ಕನ್ನಡ ಸುದ್ದಿ  /  Karnataka  /  Profile Of M.b.patil Ex Cm Congress Candidate In Babaleshwara Karnataka Assembly Election News In Kannada Uks

M.B.Patil Profile: ಬಬಲೇಶ್ವರದಿಂದ ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿರುವ ಎಂ.ಬಿ.ಪಾಟೀಲ್ ಅವರ ಪರಿಚಯ ಇಲ್ಲಿದೆ

M.B.Patil Profile : ಬಬಲೇಶ್ವರದಲ್ಲಿ ಕಾಂಗ್ರೆಸ್‌ ಪಕ್ಷದ ಎಂ.ಬಿ.ಪಾಟೀಲ್ ವಿರುದ್ಧ ಬಿಜೆಪಿ ಮತ್ತೊಮ್ಮೆ ವಿಜುಗೌಡ ಎಸ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ. ಬಸವರಾಜ ಹೊನವಾಡ ಜೆಡಿಎಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಬಬಲೇಶ್ವರ ಕಾಂಗ್ರೆಸ್ ಭದ್ರಕೋಟೆ. ಎಂ.ಬಿ.ಪಾಟೀಲ್ ಸತತ 4ನೇ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದ್ದು, ಈ ಲಿಂಗಾಯತ ನಾಯಕನ ಪರಿಚಯ ಇಲ್ಲಿದೆ.

ಎಂ.ಬಿ.ಪಾಟೀಲ್‌
ಎಂ.ಬಿ.ಪಾಟೀಲ್‌

ರಾಜ್ಯ ರಾಜಕಾರಣದಲ್ಲಿ ಎಂ.ಬಿ.ಪಾಟೀಲ್‌ (M B Patil) ಎಲ್ಲರಿಗೂ ಚಿರಪರಿಚಿತ ಹೆಸರು. ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ. ಬಬಲೇಶ್ವರದ ಶಾಸಕ. ಮಾಜಿ ಸಚಿವ. ಜಲಸಂಪನ್ಮೂಲ ಸಚಿವರಾಗಿ ಹೆಸರು ಗಳಿಸಿದವರು. ಈಗ ಕರ್ನಾಟಕ ಚುನಾವಣೆ (Karnataka Assembly Election)ಯಲ್ಲಿ ಸತತ ನಾಲ್ಕನೇ ಗೆಲುವು ಬಯಸಿ ಬಬಲೇಶ್ವರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈ ಸಲದ ಚುನಾವಣೆ ಎದುರಿಸುತ್ತಿದ್ದಾರೆ.

ಮಲ್ಲನಗೌಡ ಬಸನಗೌಡ ಪಾಟೀಲ್ ಇದು ಎಂ.ಬಿ.ಪಾಟೀಲರ ಪೂರ್ಣ ಹೆಸರು. ಪೂರ್ಣ ಹೆಸರು ಹೇಳಿದರೆ ಎಲ್ಲರಿಗೂ ಬೇಗನೆ ಅವರ ಪರಿಚಯ ಹತ್ತುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಭಾವಿ ಹಿರಿಯ ನಾಯಕರ ಪೈಕಿ ಪಾಟೀಲರೂ ಒಬ್ಬರು. ಸದ್ಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಅವರು ಕಾಂಗ್ರೆಸ್‌ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ ಹೊಣೆಗಾರಿಕೆ ನಿರ್ವಹಿಸಿದವರು. ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು.

ಎಂ.ಬಿ.ಪಾಟೀಲರು ರಾಜಕೀಯ ಕೌಟುಂಬಿಕ ಹಿನ್ನೆಲೆ ಉಳ್ಳವರು. ಅವರ ತಂದೆ ಬಿ.ಎಂ. ಪಾಟೀಲ್‌ ಕೂಡ ಶಾಸಕರಾಗಿದ್ದರು. 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ ಅಚಾನಕ್‌ ಆಗಿ ರಾಜಕೀಯ ಪ್ರವೇಶ ಮಾಡಿದವರು ಎಂ.ಬಿ.ಪಾಟೀಲ್‌. ಆಗ ಅವರಿಗೆ 27 ವರ್ಷ ವಯಸ್ಸು. ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು.

ಈ ನಡುವೆ, 1994 ಮತ್ತು 1999ರಲ್ಲಿ ನಡೆದ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಲ್ಲಿನ ಪ್ರಭಾವಿ ನಾಯಕ ಶಿವಾನಂದ ಪಾಟೀಲರ ವಿರುದ್ಧ ಎಂಬಿ ಪಾಟೀಲ್ ಸೋಲು ಅನುಭವಿಸಿದ್ದರು. ತರುವಾಯ, 1998ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸಿ ಸಂಸದರಾಗಿ ಸಂಸತ್ ಪ್ರವೇಶಿಸಿದರು. ಮುಂದೆ 2004ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಈ ಅವಧಿಯಲ್ಲಿ ಕ್ಷೇತ್ರ ಮರುವಿಂಗಡಣೆ ಆದ ಬಳಿಕ ಎಂ.ಬಿ.ಪಾಟೀಲರು ವಿಜಯಪುರದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಚುನಾವಣೆ ಎದುರಿಸಿ ಗೆದ್ದರು. ಈ ಕ್ಷೇತ್ರದಲ್ಲಿ 2013 ಮತ್ತು 2018ರಲ್ಲಿ ಸತತ ಗೆಲುವು ದಾಖಲಿಸಿ ಹ್ಯಾಟ್ರಿಕ್‌ ಗೆಲುವಿಗೆ ಭಾಜನರಾದರು.

ಸಚಿವರಾಗಿಯೂ ಹೊಣೆಗಾರಿಕೆ ನಿಭಾಯಿಸಿದ್ದ ಪಾಟೀಲರಿಗೆ ಮುಖ್ಯಮಂತ್ರಿ ಆಗುವ ಆಸೆ

ಮೂರು ದಶಕಕ್ಕೂ ಹೆಚ್ಚು ಕಾಲ ರಾಜಕೀಯ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಎಂ.ಬಿ.ಪಾಟೀಲರು 2013ರ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದರು. ಇದಾಗಿ, 2018ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಆದಾಗ ಅಲ್ಲಿ ಗೃಹ ಸಚಿವರಾಗಿ ಎಂ.ಬಿ.ಪಾಟೀಲರು ಕರ್ತವ್ಯ ನಿರ್ವಹಿಸಿದ್ದರು. ಈ ಸರ್ಕಾರ ಅಲ್ಪಾವಧಿಯದ್ದಾಗಿತ್ತು.

ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿದ್ದರು. ಇದು ಹಲವಾರು ಅಣೆಕಟ್ಟುಗಳು ಮತ್ತು ಕಾಲುವೆಗಳ ನಿರ್ಮಾಣವನ್ನು ಒಳಗೊಂಡಿತ್ತು. ಇದೇ ರೀತಿ, ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಯೋಜನೆಯ ಅನುಷ್ಠಾನವನ್ನೂ ಅವರು ಮಾಡಿದ್ದರು ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದ ಉಂಟಾದ ಸಂದರ್ಭದಲ್ಲಿ ಎಂ.ಬಿ.ಪಾಟೀಲರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿತ್ತು. ಲಿಂಗಾಯತ ಸಮುದಾಯದ ಕೆಲವರು ವೀರಶೈವ ಲಿಂಗಾಯತ ಹಿಂದು ಧರ್ಮದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದರು. ಎಂ.ಬಿ.ಪಾಟೀಲರು ಮತ್ತು ಇತರರು ಇದ್ದ ಗುಂಪು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಪ್ರತಿಪಾದಿಸುತ್ತಿತ್ತು. ಈ ವಾದ ವಿವಾದ ಕೆಲ ಕಾಲ ನಡೆದು ಬಳಿಕ ತಣ್ಣಗಾಯಿತು.

IPL_Entry_Point