Namma metro News: ಬೆಂಗಳೂರು ಮೆಜೆಸ್ಟಿಕ್ ಮೆಟ್ರೊ ರೈಲು ನಿಲ್ದಾಣಕ್ಕೆ ಇನ್ನೂ ನಾಲ್ಕು ಮಹಡಿ ಸೇರ್ಪಡೆ
ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದ ಮೇಲೆ ಇನ್ನೂ ಹೊಸ ನಾಲ್ಕು ಮಹಡಿಗಳನ್ನು ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿರ್ಧರಿಸಿದೆ.
ಬೆಂಗಳೂರು: ಮೆಜೆಸ್ಟಿಕ್‌ಲ್ಲಿರುವ ಕೆಂಪೇಗೌಡ ಮೆಟ್ರೊ ನಿಲ್ದಾಣ ಇನ್ನಷ್ಟು ಆಕರ್ಷಕವಾಗಲಿದೆ. ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದ ಮೇಲೆ ಇನ್ನೂ ಹೊಸ ನಾಲ್ಕು ಮಹಡಿಗಳನ್ನು ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಬೆಂಗಳೂರಿನಲ್ಲಿ 55 ಕಿ.ಮೀ. ಮೆಟ್ರೊ ಲೈನ್ ಹೊಂದಿರುವ ಬಿಎಂಆರ್‌ಸಿಎಲ್ ಇದೀಗ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣಕ್ಕೆ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಿದೆ. ಈ ಮೂಲಕ ವಾಣಿಜ್ಯ ಆದಾಯ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ. ಹೊಸ ನಾಲ್ಕು ಮಹಡಿಗಳಲ್ಲಿ ಆಫೀಸ್ ಸ್ಥಳಾವಕಾಶ, ಮಾಲ್‌ಗಳು, ಥಿಯೇಟರ್‌ಗಳು, ವಾಣಿಜ್ಯ ಮಳಿಗೆಗಳು ಇರಲಿವೆ. ಈ ಮೂಲಕ ಆದಾಯ ಬಾಚಿಕೊಳ್ಳಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
“ರಿಯಲ್ ಎಸ್ಟೇಟ್ ಅಭಿವೃದ್ಧಿಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡುವ ಕೆಲಸವನ್ನು ಏಜೆನ್ಸಿಯೊಂದಕ್ಕೆ ವಹಿಸಲಾಗಿದೆ. ವಿಸ್ತರಣೆಗೆ ಪೂರಕವಾಗಿರುವಂತೆ ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣವನ್ನು ನಿರ್ಮಿಸುವಾಗ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಮೆಜೆಸ್ಟಿಕ್ ಸಾರಿಗೆ ಮತ್ತು ವಾಣಿಜ್ಯ ಕೇಂದ್ರವಾಗಿರುವುದರಿಂದ, ಉತ್ತಮ ಆದಾಯ ಪಡೆಯುವ ನಿರೀಕ್ಷೆ ಇದೆ,” ಎಂದು ಬಿಎಂಆರ್‌ಸಿಎಲ್‌ನ ಎಂಡಿ ಅಂಜುಂಮ್ ಪರ್ವೇಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಮೆಟ್ರೊ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಇರುವ ಅವಕಾಶಗಳ ಕುರಿತು ಆಲೋಚಿಸುತ್ತಿದ್ದೇವೆ. ಮೆಜೆಸ್ಟಿಕ್ ಸಾರಿಗೆ ಮತ್ತು ವಾಣಿಜ್ಯ ಹಬ್ ಆಗಿರುವುದರಿಂದ ಅಲ್ಲಿ ಮೆಟ್ರೊ ಟಿಕೆಟ್ ಹೊರತುಪಡಿಸಿದ ಇತರೆ ಆದಾಯ ಸೃಜಿಸಲು ಸಾಕಷ್ಟು ಅವಕಾಶವಿದೆ. ಈ ಕುರಿತು ಪಿಪಿಪಿ ಮಾಡೆಲ್‌ನಲ್ಲಿ ನಾಲ್ಕು ಹೊಸ ಮಹಡಿಗಳನ್ನು ನಿರ್ಮಿಸಲು ಯೋಜಿಸಿದ್ದೇವೆ ಎಂದು ಮೆಟ್ರೊದ ಪ್ರಮುಖ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೆಜೆಸ್ಟಿಕ್ ನಿಲ್ದಾಣವು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಮೆಟ್ರೋವನ್ನು ಬದಲಾಯಿಸಲು ಒಂದು ಲಕ್ಷಕ್ಕೂ ಹೆಚ್ಚು ಜನರು ನಿಲ್ದಾಣವನ್ನು ಬಳಸುತ್ತಿದ್ದಾರೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ನೇರಳೆ ಮಾರ್ಗವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ ಸಿದ್ಧವಾಗಿರುವುದರಿಂದ ಮೆಟ್ರೋಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಮೆಜೆಸ್ಟಿಕ್ ನಿಲ್ದಾಣವು 2017 ರಿಂದ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಇಲ್ಲಿ ವಾಣಿಜ್ಯ ಉದ್ದೇಶದಿಂದ ಲಾಭ ಗಳಿಸಲು ಹೆಚ್ಚು ಅವಕಾಶವಿದೆ.
ಇದೇ ರೀತಿ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಬಹುಮಹಡಿಯ ಪಾರ್ಕಿಂಗ್ ವ್ಯವಸ್ಥೆ ಸ್ಥಾಪಿಸುವ ಕುರಿತೂ ಬಿಎಂಆರ್‌ಸಿಎಲ್ ಆಲೋಚಿಸುತ್ತಿದೆ. ಕೆಆರ್ ಪುರುಂ ಮೆಟ್ರೊ ನಿಲ್ದಾಣದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗುವುದು. ಇದೇ ರೀತಿ, ಮೈಸೂರು ರಸ್ತೆ ಮೆಟ್ರೊ ನಿಲ್ದಾಣ ಮತ್ತು ಇತರೆ ಕಡೆಗಳ ಮೆಟ್ರೊ ರೈಲು ನಿಲ್ದಾಣಗಲ್ಲಿ ಲಭ್ಯವಿರುವ ಸ್ಥಳಾವಕಾಶದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸುವ ಕುರಿತು ಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಎಂಆರ್‌ಸಿಎಲ್ 2017ರಲ್ಲಿ ಐಕಿಯಾ ಜತೆ ನಾಗಸಂದ್ರ ಮೆಟ್ರೊ ನಿಲ್ದಾಣದ ಹತ್ತಿರವಿರುವ ಭೂಮಿಗಾಗಿ ದೀರ್ಘಕಾಲದ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಐಕಿಯಾವು 251 ಕೋಟಿ ರೂ. ನೀಡಿದೆ.ಬಿಎಂಆರ್‌ಸಿಎಲ್ ಕಂಪನಿಯು ಐಕಿಯಾಕ್ಕೆ 60 ವರ್ಷಕ್ಕೆ ಭೂಮಿ ಲೀಸ್ ನೀಡಿದೆ. ಇದರಿಂದ ಬಿಎಂಆರ್‌ಸಿಎಲ್‌ಗೆ ಹೆಚ್ಚುವರಿ ಆದಾಯವೂ ದೊರಕಿದೆ.