Viral Video; 10 ನಿಮಿಷಕ್ಕೇ ಚೀನಾ ಡ್ರೈವಿಂಗ್ ಲೈಸೆನ್ಸ್ ಸಿಕ್ತು ನೋಡಿ, ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿದ ಕನ್ನಡಿಗನ ವಿಡಿಯೋ ವೈರಲ್
China Driving License; ಡ್ರೈವಿಂಗ್ ಲೈಸೆನ್ಸ್ ಪಡೆಯೋದಕ್ಕೆ ಕರ್ನಾಟಕದಲ್ಲಿ 1 ತಿಂಗಳು ಕಾಯಬೇಕು. ಆದರೆ, 10 ನಿಮಿಷಕ್ಕೇ ಚೀನಾ ಡ್ರೈವಿಂಗ್ ಲೈಸೆನ್ಸ್ ಸಿಕ್ತು ನೋಡಿ ಎಂದು ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿದ ಕನ್ನಡಿಗನ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು: ಚೀನಾ ಡಿಎಲ್ 10 ನಿಮಿಷಕ್ಕೇ ಸಿಕ್ತು, ತಿಂಗಳು ಗಟ್ಟಲೆ ಕಾಯಬೇಕಾಗಿ ಬರಲಿಲ್ಲ ಎನ್ನುತ್ತ ಕರ್ನಾಟಕದಲ್ಲಿ ಆಗಬೇಕಾದ ವ್ಯವಸ್ಥೆ ಸುಧಾರಣೆ ಕುರಿತು ಗಮನಸೆಳೆದ ಕನ್ನಡಿಗ ವ್ಲಾಗರ್‌ನ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.
ದೇಶ ಸುತ್ತು ಕೋಶ ಓದು ಎಂಬುದನ್ನು ಅಕ್ಷರಶಃ ಅನುಸರಿಸುತ್ತಿರುವ ಈ ವ್ಲಾಗರ್ ಹೆಸರು ಕಿತ್ತಡಿ ಕಿರಣ್. ಚಾಮರಾಜನಗರದ ಉತ್ಸಾಹಿ ಯುವಕ. ಸದ್ಯ ಚೀನಾ ಪ್ರವಾಸದಲ್ಲಿದ್ದು, ಅಲ್ಲಿನ ಅನುಭವಗಳನ್ನು ಫೇಸ್‌ಬುಕ್ ಪೇಜ್, ಯೂಟ್ಯೂಬ್‌ಗಳಲ್ಲಿ ಹಂಚಿಕೊಳ್ಳುತ್ತಿದ್ಧಾರೆ.
ಈಗ ಮತ್ತೆ ವಿಷಯಕ್ಕೆ ಬರುವುದಾದರೆ ಹತ್ತು ನಿಮಿಷಕ್ಕೇ ಚೀನಾದಲ್ಲಿ ಡಿಎಲ್ ಸಿಗುತ್ತಾ? ಅದು ಹೇಗೆ ಎಂಬ ಸಂದೇಹವನ್ನು ಅವರು ಕಿರು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಚೀನಾದಲ್ಲಿ ಹತ್ತೇ ನಿಮಿಷಕ್ಕೆ ಸಿಗುತ್ತೆ ಡೈವಿಂಗ್ ಲೈಸೆನ್ಸ್
ವೈರಲ್ ಆಗಿರುವ ವಿಡಿಯೋದಲ್ಲಿ ಕಿತ್ತಡಿ ಕಿರಣ್ ಅವರು “ಹೇಗೆ ಚೀನಾದಲ್ಲಿ ಹತ್ತೇ ನಿಮಿಷಕ್ಕೆ ಸಿಗುತ್ತೆ ಡೈವಿಂಗ್ ಲೈಸೆನ್ಸ್” ಎಂಬುದನ್ನು ವಿವರಿಸಿರುವುದು ಹೀಗೆ -
"ನಮಸ್ಕಾರ ಕೆಕೆ. K ten ಗಾಡಿ ಮುಂದೆ ನಿಂತಿದೀನಿ ಏನಪ್ಪಾ ವಿಚಾರ ಅಂತಂದ್ರೆ ನನ್ ಕೈಯಲ್ಲಿ ಏನೋ ಒಂದು ಡಾಕ್ಯುಮೆಂಟ್ ಇದೆ. ಇದೇನು ಗೊತ್ತಾ? ಚೀನಾ ಡ್ರೈವಿಂಗ್ ಲೈಸೆನ್ಸ್. ಕಾರು ಮತ್ತು ಬೈಕ್ನ ಚೀನಾದಲ್ಲಿ ಓಡ್ಸಕ್ಕೆ ನನಗೆ ಅರ್ಹತೆ ಇದೆ ಅಂತ ಕೊಟ್ಟಿದಾರೆ. ಸೋ ಇದನ್ನ ಎಲ್ಲಿ ಮಾಡಿಸೋದು ಅಂತಂದ್ರೆ ಚೀನಾದ ಒಂದು ಆರ್‌ಟಿಒ ಆಫೀಸ್ ಅಲ್ಲಿದೆ ನೋಡಿ ಎನ್ನುತ್ತ ತನ್ನ ಬೈಕ್ ಹತ್ತಿರದಿಂದ ಕಟ್ಟಡದ ಕಡೆಗೆ ಹೊರಳಿದರು.
ನಂತರ, "ಇಲ್ನೋಡಿ ಆರ್‌ಟಿಒ ಆಫೀಸ್. ಒಳ್ಳೆ ಅರಮನೆ ಅರಮನೆ ಇದ್ದಂಗ ಐತೆ. ಪಾಯಿಂಟ್ ಏನ್ ಗೊತ್ತಾ ಈ ಲೈಸನ್ಸ್‌ನ ತಗೋಳಕ್ಕೆ ಮ್ಯಾಕ್ಸಿಮಮ್ ಎಷ್ಟು ದಿನ ತಗೊಂಡಿರಬಹುದು. ನಮ್ಮೂರಲ್ಲಿ ಒಂದು ತಿಂಗಳು ಬೇಕು. ಇಲ್ಲಿ ಬರಿ ಹತ್ತೇ ನಿಮಿಷ.
ಈ ಕೆಲಸಕ್ಕೆ ಯಾವುದೇ ಏಜೆಂಟ್ ಬೇಕಾಗಿಲ್ಲ ಯಾರೂ ಬೇಕಾಗಿಲ್ಲ. ಪ್ರೋಪರ್ ಡಾಕ್ಯುಮೆಂಟ್ ಇದ್ದರೆ ಸಾಕು. ಅಷ್ಟು ಕೊಟ್ಟರೆ ಪಟ್ಟಂತ ಲ್ಯಾಮಿನೇಟ್ ಮಾಡಿರುವ ಲೈಸೆನ್ಸ್ ಕೊಡ್ತಾರೆ. ಸೋ ಕೆ10 ಚಾಮರಾಜನಗರದ ಹುಡುಗ ಇವತ್ತು ಚೀನಾದ ಲೈಸೆನ್ಸ್ ಪಡ್ಕೊಂಡು ಗಾಡಿನ ಓಡುಸ್ತಾ ಇದ್ದೇನೆ. ಖುಷಿ ಆಗ್ತಿದೆ.
ಈ ವ್ಯವಸ್ಥೆ ಏನಿದ್ಯೋ ಈ ವ್ಯವಸ್ಥೆ ನಮ್ಮ ಊರಲ್ಲೂ ಕೂಡ ಬರ್ಬೇಕು ಅನ್ನೋದೇ ನನ್ನ ಆಸೆ. ಈ ಅಪ್ಡೇಟ್ ಯಾಕೆ ಕೊಟ್ಟೆ ಅಂತಂದ್ರೆ, ವ್ಯವಸ್ಥೆಗಳನ್ನ ನಾವು ಕಂಪೇರ್ ಮಾಡ್ಕೊಳೋಣ ನಮ್ಮಲ್ಲಿ ಏನು ಒಳ್ಳೇದು ಬರ್ಬೇಕು ಅಥವಾ ಚೇಂಜಸ್ ಆಗ್ಬೇಕು ಅನ್ನೋದರ ಬಗ್ಗೆ ಚಿಂತಿಸೋಣ. ಇದರಲ್ಲಿ ಯಾವುದೇ ರೀತಿ ರಾಜಕೀಯ ಬೇಡ ಇಷ್ಟ್ ಹೇಳ್ತಾ ನಾನು ನಿಮ್ಮ ಕಿತ್ತಡಿ ಕಿರಣ್ ಜೈ ಹಿಂದ್ ಜೈ ಕರ್ನಾಟಕ ಎಂದು ಹೇಳಿ ಕಿತ್ತಡಿ ಕಿರಣ್ ವಿಡಿಯೋ ಸಂದೇಶ ಮುಗಿಸಿದ್ದಾರೆ.
ಹತ್ತೇ ನಿಮಿಷಕ್ಕೆ ಸಿಗುತ್ತೆ ಡೈವಿಂಗ್ ಲೈಸೆನ್ಸ್ - ವೈರಲ್ ವಿಡಿಯೋ
ಫೇಸ್‌ಬುಕ್‌ನಲ್ಲಿ ವಿಡಿಯೋಕ್ಕೆ 300ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಅಲ್ಲದೆ, 1200ಕ್ಕೂ ಹೆಚ್ಚು ಶೇರ್ ಆಗಿದ್ದು, 23 ಸಾವಿರದಷ್ಟು ವೀಕ್ಷಣೆಯಾಗಿದೆ. ಇದೂ ಅಲ್ಲದೆ, ಈ ವಿಡಿಯೋವನ್ನು ಕೆಲವರು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಚೇತನ್ ಸೂರ್ಯ ಅವರು ಎಕ್ಸ್ ಖಾತೆಯಲ್ಲಿ ಕಿತ್ತಡಿ ಕಿರಣ್ ಅವರ ರೀಲ್ಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಅಲ್ಲೂ ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರ್‌ಟಿಒ ಕಚೇರಿಗಳಲ್ಲಿ ಆಗಬೇಕಾದ ಸುಧಾರಣೆಗಳ ಕಡೆಗೆ ಗಮನಹರಿಸಬೇಕು ಎಂಬ ಅಂಶಕ್ಕೆ ಅನೇಕರು ಸಹಮತ ವ್ಯಕ್ತಪಡಿಸಿದ್ದಾರೆ.