Nandini Milk Price: ನಂದಿನಿ ಹಾಲಿನ ದರ 5 ರೂ ಹೆಚ್ಚಳ ಪ್ರಸ್ತಾಪ ವಿಚಾರ; ಕರ್ನಾಟಕ ಜನರ ಜೇಬಿಗೆ ಕನ್ನ ಎಂದ ಬಿಜೆಪಿ
ನಂದಿನ ಹಾಲಿನ ದರ ಹೆಚ್ಚಳ ಮಾಡುವ ವಿಚಾರ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕ ಜನರ ಜೇಬಿಗೆ ಕನ್ನ ಹಾಕಲು ಹೊರಟಿದೆ ಎಂದು ಆರೋಪಿಸಿದೆ.
ಬೆಂಗಳೂರು: ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಇನ್ನೂ ಅಕ್ಕಿ ಸಮರ ಮುಗಿಯುವ ಮುನ್ನವೇ ಮತ್ತೊಂದು ವಿಷಯದಲ್ಲಿ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಸಿದ್ಧಗೊಂಡಂತಿದೆ. ನಂದಿನಿ ಹಾಲಿನ ದರ ಏರಿಕೆ (Nandini Milk Price) ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷ ಬಿಜೆಪಿ ಮುಗಿಬಿದ್ದಿದೆ.
ನಂದಿನಿ ಹಾಲಿನ ದರ 5 ರೂಪಾಯಿ ಏರಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ, ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೆಎಂಫ್ ನೂತನ ಅಧ್ಯಕ್ಷರಾದ ಭೀಮಾ ನಾಯ್ಕ್ ನಿನ್ನೆಯಷ್ಟೇ (ಜೂನ್ 21, ಬುಧವಾರ) ಹೇಳಿದ್ದರು.
ಇದೇ ವಿಚಾರಕ್ಕೆ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೆಎಂಫ್ ಅಧ್ಯಕ್ಷರು ಹಾಲಿನ ದರವನ್ನು ಲೀಟರಿಗೆ 5 ರೂಪಾಯಿ ಹೆಚ್ಚಿಸುತ್ತೇವೆ ಎಂದು ಏಕಾಏಕಿ ಹೇಳುವ ಮೂಲಕ ರಾಜ್ಯದ ಪ್ರಜೆಗಳ ಜೇಬಿಗೆ ಕನ್ನ ಹಾಕಿದೆ. ಸಿಎಂ ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರದಲ್ಲಿ ಈಗಾಗಲೇ ದಿನ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಇದೀಗ ಹಾಲಿನ ದರವನ್ನೂ ಏರಿಸುವ ಮೂಲಕ ರಾಜ್ಯದ ಬಡ ಜನರ ಮೇಲೆ ಬರೆ ಎಳೆಯುತ್ತಿದೆ. ಈ ಜನದ್ರೋಹಿ ನಿರ್ಧಾರದಿಂದ ಸರ್ಕಾರ ದೂರ ಉಳಿಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಟ್ವೀಟ್ ಮಾಡಿದೆ.
ನಿನ್ನೆ ಕೆಎಂಎಫ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಮಾತನಾಡಿರುವ ಭೀಮಾ ನಾಯ್ಕ್, ನಂದಿನಿ ಹಾಲಿನ ಬೆಲೆ ಹೆಚ್ಚಳದ ಸುಳಿವು ನೀಡಿದ್ದರು. ನಂದಿನಿ ಹಾಲಿನ ದರ 5 ರೂಪಾಯಿ ಏರಿಸಲು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ, ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು 5 ರೂ. ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ದರ ಹೆಚ್ಚಳದ ಜೊತೆ ಗುಣಮಟ್ಟದ ಹಾಲು, ಮೊಸರು, ತುಪ್ಪ ಗ್ರಾಹಕರಿಗೆ ಒದಗಿಸಲು ಆದ್ಯತೆ ನೀಡಲಿದ್ದೇವೆ. ರೈತರಿಗೆ 2 ರೂಪಾಯಿ ಪ್ರೋತ್ಸಾಹಧನ ಹೆಚ್ಚಿಸಲಿದ್ದೇವೆ ಎಂದು ತಿಳಿಸಿದ್ದರು.