Tumakuru News: ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥ ಬರೆಸಿಕೊಳ್ಳುವವರಿದ್ದಾರೆ; ನಾಡೋಜ ಬರಗೂರು ರಾಮಚಂದ್ರಪ್ಪ
ಕನ್ನಡ ಸುದ್ದಿ  /  ಕರ್ನಾಟಕ  /  Tumakuru News: ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥ ಬರೆಸಿಕೊಳ್ಳುವವರಿದ್ದಾರೆ; ನಾಡೋಜ ಬರಗೂರು ರಾಮಚಂದ್ರಪ್ಪ

Tumakuru News: ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥ ಬರೆಸಿಕೊಳ್ಳುವವರಿದ್ದಾರೆ; ನಾಡೋಜ ಬರಗೂರು ರಾಮಚಂದ್ರಪ್ಪ

ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ದೊರೈರಾಜ್ ಅವರ ಕುರಿತ ಏಕತೆಯ ಹೋರಾಟಗಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ತುಮಕೂರು ಪರಿಸರದಲ್ಲಿ ಎಚ್.ಜಿ.ಸಣ್ಣಗುಡ್ಡಯ್ಯ, ವೀಚಿ ಮತ್ತು ಕೆ.ಆರ್.ನಾಯಕ್ ಒಂದು ಕಾಲದಲ್ಲಿ ನಮ್ಮನ್ನು ಪ್ರಭಾವಿಸಿದ್ದರು.

 ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥ ಬರೆಸಿಕೊಳ್ಳುವವರಿದ್ದಾರೆ; ನಾಡೋಜ ಬರಗೂರು ರಾಮಚಂದ್ರಪ್ಪ
ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥ ಬರೆಸಿಕೊಳ್ಳುವವರಿದ್ದಾರೆ; ನಾಡೋಜ ಬರಗೂರು ರಾಮಚಂದ್ರಪ್ಪ

ತುಮಕೂರು: ಅವರೇ ದುಡ್ಡು ಕೊಟ್ಟು, ಶಾಲು ತರಿಸಿ ಅಭಿನಂದನೆ ಗ್ರಂಥಗಳನ್ನು ಬರೆಸಿಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಭಿನಂದನೆ ಗ್ರಂಥಗಳ ಮೌಲ್ಯ ಕುಸಿದು ಹೋಗಿದೆ, ಆದರೆ ಕೆ.ದೊರೈರಾಜ್ ಅವರ ಕುರಿತು ಬಂದಿರುವ ಗ್ರಂಥ ಇದಕ್ಕೆ ಹೊರತಾಗಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತುಮಕೂರಿನ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ದೊರೈರಾಜ್ ಅವರ ಕುರಿತ ಏಕತೆಯ ಹೋರಾಟಗಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ತುಮಕೂರು ಪರಿಸರದಲ್ಲಿ ಎಚ್.ಜಿ.ಸಣ್ಣಗುಡ್ಡಯ್ಯ, ವೀಚಿ ಮತ್ತು ಕೆ.ಆರ್.ನಾಯಕ್ ಒಂದು ಕಾಲದಲ್ಲಿ ನಮ್ಮನ್ನು ಪ್ರಭಾವಿಸಿದರು, ಅವರ ನಂತರದ ಪೀಳಿಗೆಯಲ್ಲಿ ಅದೇ ಹಾದಿಯಲ್ಲಿ ನಡೆಯುತ್ತಿರುವ ಯಾರನ್ನಾದರೂ ಹೆಸರಿಸಬೇಕು ಅಂದರೆ ಅದು ಕೆ.ದೊರೈರಾಜ್, ಅವರ ವ್ಯಕ್ತಿತ್ವ ಇದೆಯಲ್ಲ ಅದು ವಿಶೇಷವಾದದ್ದು ಎಂದರು.

ಇಂದಿನ ಸಂದರ್ಭದಲ್ಲಿ ಜಾತಿವಾದ ಇದೆ, ಧಾರ್ಮಿಕ ಮೂಲಭೂತವಾದ ಇದೆ, ಇದು ಬಹು ಸಂಸ್ಕೃತಿ ವಿರೋಧಿಸುವುದು ಹೆಚ್ಚಾಗುತ್ತಿದೆ, ಸಮಾಜದಲ್ಲಿ ಅಸಹನೆ ಇದೆ, ಅಸಮಾನತೆ ಇದೆ, ಇದೆಲ್ಲದರ ಜೊತೆಗೆ ಅಹಂ ಇದೆ, ಅಬ್ಬರದ ಪ್ರಚಾರವಿದೆ, ಇದೆಲ್ಲವನ್ನು ವಿರೋಧಿಸುವ ವ್ಯಕ್ತಿತ್ವ ಇದೆಯಲ್ಲ ಅದು ದೊರೈರಾಜ್ ಅವರ ವ್ಯಕ್ತಿತ್ವ, ಹಾಗಾಗಿ ದೊರೈರಾಜ್ ನಮಗೆಲ್ಲ ಬಹಳ ಮುಖ್ಯವಾಗಿ ಕಾಣುತ್ತಾರೆ ಎಂದು ಹೇಳಿದರು.

ದೊರೈರಾಜ್ ಅವರು ಜಾತಿವಾದಿ ವಿರೋಧಿಗಳು, ಧಾರ್ಮಿಕ ಮೂಲಭೂತವಾದದ ವಿರೋಧಿಗಳು, ಬಹು ಸಂಸ್ಕೃತಿಯ ಪರವಾಗಿ ಇರುವವರು, ಅಸಮಾನತೆ ವಿರೋಧಿಸಿಕೊಂಡು ಬಂದವರು, ಅಧಿಕಾರದಲ್ಲಿದ್ದು, ಹೋರಾಟಗಳಲ್ಲಿದ್ದು, ಅಹಂಕಾರವಿಲ್ಲದ, ಅಬ್ಬರವಿಲ್ಲದ ತಮ್ಮ ಕ್ರಿಯಾಶೀಲನೆಯಲ್ಲಿ ತೊಡಗಿಸಿಕೊಂಡು ಬಂದವರು ಎಂದು ಶ್ಲಾಸಿದರು.

ಬಹು ಸಂಸ್ಕೃತಿಯನ್ನು, ಬಹತ್ವವನ್ನು ನಾಶ ಮಾಡುವ ಪ್ರವೃತ್ತಿ ಪ್ರಬಲವಾಗುತ್ತಿರುವ ಸಂದರ್ಭದಲ್ಲಿ ದೊರೈರಾಜ್ ಅವರಂಥವರು ಬಹಳ ಮುಖ್ಯವಾಗುತ್ತಾರೆ, ಒಳಗೊಳ್ಳುವ ವ್ಯಕ್ತಿತ್ವ ಇದೆಯಲ್ಲ ಅದೇ ಏಕತೆ, ಅಂದರೆ ಬಹುತ್ವವನ್ನು ಒಳಗೊಳ್ಳುವ ಗುಣವೇ ಏಕತೆ ಎಂದು ತಿಳಿಸಿದರು.

ವಿವಿಧತೆಯಲ್ಲಿ ಏಕತೆ ಎನ್ನುವುದು ಭಾರತ ಅಥವಾ ಭಾರತೀಯತೆಯ ಪ್ರತೀಕ, ಆದರೆ ಇವೊತ್ತು ಏಕತೆಯನ್ನು ಅಪಾರ್ಥದಲ್ಲಿ ಪರಿಭವಿಸಲಾಗುತ್ತಿದೆ, ನಮಗೆ ಭಾರತೀಯ ಭಾವೈಕ್ಯತೆ ಬೇಕು, ಭಾರತೀಯತೆಯ ಬಹುರೂಪ ಬೇಕು, ಅಲ್ಲಿಯೇ ನಿಜವಾದ ಭಾರತ ಇರುವಂತಹದ್ದು, ಅದು ಏಕತೆ, ಏಕತೆ ಎನ್ನುವುದು ಒಕ್ಕೂಟ, ಈ ಒಕ್ಕೂಟ ವಿವಿಧ ಸಂಸ್ಕೃತಿಗಳ ಒಕ್ಕೂಟ, ವಿವಿಧ ಧರ್ಮಗಳ ಒಕ್ಕೂಟ, ವಿವಿಧ ವಿಚಾರಧಾರೆಗಳ ಒಕ್ಕೂಟ, ಅಂತಹ ಒಕ್ಕೂಟವೆಂದರೆ ಅಲ್ಲಿ ಒಳಗೊಳ್ಳುವಿಕೆ ಇರಬೇಕು ಎಂದರು.

1927ರಲ್ಲಿ ತುಮಕೂರಿನ ಎನ್.ಆರ್.ಕಾಲೋನಿಗೆ ಮಹಾತ್ಮ ಗಾಂಧಿ ಬಂದಿದ್ದರು, ಅಂದು ಗಾಂಧಿ ಸ್ವಚ್ಛತೆಯ ಕುರಿತು ಹೇಳಿದರು, ಅದನ್ನೇ ಇಂದು ಸ್ವಚ್ಛ ಭಾರತದ ಎಂದು ಕರೆಯಲಾಗುತ್ತಿದೆ, ಹಾಗಾಗಿ ಸ್ವಚ್ಛ ಭಾರತ ಕಲ್ಪನೆ ಒಳ್ಳೆಯದು, ಇದರಿಂದ ಬೀದಿ ಭಾರತ ಸ್ವಚ್ಛವಾಗುತ್ತಿದೆ, ಆದರೆ ಭಾವ ಭಾರತ ಮಲಿನವಾಗುತ್ತಲೇ ಇದೆ, ಬೀದಿ ಭಾರತದ ಜೊತೆ ಭಾವ ಭಾರತವೂ ಸ್ವಚ್ಛವಾಗಬೇಕಾಗಿರುವುದು ಬಹಳ ಮುಖ್ಯ, ಇವೊತ್ತು ಬೀದಿ ಭಾರತವನ್ನು ಸ್ವಚ್ಛ ಮಾಡಲಾಗುತ್ತಿದ್ದರೆ ಭಾವ ಭಾರತ ಹೆಚ್ಚೆಚ್ಚು ಮಲಿನವಾಗುತ್ತಿದೆ ಎಂದರು.

ಕಾಗದ ರಹಿತ ಕಚೇರಿ ಎಂಬ ದೊಡ್ಡ ಪರಿಕಲ್ಪನೆ ಇತ್ತೀಚೆಗೆ ಕೇಳಿಬರುತ್ತಿದೆ, ಇವುಗಳು ಬಹಳ ಮುಖ್ಯ ಎನ್ನುತ್ತಾರೆ, ಆದರೆ ನನಗೆ ಅನಿಸುತ್ತದೆ, ಕಾಗದ ರಹಿತ ಕಚೇರಿಗಳನ್ನು ಮಾಡುವ ಮುಂಚೆ ಭ್ರಷ್ಟಾಚಾರ ರಹಿತ ಕಚೇರಿಗಳನ್ನು ಮಾಡುವುದು ಬಹಳ ಮುಖ್ಯ, ಆದರೆ ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿಷಾಧಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಹಾಲಿ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ, ನಿವೃತ್ತ ಪ್ರಾಂಶುಪಾಲ ಚೌಡಯ್ಯ, ಸಾಹಿತಿ ಎಂ.ಎಚ್.ನಾಗರಾಜ, ರಾಣಿ ಚಂದ್ರಶೇಖರ್ ಇತರರು ಇದ್ದರು.

(ವರದಿ: ಈಶ್ವರ್)

Whats_app_banner