Dakshina Pinakini river: ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ನ್ಯಾಯಾಧೀಕರಣ ರಚನೆಯು ರಾಜ್ಯಕ್ಕೆ ಮರಣಶಾಸನ- ಹೆಚ್‌ಡಿಕೆ ಸರಣಿ ಟ್ವೀಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Dakshina Pinakini River: ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ನ್ಯಾಯಾಧೀಕರಣ ರಚನೆಯು ರಾಜ್ಯಕ್ಕೆ ಮರಣಶಾಸನ- ಹೆಚ್‌ಡಿಕೆ ಸರಣಿ ಟ್ವೀಟ್‌

Dakshina Pinakini river: ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ನ್ಯಾಯಾಧೀಕರಣ ರಚನೆಯು ರಾಜ್ಯಕ್ಕೆ ಮರಣಶಾಸನ- ಹೆಚ್‌ಡಿಕೆ ಸರಣಿ ಟ್ವೀಟ್‌

ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರಕಾರದ ನಿರ್ಧಾರ ಅಕ್ಷಶಃ ರಾಜ್ಯದ ಪಾಲಿಗೆ ಮರಣಶಾಸನ. ಇದನ್ನು ರಾಜ್ಯ ಸರಕಾರ ಮುಲಾಜಿಲ್ಲದೆ ವಿರೋಧಿಸಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿದ್ದಾರೆ.

ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (ಫೋಟೋ-File)
ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (ಫೋಟೋ-File)

ಬೆಂಗಳೂರು: ಪೆನ್ನಾರ್‌ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಕರ್ನಾಟಕ ಮತ್ತು ತಮಿಳುನಾಡಿನ ವಿವಾದವನ್ನು ಸಂಧಾನ ಮೂಲಕ ಬಗೆಹರಿಸಲು ವಿಳಂಬ ಮಾಡುತ್ತಿದ್ದ ಕೇಂದ್ರ ಸರಕಾರವನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಇದೀಗ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ನ್ಯಾಯಾಧೀಕರಣ ರಚಿಸಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ನೀರಾವರಿ ಹಿತಾಸಕ್ತಿಗಳ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.

ಹೆಚ್‌ಡಿಕೆ ಏನಂದ್ರು?

"ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಪಾಲಿಗೆ ಮಾರಕ ಎನ್ನುವುದು ಪದೇಪದೆ ರುಜುವಾತಾಗುತ್ತಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಅವು ಕನ್ನಡಿಗರನ್ನು ಕಾಡುತ್ತಲೇ ಇವೆ. ಈಗ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರಿನ ವಿಷಯದಲ್ಲಿ ಕೇಂದ್ರ ಬಿಜೆಪಿ ಸರಕಾರ ಕನ್ನಡಿಗರ ಹಕ್ಕು ಕಸಿದು ಕಿರುಕುಳ ನೀಡಲು ಹೊರಟಿದೆʼʼ ಎಂದು ಹೆಚ್‌ಡಿ ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿದ್ದಾರೆ.

"ಕಾವೇರಿ ವಿವಾದದಲ್ಲಿ ಕರ್ನಾಟಕವು ಒಂದು ಶತಮಾನ ಕಾಲ ಸಂಘರ್ಷ ನಡೆಸಿದ್ದಾಯಿತು. ಮೇಕೆದಾಟು ವಿವಾದಕ್ಕೆ ಶ್ರೀ ನರೇಂದ್ರ ಮೋದಿ ಸರಕಾರ ಇನ್ನೂ ತುಪ್ಪ ಸುರಿಯುತ್ತಾ, ಆ ಯೋಜನೆಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿದೆ. ಆಗಲೇ, ಪಿನಾಕಿನಿ ನದಿ ವಿಷಯದಲ್ಲಿ ರಾಜ್ಯಕ್ಕೆ ಕಾನೂನು ಕುಣಿಕೆ ಬಿಗಿಯಲು ಬಿಜೆಪಿ ಸರಕಾರ ಹುನ್ನಾರ ನಡೆಸಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ರಾಜಕೀಯ ಕಾರಣಕ್ಕಾಗಿ ದಕ್ಷಿಣ ಪಿನಾಕಿನಿ ನದಿ ನೀರಿನ ಹಕ್ಕನ್ನು ಕರ್ನಾಟಕದಿಂದ ಕಸಿಯಲು ಕೇಂದ್ರ ಹವಣಿಸುತ್ತಿದೆ. ಕಾವೇರಿ, ಕೃಷ್ಣಾ, ಮಹದಾಯಿ ಸೇರಿ ವಿವಿಧ ಜಲ ವಿವಾದಗಳಲ್ಲಿ ಕರ್ನಾಟಕವನ್ನು ಕಾಡಿದಂತೆ, ವಿವಾದವೇ ಅಲ್ಲದ ದಕ್ಷಿಣ ಪಿನಾಕಿನಿಯನ್ನೂ ವಿವಾದದ ಕೂಪಕ್ಕೆ ತಳ್ಳಿ ಕನ್ನಡಿಗರನ್ನು ಕಾಡುವ ಹವಣಿಕೆ ಇದಷ್ಟೇʼʼ ಎಂದು ಅವರು ಹೇಳಿದ್ದಾರೆ.

" ದಕ್ಷಿಣ ಪಿನಾಕಿನಿ ನದಿ ನೀರಿನ ವಿಷಯಕ್ಕೆ ಹೊಸ ನ್ಯಾಯಾಧಿಕರಣ ರಚನೆ ಮಾಡುವ ಕೇಂದ್ರ ಬಿಜೆಪಿ ಸರಕಾರದ ನಿರ್ಧಾರ ಅಕ್ಷಶಃ ರಾಜ್ಯದ ಪಾಲಿಗೆ ಮರಣಶಾಸನ. ಇದನ್ನು ರಾಜ್ಯ

ಸರಕಾರ ಮುಲಾಜಿಲ್ಲದೆ ವಿರೋಧಿಸಬೇಕುʼʼ ಎಂದು ಅವರು ಸಲಹೆ ನೀಡಿದ್ದಾರೆ.

"ರಾಜಕೀಯ ಲಾಭದ ಉದ್ದೇಶಕ್ಕಾಗಿ ಬಿಜೆಪಿ ಸರಕಾರವು ನೆಲ, ಜಲ, ಭಾಷೆಯಂಥ ವಿಷಯಗಳನ್ನು ಇಟ್ಟುಕೊಂಡು ದಕ್ಷಿಣದ ನಡುವೆ ಜಗಳ ಹಚ್ಚಲು ಷಡ್ಯಂತ್ರ ನಡೆಸಿದೆ. ರಾಜ್ಯದ ವಿರೋಧವಿದ್ದರೂ ಕೇಂದ್ರವು ನ್ಯಾಯಾಧಿಕರಣ ರಚನೆ ಮಾಡಲು ಹೊರಟಿದೆ. ಇದು ಸರಿಯಲ್ಲ. ಕನ್ನಡಿಗರನ್ನು ಮತ್ತೊಮ್ಮೆ ʼಜಲದಾಸ್ಯʼಕ್ಕೆ ದೂಡುವುದನ್ನು ನಾವು ಸಹಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲೂ ಕೇಂದ್ರವು ರಾಜ್ಯಕ್ಕೆ ಸೊನ್ನೆ ಸುತ್ತಿದೆ. 2022 ಫೆ.18ರಂದು ಸಭೆ ನಡೆಸಿದ ಕೇಂದ್ರವು, ಗೋದಾವರಿಯಿಂದ 247 ಟಿಎಂಸಿ ನೀರನ್ನು ಕೃಷ್ಣಾ, ಪೆನ್ನಾರ್‌ ಮೂಲಕ ಕಾವೇರಿಗೆ ಹರಿಸುವ ಯೋಜನೆಯ ಮಾಹಿತಿ ನೀಡಿತು. ಇಷ್ಟೂ ನೀರನ್ನು ತೆಲಂಗಾಣ, ಆಂಧ್ರ, ತಮಿಳುನಾಡಿಗೆ ಮಾತ್ರ ಹಂಚಿತು" ಎಂದು ಅವರು ಹೇಳಿದ್ದಾರೆ.

"ಈ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕ ಪ್ರಮುಖ ಪಾಲುದಾರ & ಹಕ್ಕುದಾರ ರಾಜ್ಯ. ಆದರೆ, 247 ಟಿಎಂಸಿಯಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಶೂನ್ಯ!! ಆ ಸಭೆಯಲ್ಲಿ ರಾಜ್ಯಕ್ಕೆ ಅಪಮಾನ ಮಾಡಲಾಯಿತು ಎಂಬ ಮಾಹಿತಿಯೂ ಬಂದಿತ್ತು. ಗೋದಾವರಿ-ಕೃಷ್ಣಾ-ಪಿನಾಕಿನಿ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಹನಿ ನೀರನ್ನೂ ಹಂಚಿಕೆ ಮಾಡಿಲ್ಲ ಎಂದರೆ, ಕೇಂದ್ರ ಸರಕಾರಕ್ಕೆ ಕರ್ನಾಟಕದ ಮೇಲೆ ಅದೆಷ್ಟು ನಿರ್ಲಕ್ಷ್ಯ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದುʼʼ ಎಂದು ಹೆಚ್‌ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

"ಕನ್ನಡಿಗರು ತಬ್ಬಲಿಗಳಾಗುತ್ತಿದ್ದಾರೆ" ಎಂದು ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರು ಸಂಸತ್ತಿನಲ್ಲಿ ಅಲವತ್ತುಕೊಂಡರೂ ಕೇಂದ್ರವು ಕನ್ನಡಿಗರ ಮೇಲೆ ಕಠಿಣ ನೀತಿ ಮುಂದುವರಿಸಿದೆ.

ದಕ್ಷಿಣ ಪಿನಾಕಿನಿ ವಿಷಯದಲ್ಲಿ ನ್ಯಾಯಾಧೀಕರಣ ರಚನೆ ಒಪ್ಪುವುದಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ದಕ್ಷಿಣ ರಾಜ್ಯಗಳನ್ನು ಒಡೆದಾಳುವ ಬಿಜೆಪಿಯ ಕುತ್ಸಿತ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ನೀರಾವರಿ ಹಿತಾಸಕ್ತಿಗಳ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲʼʼ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

Whats_app_banner