Viral video:ಈಗ ಕಾಳಿಂಗ ಸರ್ಪಗಳ ಮಿಲನ ಸಮಯ, ನಿಜಕ್ಕೂ ಕುತೂಹಲಕಾರಿ ಕ್ಷಣಗಳಿವು, ವಿಡಿಯೋ ನೋಡಿ
ಕಾಳಿಂಗ ಮರಿಗಳ ಜೀವನ ಶೈಲಿ ಇನ್ನೂ ನಿಗೂಢವಾಗಿ ಉಳಿದಿದೆ.4-6 ಅಡಿ ಉದ್ದದ ಕಾಳಿಂಗಗಳು ಎಲ್ಲಿರುತ್ತವೆ?ಅವುಗಳ ಆಹಾರವೇನು?ಅವು ಯಾರ ಕಣ್ಣಿಗೆ ಬೀಳದೆ ಇರಲು ಕಾರಣವೇನು?, ಜೀವನ ಹೇಗಿರುತ್ತದೆ? ಕರ್ನಾಟಕದ ಮಲೆನಾಡು ಸೇರಿದಂತೆ ಹಲವು ಕಡೆಗಳಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆದೇ ಇವೆ. ಈ ಕುರಿತು ನಾಗರಾಜ ಬೆಳ್ಳೂರು ಅವರ ಮಾಹಿತಿ ಪೂರ್ಣ ಬರಹ ಇಲ್ಲಿದೆ.
ಅದು ಬರೋಬ್ಬರಿ 12 ಅಡಿ ಉದ್ದದ 7.5 ಕೆಜಿ ತೂಕದ ಗಂಡು ಕಾಳಿಂಗ ಸರ್ಪ. ಮನೆಯ ಕೊಟ್ಟಿಗೆ ಪಕ್ಕದ ಶೆಡ್ಡಿನೊಳಗೆ ಅವಿತು ಕುಳಿತಿತ್ತು, ಅದನ್ನು ಸರಾಗವಾಗಿ ಚೀಲದೊಳಗೆ ತುಂಬಿ ತಣ್ಣಗಿನ ನೆರಳಿನ ಜಾಗದಲ್ಲಿ ಇರಿಸಿ ಅಲ್ಲಿರುವ ಜನರಿಗೆ ಕಾಳಿಂಗ ಸರ್ಪದ ಬಗ್ಗೆ ಕೆಲವು ಮಾಹಿತಿ ತಿಳಿಸುವ ಕೆಲಸ ಮಾಡಿದ ನಂತರ ಹಾವನ್ನು ಬಿಡುಗಡೆ ಮಾಡಬೇಕಿತ್ತು.
ಇಂತಹ ಘಟನೆಗಳು ಈಗ ಮಲೆನಾಡ ಭಾಗದಲ್ಲಿ ಸಾಮಾನ್ಯ. ಅದು ಮಾರ್ಚ್ ಏಪ್ರಿಲ್ ಬಂದರೆ ಕಾಳಿಂಗ ಸರ್ಪಗಳ ಚಟುವಟಿಕೆ ಜೋರೇ ಆಗುತ್ತದೆ.
ಕಾಳಿಂಗ ಸರ್ಪಗಳು ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಮಿಲನ ಕ್ರಿಯೆಯಲ್ಲಿ ತೊಡಗುತ್ತವೆ,ಮೇ ತಿಂಗಳಲ್ಲಿ ಹೆಣ್ಣು ಕಾಳಿಂಗ ಗೂಡು ಕಟ್ಟಿ 20-30 ಮೊಟ್ಟೆಗಳನ್ನು ಇಡುತ್ತದೆ, ಮುಂದೆ ಮಳೆಗಾಲ ಶುರುವಾಗುವುದರಿಂದ ಸುರಿವ ಮಳೆ ನೀರು ಗೂಡು ನುಗ್ಗದಂತೆ ಗೂಡನ್ನು ಬಿಗಿಗೊಳಿಸುತ್ತದೆ, ಒಂದು ವೇಳೆ ಮೊಟ್ಟೆ ಇರುವ ಚೇಂಬರ್ ಒಳಗೆ ನೀರು ನುಗ್ಗಿದರೆ ಮೊಟ್ಟೆಗಳಿಗೆಲ್ಲ ಫಂಗಸ್ ಬಂದು ಹಾಳಾಗುತ್ತವೆ. ಮೂರು ನಾಲ್ಕು ದಿನಗಳ ಕಾಲ ಗೂಡನ್ನು ಬಿಗಿಗೊಳಿಸುವ ಪ್ರಕ್ರಿಯೆ ಮುಗಿಸಿ ತನ್ನ ಪಾಡಿಗೆ ತಾನು ಹೊರಟು ಹೋಗುತ್ತದೆ. ಬಹುತೇಕ ಜನ ತಾಯಿ ಕಾಳಿಂಗ,ಮರಿಗಳು ಹೊರ ಬರುವವರೆಗೂ ಗೂಡನ್ನು ಕಾಯುತ್ತದೆ ಎಂದು ಹೇಳುತ್ತಾರೆ. ಆದರೆ ಮೊಟ್ಟೆಯಿಟ್ಟು ಗೂಡನ್ನು ಹೊರಗಿನಿಂದ ಬಿಗಿಗೊಳಿಸಿದ ಮೇಲೆ ತಾಯಿ ಕಾಳಿಂಗ ಅಲ್ಲಿರದೆ ಹೊರಟು ಹೋಗುತ್ತದೆ.
ಸುಮಾರು ಎರಡೂವರೆ ತಿಂಗಳ ನಂತರ(ಜುಲೈ ಆಗಸ್ಟ್) ಮರಿಗಳು ಹೊರಬರುತ್ತವೆ. ಹುಟ್ಟಿದ ಮರಿಗಳು ಪೊರೆ ಕಳಚುತ್ತವೆ, ಮರಿಗಳು ಸುಮಾರು 45-55 ಸೆಂಟಿ ಮೀಟರ್ ಉದ್ದ ಹಾಗು 20-25 ಗ್ರಾಂ ತೂಕ ಹೊಂದಿರುತ್ತವೆ. ಹುಟ್ಟಿದ ಮರಿಗಳಿಗೆ ಆಹಾರ ಸಿಗದೆ, ಮುಂಗುಸಿ ನವಿಲು ಉಡ ತನ್ನದೆ ಜಾತಿಯ ಸ್ವಜಾತಿ ಭಕ್ಷಣೆಗೆ (Cannibalism) ಬಲಿಯಾಗಿ, ಉಳಿದವು ಬದುಕುಳಿಯಬೇಕು,ಇಷ್ಟೆಲ್ಲ ಸವಾಲು ಎದುರಿಸಿದ ನಂತರ ಒಂದೆರಡು ಮರಿಗಳು ಬದುಕಿ ಉಳಿದರೆ ಪುಣ್ಯ.
ನೀವು ಎಚ್ಚರಿಕೆ ವಹಿಸಿ
ಕಾಳಿಂಗಗಳು ಹೆಣೆಯಾಡುವ (Mating season ) ತಿಂಗಳು ಕೆಲವೇ ದಿನಗಳಲ್ಲಿ ಶುರುವಾಗುವುದರಿಂದ ಬಹಳಷ್ಟು ಜಾಗೃತಿ ವಹಿಸಲೇಬೇಕು.
ವರ್ಷದ ಒಂದೆರಡು ತಿಂಗಳು ಮಾತ್ರ ಮಿಲನ ಕ್ರಿಯೆಯಲ್ಲಿ ತೊಡಗುವ ಕಾಳಿಂಗಗಳನ್ನು ಇಂತಹ ಸಮಯದಲ್ಲಿ ಹಿಡಿದು ಎಲ್ಲೆಲ್ಲೊ ಬಿಡುವಂತಿಲ್ಲ. ಗಂಡು ಕಾಳಿಂಗಗಳು 7-8 ಕಿ.ಮಿ. ವ್ಯಾಪ್ತಿಯೊಳಗೆ ತಮ್ಮ ಜೀವನ ಕಳೆಯುತ್ತವೆ, ಮಿಲನದ ತಿಂಗಳಲ್ಲಿ ಹೆಣ್ಣಿಗಾಗಿ 10-12 ಕಿ.ಮಿ. ಆಚೆಗೂ ಹೋಗಿ ಮೂಲ ಆವಾಸಕ್ಕೆ ವಾಪಾಸಾಗಬಲ್ಲವು. ವರ್ಷದ ಬೇರೆ ತಿಂಗಳಲ್ಲಿ ಗಂಡುಗಳನ್ನು ಹಿಡಿದಾಗ 2-3 ಕಿ.ಮಿ. ದೂರ ಬಿಟ್ಟರೂ ಅಡ್ಡಿ ಇಲ್ಲ ,ಆದರೆ mating season ಮಾತ್ರ ತೀರಾ ಹತ್ತಿರ ಬಿಟ್ಟಷ್ಟು ಒಳ್ಳೆಯದು.
ಪ್ರಾಣಿಗಳಿಗೆ ಹೊಲ ಗದ್ದೆ ತೋಟ ಎನ್ನುವ ಗಡಿಗಳಿಲ್ಲ, ಅದೇನಿದ್ದರೂ ಮನುಷ್ಯನಿಗೆ ಮಾತ್ರ. ಹಿಂದೆಲ್ಲ ಇದ್ದ ಕಾಡು ಈಗೆಲ್ಲ ಲೇಔಟ್ ತೋಟ ಹೊಲ ಗದ್ದೆಗಳಾಗಿವೆ, ಆಹಾರಕ್ಕಾಗಿ ಇತ್ತ ಬಂದಾಗ ಮನುಷ್ಯನ ಸಹವಾಸ ಬಯಸದ ಕಾಳಿಂಗಗಳು ನರ ಅಥವಾ ಸಾಕುಪ್ರಾಣಿ ಕಂಡು ಮನೆ ಕೊಟ್ಟಿಗೆ ಕಟ್ಟಿಗೆ ಶೆಡ್ಡಿನೊಳಗೆ ಅಡಗಿಕೊಳ್ಳುವುದು ಸಾಮಾನ್ಯ, ಆಗ ಸೆರೆಹಿಡಿಯುವ ಅನಿವಾರ್ಯವಿದ್ದರೆ ಹಿಡಿದು ಹತ್ತಿರದಲ್ಲೆ ಬಿಟ್ಟರೆ ಅವುಗಳ ಮೂಲ ನೆಲೆಗೆ ಮರಳಿಸಿದಂತಾಗುತ್ತದೆ.
ಕಾಳಿಂಗಗಳು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಲು ನಿರ್ದಿಷ್ಟ ದಾರಿಯನ್ನೆ ಬಳಸುತ್ತವೆ, ಉಳಿದುಕೊಳ್ಳಲು ಗೊತ್ತಿರುವ ಬಿಲ ಪೊಟರೆಗಳನ್ನೆ ಆಯ್ಕೆ ಮಾಡಿಕೊಳ್ಳುತ್ತವೆ. ತನ್ನ ಪ್ರದೇಶದ ಸಂಪೂರ್ಣ ಮಾಹಿತಿ ಗೊತ್ತಿರುತ್ತದೆ.
ದೂರದ ಹೊಸ ಜಾಗಕ್ಕೆ ಹಾವನ್ನು ಬಿಟ್ಟಾಗ ಎಲ್ಲವೂ ಅದಕ್ಕೆ ಗೊಂದಲ, ಅಲ್ಲಿರುವ ಮೂಲ ಕಾಳಿಂಗನೊಡನೆ ಜಗಳವೂ ಆಗಬಹುದು. ಹೊಸ ಕಾಳಿಂಗ ತನ್ನ ನೆಲೆ ಕಂಡುಕೊಳ್ಳಲು ವಿಫಲವಾಗಿ ಸಾವು ಕೂಡ ಸಂಭವಿಸಬಹುದು.
ಹೀಗಿರಲಿದೆ ಈ ಅವಧಿ
- ಬೇಸಿಗೆಯ ಒಂದೆರಡು ತಿಂಗಳು ಮಾತ್ರ ಮಿಲನ ಕ್ರಿಯೆ ನಡೆಸುವ ಕಾಳಿಂಗಳು ಈ ಅವಧಿಯಲ್ಲಿ ಹೆಚ್ಚಿನ ಕ್ರಿಯಾಶೀಲವಾಗಿರುವುದರಿಂದ ಕಣ್ಣಿಗೆ ಬೀಳುವುದು ಸಾಮಾನ್ಯ.
- ತೋಟ ಹೊಲ ಗದ್ದೆಗಳಲ್ಲಿ ಕಾಣಿಸಿದರೆ ಅವುಗಳು ತಾವಾಗಿಯೇ ಹೋಗಲು ಬಿಡಬೇಕು, ತೀರಾ ಅನಿವಾರ್ಯವಿದ್ದಾಗ ಮಾತ್ರ ಸೆರೆಹಿಡಿದು ಹತ್ತಿರದಲ್ಲೆ ಅವುಗಳನ್ನು ಬಿಡಬೇಕು
- ಸೆರೆ ಹಿಡಿದ ಹಾವು ಬೆದೆಗೆ ಬಂದ ಹೆಣ್ಣು ಹಾವಾಗಿದ್ದರೆ ಅದರ ವಾಸನೆ ಹಿಡಿದು ಬರುವ ಗಂಡುಗಳು ಮತ್ತೆ ಹೆಣ್ಣನ್ನು ಪತ್ತೆ ಮಾಡಲು ಇದು ಅನುಕೂಲವಾಗಲಿದೆ.
- ಸಾಮಾನ್ಯವಾಗಿ ಮಾರ್ಚ್ ತಿಂಗಳಿಂದ ಏಪ್ರಿಲ್ ವರೆಗೆ ಕಾಳಿಂಗ ಸರ್ಪಗಳ ಮಿಲನದ ಕಾಲವಾಗಿರುತ್ತದೆ
- ಮೇ ತಿಂಗಳಿಂದ ಆಗಸ್ಟ್ ವರೆಗೆ ಗೂಡುಮಾಡಿ ಮೊಟ್ಟೆ ಇಟ್ಟು ಮರಿ ಹೊರಬರುವ ಅವಧಿಯಾಗಿರುತ್ತದೆ
- ವಯಸ್ಸಿಗೆ ಬಂದ ಬಂದ ಹೆಣ್ಣು ತಾನು ಮಿಲನ ಕ್ರಿಯೆಗೆ ಸಿದ್ದ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತ ರಸಾಯನ (Sex Pheromone) ಹೊರ ಹಾಕಿ ವ್ಯಕ್ತಪಡಿಸುತ್ತಾಳೆ
* ಹೆಣ್ಣಿನ ವಾಸನೆ ಹಿಡಿದು ಬರುವ ಸುತ್ತಮುತ್ತಲಿನ ಗಂಡುಗಳು ಹೆಣ್ಣಿಗಾಗಿ ಹೋರಾಟ (Combat) ನಡೆಸುತ್ತವೆ
- ಬೆದೆಯ ಸಮಯದಲ್ಲಿ ಗಂಡುಗಳು 10-11 ಕಿ ಮೀ ದೂರದವರೆಗೂ ಹೋಗಿ ಹೆಣ್ಣನ್ನು ಹುಡುಕಿ ಮೂಲ ನೆಲೆಗೆ ವಾಪಾಸಾಗಬಲ್ಲವು. ಬೆದೆಗೆ ಬಂದ ಹೆಣ್ಣು ಹಾವನ್ನು ಹುಡುಕಿ ಮೂರ್ನಾಲ್ಕು ಗಂಡುಗಳು ಒಂದೇ ಕಡೆ ಕಾಣಿಸಿಕೊಳ್ಳಬಹುದು
- ಗೆದ್ದ ಗಂಡುಹೆಣ್ಣಿನ ಜೊತೆ ಮಿಲನ ಕ್ರಿಯೆ ನಡೆಸುತ್ತದೆ. ಕಾಳಿಂಗ ಸರ್ಪಗಳು ತನ್ನದೇ ವ್ಯಾಪ್ತಿಯೊಳಗೆ( Home range) ಬದುಕುತ್ತವೆ.
( ಬರಹ: ನಾಗರಾಜ್ ಬೆಳ್ಳೂರು, ಶಿವಮೊಗ್ಗ ಜಿಲ್ಲೆ)