Year in Review 2022: ಕರ್ನಾಟಕದ ರಾಜಕೀಯ ಕ್ಷೇತ್ರದ ಪಕ್ಷಿನೋಟ: ಕೊನೆಯೇ ಇಲ್ಲದ ಪಕ್ಷಗಳ ಚದುರಂಗದಾಟ..!
ನಿಮ್ಮ ನೆಚ್ಚಿನ 'ಹಿಂದುಸ್ತಾನ್ ಟೈಮ್ಸ್ ಕನ್ನಡ' ಡಿಜಿಟಲ್ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ. ಇದರ ಕೊನೆಯ ಸರಣಿಯಲ್ಲಿ 2022ರಲ್ಲಿ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ನಡೆದ ಬೆಳವಣಿಗೆಗಳನ್ನು ಅವಲೋಕಿಸೋಣ.
ಬೆಂಗಳೂರು: 2022 ಸರಿದು 2023 ಬರತ್ತಿದೆ. ಈ ಮೂಲಕ ಭೂಮಿಯ ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರಿಕೊಂಡಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ ನೀ ಸಾಗುವ ದಾರಿಯನ್ನೊಮ್ಮೆ ಹಿಂತಿರುಗಿ ನೋಡು ಎಂಬಂತೆ, ಹೊಸ ವರ್ಷವನ್ನು ಸ್ವಾಗತಿಸುವ ಮೊದಲು ನಾವೆಲ್ಲರೂ 2022ರಲ್ಲಿ ದೇಶ ಸಾಗಿ ಬಂದ ದಾರಿಯ ಮೇಲೆ ಕಣ್ಣಾಡಿಸುವುದು ಅವಶ್ಯ.
ಅದರಲ್ಲೂ ದೇಶ ಮತ್ತು ರಾಜ್ಯ ರಾಜಕೀಯ ಕ್ಷೇತ್ರದಲ್ಲಿ 2022 ನಿಜಕ್ಕೂ ರೋಚಕ ಕ್ಷಣಗಳನ್ನು ಹೊತ್ತು ತಂದ ವರ್ಷ ಎಂದರೆ ತಪ್ಪಾಗಲಾರದು. ವರ್ಷಪೂರ್ತಿ ನಡೆದ ರಾಜಕೀಯ ಬೆಳವಣಿಗೆಗಳು, ರಾಜಕೀಯ ಪಕ್ಷಗಳು, ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರಗಳು, ರಾಜಕೀಯ ನಿರ್ಣಯಗಳಿಂದ ದೇಶದ ಮೇಲಾದ ಪ್ರಭಾವ ಹೀಗೆ ಎಲ್ಲವನ್ನೂ ಅವಲೋಕಿಸುವುದು ಅವಶ್ಯ.
ಈ ಹಿನ್ನೆಲೆಯಲ್ಲಿ ನಿಮ್ಮ ನೆಚ್ಚಿನ 'ಹಿಂದುಸ್ತಾನ್ ಟೈಮ್ಸ್ ಕನ್ನಡ' ಡಿಜಿಟಲ್ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ.
ಅದರಂತೆ ಈ ಲೇಖನದ ಕೊನೆಯ ಸರಣಿಯಲ್ಲಿ ನಾವು, ಪ್ರಸಕ್ತ ವರ್ಷ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳತ್ತ ಗಮನಹರಿಸೋಣ. ಪಕ್ಷವಾರು ಬೆಳವಣಿಗೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
ಬಿಜೆಪಿ:
ಕರ್ನಾಟಕದ ಆಡಳಿತಾರೂಢ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ), ಹಲವು ಕಾರಣಗಳಿಗಾಗಿ ರಾಜ್ಯ ರಾಜಕೀಯ ವಲಯದಲ್ಲಿ ಸದಾ ಚರ್ಚೆಗೆ ಒಳಪಟ್ಟ ಪಕ್ಷವಾಗಿದೆ. ಆಡಳಿತ ಪಕ್ಷ ಎಂಬುದು ಒಂದು ಕಡೆಯಾದರೆ, ಪಕ್ಷದ ರಾಜಕೀಯ ಚಟುವಟಿಕೆಗಳು, ವಿಪಕ್ಷಗಳ ಮೇಲಿನ ಅದರ ಆಕ್ರಾಮಕ ನಡೆ ಇವೆಲ್ಲವೂ ಚರ್ಚೆಗೆ ಇಂಬು ನೀಡಿವೆ.
ರಾಜಕೀಯ ಪಕ್ಷವೊಂದು ಇಡೀ ವರ್ಷ ಸಾಗಿಬಂದ ದಾರಿಯನ್ನು ಒಂದೇ ಲೇಖನದಲ್ಲಿ ಎಳೆಎಳೆಯಾಗಿ ಬಿಚ್ಚಿಡುವುದು ಅಸಾಧ್ಯವಾದ ಮಾತು. ಹೀಗಾಗಿ ಬಿಜೆಪಿ ಪ್ರಸಕ್ತ ವರ್ಷದಲ್ಲಿ ಕೈಗೊಂಡ ಕೆಲವು ಪ್ರಮುಖ ನಿರ್ಣಯಗಳ ಬಗ್ಗೆ ಇಲ್ಲಿ ಚರ್ಚೆ ಮಾಡೋಣ.
ಎಲ್ಲರಿಗೂ ಗೊತ್ತಿರುವಂತೆ ಹಿಂದುತ್ವ ಬಿಜೆಪಿಯ ಮೂಲ ಸಿದ್ಧಾಂತಗಳಲ್ಲಿ ಒಂದು. ಹಿಂದುತ್ವದ ಆಧಾರದ ಮೇಲೆ ಬಿಜೆಪಿ ತನ್ನ ರಾಜಕೀಯ ಚಟುವಟಿಕೆಗಳನ್ನು ನಿರ್ಧರಿಸುತ್ತದೆ. ಅದರಂತೆ ರಾಜ್ಯದಲ್ಲಿ ಈ ವರ್ಷ ಹಲವು ಹಿಂದೂ ಕಾರ್ಯಕರ್ತರ ಕಗ್ಗೊಲೆ ಪ್ರಕರಣಗಳಲ್ಲಿ, ಬಿಜೆಪಿ ಹಿಂದೂಪರ ನಿಲುವುಗಳನ್ನು ಪ್ರದರ್ಶಿಸಿತು. ಆದರೂ ತಾನು ಅಧಿಕಾರದಲ್ಲಿದ್ದರೂ, ಹಿಂದೂಗಳ ಕೊಲೆಯನ್ನು ತಪ್ಪಿಸುವಲ್ಲಿ ಪಕ್ಷ ವಿಫಲವಾಗಿದೆ ಎಂಬ ಟೀಕೆಯನ್ನೂ ಎದುರಿಸಿತು.
ಈ ಪೈಕಿ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ ಬಿಜೆಪಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿತ್ತು. ಬಳಿಕ ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ, ಹಬ್ಬ, ಜಾತ್ರಯ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಸ್ಥರ ನಿಷೇಧ ಮುಂತಾದ ವಿಷಯಗಳಲ್ಲಿ ಬಿಜೆಪಿ ತನ್ನ ಹಿಂದೂಪರ ನಿಲುವನ್ನು ಪ್ರದರ್ಶಿಸಿತು.- ಅಷ್ಟೇ ಅಲ್ಲದೇ ಶಾಲಾ ಪಠ್ಯದ ಕೇಸರಿಕರಣದ ಆರೋಪವನ್ನೂ ಬಿಜೆಪಿ ತುಸು ಧೈರ್ಯದಿಂದಲೇ ಎದುರಿಸಿದೆ.
ಅಲ್ಲದೇ ಅಧಿಕಾರದಲ್ಲಿದ್ದು ತಾನು ಮಾಡಿರುವ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ಮನವರಿಕೆ ಮಾಡುವ ದೃಷ್ಟಿಯಿಂದ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನೂ ಹಮ್ಮಿಕೊಂಡಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಈ ಯಾತ್ರೆ ತಲುಪಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯದ ಪ್ರಮುಖ ನೇತಾರರು ಇದರಲ್ಲಿ ಭಾಗವಹಿಸಿದ್ದರು.
ಅದೇ ರೀತಿ ವರ್ಷದ ಕೊನೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ, ಕಳಸಾ-ಬಂಡೂರಿ ಯೋಜನೆ ಡಿಪಿಆರ್‌ಗೆ ಕೇಂದ್ರದ ಅನುಮತಿ ಪಡೆದುಕೊಂಡಿದ್ದು, ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಪ್ರತ್ಯೇಕ ಪ್ರವರ್ಗ ರಚನೆ ಮಾಡಿದ್ದು, ಹೀಗೆ ಮುಂಬರುವ ವಿಧಾನಸಭೆ ಚುನಾವಣೆಗೆ ತನಗೆ ಅನುಕೂಲ ಕಲ್ಪಿಸಬಲ್ಲ ಹಲವು ಮಹತ್ವದ ನಿರ್ಣಯಗಳನ್ನು ಬಿಜೆಪಿ ಕೈಗೊಂಡಿದೆ.
ರಾಜ್ಯದಲ್ಲಿ ಇದುವರೆಗೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದ, ಆಪರೇಷನ್ ಕಮಲ ಮಾಡಿ ಅನ್ಯ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ 2023ರಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್:
ದೇಶದ ಅನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ದುರ್ಬಲವಾಗಿದ್ದರೂ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಈಗಲೂ ಪ್ರಬಲವಾಗಿದೆ. ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ಪಕ್ಷವನ್ನು ಹೈರಾಣು ಮಾಡುವುದರಲ್ಲಿ ಸಫಲವಾಗಿದೆ. ತನ್ನ ಜಾತ್ಯಾತೀತ ನಿಲುವನ್ನು ಪ್ರದರ್ಶಿಸಿರುವ ಕಾಂಗ್ರೆಸ್, ಹಿಜಾಬ್ ವಿವಾದ, ಹಿಂದೂ-ಮುಸ್ಲಿಂ ಯುವಕರ ಕಗ್ಗೊಲೆ, ಶಾಲಾ ಪಠ್ಯ ಕೇಸರಿಕರಣ ಮುಂತಾದ ವಿಷಯಗಳಲ್ಲಿ ತನ್ನ ಜಾತ್ಯಾತೀತ ನಿಲುವುಗಳಿಗೆ ತಕ್ಕಂತೆ ವರ್ತಿಸಿತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಆರೋಪದ ಹೊರತಾಗಿಯೂ, ಇಬ್ಬರೂ ನಾಯಕರು ಪಕ್ಷದ ಎಲ್ಲಾ ಸಭೆ-ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇದನ್ನು ಅಲ್ಲಗಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ನಡೆದ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸ್ನೇಹವನ್ನು ಪ್ರದರ್ಶಿಸಿದರು. ಅಲ್ಲದೇ ದೇಶದ ಕೋಮುಸೌಹಾರ್ದತೆಗಾಗಿ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ, ಕರ್ನಾಟಕದಲ್ಲಿ ಸಂಚರಿಸಿದಾಗಲೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಟ್ಟಿಗೆ ಕಾಣಿಸಿಕೊಂಡರು. ಈ ಯಾತ್ರೆ ರಾಜ್ಯ ಕಾಂಗ್ರೆಸ್ ಘಟಕಕ್ಕೆ ನವಚೈತನ್ಯ ನೀಡಿದೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಕೊಡಗು ಪ್ರವಾಸದ ವೇಳೆ ಅವರ ಬೆಂಗಾವಲು ಪಡೆ ಮೇಲೆ ಮೊಟ್ಟೆ ಎಸೆದ ಪ್ರಕರಣ ಮತ್ತು ಇದನ್ನು ವಿರೋಧಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೊಡಗು ಚಲೋ ಚಳುವಳಿ ನಡೆಸಲು ಕಾಂಗ್ರೆಸ್ ಮುಂದಾಗಿದ್ದು ಕೂಡ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಇನ್ನು ಕನ್ನಡಿಗರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಅಕ್ಟೋಬರ್‌ನಲ್ಲಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದೂ ಕೂಡ, ರಾಜ್ಯ ಕಾಂಗ್ರೆಸ್ ಪಾಲಿಗೆ ಬೂಸ್ಟರ್ ಡೋಸ್ ಆಗಿ ಕೆಲಸ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
2018ರಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದ ಕಾಂಗ್ರೆಸ್, 2023ರಲ್ಲಿ ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಏರುವ ಶಪಥ ಮಾಡಿದ್ದು, ಈ ನಿಟ್ಟಿನಲ್ಲಿ ಈಗಿನಿಂದಲೇ ಚುನಾವಣೆ ತಯಾರಿ ನಡೆಸುತ್ತಿದೆ.
ಚುನಾವಣೆ ಹತ್ತಿರವ ಬರುತ್ತಿದ್ದಂತೇ ಖಂಡಿತವಾಗಿಯೂ ಕಾಂಗ್ರೆಸ್ ಮತ್ತಷ್ಟ ರಣೋತ್ಸಾಹದೊಂದಿಗೆ ಬಿಜೆಪಿಯನ್ನು ಎದುರಿಸಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಜೆಡಿಎಸ್:
ಇನ್ನು ರಾಜ್ಯದ ಮೂರನೇ ಪ್ರಮುಖ ಪಕ್ಷವಾದ ಜೆಡಿಎಸ್ ಕೂಡ ಈ ವರ್ಷ ಸದ್ದು ಮಾಡಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ವಿಧಾನಸಭೆಯಲ್ಲೂ ಹಲವಾರು ವಿಷಯಗಳಲ್ಲಿ ಸರ್ಕಾರವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಕೂಡ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.
2023ರಲ್ಲಿ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಜೆಡಿಎಸ್ ಹೇಳುತ್ತಿದೆಯಾದರೂ, ಅದು ಕಷ್ಟಸಾಧ್ಯ ಎಂಬುದು ಸ್ವತಃ ಅದರ ನಾಯಕರಿಗೂ ಗೊತ್ತಿದೆ. ಆದಾಗ್ಯೂ ಪಕ್ಷದಲ್ಲಿ ಚುನಾವಣಾ ರಣೋತ್ಸಾಹ ಜೋರಾಗಿರುವುದು ಕಂಡುಬರುತ್ತಿದೆ.
ಒಟ್ಟಿನಲ್ಲಿ 2023ರ ವಿಧಾನಸಭೆ ಚುನಾವಣೆಗೆ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ರಾಜ್ಯದ ಮತದಾರ ಯಾರ ಕೊರಳಿಗೆ ವಿಜಯದ ಮಾಲೆ ಹಾಕಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.
ವಿಭಾಗ