲೋಕಲ್, ಸ್ವದೇಶಿ ಉತ್ಪನ್ನಗಳು, ಗುಡಿ ಕೈಗಾರಿಕೆಗಳಿಗೆ ಒತ್ತು ಕೊಡಬೇಕು ಎಂಬಿತ್ಯಾದಿ ಘೋಷಣೆಗಳ ಮಧ್ಯೆ ಒಂದು ಕಾಲದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಉತ್ಪಾದನೆಯಾಗಿ ರಫ್ತಾಗುತ್ತಿದ್ದ ಕಡಕೊಳ ಚಾಪೆಗಳು ನೆನಪಿಗೂ ಸಿಗದಂತೆ ಮಾಸಿ ಹೋಗುತ್ತಿವೆ.

ಅತ್ತ ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ, ಸ್ವದೇಶಿ ಉತ್ಪನ್ನಗಳ ಬಳಕೆ ಉತ್ತೇಜನಕ್ಕೆ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಆದರೆ, ಇತ್ತ ನಮ್ಮದೇ ಪ್ರಾಂತ್ಯದ ಕಡಕೊಳದಲ್ಲಿ ಅಲ್ಲಿನ ಅನುಭವಿಗಳ ಕೈಚಳಕದಿಂದ ಸುಂದರವಾಗಿ ತಯಾರಾಗುತ್ತಿದ್ದ ಬಿದಿರಿನ ಚಾಪೆಗಳ ಉದ್ಯಮ ನೆಲ ಕಚ್ಚಿದ್ದು, ಚಾಪೆ ಹೆಣೆಯುತ್ತಿದ್ದ ಜನರು ಬೇರೆ ರಾಜ್ಯಗಳಿಂದ ಚಾಚಿ ಕೊಂಡು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ತಮ್ಮ ಉದ್ಯಮಕ್ಕೆ ಸರ್ಕಾರದಿಂದ ನೆರವು, ಉತ್ತಮ ಬೆಲೆ ಸಿಗದೆ ಮುಂದೆ ಚಾಪೆ ಹೆಣೆಯುವ ಯೋಚನೆಯನ್ನೇ ಬಿಟ್ಟು ಒಂದಿಡೀ ಸಂಸ್ಕೃತಿಯ ಅವನತಿಗೆ ಅನಿವಾರ್ಯವಾಗಿ ಸಾಕ್ಷಿಯಾಗುತ್ತಿದ್ದಾರೆ.

ಉದ್ಯಮ ನೆಲಕಚ್ಚಲು ಹತ್ತಾರು ಕಾರಣಗಳು

ದಶಕಗಳ ಹಿಂದೆ ಇಲ್ಲಿನ ಜನರೆಲ್ಲರೂ ಚೇಣಿ ಕಡ್ಡಿಗಳ ಚಾಪೆಗಳನ್ನು ಕೈಯಲ್ಲಿ ಹೆಣೆದು, ಅದಕ್ಕೆ ತಮ್ಮ ಕೈಯಾರೆ ಬಣ್ಣ ತುಂಬಿಸಿ, ಅಚ್ಚುಗಳಲ್ಲಿ ಚಿತ್ರಗಳನ್ನು ಮೂಡಿಸಿ ಮಾರಾಟ ಮಾಡುತ್ತಿದ್ದರು. 50-60 ವರ್ಷಗಳ ಹಿಂದೆ ಮೈಸೂರು ಅರಮನೆಗೂ ಇಲ್ಲಿಂದ ಸಾಕಷ್ಟು ಚಾಪೆಗಳನ್ನು ಕಳುಹಿಸಿಕೊಡಲಾಗುತ್ತಿತ್ತು ಎನ್ನುತ್ತಾರೆ ಇಲ್ಲಿನ ಸ್ಥಳೀಯರಾದ ನಾರಾಯಣ. ವರ್ಷಗಳು ಕಳೆದಂತೆ ಬೇರೆಡೆ ಕಡಿಮೆ ಬೆಲೆಗೆ ಚಾಪೆಗಳು ದೊರೆಯಲು ಆರಂಭವಾಯಿತು. ಅವರಿಗೆ ಬೇಕಾದ ಕಚ್ಚಾ ವಸ್ತುಗಳು ಸಿಗುವುದು ಕಷ್ಟವಾಯಿತು. ಇದೆಲ್ಲದರ ಪರಿಣಾಮವಾಗಿ ಒಬ್ಬೊಬ್ಬರಾಗಿಯೇ ಈ ವೃತ್ತಿಯಿಂದ ವಿಮುಖರಾಗುತ್ತಾ ಬಂದರು. ಪ್ರಸ್ತುತ ಇಲ್ಲಿನ ಜನರೆಲ್ಲರೂ ಈ ವೃತ್ತಿ ಬಿಟ್ಟು ಒಂದು ದಶಕವೇ ಕಳೆದಿದೆ.

ಕಡಕೊಳ ಚಾಪೆ
ಕಡಕೊಳ ಚಾಪೆ

ಕಡಕೊಳದಲ್ಲಿ ತಮಿಳುನಾಡು ಚಾಪೆಗಳ ರಾಜ್ಯಭಾರ

ಈಗ ಇಲ್ಲಿ ಯಾರೂ ಚಾಪೆ ಹೆಣೆಯದ ಕಾರಣ ತಮಿಳುನಾಡಿನಿಂದ ಚಾಪೆಗಳನ್ನು ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಹಾಗಾಗಿಯೂ ಅತಿ ಹೆಚ್ಚು ಚಾಪೆ ಮಾರಾಟಗಾರರು ಇರುವುದು ಕಡಕೊಳದಲ್ಲಿ. ಇಲ್ಲಿನ ಜನರು ಈಗ ತಾವು ಚಾಪೆ ಹೆಣೆಯುತ್ತಿದ್ದ ಯಂತ್ರಗಳನ್ನು ತೆಗೆದಿಟ್ಟಿದ್ದಾರೆ. ಯಾವುದನ್ನೂ ಬಳಸದೆ ಗಾರೆ ಕೆಲಸ, ದಿನಗೂಲಿ ಮತ್ತಿತರ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಲೂ ಹಣೆಯಲು ತಯಾರಿರುವ ಇವರಿಗೆ ಸರಿಯಾದ ಬೆಲೆ ಸಿಗಬೇಕಷ್ಟೇ. ʻಅಟ್ಟದ ಮೇಲಿಟ್ಟ ಹೆಣೆಯುವ ಯಂತ್ರಗಳು ಧೂಳು ಹಿಡಿದಿವೆ. ನಮಗೆ ಕೆಲಸ, ಸರಿಯಾದ ಆದಾಯ ಸಿಗುವುದು ಖಾತ್ರಿಯಾದರೆ ಮಾತ್ರ ಅವನ್ನು ಕಳಳಿಸುತ್ತೇವೆ. ಇಲ್ಲವಾದರೆ ಮತ್ತೆ ಕೆಲಸ ಮಾಡಲು ನಾವು ಸುತಾರಾಂ ತಯಾರಿಲ್ಲʼಎನ್ನುತ್ತಾರೆ ಗ್ರಾಮಸ್ಥರಾದ ಲೋಕೇಶ್.

ಕಡಕೊಳದಲ್ಲಿ ತಯಾರಾಗುವ ಚಾಪೆಗಳಿಗೆ ತನ್ನದೇ ಆದ ವೈಭವ, ಇತಿಹಾಸ, ಬೆಲೆ ಇತ್ತು. ಆದರೆ, ಈಗ ವಿವಿಧ ಕಾರಣಗಳಿಂದಾಗಿ ಚಾಪೆ ಹೆಣೆಯುವ ಪ್ರವೃತ್ತಿ ದೂರವಾಗಿದೆ. ಅಪ್ಪಟ ದೇಶೀಯ ಸಂಸ್ಕೃತಿಯೊಂದು ಅವನತಿಯೆಡೆಗೆ ಸಾಗುತ್ತಿರುವುದು ಬೇಸರದ ಸಂಗತಿ. ಈಗ ವಾಸವಿರುವ 60-70 ವರ್ಷ ವಯಸ್ಸಿನವರು ಹೇಳುವ ಪ್ರಕಾರ, ತಮ್ಮ ಮುಂದಿನ ಪೀಳಿಗೆಯವರಿಗೂ ಈ ಕೆಲಸ ತಿಳಿದಿಲ್ಲ. ಇದೆಲ್ಲದರ ಪರಿಣಾಮವಾಗಿ ಕಡಕೊಳದ ಚಾಪೆ ತಯಾರಿಕೆ ಸಂಸ್ಕೃತಿ ಶೀಘ್ರದಲ್ಲಿಯೇ ಇತಿಹಾಸದ ಪುಟಗಳಲ್ಲಿ ಸೇರಿ ಕೇವಲ ನೆನಪಾಗಿ ಉಳಿಯಲಿದೆ. (ಚಿತ್ರ ಲೇಖನ: ಧಾತ್ರಿ ಭಾರದ್ವಾಜ್‌)

IPL_Entry_Point