MLAs Training Camp: ನೂತನ ಶಾಸಕರಿಗೆ ತರಬೇತಿ ಶಿಬಿರ: ವೀರೇಂದ್ರ ಹೆಗ್ಗಡೆ, ಮಹಮದ್ ಕುಂಞ ಅವರಿಗೆ ಮಾತ್ರ ಆಹ್ವಾನ-veerendra heggade mohammad kui invited to training camp for karnataka news mlas in bengaluru mgb ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mlas Training Camp: ನೂತನ ಶಾಸಕರಿಗೆ ತರಬೇತಿ ಶಿಬಿರ: ವೀರೇಂದ್ರ ಹೆಗ್ಗಡೆ, ಮಹಮದ್ ಕುಂಞ ಅವರಿಗೆ ಮಾತ್ರ ಆಹ್ವಾನ

MLAs Training Camp: ನೂತನ ಶಾಸಕರಿಗೆ ತರಬೇತಿ ಶಿಬಿರ: ವೀರೇಂದ್ರ ಹೆಗ್ಗಡೆ, ಮಹಮದ್ ಕುಂಞ ಅವರಿಗೆ ಮಾತ್ರ ಆಹ್ವಾನ

MLAs Training Camp: ಜೂನ್ 26ರಿಂದ 28ರವರೆಗೆ ಬೆಂಗಳೂರಿನ ಹೊರವಲಯದಲ್ಲಿರುವ ಎಸ್​ಡಿಎಂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕೇಂದ್ರ ಕ್ಷೇಮ ವನದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ವಿಧಾನಸಭೆಗೆ ಮೊದಲಬಾರಿ ಆಯ್ಕೆಯಾಗಿರುವ ಸುಮಾರು 70 ಶಾಸಕರು ತರಬೇತಿ ಪಡೆಯಲಿದ್ದಾರೆ. ಜೂನ್​ 26ರ ಮಧ್ಯಾಹ್ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಶಿಬಿರ ನಡೆಯುವ ಸ್ಥಳ(ಎಡಚಿತ್ರ)- ವೀರೇಂದ್ರ ಹೆಗ್ಗಡೆ(ಬಲಚಿತ್ರ)
ಶಿಬಿರ ನಡೆಯುವ ಸ್ಥಳ(ಎಡಚಿತ್ರ)- ವೀರೇಂದ್ರ ಹೆಗ್ಗಡೆ(ಬಲಚಿತ್ರ)

ಬೆಂಗಳೂರು: ಈ ಹಿಂದೆ ನೂತನ ಶಾಸಕರಿಗೆ ತರಬೇತಿ ನೀಡಲು ಕೆಲವು ಗಣ್ಯರನ್ನು ಆಹ್ವಾನಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ಇನ್ನೂ ಹಸಿರಾಗಿದೆ. ಬಹುಶಃ ತರಬೇತಿ ಮುಗಿದ ನಂತರವೂ ವಿಧಾನ ಸಭಾಧ್ಯಕ್ಷರ ಪರ ಮತ್ತು ವಿರುದ್ಧ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ. ಈ ಎಲ್ಲ ಬೆಳವಣಿಗೆಗಳ ನಡುವೆ 16ನೇ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರಿಗೆ ಎರಡು ದಿನಗಳ ತರಬೇತಿಗೆ ಸ್ಥಳ, ಸಮಯ ಮತ್ತು ಸಂಪನಮೂಲ ವ್ಯಕ್ತಿಗಳ ನಿಗದಿಯಾಗಿದೆ. ಶಾಸಕರಿಗೆ ಹೇಗೆಲ್ಲಾ ತರಬೇತಿ ನೀಡಲಾಗುತ್ತದೆ ತಿಳಿದುಕೊಳ್ಳೋಣ.

ಜೂನ್ 26ರಿಂದ 28ರವರೆಗೆ ಬೆಂಗಳೂರಿನ ಹೊರವಲಯದಲ್ಲಿರುವ ಎಸ್​ಡಿಎಂ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಕೇಂದ್ರ ಕ್ಷೇಮ ವನದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ವಿಧಾನಸಭೆಗೆ ಮೊದಲಬಾರಿ ಆಯ್ಕೆಯಾಗಿರುವ ಸುಮಾರು 70 ಶಾಸಕರು ತರಬೇತಿ ಪಡೆಯಲಿದ್ದಾರೆ. ಜೂನ್​ 26ರ ಮಧ್ಯಾಹ್ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಿದರೆ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಜಮೀರ್ ಅಹಮದ್ ಖಾನ್ ಪಾಲ್ಗೊಳ್ಳಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿಗಳು ಮತ್ತು ರಾಜ್ಯಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗಡೆ, ಮಹಮದ್ ಕುಂಞ ಅವರಿಗೆ ಮಾತ್ರ ಶಾಸಕರಿಗೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನ ನೀಡಲಾಗಿದೆ. ಇವರಿಬ್ಬನ್ನು ಹೊರತುಪಡಿಸಿದರೆ ಬೇರಾವುದೇ ಧಾರ್ಮಿಕ ವ್ಯಕ್ತಿಗಳು ಭಾಗವಹಿಸುತ್ತಿಲ್ಲ.

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಕೆಲವರ ಹೆಸರುಗಳು ಕೇಳಿ ಬರುತ್ತಿದ್ದವು. ಅವರ‍್ಯಾರಿಗೂ ಆಹ್ವಾನ ನೀಡಿದ ಹಾಗಿಲ್ಲ. 26ರಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ ಅವರು ಸದನದಲ್ಲಿ ಸದಸ್ಯರ ಭಾಗವಹಿಸುವಿಕೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು, ಅಧಿವೇಶನದ ವಿವರ, ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಮತ್ತು ಗಮನ ಸೆಳೆಯುವ ಸೂಚನೆ ಕುರಿತು ಮಾಹಿತಿ ನೀಡಲಿದ್ದಾರೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸದನದಲ್ಲಿ ಸದಸ್ಯರ ಭಾಗವಹಿಸುವಿಕೆಯ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು, ನಿಲುವಳಿ ಸೂಚನೆ, ನಿಯಮ-69, ವಿಶ್ವಾಸ ಮತ್ತು ಅವಿಶ್ವಾಸ ನಿರ್ಣಯ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ.

27 ರಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಾಸನ ರಚನೆ ಹಾಗೂ ಅದರಲ್ಲಿ ಸದಸ್ಯರುಗಳ ಭಾಗವಹಿಸುವಿಕೆ ಮತ್ತು ಉಭಯ ಸದನಗಳ ಸಂಬಂಧ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಿರಿಯ ಸದಸ್ಯರಾದ ಟಿ.ಬಿ.ಜಯಚಂದ್ರ ಅವರು ಶಾಸಕರ ಕರ್ತವ್ಯಗಳು, ಜವಬ್ದಾರಿ ಮತ್ತು ಹಕ್ಕು ಭಾದ್ಯತೆಗಳ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಮತ್ತೊಬ್ಬ ಹಿರಿಯ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್ ಅವರು ಸದಸ್ಯರು ಅಳವಡಿಸಿಕೊಳ್ಳಬೇಕಾದ ನೀತಿ ನಿಯಮಗಳು, ಪಾಲಿಸಬೇಕಾದ ನಿಯಮಗಳು ಸಂಸದೀಯ ಭಾಷೆಯ ಬಳಕೆ ಮತ್ತು ಜನ ಮೆಚ್ಚಿದ ಶಾಸಕನಾಗುವುದು ಹೇಗೆ ಎಂದು ತಿಳಿಸಿಕೊಡಲಿದ್ದಾರೆ.

ಡಾ.ವೀರೇಂದ್ರ ಹೆಗ್ಗಡೆ ಅವರು ಸಾಮರಸ್ಯ ಸಮಾಜ, ಅಭಿವೃದ್ಧಿ ಕರ್ನಾಟಕ, ಬಲಿಷ್ಠ ಭಾರತ ನಿರ್ಮಾಣದಲ್ಲಿ ಶಾಸಕರ ಪಾತ್ರ ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. ಸಂಜೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಂವಾದ ನಡೆಯಲಿದೆ. 28ರಂದು ವಿಧಾನ ಮಂಡಲದ ಸಮಿತಿಗಳು ಅವುಗಗಳಲ್ಲಿ ಸದಸ್ಯರುಗಳ ಪರಿಣಾಮಕಾರಿ ಭಾಗವಹಿಸುವಿಕೆ ಕುರಿತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿಕೊಡಲಿದ್ದಾರೆ. ಮಹಮ್ಮದ್ ಕುಂಞ ಅವರು, ಜನಪ್ರತಿನಿಧಿ ಮತ್ತು ಜನರ - ಮಾಧ್ಯಮ ಸಂಬಂಧವನ್ನು ವೃದ್ಧಿಗೊಳಿಸುವ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ.

ಮುಖ್ಯಮಂತ್ರಿ ಚಂದ್ರು ಅವರು ಶಾಸನ ಸಭೆಯಲ್ಲಿ ಕರ್ತವ್ಯದ ಹಾಸ್ಯ ಭರಿತ ನಿರ್ವಹಣೆ ಕುರಿತು ತಿಳಿಸಿಕೊಡಲಿದ್ದಾರೆ. ಸಂಜೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರು ಸಂವಾದ ನಡೆಸಲಿದ್ದಾರೆ. ಆದರೆ ಇಷ್ಟೆಲ್ಲಾ ತರಬೇತಿ ನೀಡಿದರೂ ಶಾಸಕರ ಪರಿಣಾಮಕಾರಿ ಭಾಗವಹಿಸುವಿಕೆ ಮಾತ್ರ ವರ್ಷದಿಮದ ವರ್ಷಕ್ಕೆ ಕ್ಷೀಣಿಸುತ್ತಿದೆ. 224 ಶಾಸಕರಲ್ಲಿ 30 ಸಚಿವರನ್ನು ಹೊರತುಪಡಿಸಿದರೆ ಸಕ್ರಿಯವಾಗಿ ಭಾಗವಹಿಸುವ ಶಾಸಕರ ಸಂಖ್ಯೆ 20-30 ಮಾತ್ರ. ಇಡೀ ಐದು ವರ್ಷಗಳಲ್ಲಿ ಒಂದೂ ಪ್ರಶ್ನೆಯನ್ನು ಕೇಳದ ಶಾಸಕರನ್ನು ಕಾಣಬಹುದು. ಒಂದೂ ಚರ್ಚೆಯಲ್ಲಿ ಭಾಗವಹಿಸದ ಶಾಸಕರೂ ಇದ್ದಾರೆ. ಬಹುತೇಕ ಶಾಸಕರು ಹಾಜರಾರಿ ಪುಸ್ತಕಕ್ಕೆ ಸಹಿ ಹಾಕಿ ನಿರ್ಗಮಿಸುತ್ತಾರೆ.

ಒಂದು ಕಾಲದಲ್ಲಿ ವಕೀಲರು, ಶಿಕ್ಷಣ ತಜ್ಞರು ಶಾಸನಸಭೆಗಳಿಗೆ ಆಯ್ಕೆಯಾಗಿ ಬರುತ್ತಿದ್ದರು. ಆದರೆ ಇಂದು ರಿಯಲ್ ಎಸ್ಟೆಟ್ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮಾಲೀಕರು, ಕೈಗಾರಿಕೋದ್ಯಮಿಗಳು ಆಯ್ಕೆಯಾಗಿ ಬರುತ್ತಿರುವುದು ದುರಂತವೇ ಸರಿ. ಚಿಂತೆ ಇಲ್ಲ. ಆಶಾವಾದಿಗಳಾಗಿರೋಣ. ಜುಲೈ 3ರಿಂದ ಆರಂಭವಾಗುವ ವಿಧಾನ ಮಂಡಲ ಕಲಾಪದಲ್ಲಿ ನಾವು ಆಯ್ಕೆ ಮಾಡಿ ಕಳುಹಿಸಿರುವ ಎಲ್ಲ ಶಾಸಕರು ನಮ್ಮ ಧ್ವನಿಯಾಗಿ ಶಾಸನಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ನಿರೀಕ್ಷೆ ಮಾಡೋಣ.

ವರದಿ: ಎಚ್.ಮಾರುತಿ

mysore-dasara_Entry_Point