ಕನ್ನಡ ಸುದ್ದಿ  /  ಕರ್ನಾಟಕ  /  Shobha Karandlaje: ಕೊಟ್ಟ ಅವಕಾಶ ನಿಭಾಯಿಸಿದ ಸಾಮಾನ್ಯ ಕಾರ್ಯಕರ್ತೆ ಶೋಭಾಕರಂದ್ಲಾಜೆಗೆ ಮತ್ತೆ ಕೇಂದ್ರ ಮಂತ್ರಿಗಿರಿ

Shobha Karandlaje: ಕೊಟ್ಟ ಅವಕಾಶ ನಿಭಾಯಿಸಿದ ಸಾಮಾನ್ಯ ಕಾರ್ಯಕರ್ತೆ ಶೋಭಾಕರಂದ್ಲಾಜೆಗೆ ಮತ್ತೆ ಕೇಂದ್ರ ಮಂತ್ರಿಗಿರಿ

Karnataka politics ಕರ್ನಾಟಕ ರಾಜಕೀಯದಲ್ಲಿ ಎರಡು ದಶಕದಲ್ಲಿಯೇ ಬೆಳೆದ ಶೋಭಾ ಕರಂದ್ಲಾಜೆ ಅವರು ಕೊಟ್ಟ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡವರು.

ಹಂತ ಹಂತವಾಗಿ ಬೆಳೆದು ಬಂದ ನಾಯಕಿ ಶೋಭಾ
ಹಂತ ಹಂತವಾಗಿ ಬೆಳೆದು ಬಂದ ನಾಯಕಿ ಶೋಭಾ

ಎರಡು ತಿಂಗಳ ಹಿಂದೆಯಷ್ಟೇ ಶೋಭಾ ಕರಂದ್ಲಾಜೆ ಅವರ ವಿರುದ್ದ ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಹಠಾವೋ ಘೋಷಣೆ ಕೇಳಿ ಬರುತ್ತಿತ್ತು. ಶೋಭಾ ರಾಜಕೀಯ ಜೀವನ ಡೋಲಾಯಮಾನ ಎನ್ನುವಂತಾಗಿತ್ತು. ಆದರೆ ಪಕ್ಷ ಅವರನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬದಲಿಸಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸ್ಥಳಾಂತರಿಸಿತು. ಇಲ್ಲಿಯೂ ಭಾರೀ ಅಂತರದಿಂದಲೇ ಗೆದ್ದು ಬಂದರು. ಕರ್ನಾಟಕದಿಂದ ಈ ಬಾರಿ ಮಂತ್ರಿ ಸ್ಥಾನ ಸಿಗುತ್ತದೆಯೋ ಇಲ್ಲವೋ ಎನ್ನುವ ವಾತಾವರಣವಿತ್ತು. ಎಲ್ಲ ಗೊಂದಲಗಳನ್ನು ಮೀರಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತಿರುವ ಗಟ್ಟಿಗಿತ್ತಿ ಶೋಭಾ ಕರಂದ್ಲಾಜೆ ಅವರು.

ಟ್ರೆಂಡಿಂಗ್​ ಸುದ್ದಿ

ಶೋಭಾ ಅವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ಯೆಯಾಗಿ ಎರಡು ದಶಕದಲ್ಲಿ ಹಂತ ಹಂತವಾಗಿ ಬೆಳೆದು ಬಂದವರು. ಪರಿಷತ್‌ ಸದಸ್ಯೆ. ಶಾಸಕಿ. ಎರಡು ಬಾರಿ ಸಚಿವೆ. ಮೂರನೇ ಬಾರಿ ಸಂಸದೆಯಾಗಿ ಈಗ ಎರಡನೇ ಬಾರಿ ಕೇಂದ್ರದಲ್ಲಿ ಮಂತ್ರಿ ಸ್ಥಾನ ಪಡೆದಿದ್ದಾರೆ.

ಪುತ್ತೂರು ಪ್ರತಿಭೆ

ಶೋಭಾ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಚಾರ್ವಾಕ ಗ್ರಾಮದವರು. 1966ರ ಅಕ್ಟೋಬರ್‌ 23ರಂದು ಲೇಟ್‌ ಮೋನಪ್ಪಗೌಡ ಹಾಗೂ ಪೂವಕ್ಕ ಅವರ ಪುತ್ರಿಯಾಗಿ ಜನಿಸಿದವರು. ಊರಿನಲ್ಲಿಯೇ ಶಿಕ್ಷಣ ಮುಗಿಸಿ ಪುತ್ತೂರಿನ ಸೆಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಬಿಎ ಪದವಿ ಪಡೆದವರು. ಆನಂತರ ಮಂಗಳೂರು ವಿವಿಯಿಂದ ಎಂಎಸ್‌ಡಬ್ಲು,. ಮೈಸೂರು ವಿವಿಯಿಂದ ಎಂಎ ಸಮಾಜಶಾಸ್ತ್ರ ಪೂರೈಸಿದವರು. ಕಾಲೇಜು ದಿನಗಳಲ್ಲಿಯೇ ಆರ್‌ಎಸ್‌ಎಸ್‌ ಸ್ವಯಂ ಸೇವಕಿಯಾಗಿ ಸೇರಿಕೊಂಡವರು. ಪೂರ್ಣಾವಧಿ ಕಾರ್ಯಕರ್ತರಾದವರು. ಆನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡು1996ರಲ್ಲಿ ಉಡುಪಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದವರು. ಕೆಲವೇ ದಿನಗಳಲ್ಲಿ ಅಂದರೆ 2004ರಲ್ಲಿ ಅವರಿಗೆ ಎಂಎಲ್ಸಿ ಹುದ್ದೆಯೂ ಒಲಿಯಿತು. 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವೂ ದೊರೆಯಿತು. ಯಶವಂತಪುರ ಶಾಸಕಾಗಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರೂ ಆದರು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವರಾಗಿ ಪಿಡಿಒ ಹುದ್ದೆಗಳನ್ನು ಮೊದಲು ಸೃಜಿಸಿದರು. ಇಲಾಖೆಯಲ್ಲೂ ಚೆನ್ನಾಗಿ ಕೆಲಸ ಮಾಡಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಮೈಸೂರು ದಸರಾವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಆನಂತರ ರಾಜಕೀಯ ಕಾರಣಗಳಿಗೆ ಸಚಿವ ಸ್ಥಾನ ತೊರೆಯಬೇಕಾಗಿತ್ತು. ಮತ್ತೆ ಇಂಧನ ಸಚಿವೆ ಹಾಗೂ ಆಹಾರ ಖಾತೆ ಸಚಿವೆಯೂ ಆದರು. ಇಂಧನ ಸಚಿವರಾದಿದ್ದಾಗಲೂ ಉತ್ತಮವಾಗಿ ಕೆಲಸ ಮಾಡಿದರು.

ರಾಜ್ಯದಿಂದ ರಾಷ್ಟ್ರ ರಾಜಕಾರಣಕ್ಕೆ

ಹತ್ತು ವರ್ಷದಲ್ಲಿಯೇ ಅವರಿಗೆ ಅಂದರೆ 2014 ರಲ್ಲಿ ರಾಷ್ಟ್ರ ರಾಜಕಾರಣದ ಅವಕಾಶ ಮಾಡಿಕೊಡಲಾಯಿತು. ಮೊದಲ ಬಾರಿಗೆ ಉಡುಪಿ ಲೋಕಸಭೆ ಕ್ಷೇತ್ರದಿಂದ ಗೆದ್ದರು. ಮತ್ತೆ ಐದು ವರ್ಷದಲ್ಲಿ ಎರಡನೇ ಬಾರಿಗೆ ಸಂಸದರಾಗಿ ಕೇಂದ್ರದಲ್ಲಿ ಕೃಷಿ ಸಚಿವೆಯೂ ಆಗಿ ದೇಶಾದ್ಯಂತ ಪ್ರವಾಸಿ ಮಾಡಿ ಕೆಲಸ ಮಾಡಿದರು. ರಾಜಕೀಯ ಕಾರಣಗಳಿಗೆ ಕ್ಷೇತ್ರ ಬದಲಿಸಿ ಗೆದ್ದು ಬಂದರು ಶೋಭಾ ಕರಂದ್ಲಾಜೆ.

ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಆತ್ಮೀಯತೆಯ ಕಾರಣದಿಂದ ಬಲುಬೇಗನೇ ರಾಜಕೀಯವಾಗಿ ಮೇಲೆ ಬಂದ ಶೋಭಾ ಕರಂದ್ಲಾಜೆ ಅದೇ ಕಾರಣದಿಂದ ತೊಂದರೆಯನ್ನು ಅನುಭವಿಸಿದರು. ಕೇಂದ್ರ ರಾಜಕಾರಣಕ್ಕೆ ಹೋದರು.

ಸಿಎಂ ಹುದ್ದೆವರೆಗೂ

ಎರಡು ವರ್ಷದ ಹಿಂದೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲು ಮಾಡುವ ಮಾತುಗಳು ಕೇಳಿಬಂದಾಗ ಶೋಭಾ ಕರಂದ್ಲಾಜೆ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಆನಂತರ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕಳೆದ ವರ್ಷ ಹೆಸರು ಕೇಳಿ ಬಂದಿತ್ತು. ಆಗಲೂ ಶೋಭಾ ಮುಂದೆ ನೋಡೋಣ ಎಂದು ಹಿಂದೆ ಸರಿದು ವಿಜಯೇಂದ್ರ ಅವರ ಪರ ನಿಂತಿದ್ದರು. ಈ ಕಾರಣದಿಂದಲೋ ಏನೋ ಮತ್ತೆ ಅವರಿಗೆ ಸಂಸದ ಸ್ಥಾನವೂ ಪಕ್ಕಾ ಆಗಿ ಈಗ ಕೇಂದ್ರ ಸಚಿವ ಸ್ಥಾನವೂ ದೊರೆತಿದೆ.

ನಾಯಕತ್ವ ಗುಣ ಇರುವ ಶೋಭಾ ಕರಂದ್ಲಾಜೆ ಅವರು ನಿರಂತರ ಪ್ರವಾಸ ಮಾಡಿ ಕೊಟ್ಟ ಕೆಲಸಕ್ಕೆ ನ್ಯಾಯ ಕೊಡಬಲ್ಲ ಶಕ್ತಿ ಹೊಂದಿದ್ದಾರೆ. ಒಂದು ದಶಕ ರಾಜ್ಯ ರಾಜಕಾರಣ, ಮತ್ತೊಂದು ದಶಕ ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡು ನಿಭಾಯಿಸಿದ್ದಾರೆ ಕೂಡ. ಈಗ ಇನ್ನೊಂದು ಹೆಜ್ಜೆ ಮೇಲೆ ಹೋಗಿ ನಾಯಕತ್ವ ಬೆಳೆಸಿಕೊಳ್ಳುವ ಅವಕಾಶ ಅವರಿಗೆ ಲಭಿಸಿದೆ. ಮೋದಿ ಅವರ ವಿಶ್ವಾಸ ಗಳಿಸಿ ಸಂಪುಟದಲ್ಲಿ ಸ್ಥಾನವನೂ ಪಡೆದುಕೊಂಡಿದ್ದಾರೆ ಶೋಭಾ.ಸಾಮಾನ್ಯ ಕಾರ್ಯಕರ್ತರೂ ಶ್ರಮದಿಂದ ಮೇಲೆ ಬರಬಹುದು ಎನ್ನುವುದಕ್ಕೂ ಉತ್ತಮ ಉದಾಹರಣೆಯೇ ಆಗಿದ್ದಾರೆ.

ಟಿ20 ವರ್ಲ್ಡ್‌ಕಪ್ 2024