ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನ ಕನಸು ಭಗ್ನ, ಹೊಟ್ಟೆ, ಲಿವರ್ ಸಮಸ್ಯೆಯಿಂದ ಕಂಗಾಲು; ಮುಂದೇನಾಯಿತು ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನ ಕನಸು ಭಗ್ನ, ಹೊಟ್ಟೆ, ಲಿವರ್ ಸಮಸ್ಯೆಯಿಂದ ಕಂಗಾಲು; ಮುಂದೇನಾಯಿತು ನೋಡಿ

ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನ ಕನಸು ಭಗ್ನ, ಹೊಟ್ಟೆ, ಲಿವರ್ ಸಮಸ್ಯೆಯಿಂದ ಕಂಗಾಲು; ಮುಂದೇನಾಯಿತು ನೋಡಿ

Protein Powder: ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನೊಬ್ಬನ ಆರೋಗ್ಯ ಕೆಟ್ಟಿದೆ. ಆತ ಹೊಟ್ಟೆ ನೋವು ಮತ್ತು ಲಿವರ್ ಸಮಸ್ಯೆಯಿಂದ ಕಂಗಾಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದ. ತನಿಖೆ ನಡೆಸಿದ ಪೊಲೀಸರಿಗೆ ನೋಯ್ಡಾದಲ್ಲಿದ್ದ ಫೇಕ್‌ ಫ್ಯಾಕ್ಟರಿ ಗೋಚರಿಸಿದೆ. ಪ್ರಕರಣದ ವಿವರ ಇಲ್ಲಿದೆ.

ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನ ಕನಸು ಭಗ್ನವಾಗಿದೆ. ಆತ ಹೊಟ್ಟೆ, ಲಿವರ್ ಸಮಸ್ಯೆಯಿಂದ ಕಂಗಾಲಾದ ಘಟನೆ ನೋಯ್ಡಾದಲ್ಲಿ ನಡೆದಿದೆ. (ಮೆಟಾ ಎಐ ರಚಿತ ಚಿತ್ರಗಳನ್ನು  ಇಲ್ಲಿ ಸಾಂಕೇತಿಕವಾಗಿ ಬಳಸಲಾಗಿದೆ)
ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನ ಕನಸು ಭಗ್ನವಾಗಿದೆ. ಆತ ಹೊಟ್ಟೆ, ಲಿವರ್ ಸಮಸ್ಯೆಯಿಂದ ಕಂಗಾಲಾದ ಘಟನೆ ನೋಯ್ಡಾದಲ್ಲಿ ನಡೆದಿದೆ. (ಮೆಟಾ ಎಐ ರಚಿತ ಚಿತ್ರಗಳನ್ನು ಇಲ್ಲಿ ಸಾಂಕೇತಿಕವಾಗಿ ಬಳಸಲಾಗಿದೆ)

Protein Powder: ನೂರಾರು ಕನಸು ಕಾಣುತ್ತ ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕನಿಗೆ ಹೊಟ್ಟೆ ಸಂಕಟ, ಲಿವರ್ ಸಮಸ್ಯೆ ಶುರುವಾಗಿ ಕಂಗಾಲಾದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಜನಪ್ರಿಯ ಬ್ರ್ಯಾಂಡ್ ಒಂದರ ಪ್ರೊಟೀನ್ ಪೌಡರ್‌ ಅನ್ನು ಆನ್‌ಲೈನ್ ಮೂಲಕ ಖರೀದಿಸಿ ಸೇವಿಸಿದ ಬಳಿಕ ಯುವಕನಿಗೆ ಸಮಸ್ಯೆ ಶುರುವಾಗಿದೆ. ಸಂತ್ರಸ್ತ ಯುವಕನನ್ನು ಅತಿಮ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆತ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ದೂರು ದಾಖಲಿಸಿದ್ದ ಇದರಂತೆ ತನಿಖೆ ನಡೆಸಿದ ಪೊಲೀಸರು, ಫೇಕ್ ಫ್ಯಾಕ್ಟರಿಯನ್ನು ಪತ್ತೆ ಹಚ್ಚಿ 50 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳನ್ನು ನಕಲಿ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.

ಆನ್‌ಲೈನ್‌ನಲ್ಲಿ ಸಿಕ್ಕ ಪ್ರೊಟೀನ್ ಪೌಡರ್ ಸೇವಿಸಿದ ಯುವಕ ಕಂಗಾಲು

ನೋಯ್ಡಾ ನಿವಾಸಿ ಅತಿಮ್ ಸಿಂಗ್ ಅವರು ಆನ್‌ಲೈನ್ ಇ ಕಾಮರ್ಸ್‌ ತಾಣದ ಮೂಲಕ ಜನಪ್ರಿಯ ಬ್ರ್ಯಾಂಡ್‌ನ ಪ್ರೊಟೀನ್ ಪೌಡರ್‌ ಅನ್ನು ಆರ್ಡರ್ ಮಾಡಿದ್ದಾರೆ. ಅದು ಬಂದ ಬಳಿಕ ಸೇವಿಸತೊಡಗಿದ್ದಾರೆ. ಇದಾಗುತ್ತಿದ್ದಂತೆ ಅವರಿಗೆ ಹೊಟ್ಟೆ ಮತ್ತು ಲಿವರ್ ಸಮಸ್ಯೆಗಳು ಶುರುವಾಗಿದೆ. ಅಷ್ಟೇ ಅಲ್ಲ ಮುಖದ ಚರ್ಮದ ಮೇಲೆ ಬಿರುಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆಯುತ್ತಲೇ ಪೊಲೀಸ್ ದೂರು ದಾಖಲಿಸಿದರು. ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಫೇಕ್ ಫ್ಯಾಕ್ಟರಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಹೇಳಿದೆ.

ಅತಿಮ್ ಸಿಂಗ್ ಅವರು ಡಿಸೆಂಬರ್ 9 ರಂದು ನೋಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಶಂಕಿತ ಸಂಸ್ಥೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ, ಪ್ರೊಟೋನ್ ಬಾಕ್ಸ್, ಕ್ಯಾಪ್ಸೂಲ್ ಬಾಕ್ಸ್, ರಾಪರ್‌, ಪೌಡರ್ ಚೀಲ ಮತ್ತು ಪ್ಯಾಕಿಂಗ್ ಮತ್ತು ಪ್ರಿಂಟಿಂಗ್ ಮಷಿನ್‌ಗಳು ಪತ್ತೆಯಾಗಿದ್ದವು. ಈ ಎಲ್ಲವೂ 50 ಲಕ್ಷ ರೂಪಾಯಿ ಮೌಲ್ಯದ್ದು ಎಂದು ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ಹೇಳಿದ್ದಾಗಿ ವರದಿ ವಿವರಿಸಿದೆ.

ಗ್ರೇಟರ್ ನೋಯ್ಡಾದಲ್ಲಿತ್ತು ಫೇಕ್ ಫ್ಯಾಕ್ಟರಿ

ಪೊಲೀಸರು ತನಿಖೆ ನಡೆಸಿದಾಗ, ಆನ್‌ಲೈನ್‌ನಲ್ಲಿ ಬಿಕರಿಯಾಗುತ್ತಿದ್ದ ಉತ್ಪನ್ನವನ್ನು ಗ್ರೇಟರ್ ನೋಯ್ಡಾದ ಸೆಕ್ಟರ್ 86 ರಲ್ಲಿನ ಕಾರ್ಖಾನೆಯಲ್ಲಿ ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರ ಜತೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳೂ ಇದ್ದರು. ಮಂಗಳವಾರ (ಡಿಸೆಂಬರ್ 10) ದಾಳಿ ನಡೆಸಿದ್ದರು. ಆಗ ಅಲ್ಲಿ, ಮೂವರು ಪುರುಷರು ನೆಲಮಾಳಿಗೆಯಲ್ಲಿ ಖಾಲಿ ಪೆಟ್ಟಿಗೆಗಳನ್ನು ತುಂಬುತ್ತಿರುವುದು ಪತ್ತೆಯಾಗಿತ್ತು. "ಅಥ್ಲೀಟ್ಸ್ ಕಂಪ್ಲೀಟ್ ನ್ಯೂಟ್ರಿಷನ್' ಎಂಬ ಹೆಸರಿನ ನಕಲಿ ಪ್ರೋಟೀನ್ ಪೌಡರ್ ತುಂಬಿದ ದೊಡ್ಡ ಸಂಖ್ಯೆಯ ಪೆಟ್ಟಿಗೆಗಳು ನೆಲಮಾಳಿಗೆಯಲ್ಲಿದ್ದವು ಅವರ ಬಳಿ, ಈ ಉತ್ಪನ್ನಕ್ಕೆ ಸಂಬಂಧಿಸಿದ ಪರವಾನಗಿ ಇದೆಯೇ ಎಂದು ವಿಚಾರಿಸಿದಾಗ ಉತ್ತರ ಸಿಗಲಿಲ್ಲ. ನಂತರ ನಾವು ಆಹಾರ ಸುರಕ್ಷತಾ ತಂಡವನ್ನು ಕರೆಯಿಸಿಕೊಂಡು ಅವುಗಳನ್ನು ಅವರ ವಶಕ್ಕೆ ನೀಡಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಅವಸ್ಥಿ ಹೇಳಿದರು ಎಂದು ವರದಿ ವಿವರಿಸಿದೆ.

ಬಂಧಿತರನ್ನು ಗಾಝಿಯಾಬಾದ್ ನಿವಾಸಿಗಳಾದ ಸಾಹಿಲ್ ಯಾದವ್ (27), ಹರ್ಷ ಅಗರ್‌ವಾಲ್‌ (28) ಮತ್ತು ಅಮಿತ್ ಚೌಬೇ (30) ಎಂದು ಗುರುತಿಸಲಾಗಿದೆ. ಈ ಮೂವರು ನಕಲಿ ಆಹಾರ ಪೂರಕ ಉತ್ಪನ್ನಗಳ ಕಾರ್ಖಾನೆಯನ್ನು ನಡೆಸುತ್ತಿದ್ದರು. ಮೂವರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ನಕಲಿ ಪೂರಕ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಸಾಹಿಲ್ ಈ ಹಿಂದೆ ನ್ಯೂಟ್ರಾಟೆಕ್ ಕಂಪನಿಯಲ್ಲಿ 2017-18ರಲ್ಲಿ ಒಂದು ವರ್ಷ ಕೆಲಸ ಮಾಡಿದ ಅನುಭವ ಪಡೆದಿದ್ದ. ಆ ಅನುಭವದ ಆಧಾರದ ಮೇಲೆ ನಕಲಿ ಫ್ಯಾಕ್ಟರಿ ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ಹೇಳಿದೆ. ಪೊಲೀಸ್ ತನಿಖೆ ಮುಂದುವರಿದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.