Tumkur News: ಪಾವಗಡ ಬಾಣಂತಿಯರ ಸಾವು, ದೌಡಾಯಿಸಿದ ಅಧಿಕಾರಿಗಳು, ವೈದ್ಯೆ ಸೇರಿ ಐವರ ಅಮಾನತು,ಆಡಳಿತಾಧಿಕಾರಿ ಎತ್ತಂಗಡಿ-tumkur news 3 woman inpatients death in pavagada taluk hospital doctor staff suspended ao transferred esp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ಪಾವಗಡ ಬಾಣಂತಿಯರ ಸಾವು, ದೌಡಾಯಿಸಿದ ಅಧಿಕಾರಿಗಳು, ವೈದ್ಯೆ ಸೇರಿ ಐವರ ಅಮಾನತು,ಆಡಳಿತಾಧಿಕಾರಿ ಎತ್ತಂಗಡಿ

Tumkur News: ಪಾವಗಡ ಬಾಣಂತಿಯರ ಸಾವು, ದೌಡಾಯಿಸಿದ ಅಧಿಕಾರಿಗಳು, ವೈದ್ಯೆ ಸೇರಿ ಐವರ ಅಮಾನತು,ಆಡಳಿತಾಧಿಕಾರಿ ಎತ್ತಂಗಡಿ

ತುಮಕೂರು ಜಿಲ್ಲೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಹಲವರ ತಲೆದಂಡವಾಗಿದೆ.(ವರದಿ:ಈಶ್ವರ್‌ ತುಮಕೂರು)

ಪಾವಗಡದಲ್ಲಿ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ತಂಡ
ಪಾವಗಡದಲ್ಲಿ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ತಂಡ

ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂವರು ಬಾಣಂತಿಯರು ಮೃತಪಟ್ಟ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಿರುವ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ವೈದ್ಯರೊಬ್ಬರು ಸೇರಿ 5 ಮಂದಿಯನ್ನು ಅಮಾನತುಗೊಳಿಸಿದೆ. ಆಡಳಿತ ನಿರ್ವಹಣೆಯಲ್ಲಿ ವಿಫಲರಾದ ಆಡಳಿತಾಧಿಕಾರಿ ಡಾ.ಕಿರಣ್‌ ಅವರನ್ನು ಇಲ್ಲಿಂದ ಎತ್ತಂಗಡಿ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ಪಾವಗಡಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿ ಮಾಹಿತಿ ಸಂಗ್ರಹಿಸಿತು. ಇನ್ನೂ ಕೆಲವರ ವಿರುದ್ದ ಕಠಿಣ ಕ್ರಮ ಆಗುವ ಸಾಧ್ಯತೆ ಇರುವುದನ್ನು ಹಿರಿಯ ಅಧಿಕಾರಿಗಳು ತಿಳಿಸಿದರು.

ತಂಡ ದೌಡು

ಸಂತಾನ ಹರಣ ಶಕ್ತಿ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದ ಮೂವರು ಬಾಣಂತಿಯರು ವೈದ್ಯರ ನಿರ್ಲಕ್ಷದಿಂದಾಗಿ ಸಾವನ್ನಪ್ಪಿರುವ ಆರೋಪಗಳ ಹಿನ್ನೆಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಜ್ಯಮಟ್ಟದ ಅಧಿಕಾರಿಗಳ ತಂಡ ಪಾವಗಡ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ರಾಷ್ಟ್ರೀಯ ಆರೋಗ್ಯಅಭಿಯಾನದ ರಾಜ್ಯಮಟ್ಟದ ನಿರ್ದೇಶಕಿ ಡಾ.ಪುಷ್ಟಲತ, ಯೋಜನಾಧಿಕಾರಿ ಡಾ.ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದ್ದು, ಜನರಲ್ ವಾರ್ಡ್, ಐಸಿಯು ಘಟಕ, ತುರ್ತು ಸೇವೆಗಳ ಮಾಹಿತಿ ಪಡೆದರು.

ಘಟನೆಗೆ ಕಾರಣವೇನು, ಯಾರ ಲೋಪವಿದೆ, ಏನೇನು ಸುಧಾರಣೆ ಆಗಬೇಕು ಎನ್ನುವುದೂ ಸೇರಿದಂತೆ ಹಲವು ಮಾಹಿತಿಗಳನ್ನು ತಂಡ ಸಂಗ್ರಹಿಸಿತು.

ಕಾರಣ ತಿಳಿದಿಲ್ಲ

ಈ ವೇಳೆ ರಾಷ್ಟ್ರೀಯ ಆರೋಗ್ಯಅಭಿಯಾನದ ರಾಜ್ಯ ಮಟ್ಟದ ಯೋಜನಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆಯಲ್ಲಿ ನಡೆದಿರುವ ಅವಘಡ ನೋವು ತಂದಿದೆ, ಸರ್ಕಾರದ ಪರವಾಗಿ ಕಾರ್ಯದರ್ಶಿಗಳ ಸೂಚನೆಯಂತೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ, ಘಟನೆಗೆ ಕಾರಣ ತಿಳಿದು ಬಂದಿಲ್ಲ, ಪ್ರಯೋಗಾಲಯದಿಂದ ಶೀಘ್ರದಲ್ಲೇ ವರದಿ ಬರಲಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂಬಂಧ ಈಗಾಗಲೆ ಡಾ.ಪೂಜಾ, ಪದ್ಮಾವತಿ, ಬಿ.ಆರ್.ಕಿರಣ್ ಸೇರಿದಂತೆ ಒಟ್ಟು ಐದು ಜನ ಸಿಬ್ಬಂದಿ ಅಮಾನತು ಮಾಡಲಾಗಿದೆ, ಸಾರ್ವಜನಿಕರು ಮತ್ತು ಇಲ್ಲಿನ ಸಂಘ ಸಂಸ್ಥೆಗಳ ಮನವಿ ಮೇರೆಗೆ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಡಾ.ಕಿರಣ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದರು.

ಡಾ.ಕಿರಣ್‌ ವಿರುದ್ದ ಕಿಡಿ

ಸ್ಥಳದಲ್ಲೇ ಇದ್ದ ತಾಲೂಕಿನ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನಿರ್ಲಕ್ಷದ ವೈದ್ಯಾಧಿಕಾರಿ ಡಾ.ಕಿರಣ್ ಅವರನ್ನು ನಮ್ಮ ತಾಲೂಕಿನಲ್ಲಿಡಬೇಡಿ ಎಂದು ಘೋಷಣೆ ಕೂಗಿದರು.

ಡಾ.ಕಿರಣ್ ಅವರ ಕಿರುಕುಳದಿಂದ ಬೇಸತ್ತು ವರ್ಗಾಯಿಸಿಕೊಂಡಿರುವ ಸುಮಾರು ಐದು ಜನ ವೈದ್ಯರನ್ನು ಮತ್ತೆ ಇಲ್ಲಿಗೆ ನೇಮಿಸಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ರಾಜ್ಯ ಮಟ್ಟದ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು.

ಇದೇ ವೇಳೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ನಡೆದಿರುವ ದಬ್ಬಾಳಿಕೆ, ಲಂಚಾವತಾರ, ಕಮಿಷನ್ ದಂಧೆ, ಹೊರಗಡೆ ಔಷಧಿ ತರುವುದು, ಡಿ ಗ್ರೂಪ್ ನೌಕರರ ನೇಮಕದಲ್ಲಿ ಭ್ರಷ್ಟಾಚಾರ, ಸಾರ್ವಜನಿಕರೊಂದಿಗೆ ನಿಷ್ಕಾಳಜಿ ಮನೋಭಾವದ ಕುರಿತು ಸ್ಥಳದಲ್ಲಿ ವೈದ್ಯರ ಮುಂದೆಯೇ ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗೋವರ್ಧನ್, ಕರವೇ ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತು ತರುಣ್ ವಿವರಿಸಿದರು.

ಸಾರ್ವಜನಿಕರ ನೋವು ಆಲಿಸಿದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ವೇಳೆ ಡಾ.ಚಂದ್ರಿಕಾ, ಆರ್‌ಸಿಎಚ್ ಅಧಿಕಾರಿ ಡಾ.ಮೋಹನ್, ಟಿಎಚ್‌ಒ ತಿರುಪತಯ್ಯ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.\̈

(ವರದಿ:ಈಶ್ವರ್‌ ತುಮಕೂರು)

mysore-dasara_Entry_Point