ಅಪಾರ ಶಿಷ್ಯರನ್ನು ತೆಂಕು ತಿಟ್ಟು ಯಕ್ಷಗಾನ ರಂಗಕ್ಕಿಳಿಸಿದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್- ವ್ಯಕ್ತಿ ಪರಿಚಯ-profile who is mambadi subrahmanya bhat the master of yakshagana s himmela mangaluru news hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಅಪಾರ ಶಿಷ್ಯರನ್ನು ತೆಂಕು ತಿಟ್ಟು ಯಕ್ಷಗಾನ ರಂಗಕ್ಕಿಳಿಸಿದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್- ವ್ಯಕ್ತಿ ಪರಿಚಯ

ಅಪಾರ ಶಿಷ್ಯರನ್ನು ತೆಂಕು ತಿಟ್ಟು ಯಕ್ಷಗಾನ ರಂಗಕ್ಕಿಳಿಸಿದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್- ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ: ತೆಂಕು ತಿಟ್ಟು ಯಕ್ಷಗಾನ ರಂಗದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಈ ವರ್ಷದ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಘೋಷಣೆಯಾಗಿದೆ. ತನ್ನಿಮಿತ್ತವಾಗಿ ಅವರ ವ್ಯಕ್ತಿಪರಿಚಯ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ತೆಂಕು ತಿಟ್ಟು ಯಕ್ಷಗಾನ ರಂಗದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್
ತೆಂಕು ತಿಟ್ಟು ಯಕ್ಷಗಾನ ರಂಗದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್

ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ -2024 ಪುರಸ್ಕೃತ ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಅವರು ತೆಂಕು ತಿಟ್ಟು ಯಕ್ಷಗಾನ ರಂಗದಲ್ಲಿ ಅದೆಷ್ಟೋ ಶಿಷ್ಯರನ್ನು ರೂಪಿಸಿ ರಂಗಕ್ಕೆ ಧಾರೆ ಎರೆದವರು. 75ರ ಹರೆಯದ ಮಾಂಬಾಡಿ ಸುಬ್ರಹ್ಮಣ್ಯ ಭಟ್. ತಂದೆ ದಿ. ಮಾಂಬಾಡಿ ನಾರಾಯಣ ಭಟ್ ಅವರಿಂದಲೇ ಯಕ್ಷಗಾನದ ಭಾಗವತಿಕೆ, ಚೆಂಡೆ, ಮದ್ದಳೆ ವಾದನವನ್ನು ಕರಗತ ಮಾಡಿಕೊಂಡವರು. ಇಪ್ಪತ್ತು ವರ್ಷಗಳ ಯಕ್ಷಗಾನ ತಿರುಗಾಟ ಮಾಡಿ, ತಮಗೆ ಒಲಿದ ಕಲೆಯನ್ನು ಧಾರೆಯೆರುವ ಕಾಯಕಕ್ಕೆ ಮುಂದಾದವರು.

ಬಾಲಪಾಠವನ್ನು ತಂದೆಯವರಿಂದಲೇ ಅಭ್ಯಸಿಸಿ, ಎಳವೆಯಲ್ಲೇ ಮೇಳದ ತಿರುಗಾಟವನ್ನು ನಡೆಸಿದರು. 1962 ರಿಂದ ಮೊದಲ್ಗೊಂಡು-ಧರ್ಮಸ್ಥಳ, ಕಟೀಲು, ಮುಲ್ಕಿ, ಕೂಡ್ಲು, ಕದ್ರಿ ಮುಂತಾದ ವೃತ್ತಿಪರ ಮೇಳಗಳಲ್ಲಿ ಸುಮಾರು 20 ವರ್ಷಗಳ ಕಾಲ ಮದ್ದಳೆ, ಚೆಂಡೆವಾದಕರಾಗಿ ಕಲಾ ಸೇವೆ ನಡೆಸಿದ್ದು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರಿಯ ಶಿಷ್ಯನಾಗಿ, ಮಹಾನ್ ಗುರುಗಳಾದ ನೆಡ್ಲೆ ನರಸಿಂಹ ಭಟ್, ಕುದ್ರೆಕೋಡ್ಲು ರಾಮ ಭಟ್ ಸಾಹಚರ್ಯದಿಂದ ಕಲಾಪ್ರತಿಭೆಯನ್ನು ಪುಟಗೊಳಿಸಿಕೊಂಡರು.

ಹಿಮ್ಮೇಳ ಶಿಕ್ಷಣ ಆರಂಭಿಸಿದ್ದು ಹೀಗೆ

1968ನೇ ಇಸವಿಯಲ್ಲಿ ಕಾಸರಗೋಡು ತಾಲೂಕು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿಯಲ್ಲಿ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಆಹ್ವಾನದ ಮೇರೆಗೆ ಹಿಮ್ಮೇಳ ಶಿಕ್ಷಣಕ್ಕೆ ಮುಂದಾದರು. ನಂತರ, ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ವಿವಿಧೆಡೆ ನೂರಕ್ಕೂ ಮಿಕ್ಕಿ ತರಗತಿ ನಡೆಸಿ ಹಲವಾರು ಶಿಷ್ಯರಿಗೆ ತೆಂಕುತಿಟ್ಟು ಹಿಮ್ಮೇಳ ತರಬೇತಿ ನೀಡಿದರು.

ಶಿಕ್ಷಕರಾಗಿ ಪರಂಪರೆಯನ್ನು ಮುನ್ನಡೆಸುತ್ತಿರುವ ವಿಶ್ವವಿನೋದ ಬನಾರಿ, ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ, ವೃತ್ತಿ ಮೇಳಗಳಲ್ಲಿ ಸಕ್ರಿಯರಾಗಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಅಂಡಾಲ ದೇವಿಪ್ರಸಾದ ಶೆಟ್ಟಿ, ಪಟ್ಲ ಸತೀಶ ಶೆಟ್ಟಿ, ಬೋಂದೆಲ್ ಸತೀಶ್ ಶೆಟ್ಟಿ, ಪ್ರಶಾಂತ ವಗೆನಾಡು, ಪೊಳಲಿ ದಿವಾಕರ ಆಚಾರ್ಯ, ಪದ್ಯಾಣ ಗೋವಿಂದ ಭಟ್, ಪೆಲತ್ತಡ್ಕ ಗೋಪಾಲಕೃಷ್ಣ ಮಯ್ಯ, ನೆಕ್ಕರೆಮೂಲೆ ಗಣೇಶ ಭಟ್, ಯೋಗೀಶ ಆಚಾರ್ಯ ಉಳೆಪ್ಪಾಡಿ, ಹೊಸಮೂಲೆ ಗಣೇಶ ಭಟ್, ಪ್ರಫುಲ್ಲಚಂದ್ರ ನೆಲ್ಯಾಡಿ, ದೇವಿಪ್ರಸಾದ್ ಆಳ್ವ, ಪೂರ್ಣೇಶ ಅಚಾರ್ಯ, ಸುಬ್ರಾಯ ಹೊಳ್ಳ ಕಾಸರಗೋಡು, ಲವಕುಮಾರ ಐಲ ಮುಂತಾದವರು ಇವರ ಶಿಷ್ಯರು.

ಅಲ್ಲದೆ, ಹವ್ಯಾಸಿ ರಂಗದ ಯಕ್ಷಗಾನ ಪ್ರತಿಭೆಗಳಾದ ಜಿ.ಕೆ.ನಾವಡ ಬಾಯಾರು, ನಿಡುವಜೆ ಪುರುಷೋತ್ತಮ ಭಟ್, ನಿಡುವಜೆ ಶಂಕರ ಭಟ್, ಕೋಳ್ಯೂರು ಭಾಸ್ಕರ, ಸುಬ್ರಾಯ ಸಂಪಾಜೆ, ಕೃಷ್ಣರಾಜ ನಂದಳಿಕೆ, ವೇಣುಗೋಪಾಲ ಮಾಂಬಾಡಿ, ಅರ್ಜುನ ಕೊರ್ಡೇಲ್, ಕಾರ್ತಿಕ್ ಕೊರ್ಡೇಲ್, ಪ್ರಶಾಂತ ಶೆಟ್ಟಿ, ರಾಮಪ್ರಸಾದ್ ವಧ್ವ ಕೂಡ ಮಾಂಬಾಡಿಯವರಲ್ಲೇ ಶಿಷ್ಯತ್ವ ಪಡೆದವರು.

ಅತ್ಯಂತ ಸೊಗಸಾಗಿ, ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಮಾಡುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು 1949 ಮಾರ್ಚ್ 27ರಂದು ಮಾಂಬಾಡಿ ನಾರಾಯಣ ಭಟ್ - ಲಕ್ಷ್ಮೀ ಅಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲೊಬ್ಬರಾಗಿ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಮಾಂಬಾಡಿಯಲ್ಲಿ ಜನಿಸಿದರು. ಪತ್ನಿ ಶ್ರೀಮತಿ ಲಕ್ಷ್ಮೀ. ಮಕ್ಕಳಾದ ವೇಣುಗೋಪಾಲ್ ಮಾಂಬಾಡಿ ಮತ್ತು ನಾರಾಯಣ ಪ್ರಸನ್ನ ಮಾಂಬಾಡಿ - ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರರು. ವೇಣುಗೋಪಾಲ್ ಅವರು ಉತ್ತಮ ಹಿಮ್ಮೇಳವಾದಕರಾಗಿ ಹೆಸರು ಗಳಿಸಿದ್ದಾರೆ. ಮಾಂಬಾಡಿ ಗುರುಗಳಿಗೆ ಶ್ರೀ ಹರಿಲೀಲಾ ಪ್ರಶಸ್ತಿ -2024 ನೀಡಲು ಡಿಜಿ ಯಕ್ಷ ಫೌಂಡೇಶನ್ ಹೆಮ್ಮೆ ಪಡುತ್ತದೆ.

ಸಂದ ಪ್ರಶಸ್ತಿಗಳು

ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ದೆಹಲಿ ಕನ್ನಡ ಸಂಘ ಪ್ರಶಸ್ತಿ, ಕೀಲಾರು ಪ್ರತಿಷ್ಠಾನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ನೆಡ್ಲೆ ಪ್ರತಿಷ್ಠಾನ ಪ್ರಶಸ್ತಿ, ರಸಿಕ ರತ್ನ ಗೋಪಾಲಕೃಷ್ಣ ಜೋಶಿ ಪ್ರತಿಷ್ಠಾನ ಪ್ರಶಸ್ತಿ, ಹವ್ಯಾಸಿ ಬಳಗ ಕದ್ರಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಯಕ್ಷಗಾನ ಕೇಂದ್ರ , ಉಡುಪಿ, ಕೋಡಪದವು ವೀರಾಂಜನೇಯ ಪ್ರತಿಷ್ಠಾನ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಮಾಂಬಾಡಿ ಶಿಷ್ಯ ವೃಂದ ಮಂಗಳೂರು, ಮಾಂಬಾಡಿ ಶಿಷ್ಯ ಸಮಾವೇಶದ ಗುರುವಂದನೆ, ಕೋಳ್ಯೂರು ದೇವಸ್ಥಾನ, ಚಿಗುರುಪಾದೆ ಮುಂತಾದೆಡೆಗಳಲ್ಲಿ ಅವರಿಗೆ ಪುರಸ್ಕಾರಗಳು ಸಂದಿವೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

mysore-dasara_Entry_Point