Channapatna News: ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್‌ ಡಿಕೆ ಸುರೇಶ್‌ ಎದುರಾಳಿಗಳು, ಹೆಚ್ಚಿದ ಚರ್ಚೆ-ramanagar news channapatna bye election after hdk resign nikhil kumaraswamy and dk suresh may fight in election mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Channapatna News: ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್‌ ಡಿಕೆ ಸುರೇಶ್‌ ಎದುರಾಳಿಗಳು, ಹೆಚ್ಚಿದ ಚರ್ಚೆ

Channapatna News: ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್‌ ಡಿಕೆ ಸುರೇಶ್‌ ಎದುರಾಳಿಗಳು, ಹೆಚ್ಚಿದ ಚರ್ಚೆ

Karnataka Politics ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ( Channapatna assembly) ಡಿ.ಕೆ. ಸುರೇಶ್‌ ಮತ್ತು ನಿಖಿಲ್‌ ಕುಮಾರಸ್ವಾಮಿ ಎದುರಾಳಿಗಳಾಗುತ್ತಾರಾ?. ಇದು ನಿಜವೇ ಆದಲ್ಲಿ ರಣರೋಚಕವಾಗಲಿದೆ ಈ ಚುನಾವಣೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಚನ್ನಪಟ್ಟಣ ಉಪ ಚುನಾವಣೆ ಮುಂದೆ ನಡೆದರೆ ಡಿಕೆ ಸುರೇಶ್‌ ಹಾಗೂ ನಿಖಿಲ್‌ ಕುಮಾರ ಸ್ವಾಮಿ ನಡುವೆ ಸ್ಪರ್ಧೆ ಏರ್ಪಡಬಹುದು.
ಚನ್ನಪಟ್ಟಣ ಉಪ ಚುನಾವಣೆ ಮುಂದೆ ನಡೆದರೆ ಡಿಕೆ ಸುರೇಶ್‌ ಹಾಗೂ ನಿಖಿಲ್‌ ಕುಮಾರ ಸ್ವಾಮಿ ನಡುವೆ ಸ್ಪರ್ಧೆ ಏರ್ಪಡಬಹುದು.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದ ಡಿ.ಕೆ. ಸುರೇಶ್‌ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ವದಂತಿಗಳು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ನಿವಾಸದ ಪಡಸಾಲೆಯಿಂದ ಹೊರಬಿದ್ದಿದೆ. ಜೆಡಿಎಸ್‌ ವರಿಷ್ಠ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದು, ದೆಹಲಿಗೆ ಹೋಗುವುದು ಖಚಿತವಾಗಿದೆ. ಅವರು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದು, ಮುಂದಿನ 6 ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಕ್ಷೇತ್ರದಲ್ಲಿ ಡಿಸಿಎಂ ಶಿವಕುಮಾರ್‌ ತಮ್ಮ ಸಹೋದರ ಸುರೇಶ್‌ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸಿ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಬೆಂಗಳೂರಿನ ಸದಾಶಿವನಗರದ ಅವರ ನಿವಾಸದಿಂದ ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ.

ಮುಂದಿನ ಪ್ರಶ್ನೆ ಚನ್ನಪಟ್ಟಣದಿಂದ ಜೆಡಿಎಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಈಗಾಗಲೇ ನಿಖಿಲ್‌ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿ ಮಾಡಲು ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಪುತ್ರನ ಭವಿಷ್ಯವನ್ನು ರೂಪಿಸಲು ಇದು ಉತ್ತಮ ಅವಕಾಶ ಎಂದು ಕುಮಾರಸ್ವಾಮಿ ದಂಪತಿಗಳು ಚಿಂತನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು ಖಚಿತವಾಗಿತ್ತು. ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದಲೇ ಚನ್ನಪಟ್ಟಣಕ್ಕೆ ಉತ್ತರಾಧಿಕಾರಿ ಎಂಬ ಸಾಧಕ ಭಾದಕಗಳನ್ನು ಕುರಿತು ಕುಟುಂಬದೊಳಗೆ ಚರ್ಚೆ ನಡೆಯುತ್ತಿತ್ತು. ಒಂದು ಹಂತದಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನೇ ಅಭ್ಯರ್ಥಿ ಮಾಡಲು ನಿರ್ಧರಿಸಿದ್ದರಾದರೂ ಅವರು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ಮಗನ ಭವಿಷ್ಯ ರೂಪಿಸಲು ಈ ತೀರ್ಮಾನ ಕೈಗೊಂಡಿದ್ದಾರೆ.

6 ತಿಂಗಳೊಳಗೆ ಚುನಾವಣೆ ನಡೆಯುವುದು ಶತಃಸಿದ್ದ. ಪರಸ್ಪರ ಎದುರಾಳಿಗಳು ಘಟನಾನುಘಟಿಗಳೇ ಆಗಿದ್ದು ಸಿದ್ದತೆ ಆರಂಭಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೆ ಸಿದ್ದತೆ ನಡೆಸಿದರೂ ಮಣ್ಣು ಮುಕ್ಕುವ ಸಾಧ್ಯತೆಗಳಿರುತ್ತವೆ. ಈಗಷ್ಟೇ ಮುಗಿದ ಚುನಾವಣೆಯಲ್ಲಿ ಸುರೇಶ್‌ ಸೇರಿದಂತೆ ಅನೇಕ ಅಭ್ಯರ್ಥಿಗಳು ಒಂದೆರಡು ವರ್ಷಗಳಿಂದ ತಯಾರಿ ನಡೆಸಿ ಸೋಲು ಕಂಡಿರುವ ಉದಾಹರಣೆಗಳಿವೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಗ್ರಾಮಾಂತರದ ಸೋಲಿನ ಸೇಡನ್ನು ತೀರಿಸಿಕೊಳ್ಳಬಹುದು. ಎರಡನೆಯದಾಗಿ ಸಕ್ರಿಯ ರಾಜಕಾರಣದಲ್ಲಿ ಉಳಿದುಕೊಳ್ಳಬಹುದು ಮತ್ತು ಮೂರನೆಯದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಿಡಿತವನ್ನು ಮುಂದುವರೆಸಬಹುದು ಎನ್ನುವುದು ಡಿಕೆ ಸಹೋದರರ ಲೆಕ್ಕಾಚಾರವಾಗಿದೆ.

ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲು ಮಾಜಿ ಶಾಸಕ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌ ಆಸಕ್ತಿ ಹೊಂದಿದ್ದರಾದರೂ ಬಿಜೆಪಿಗೆ ಜೆಡಿಎಸ್‌ ಈ ಸ್ಥಾನವನ್ನು ಬಿಟ್ಟುಕೊಡುವ ಸಾಧ್ಯತೆಗಳಿಲ್ಲ. ಈ ಕ್ಷೇತ್ರ ಜೆಡಿಎಸ್‌ ನದ್ದಾಗಿದ್ದು, ಮಿತ್ರ ಪಕ್ಷಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಟ್ಟುಕೊಟ್ಟರೆ ವಿಧಾನಸಭೆಯಲ್ಲಿ ಪಕ್ಷದ ಬಲ ಕುಸಿಯುತ್ತದೆ. ಮೇಲಾಗಿ ಕ್ಷೇತ್ರದ ಮೇಲೆ ಹಿಡಿತ ಸಡಿಲವಾಗುತ್ತದೆ ಎನ್ನುವುದು ಜೆಡಿಎಸ್‌ ಮುಖಂಡರ ಲೆಕ್ಕಾಚಾರ.

ಈ ಸುದ್ದಿಯನ್ನು ಊಹಾಪೋಹ ಎನ್ನಲಾಗುವುದಿಲ್ಲ. ಬೆಂಗಳೂರು ಗ್ರಾಮಾಂತರದಲ್ಲಿ ಶಿವಕುಮಾರ್‌ ಅವರ ಹಿಡಿತವಿದ್ದು ಅಭ್ಯರ್ಥಿ ಆಯ್ಕೆಯಲ್ಲಿ ಅವರದ್ದೇ ಮೇಲುಗೈ ಆಗಲಿದೆ.

ಒಂದು ವೇಳೆ ನಿಖಿಲ್‌ ಕಣಕ್ಕಿಳಿದರೆ ಡಿ.ಕೆ. ಸುರೇಶ್‌ ಅವರೇ ಸಮರ್ಥ ಆಯ್ಕೆಯಾಗಲೂಬಹುದು. ಹಾಗೆಯೇ ಸುರೇಶ್‌ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಜೆಡಿಎಸ್‌ ನಿಂದ ಇತರರೂ ಅವರ ಎದುರಾಳಿಯಾಗಲು ಹಿಂದೇಟು ಹಾಕಬಹುದು. ಆಗ ಸಹಜವಾಗಿಯೇ ನಿಖಿಲ್‌ ಸ್ವಾಭಾವಿಕ ಆಯ್ಕೆಯಾಗುತ್ತಾರೆ. ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎನ್ನುವುದು ಮುಖ್ಯವಲ್ಲ. ಆದರೆ ಹೋರಾಟ ಮಾತ್ರ ಕುತೂಹಲಕಾರಿಯಾಗಿರುತ್ತದೆ.

ಈ ಹಿಂದೆ ಸಿದ್ದರಾಮಯ್ಯ ರಾಜೀನಾಮೆ ನೀಡಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ. ಸಿದ್ದರಾಮಯ್ಯ ಅವರ ನಿಕಟವರ್ತಿಯನ್ನೇ ಕರೆತಂದು ಜೆಡಿಎಸ್‌ ನಿಂದ ಅಭ್ಯರ್ಥಿ ಮಾಡಿದ್ದರೂ ಕಡಿಮೆ ಅಂತರದಿಂದ ಸೋಲು ಕಂಡಿದ್ದರು. ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ ಹರಿಸಿದ್ದ ಬೆವರು ಅಷ್ಟಿಷ್ಟಲ್ಲ.‌ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಇಡೀ ಸಚಿವ ಸಂಪುಟ ಮೈಸೂರಿನಲ್ಲಿ ಬೀಡುಬಿಟ್ಟಿತ್ತು. ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಈ ಕ್ಷೇತ್ರ ಗಮನ ಸೆಳೆದಿತ್ತು. ಇದೀಗ ಅಂತಹುದೇ ಮತ್ತೊಂದು ಸನ್ನಿವೇಶವನ್ನು ಚನ್ನಪಟ್ಟಣದಲ್ಲಿ ಕಾಣುವ ಸಾಧ್ಯತೆಗಳು ನಿಚ್ಚಳವಾಗಿವೆ.

(ವರದಿ: ಎಚ್.ಮಾರುತಿ. ಬೆಂಗಳೂರು)

mysore-dasara_Entry_Point