Kalburgi News: ಗಾಣಗಾಪುರದಲ್ಲಿ ಭಕ್ತರ ಮೇಲೆ ರೌಡಿ ಅಟಾಟೋಪ: ತಲೆ ಮೇಲೆ ಕಾಲಿಟ್ಟವ ಪೊಲೀಸ್ ವಶಕ್ಕೆ
ಯಲ್ಲಪ್ಪ ಈ ಹಿಂದೆಯೂ ಭಕ್ತರಿಗೆ ಕಿರುಕುಳ ನೀಡಿದ್ದು, ಆತನ ವಿರುದ್ದ ಈಗಾಗಲೇ ನಲವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗದ ಬಗ್ಗೆ ಗಾಣಗಾಪುರ ಪೊಲೀಸರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಭಕ್ತರ ಮೇಲೆ ಕಾಲು ಇಟ್ಟು ಕಿರುಕುಳ ನೀಡುವ ರೌಡಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನ ಸಮೀಪದ ಧಾರ್ಮಿಕ ತಾಣದಲ್ಲಿ ರೌಡಿಯೊಬ್ಬ ಭಕ್ತರಿಗೆ ಕಾಲಿನಿಂದ ಒದ್ದು, ಅವಾಚ್ಯ ಪದಗಳಿಂದ ನಿಂದಿಸಿರುವ ಪ್ರಕರಣ ನಡೆದಿದ್ದು. ರೌಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ದೇವಸ್ಥಾನದ ಸಮೀಪದ ಔದುಂಬರ ವೃಕ್ಷದ ಕೆಳಗೆ ಭಕ್ತರು ದತ್ತ ಚರಿತ್ರೆಯ ಪಾರಾಯಣದಲ್ಲಿ ತೊಡಗಿದ್ದರು. ಅದೇ ಸಮಯದಲ್ಲಿ ಇಲ್ಲಿಗೆ ಬಂದ ಗಾಣಗಾಪುರದ ನಿವಾಸಿ ರೌಡಿಶೀಟರ್ ಯಲ್ಲಪ್ಪ ಶಿವಪ್ಪ ಕಲ್ಲೂರ್ ಎಂಬಾತ ಭಕ್ತರ ತಲೆ ಮೇಲೆ ಕಾಲಿಟ್ಟಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ, ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ದೃಶ್ಯಗಳನ್ನು ಸ್ಥಳೀಯರು ಚಿತ್ರಿಸಿದ್ದು ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಯಲ್ಲಪ್ಪ ಹಿಂದಿನಿಂದಲೂ ಭಕ್ತರಿಗೆ ಕಿರುಕುಳ ನೀಡುತ್ತಿದ್ದು, ಆತನ ವಿರುದ್ದ ಈಗಾಗಲೇ ನಲವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗದ ಬಗ್ಗೆ ಗಾಣಗಾಪುರ ಪೊಲೀಸರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 27ರ ರಾತ್ರಿ ಮದ್ಯ ಸೇವಿದಿದ್ದ ಯಲ್ಲಪ್ಪ, ಆಂಧ್ರಪ್ರದೇಶದಿಂದ ಬಂದಿದ್ದ ಭಕ್ತರ ಜತೆಗೆ ವಾಗ್ವಾದ ನಡೆಸಿದ್ದ. ಆ ನಂತರ ಅಲ್ಲಿಯೇ ಮಲಗಿದ್ದ ಅರ್ಚಕರನ್ನು ಎಬ್ಬಿಸಿ ಅವರಿಗೂ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅರ್ಚಕರ ತಲೆಯ ಮೇಲೆ ಕಾಲಿಟ್ಟು ವಿಕೃತಿ ಮೆರೆದಿದ್ದ ವಿಡಿಯೊ ಹರಿದಾಡಿತ್ತು.ಈಗ ಮತ್ತೊಂದು ಪ್ರಕರಣ ನಡೆದಿದೆ.
ಯಲ್ಲಪ್ಪನ ವಿರುದ್ದ ದೂರು ಬಂದಿದ್ದು, ಕಠಿಣ ಕ್ರಮ ಕೈಗೊಂಡು ಮುಂದೆ ಹೀಗೆ ಮಾಡದಂಗೆ ಎಚ್ಚರಿಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಭಾಗ