Tumkur News: ತುಮಕೂರಿನಲ್ಲಿ ಶಿರಾ ಗೇಟ್ ರಸ್ತೆ ಸಂಚಾರಕ್ಕೆ ಅರ್ಪಣೆ, ಎಸ್ ಮಾಲ್ ಬಳಿ ಮೇಲ್ಸೇತುವೆ ಜನರ ಬಳಕೆ ಆರಂಭ
Tumkur New ತುಮಕೂರಿನಲ್ಲಿ ಜನರ ಸಂಚಾರಕ್ಕೆ ಅಡಚಣೆಯಾಗಿದ್ದ ಶಿರಾ ಗೇಟ್ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಇದಲ್ಲದೇ ಮೇಲ್ಸೇತುವೆಯನ್ನು ಪ್ರಾರಂಭ ಮಾಡಲಾಗಿದೆ.ವರದಿ: ಈಶ್ವರ್ ತುಮಕೂರು
ತುಮಕೂರು: ಕಳೆದೈದು ತಿಂಗಳಿಂದ ಬಂದ್ ಮಾಡಲಾಗಿದ್ದತುಮಕೂರು ನಗರದ ಶಿರಾ ಗೇಟ್ ರಸ್ತೆಯನ್ನು ಶನಿವಾರದಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ತುಮಕೂರಿನ ಎಸ್ ಮಾಲ್ ಬಳಿ ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 6.65 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಪುನರ್ ನಿರ್ಮಿಸಿರುವ ಸೇತುವೆ ಲೋಕಾರ್ಪಣೆಗೊಳಿಸಲಾಯಿತು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಕೆ.ಎನ್.ರಾಜಣ್ಣ, ಶಾಸಕರು, ಅಧಿಕಾರಿಗಳು ಹಾಗೂ ಸ್ಥಳೀಯರ ಉಪಸ್ಥಿತಿಯಲ್ಲಿ ಜನರ ಬಳಕೆಗೆ ರಸ್ತೆಯನ್ನು ಮುಕ್ತಗೊಳಿಸಲಾಯಿತು.
ಅಮಾನಿಕೆರೆ ಕೋಡಿ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ 4ರ ಸೇತುವೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವುಗಳು ಸಂಭವಿಸುತ್ತಲೇ ಇದ್ದವು, ಕಿರಿದಾಗಿದ್ದ ಈ ಸೇತುವೆ ಅಗಲೀಕರಣಗೊಳಿಸಿ, ಹೊಸ ಸೇತುವೆ ನಿರ್ಮಿಸಬೇಕೆಂದು ಈ ಭಾಗದ ಜನರು, ಜನಪ್ರತಿನಿಧಿಗಳಿಂದ ಬಹು ದಿನಗಳ ಬೇಡಿಕೆಯಿತ್ತು, ರಾಜ್ಯದ 15 ಜಿಲ್ಲೆ ಸೇರಿ ಜಿಲ್ಲೆಯ ಪಾವಗಡ, ಕೊರಟಗೆರೆ, ಶಿರಾ, ಮಧುಗಿರಿ ಭಾಗಕ್ಕೆ ಇದೇ ರಸ್ತೆಯಿಂದ ತೆರಳಬೇಕಿತ್ತು, ರಸ್ತೆ ಕಾಮಗಾರಿ ಕೈಗೊಂಡ ನಂತರ ವಾಹನಗಳು ಬಳಸಿಕೊಂಡು ಹನುಮಂತಪುರ ಮೂಲಕ ಸಾಗಬೇಕಿತ್ತು, ಈಗ ಸೇತುವೆ ಅಗಲೀಕರಣ ಕಾಮಗಾರಿ ಪೂರ್ಣ ಗೊಂಡಿರುವುದರಿಂದ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ.
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೇವಲ 6 ವಾರ್ಡ್‌ಗಳನ್ನು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಗೊಳಪಡಿಸಿ ಅಭಿವೃದ್ಧಿ ಪಡಿಸಲಾಗಿದೆ, ಉಳಿದ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 100 ಕೋಟಿ ರೂ. ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಗುಬ್ಬಿ ರಸ್ತೆಯಲ್ಲಿರುವ ಭೀಮಸಂದ್ರದ ಸೇತುವೆಯನ್ನೂ ಸಹ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಸದ್ಯದಲ್ಲೆ ಕೈಗೆತ್ತಿಕೊಳ್ಳಲಾಗುವುದನ್ನೂ ಇದೇ ವೇಳೆ ಪ್ರಕಟಿಸಲಾಗಿದೆ.
ತುಮಕೂರಿಗೆ ರೂ. 70 ಕೋಟಿ ರೂ. ವೆಚ್ಚದ ಕಾರ್ಡಿಯಾಲಜಿ ಕೇಂದ್ರ
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಭಾಗವಾಗಿ ಜಿಲ್ಲೆಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸಲಾಗುವುದು, ಹೃದ್ರೋಗ ಸಮಸ್ಯೆಯಿದ್ದವರು ತುಮಕೂರು ಜಿಲ್ಲೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಲು ಕನಿಷ್ಟ 2 ತಾಸು ಬೇಕಾಗುತ್ತದೆ, ಇದರಿಂದ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ರೋಗಿಗಳು ಸಾವನ್ನಪ್ಪುವ ಸಾಧ್ಯತೆಯಿರುತ್ತದೆ, ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸುವುದರಿಂದ ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಶಿವಮೊಗ್ಗ, ಹಾಸನ, ಚಿತ್ರದುರ್ಗ ಮುಂತಾದ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ ಎಂದು ವಿವರಣೆ ನೀಡಿದರು.
50 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಲಯ
ಶೈಕ್ಷಿಣಿಕ ನಗರವೆನಿಸಿಕೊಂಡಿರುವ ತುಮಕೂರಿನಲ್ಲಿ ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪೂರಕವಾದ ಹಾಸ್ಟೆಲ್ ವ್ಯವಸ್ಥೆಗಳಿಲ್ಲ, ಈಗಿರುವ ಹಾಸ್ಟೆಲ್‌ಗಳು ಸಾಲುತ್ತಿಲ್ಲ, ಜಿಲ್ಲೆಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 12 ನೂತನ ಹಾಸ್ಟೆಲ್‌ಗಳನ್ನು ನಿರ್ಮಿಸಲು ಶೀಘ್ರದಲ್ಲಿ ಅಡಿಗಲ್ಲು ಹಾಕಲಾಗುವುದು ಎನ್ನುವುದು ಸಚಿವರ ಹೇಳಿಕೆ.
ಮುಂದಿನ ದಿನಗಳಲ್ಲಿ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 3000 ಹಾಗೂ ಗುಬ್ಬಿ ತಾಲೂಕಿನ ಎಚ್‌ಎಎಲ್ ಘಟಕದಲ್ಲಿ 6500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರಲ್ಲದೆ ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಗೆ ಸವಲತ್ತು ನೀಡುವ ಅವಶ್ಯಕತೆ ಇದ್ದು, ನಮ್ಮ ಸರ್ಕಾರವು ಜಿಲ್ಲೆಯ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.
ಆಧುನಿಕ ಜಿಲ್ಲಾಸ್ಪತ್ರೆಗೆ 130 ಕೋಟಿ
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯು ಕಲ್ಲಿನ ಕಟ್ಟಡವಾಗಿದ್ದು, ತುಂಬಾ ಹಳೆಯದಾಗಿದೆ, ಜಿಲ್ಲಾಸ್ಪತ್ರೆಗೆ ಆಧುನಿಕ ರೂಪ ನೀಡಿ ಸುಸಜ್ಜಿತಗೊಳಿಸಲು 130 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ ನಿರ್ಮಿಸಲು 50 ಕೋಟಿ ರೂ. ಗಳ ಅನುದಾನ ಒದಗಿಸಲು ಒಪ್ಪಿದ್ದಾರೆ, ಇದಕ್ಕಾಗಿ ತುಮಕೂರು ವಿಶ್ವ ವಿದ್ಯಾಲಯದ ಆವರಣದೊಳಗೆ ಸ್ಥಳ ಗುರುತಿಸಲಾಗಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ತಿಳಿಸಿದರು.
ಸೇತುವೆ ಪುನರ್ ನಿರ್ಮಾಣದಿಂದ ಸಂಚಾರ ಸುಗಮ
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ವಸಂತನರಸಾಪುರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಎಸ್ ಮಾಲ್ ಬಳಿಯಿರುವ ಈ ಸೇತುವೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು, ಈ ಸೇತುವೆ ಪುನರ್ ನಿರ್ಮಾಣದಿಂದ ಸಂಚಾರ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುವಾಲಿದೆ ಎಂದರಲ್ಲದೆ ನಿಗದಿತ ಅವಧಿಯೊಳಗೆ ಗುಣಮಟ್ಟದ ಸೇತುವೆ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ನಾರಾಯಣಪ್ಪ ಅವರನ್ನು ಅಭಿನಂದಿಸಿದರು.
ಶಾಸಕರಾದ ಬಿ. ಸುರೇಶ್‌ಗೌಡ, ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಹುಲಿ ನಾಯ್ಕರ್, ಮಾಜಿ ಸಚಿವ ರೇವಣ್ಣ, ಜಿಲ್ಲಾಧಿಕಾರಿ ಸುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತಿ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, , ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಮಂಜಪ್ಪ, ಅಧೀಕ್ಷಕ ಇಂಜಿನಿಯರ್ ಜಿ.ಸಿ.ಜಗದೀಶ್, ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್, ಸಹಾಯಕ ಇಂಜಿನಿಯರ್ ರಾಧಾಕೃಷ್ಣಹಾಜರಿದ್ದರು.
ವರದಿ: ಈಶ್ವರ್ ತುಮಕೂರು
ವಿಭಾಗ