ನಿಮ್ಮ ಮನೆ ಗೋಡೆಗೂ ಬರಲಿ ಕಾಡಿನ ವೈಭವ ಸಾರುವ ಬನದ ಬದುಕು: ವನ್ಯಲೋಕದ ಪಿಸುಮಾತುಗಳಿಗೆ ಲೋಕೇಶ್ ಮೊಸಳೆ ಕ್ಯಾಮೆರಾ ಸಾಕ್ಷಿ -ಕಾಡಿನ ಕಥೆಗಳು
ಕುಂದೂರು ಉಮೇಶ ಭಟ್ಟ: ಕಾಡಿನ ಅವಿಸ್ಮರಣೀಯ ಕ್ಷಣಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಕಷ್ಟ. ಅದನ್ನು ವಿಭಿನ್ನವಾಗಿ ದಾಖಲಿಸಿ ವರ್ಷವಿಡೀ ಕಣ್ಣ ಮುಂದೆಯೇ ನೆನಪು ಮಾಡಿಕೊಂಡು ಪುಳಕಿತವಾಗುವಂತೆ ಮಾಡುವುದು ಬಲು ಬದ್ದತೆ ಬೇಡುವ ಕಾರ್ಯ. ಮೈಸೂರಿನ ಲೋಕೇಶ್ ಮೊಸಳೆ ಈ ಪ್ರಯತ್ವನ್ನು ವಿಭಿನ್ನ ಕ್ಯಾಲೆಂಡರ್ ಮೂಲಕ ಎರಡು ದಶಕದಿಂದ ಮಾಡುತ್ತಿದ್ದಾರೆ.
ಇವರ ಹೆಸರು ಡಾ ಲೋಕೇಶ್ ಮೊಸಳೆ. ಕರ್ನಾಟಕದ ಛಾಯಾಗ್ರಹಣದಲ್ಲಿ ಪ್ರಮುಖ ಹೆಸರು. ವನ್ಯಜೀವಿ ಛಾಯಾಗ್ರಹಣ, ಸಾಕ್ಷ್ಯಚಿತ್ರಗಳ ನಿರ್ಮಾಣದಲ್ಲೂ ಗುರುತಿಸಿಕೊಂಡಿರುವವರು ಇವರು. ಈ ಹೆಸರಿನ ಕೊನೆ ಭಾಗದಲ್ಲಿರುವ ಮೊಸಳೆ ಎಂದರೆ ಏನು ಎನ್ನುವ ಕುತೂಹಲ ಮೊದಲ ಬಾರಿಗೆ ಕೇಳಿದವರಿಗೆ ಇದ್ದೇ ಇರುತ್ತದೆ. ವನ್ಯಜೀವಿ ಛಾಯಾಗ್ರಾಹಕರಾಗಿ ಮೂರು ದಶಕದಲ್ಲಿ ಕಾಡು, ಊರು, ಕೇರಿಗಳನ್ನು ಸುತ್ತುತ್ತಾ ನಿರಂತರವಾಗಿ ಕೆಲಸ ಮಾಡುತ್ತಿರುವ ಅವರು ಅದೇ ಪ್ರೀತಿಯಿಂದ ಮೊಸಳೆ ಇಟ್ಟುಕೊಂಡಿದ್ದೀರಾ ಎಂದು ಕೇಳಬಹುದು. ಅವರ ಊರು ಹಾಸನ ತಾಲ್ಲೂಕಿನ ಮೊಸಳೆ ಹೊಸಹಳ್ಳಿ. ಇದು ಅವರ ಹೆಸರಿನೊಂದಿಗೆ ಸೇರಿಕೊಂಡು ಜನಜನಿತವೂ ಆಗಿದೆ.
ಮೈಸೂರಿನಲ್ಲಿಯೇ ಶಿಕ್ಷಣ ಪಡೆಯಲೆಂದು ಬಂದು ಮೂರು ದಶಕದಿಂದ ಮೈಸೂರಿಗರೇ ಆಗಿ ಹೋಗಿರುವ ಲೋಕೇಶ್ ಮೊಸಳೆ ಅವರು ಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಮೊದಲು ಪತ್ರಕರ್ತರಾಗಿ, ಉಪನ್ಯಾಸಕರಾಗಿ, ಚಳವಳಿಗಳಲ್ಲಿ ಭಾಗಿಯಾಗುತ್ತಲೇ ಛಾಯಾಗ್ರಹಣವನ್ನು ಪ್ರಮುಖ ಹವ್ಯಾಸವಾಗಿ ರೂಢಿಸಿಕೊಂಡವರು. ಕ್ಯಾಮೆರಾ ಹಿಡಿದು ಮೊಸಳೆ ಹೊರಟರೆ ಏನಾದರೂ ‘ಬೇಟೆಯಾಡಿ’ ಬರುತ್ತಾರೆ. ‘ಲೊಕೇಶ್ ಮೊಸಳೆ ಬಂದರು ಅಂದರೆ, ವನ್ಯಜೀವಿ ಲೋಕದ ಅದ್ಭುತ ಛಾಯಾಚಿತ್ರ ತಂದರು’ ಎನ್ನುವಷ್ಟರ ಮಟ್ಟಿಗೂ ಬೆಳೆದಿದೆ.
ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯ ದಿನಗಳಲ್ಲಿ ಪತ್ರಕರ್ತರಾಗಿ ರೂಪುಗೊಳ್ಳಬೇಕು ಎಂದು ಬಂದ ಮೊಸಳೆ ಅವರ ಚಿತ್ತ ಹರಿದಿದ್ದು ಛಾಯಾಗ್ರಹಣ ಕಡೆಗೆ. ಏನಾದರೂ ಕಲಿಯಬೇಕು ಎಂಬ ಹಂಬಲದೊಂದಿಗೆ ಕಾಡು ಮೇಡು ಸುತ್ತುತ್ತಾ ಸಹಸ್ರಾರು ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಮೊಸಳೆ. ಈಗಲೂ ಕರ್ನಾಟಕ ಮಾತ್ರವಲ್ಲದೇ ಭಾರತದ ಪ್ರಮುಖ ಹುಲಿಧಾಮ ಸಹಿತ ಅರಣ್ಯ ಪ್ರದೇಶಗಳಿಗೆ ಸುತ್ತು ಹಾಕುತ್ತಲೇ ವನ್ಯಲೋಕದ ಭಿನ್ನ ಅನುಭವಗಳನ್ನು ಸೆರೆ ಹಿಡಿದು ಆತ್ಮೀಯರಿಗೆ ಉಣ ಬಡಿಸುತ್ತಾರೆ. ಅದರಲ್ಲೂ ಕಾಡಿಗೆ ಹೋದವರು ನೋಡಲಬೇಕು ಎಂದು ಹಂಬಲಿಸುವ ಹುಲಿಯನ್ನು ಯಾವ ರೂಪದಲ್ಲಿ ನೀವು ನೋಡಬೇಕು ಎಂದು ನಿಮ್ಮ ಮನಸ್ಸು ಬಯಸಬಹುದೋ ಅಂಥ ಎಲ್ಲ ರೂಪಗಳಲ್ಲಿಯೂ ಹುಲಿಯು ಲೋಕೇಶ್ ಮೊಸಳೆ ಅವರಿಗೆ ದರ್ಶನ ನೀಡಿದೆ. ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಹಸ್ರಾರು ಅನುಭವಗಳ ಗಟ್ಟಿತನ
ಹುಲಿಯ ಸ್ವಚ್ಛಂದ ನಡೆ, ವಿರಾಮ, ಓಟ, ಬೇಟೆ, ಜಲ ಕ್ರೀಡೆ ಸಹಿತ ಭಿನ್ನ ನೋಟದ ನೂರಾರು ಛಾಯಾಚಿತ್ರಗಳು ಅವರ ಸಂಗ್ರಹದಲ್ಲಿವೆ. ಹುಲಿ ಮಾತ್ರವಲ್ಲದೇ ಚಿರತೆ, ಆನೆ, ಕಾಡೆಮ್ಮೆ, ಕಡವೆ, ಕೃಷ್ಣಮೃಗ, ಸೀಳುನಾಯಿ, ಜಿಂಕೆಗಳ ಸಹಿತ ಹಲವು ಬಗೆಯ ವನ್ಯಜೀವಿಗಳ ಲೋಕವೇ ಅವರ ಕ್ಯಾಮರಾಕ್ಕೆ ಸಿಕ್ಕಿದೆ.
ಹಿಮಾಲಯ, ಈಶಾನ್ಯ ರಾಜ್ಯಗಳು, ಮಹಾರಾಷ್ಟ್ರ, ತಮಿಳುನಾಡು, ಕಾಶ್ಮೀರ ಸಹಿತ ಹಲವು ಭಾಗಗಳಲ್ಲಿನ ವನ್ಯಜೀವಿಗಳ ಚಿತ್ರ ತೆಗೆದಿದ್ದಾರೆ ಮೊಸಳೆ. ಈ ಬಾರಿ ಇಂತಹದೊದ್ದು ಕಾಡಿಗೆ ಹೋಗೋಣ ಎಂದು ಯಾರಾದರೂ ಸ್ನೇಹಿತರು ಫೋನಾಯಿಸಿದರೆ ಮೊಸಳೆ ಅವರು ಕ್ಯಾಮರಾ ಬ್ಯಾಗು ಹಾಕಿಕೊಂಡು ಅಣಿಯಾಗುತ್ತಾರೆ. ವಾರಗಟ್ಟಲೇ ಅಲ್ಲಿಯೇ ಇದ್ದು ಸ್ನೇಹಿತರ ಸಂಗದಲ್ಲಿ ಚಿತ್ರಗಳನ್ನು ತೆಗೆಯುತ್ತಾರೆ. ಎರಡು ದಶಕಕ್ಕೂ ಮಿಗಿಲಾದ ಛಾಯಾಚಿತ್ರಲೋಕದ ಪಯಣದಲ್ಲಿ ವನ್ಯಲೋಕದ ಸಹಸ್ರಾರು ನೈಜ ಅನುಭವಗಳೇ ಅವರ ವರ್ಣಮಯ ಬದುಕಿನ ಗಟ್ಟಿತನ. ಇದಕ್ಕೆಲ್ಲಾ ಪೂರ್ಣಚಂದ್ರ ತೇಜಸ್ವಿ ಸಹಿತ ಹಲವರ ಪ್ರೇರಣೆಯೂ ಇದೆ.
ಛಾಯಾಗ್ರಹಣ ಕ್ಷೇತ್ರಕ್ಕೆ ಹೊಸ ರೂಪಕೊಟ್ಟ ಬನದ ಬದುಕು
ಲೋಕೇಶ್ ಮೊಸಳೆ ಅವರ ಛಾಯಾಗ್ರಹಣ ಹವ್ಯಾಸ ಇಷ್ಟಕ್ಕೇ ನಿಲ್ಲುವುದಿಲ್ಲ. ಹಕ್ಕಿಗಳ ಬಗ್ಗೆ ನಿಮಗೆ ಆಸಕ್ತಿಯಿಲ್ಲವಾ ಎಂದು ಕೇಳಿ ನೋಡಿ. ಸಾವಿರಕ್ಕೂ ಬಗೆಯ ಹಕ್ಕಿಗಳನ್ನು ಚಿತ್ರೀಕರಿಸಿದ್ಧಾರೆ ಮೊಸಳೆ. ಆ ಹಕ್ಕಿಗಳ ವೈಭೋಗ, ವೈಭವದ ಲೋಕವನ್ನೂ ಹತ್ತಿರದಿಂದ ನೋಡಿ ತೀರಬೇಕು. ಅಷ್ಟರಮಟ್ಟಿಗೆ ಹಕ್ಕಿಗಳ ಚಿತ್ರ ಸಂಪುಟವೇ ಅವರಲ್ಲಿದೆ. ಪ್ರಾಣಿ, ಹಕ್ಕಿಗಳೊಂದಿಗೆ ಪ್ರಕೃತಿಯೂ ಅವರ ಇಷ್ಟ. ಬೀದಿಬದಿಯ ಹೂವು, ಸಸ್ಯ ಲೋಕವನ್ನೂ ಸೆರೆ ಹಿಡಿಯುತ್ತಾರೆ. ಅವುಗಳ ಕುರಿತು ನಿಖರ ಮಾಹಿತಿಯನ್ನು ಕಲೆ ಹಾಕಿ ಲೇಖನಗಳನ್ನು ಬರೆಯುತ್ತಾರೆ.
ಇವೆಲ್ಲವನ್ನೂ ಕರ್ನಾಟಕದ ಮಾತ್ರವಲ್ಲದೇ ಭಾರತದ ವನ್ಯಜೀವಿ ಛಾಯಾಗ್ರಾಹಕರು ಮಾಡಿಯೇ ತೀರುತ್ತಾರೆ. ಇದರಲ್ಲಿ ಹೊಸದೇನಿದೆ ಎಂದು ನೀವು ಕೇಳಿ ಬಿಡಬಹುದು. ಇಲ್ಲಿಯೇ ಇರುವುದು ವಿಶೇಷ. ಈ ಕಾಡು, ಪಕ್ಷಿಲೋಕ, ಪ್ರಕೃತಿಯ ಮಡಿಲಿನ ಕ್ಷಣಗಳನ್ನು ವರ್ಷವಿಡೀ ಕಣ್ಣೆದುರಿಗೆ ಸವಿಯುತ್ತಾ ಮನೆಯವರು, ಕಚೇರಿಯವರು ಒಮ್ಮೆ ನೋಡಿದಾಗ ಒಂದಿಷ್ಟು ಉತ್ತೇಜನ ತುಂಬಬಲ್ಲ ಕೆಲಸವನ್ನು ಮೊಸಳೆ ಮಾಡುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರು ಎರಡು ದಶಕದಿಂದ ‘ಬನದ ಬದುಕು’ ಎನ್ನುವ ಹೆಸರಿನಲ್ಲಿ ಗೋಡೆ, ಟೇಬಲ್ ಕ್ಯಾಲೆಂಡರ್‌ಗಳನ್ನು ರೂಪಿಸುತ್ತಾರೆ, ಗ್ರೀಟಿಂಗ್ ಕಾರ್ಡ್‌ಗಳನ್ನು ಛಾಪಿಸುತ್ತಾರೆ. ಅವುಗಳಿಗೆ ಕವಿಗಳ ಸಾಲುಗಳನ್ನು ಜೋಡಿಸಿ ಇಡೀ ಕ್ಯಾಲೆಂಡರ್‌ಗೆ ಭಿನ್ನ ಸ್ವರೂಪ ಕೊಡುತ್ತಾರೆ. ಪ್ರತಿ ವರ್ಷ ಒಂದಿಲ್ಲೊಂದು ವಿಷಯವನ್ನು ಆಯ್ಕೆ ಮಾಡಿ ಕ್ಯಾಲೆಂಡರ್, ಗ್ರೀಟಿಂಗ್‌ಗಳನ್ನು ಅಣಿಗೊಳಿಸುತ್ತಾರೆ. 2025ರ ವರ್ಷಕ್ಕೆ 'ಕಡಲಿನ ತೀರದ ಚಿತ್ರ ಕಾವ್ಯ' ಎಂಬ ಪರಿಕಲ್ಪನೆಯಡಿ ಕ್ಯಾಲೆಂಡರ್ ರೂಪುಗೊಂಡಿದೆ.
ಸ್ನೇಹಿತರ ಸಂಗದಲ್ಲಿ
ಬರಹಗಾರ ನವೀನ್ ಹಳೆಮನೆ ಅವರು ಮೊಸಳೆ ಅವರ 2025ರ ವರ್ಷದ ಕ್ಯಾಲೆಂಡರ್ ಚಟುವಟಿಕೆ ಬಗ್ಗೆ ಹೀಗೆ ಹೇಳುತ್ತಾರೆ: ಮೈಸೂರಿನ ಅದ್ಭುತ ಸೂಕ್ಷ್ಮ ಗ್ರಹಿಕೆಯ ಛಾಯಾಗ್ರಾಹಕರಾದ ಲೋಕೇಶ್ ಮೊಸಳೆಯವರು ಪ್ರತಿವರ್ಷದಂತೆ ಈ ವರ್ಷವೂ ಚಿತ್ತಾಕರ್ಷಕವಾದ ತೂಗು ಕ್ಯಾಲೆಂಡರ್ ಮತ್ತು ಮೇಜು ಕ್ಯಾಲೆಂಡರುಗಳನ್ನು ರೂಪಿಸಿದ್ದಾರೆ. ಅದರ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದನ್ನು ಹಂಚಿಕೊಂಡಿದ್ದೆ. ಆ ಎರಡೂ ಕ್ಯಾಲೆಂಡರುಗಳಲ್ಲಿ ಒಂದು 'ಕಡಲಿನ ತೀರದ ಚಿತ್ರ ಕಾವ್ಯ' ಎಂಬ ಥೀಮ್ ಆಗಿದೆ, ಇನ್ನೊಂದು 'ಬಣ್ಣಗಳಾಚೆ ಜೀವನದ ಚಿತ್ರಗಳು. ಅದ್ಭುತ ಚಿತ್ರಗಳು ಇಲ್ಲಿವೆ. ಅತ್ಯುತ್ತಮ ಗುಣಮಟ್ಟದ ಪೇಪರ್ ಬಳಸಲಾಗಿದೆ. ಪ್ರತಿ ಸುಂದರ ಚಿತ್ರದ ಪಕ್ಕದಲ್ಲಿ ಜಾನಪದ ಮತ್ತು ಕನ್ನಡ ಕಾವ್ಯದ ಚಿತ್ರಕ್ಕೆ ಹೊಂದುವ ಅದ್ಭುತ ಪ್ರಸಿದ್ಧ ಸಾಲುಗಳನ್ನು ಹಾಕಿ ಪ್ರತಿ ತಿಂಗಳನ್ನೂ ಒಂದು ಚಂದ ಕಾವ್ಯದ ಸಾಲುಗಳೊಂದಿಗೆ ಕಳೆಯಬಹುದು. ಡಿಸೆಂಬರ್ ತಿಂಗಳಾದ್ದರಿಂದ ಬಂಧು ಮಿತ್ರರಿಗೆ, ಪುಸ್ತಕ ಅಥವಾ ಗ್ರೀಟಿಂಗ್ ಕಾರ್ಡ್ ಕೊಡುವ ಬದಲು ಕ್ಯಾಲೆಂಡರ್ ಕಾಣಿಕೆ ನೀಡಬಹುದು.
ಮೇಲುನೋಟಕ್ಕೆ ನಮಗೆಲ್ಲಾ ವನ್ಯಲೋಕದ ಛಾಯಾಗ್ರಹಣ ಆಕರ್ಷಣೀಯವಾಗಿ ಕಂಡರೂ ಅದು ಬೇಡುವ, ಏಕಾಂತ, ತಾಳ್ಮೆ, ಜೀವದ ಹಂಗು ತೊರೆದು ಎದುರಿಸಬೇಕಾದ ಅನಿರೀಕ್ಷಿತ ಅವಘಡಗಳು, ಮಳೆ, ಚಳಿ, ಹಸಿವು, ನೀರಡಿಕೆ ಎನ್ನದೆ, ಅರಣ್ಯದಲ್ಲಿ ಇರಬೇಕಾದ ಒತ್ತಡ ಹಾಗೂ ಅರಣ್ಯಲೋಕದ ವ್ಯವಹಾರಗಳ ತಿಳುವಳಿಕೆ, ಅಲ್ಲಿನ ಪ್ರಾಣಗಳ ನಡುವಳಿಕೆ ಕುರಿತಾದ ಅಧ್ಯಯನ ಇವೆಲ್ಲವನ್ನೂ ಅರಿತ ವ್ಯಕ್ತಿ ಮಾತ್ರ ಒಬ್ಬ ಶ್ರೇಷ್ಟ ಛಾಯಾಚಿತ್ರಗ್ರಾಹಕನಾಗಬಲ್ಲನು. ನಾವು ಅರಣ್ಯದಲ್ಲಿ ವಿಸರ್ಜಿಸಿದ ಮೂತ್ರದ ವಾಸನೆಯಿಂದ ಸುಳಿವು ಪಡೆಯುವ ಪ್ರಾಣಿಗಳು ನಮ್ಮ ಸನಿಹ ಸುಳಿಯುವಿದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಛಾಯಾಚಿತ್ರಗ್ರಾಹಕನಿಗೆ ಇರಬೇಕಾಗುತ್ತದೆ. ಇಂತಹ ವಿಷಯಗಳನ್ನು ಕರಗತ ಮಾಡಿಕೊಂಡವರಲ್ಲಿ ಲೋಕೇಶ್ ಮೊಸಳೆ ಸಹ ಒಬ್ಬರು.
ಇಂತಹ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಬಲ್ಲ ಲೋಕೇಶ್ ಮೊಸಳೆ ತಾವು ಭೋಧಿಸುತ್ತಿದ್ದ ಪತ್ರಿಕೋದ್ಯಮದ ವೃತ್ತಿಯನ್ನು ಬಿಟ್ಟು ಹೆಗಲಿಗೆ ಕ್ಯಾಮರಾ ತಗುಲಿಸಿಕೊಂಡು, ನಾಗರಹೊಳೆ, ಬಂಡಿಪುರ, ಮತ್ತು ಹೆಗ್ಗಡದೇವನಕೋಟೆಯತ್ತ ಹೊರಟಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ, ಹಾಸನದ ಬಳಿಯ ಮೊಸಳೆ ಎಂಬ ಗ್ರಾಮದಿಂದ ಬಂದಿದ್ದ ಲೋಕೇಶ್‌ಗೆ ನಿಸರ್ಗದ ನಂಟು ತಾನು ಹುಟ್ಟಿ ಬೆಳೆದ ಹಳ್ಳಿಯಿಂದಲೇ ಬೆಳೆದು ಬಂದಿತ್ತು. ಹಾಗಾಗಿ ಅದರ ಮೇಲಿನ ಮೋಹವನ್ನು ಹರಿದುಕೊಳ್ಳಲಾರದೆ, ಕೈತುಂಬಾ ಹಣ ತರುವ ಉದ್ಯೋಗವನ್ನು ಬಿಟ್ಟು, ದುಬಾರಿ ಮತ್ತು ಸವಾಲು ಎನ್ನಬಹುದಾದ ವನ್ಯಲೋಕದ ಬೆನ್ನುಹತ್ತಿದರು. ‘ದಶಕದ ಅವಧಿಯಲ್ಲಿ ಲೋಕೇಶ್ ಸೆರೆಹಿಡಿದಿರುವ ವನ್ಯಮೃಗಗಳ ಚಿತ್ರಗಳು ವಿಸ್ಮಯವನ್ನು ಮೂಡಿಸುವಂತಿವೆ. ಪ್ರಾಣಿಗಳ ಮತ್ತು ಪಕ್ಷಿಗಳ ಚಲನವಲನ ಕುರಿತು ಚಿತ್ರದಲ್ಲಿ ದಾಖಲಿಸುವುದು ನಿಜಕ್ಕೂ ಸವಾಲಿನ ಕೆಲಸ’ ಎಂದು ಹಿರಿಯ ಲೇಖಕ ಜಗದೀಶ್ ಕೊಪ್ಪ ಇವರ ಪ್ರತಿಭೆಯನ್ನು ದಾಖಲಿಸುತ್ತಾರೆ.
ಗೋಡೆಗೆ ಬರಲಿ ವನ್ಯಲೋಕ
ಮೈಸೂರಿನಲ್ಲಿ ನಮ್ಮ ಮನೆಯ ಗೆಳೆಯರ ಪ್ರೀತಿ, ಆತ್ಮೀಯರ ಬಳಗದವರೊಂದಿಗೆ ಗಟ್ಟಿಯಾದ ಒಡನಾಟದೊಂದಿಗೆ ಅರಣ್ಯ, ವನ್ಯಲೋಕ, ಪ್ರಕೃತಿಯ ಸೊಬಗನ್ನು ಕ್ಯಾಲೆಂಡರ್, ಸಾಕ್ಷ್ಯಚಿತ್ರದ ರೂಪ ಕೊಟ್ಟು ಅಪರೂಪದ ಕಾರ್ಯದಲ್ಲಿ ನಿರತರು ಲೋಕೇಶ್ ಮೊಸಳೆ. ಸ್ನೇಹಿತರು ಯಾರೇ ಸಿಕ್ಕಲಿ, ಕರೆ ಮಾಡಲಿ, ಏ ಬಾ ಮಾರಾಯಾ ಎಂದು ಬಾಯ್ತುಂಬ ಕರೆದು ತಮ್ಮ ಕಾಡು ಮೇಡಿನ ಅನುಭವದ ಗಂಟನ್ನು ಹಂಚಿಕೊಳ್ಳುವ ಮೊಸಳೆ ನಿರ್ವ್ಯಾಜ್ಯ ಪ್ರೀತಿಗೆ ದಕ್ಕದೇ ಇರುವವರು ಕಡಿಮೆ. ವರ್ಷದ ಮಟ್ಟಿಗೆ ಈ ಕ್ಯಾಲೆಂಡರ್ ಎಂದು ನೀವು ಅಂದುಕೊಳ್ಳಬಹುದು. ಅದನ್ನು ನೀವು ಇಟ್ಟುಕೊಂಡರೆ ನೆನಪುಗಳ ನಂಟು ಪಡೆದ ಹಾಗೆ. ನೀವಷ್ಟೇ ಅಲ್ಲದೇ ಸ್ನೇಹಿತರು, ಸಂಬಂಧಿಕರು, ಆತ್ಮೀಯರಿಗೂ ಇಂತಹದೊಂದು ಲಾಭರಹಿತ ಕೆಲಸದ ಪ್ರೀತಿಯನ್ನೂ ಹಂಚಬಹುದು. ಇತರರಲ್ಲೂ ಕಾಡು, ವನ್ಯಜೀವಿಗಳು, ಪಕ್ಷಿಲೋಕ, ಪ್ರಕೃತಿಯ ಬಗ್ಗೆ ಅಭಿಮಾನ ಹುಟ್ಟು ಹಾಕಬಹುದು.
ಕ್ಯಾಲೆಂಡರ್ ಖರೀದಿಸಲು ಬಯಸುವವರು ಲೋಕೇಶ್ ಮೊಸಳೆ ಅವರನ್ನು 94484 34448 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು. https://www.lokeshmosale.com ಜಾಲತಾಣ ನೋಡಿದರೆ ಮೂರು ದಶಕದ ಅವರ ಶ್ರಮ, ಪ್ರತಿಭೆಯೂ ನಿಮ್ಮ ಮುಂದೆ ತೆರೆದುಕೊಳ್ಳಬಹುದು.
- ಕುಂದೂರು ಉಮೇಶಭಟ್ಟ, ಮೈಸೂರು