Karnataka Bandh Highlights: ಕಾವೇರಿ ನೀರು ವಿವಾದ, ಕರ್ನಾಟಕ ಬಂದ್ ಪೂರ್ಣ, ಮರುಪರಿಶೀಲನೆ ಅರ್ಜಿ ಸಲ್ಲಿಕೆಗೆ ಕರ್ನಾಟಕ ಸರ್ಕಾರದ ತೀರ್ಮಾನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bandh Highlights: ಕಾವೇರಿ ನೀರು ವಿವಾದ, ಕರ್ನಾಟಕ ಬಂದ್ ಪೂರ್ಣ, ಮರುಪರಿಶೀಲನೆ ಅರ್ಜಿ ಸಲ್ಲಿಕೆಗೆ ಕರ್ನಾಟಕ ಸರ್ಕಾರದ ತೀರ್ಮಾನ

ಕರ್ನಾಟಕ ಬರಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ತಮಿಳುನಾಡಿಗೆ ಅವರ ಬೇಡಿಕೆಯಷ್ಟು ನೀರು ಬಿಡುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಇಂದು (ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

Karnataka Bandh Highlights: ಕಾವೇರಿ ನೀರು ವಿವಾದ, ಕರ್ನಾಟಕ ಬಂದ್ ಪೂರ್ಣ, ಮರುಪರಿಶೀಲನೆ ಅರ್ಜಿ ಸಲ್ಲಿಕೆಗೆ ಕರ್ನಾಟಕ ಸರ್ಕಾರದ ತೀರ್ಮಾನ

04:28 PM ISTSep 29, 2023 07:37 PM Umesha Bhatta P H
  • twitter
  • Share on Facebook
04:28 PM IST

Karnataka Bandh on Sep 29th Highlights: ಕರ್ನಾಟಕದಲ್ಲಿ ಬರಪರಿಸ್ಥಿತಿ ಇದ್ದು, ಜಲಾಶಯಗಳು ಭರ್ತಿ ಆಗದಿರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಇಂದಿನ (ಸೆ.29) ಕರ್ನಾಟಕ ಬಂದ್‌ ಯಶಸ್ವಿಯಾಗಿದೆ. ಈ ಬಂದ್ ಮತ್ತು ಇದಕ್ಕೆ ಸಂಬಂಧಿಸಿದ ದಿನದ ವಿದ್ಯಮಾನಗಳ ಹೈಲೈಟ್ಸ್ ಇಲ್ಲಿವೆ.

Fri, 29 Sep 202302:17 PM IST

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ, ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮತ್ತು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ದತೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೇಕೆದಾಟು ಯೋಜನೆಗೆ ಇನ್ನಷ್ಟು ಬಲ ತುಂಬುತ್ತ, ಅದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು ಎಂದು ಸಿಎಂ ಹೇಳಿದರು.

Fri, 29 Sep 202302:12 PM IST

ನದಿ ನೀರು ವಿವಾದ ಕುರಿತು ಸರ್ಕಾರ ಸಲಹಾ ಸಮಿತಿ ರಚಿಸುವಂತೆ ತಜ್ಞರ ಸಲಹೆ

ಕಾವೇರಿ ಅಷ್ಟೇ ಅಲ್ಲ, ಮಹದಾಯಿ ಸೇರಿ ರಾಜ್ಯದ ಎಲ್ಲ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ, ಸದಾ ನಿಗಾ ಇಟ್ಟು ಅಧ್ಯಯನ ನಡೆಸುತ್ತ ಸರ್ಕಾರಕ್ಕೆ ಸಲಹೆ ನೀಡಲು ಸಲಹಾ ಸಮಿತಿ ರಚಿಸಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Fri, 29 Sep 202302:07 PM IST

ಕಾವೇರಿ ನೀರು ಹಂಚಿಕೆ ಕುರಿತ ಮಹತ್ವದ ಸಭೆ ಮುಕ್ತಾಯ, ಸಿಎಂ ಮತ್ತು ಡಿಸಿಎಂ ಸುದ್ದಿಗೋಷ್ಠಿ

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್‌ಗಳ ಜತೆಗಿನ ಮಹತ್ವದ ಸಭೆ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಕರ್ನಾಟಕ ಬಂದ್ ಶಾಂತಿಯುತವಾಗಿತ್ತು ಎಂದು ಪ್ರತಿಭಟನಾಕಾರರಿಗೆ, ಕರ್ನಾಟಕ ಜನತೆಗೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

Fri, 29 Sep 202302:05 PM IST

ತಮಿಳುನಾಡಿಗೆ ಕಾವೇರಿ ನೀರು, ನಿವೃತ್ತ ನ್ಯಾಯಮೂರ್ತಿಗಳು, ನೀರಾವರಿ ತಜ್ಞರು, ಮಾಜಿ ಅಡ್ವೋಕೇಟ್‌ ಜನರಲ್‌ಗಳ ಜತೆಗೆ ಸಿಎಂ ಮಹತ್ವದ ಸಭೆ

ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಾದ ಪರಿಸ್ಥಿತಿ ಉದ್ಭವಿಸಿದ ಕಾರಣ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ ಗಳೊಂದಿಗೆ ಇಂದು ಸಂಜೆ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಟ್ವೀಟ್ ಮಾಡಿದೆ.

Fri, 29 Sep 202312:23 PM IST

ತಮಟೆ ಹೊಡೆದು, ತಲೆಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ

ಕರ್ನಾಟಕ ಬಂದ್‌ಗೆ ಬೆಂಬಲವಾಗಿ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಚಿಕ್ಕಮಗಳೂರಿನಲ್ಲಿ ತಮಟೆ ಬಡಿಕೊಂಡು ಮೆರವಣಿಗೆ ನಡೆಸಿದರೆ, ಕೆಲವರು ತಲೆಬೋಳಿಸಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋ ನೋಡಲು - ಕರ್ನಾಟಕಕ್ಕೆ ಕಾವೇರಿ.. ತಮಟೆ ಹೊಡೆದು, ತಲೆಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ VIDEO ಕ್ಲಿಕ್ ಮಾಡಿ.

Fri, 29 Sep 202312:20 PM IST

ಕಾವೇರಿ ನೀರಿಗಾಗಿ, ರೈತರಿಗಾಗಿ, ಮಂಡ್ಯಕ್ಕಾಗಿ ಸದಾ ಹೋರಾಟಕ್ಕೆ ಸಿದ್ಧ ಎಂದ ನಟ, ನಿರ್ದೇಶಕ ಪ್ರೇಮ್

ಮಂಡ್ಯ ಮೂಲದ ಚಿತ್ರ ನಿರ್ದೇಶಕ, ನಟ ಪ್ರೇಮ್ ಕೂಡ ಕಾವೇರಿ ಹೋರಾಟದಲ್ಲಿ ಭಾಗವಹಿಸಿದರು. ರೈತರ ಜೊತೆ ಹೆಜ್ಜೆ ಹಾಕಿದ ಪ್ರೇಮ್, ಕಾವೇರಿ ಹೋರಾಟಕ್ಕೆ, ಮಂಡ್ಯಕ್ಕಾಗಿ ಸದಾ ಸಿದ್ದ ಎಂದು ಹೇಳಿದರು. ವಿಡಿಯೋ ನೋಡಲು ಕಾವೇರಿ ನೀರಿಗಾಗಿ, ರೈತರಿಗಾಗಿ, ಮಂಡ್ಯಕ್ಕಾಗಿ ಸದಾ ಹೋರಾಟಕ್ಕೆ ನಾನು ಸಿದ್ದ; ನಟ, ನಿರ್ದೇಶಕ ಪ್ರೇಮ್‌ VIDEO ಕ್ಲಿಕ್ ಮಾಡಿ

Fri, 29 Sep 202302:04 PM IST

ಸಿದ್ಧಾರ್ಥ್‌ಗೆ ಕಾವೇರಿ ಪ್ರತಿಭಟನೆಯ ಬಿಸಿ, ವಿಡಿಯೋ ವೈರಲ್‌

ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ಖ್ಯಾತ ನಟ ಸಿದ್ಧಾರ್ಥ್‌ಗೂ ಕಾವೇರಿ ಬಿಸಿ ತಟ್ಟಿದೆ. ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಸೆ. 28ರಂದು ಪತ್ರಿಕಾಗೋಷ್ಠಿ ಸಹ ಆಯೋಜನೆಯಾಗಿತ್ತು. ಈ ವೇಳೆ ಸಿದ್ಧಾರ್ಥ್‌ ಮಾತನಾಡಲು ಆರಂಭಿಸಿದ್ದರು. ಏಕಾಏಕಿ ಆಗಮಿಸಿದ ಕನ್ನಡಪರ ಹೋರಾಟಗಾರರು, ಸುದ್ದಿಗೋಷ್ಠಿ ನಿಲ್ಲಿಸಿ ಸೌಜನ್ಯದಿಂದ ಅಲ್ಲಿಂದ ಕಳುಹಿಸಿದ್ದಾರೆ. ವಿಡಿಯೋ ನೋಡಲು - ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕರವೇ ಕಾರ್ಯಕರ್ತರು VIDEO ಕ್ಲಿಕ್ ಮಾಡಿ

Fri, 29 Sep 202302:04 PM IST

ನಟ ಸಿದ್ಧಾರ್ಥ್ ಕ್ಷಮೆ ಕೇಳಿದ ಶಿವ ರಾಜ್‌ಕುಮಾರ್

ನಿನ್ನೆ ನಡೆದ ಈ ವಿಚಾರ ನಿಜಕ್ಕೂ ಬೇಸರ ತರಿಸಿದೆ. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥ್‌ ಅವರಿಗೆ ನಾವು ಕ್ಷಮೆ ಕೇಳುತ್ತೇವೆ. ಸಿದ್ಧಾರ್ಥ್‌ ವಿ ರಿಯಲಿ ಸಾರಿ. ನಮಗೆ ಬಹಳ ನೋವಾಗಿದೆ. ಈ ತಪ್ಪು ಮತ್ಯಾವತ್ತೂ ಆಗುವುದಿಲ್ಲ. ಕನ್ನಡ ಜನ ತುಂಬ ಒಳ್ಳೆಯವರು, ಅವರು ಎಲ್ಲ ಭಾಷೆಯನ್ನೂ ಪ್ರೀತಿಸುತ್ತಾರೆ. ಎಲ್ಲ ಭಾಷೆಯ ಸಿನಿಮಾಗಳನ್ನೂ ನೋಡುವ ಜನ ಅಂದ್ರೆ ಅದು ಕರ್ನಾಟಕದವರು. ಈ ವಿಚಾರವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆ ಮರ್ಯಾದೆಯನ್ನು ನಾವು ಕಾಪಾಡಿಕೊಳ್ಳಬೇಕು. ಸುದ್ದಿಯ ವಿವರ ಓದಿಗೆ ಈ ಶೀರ್ಷಿಕೆ ಕ್ಲಿಕ್ ಮಾಡಿ - ಕ್ಷಮಿಸಿ ಸಿದ್ಧಾರ್ಥ್‌.. ಇಂಡಸ್ಟ್ರಿ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ, ಮತ್ತೆ ಹೀಗಾಗದು; ನಟ ಶಿವರಾಜ್‌ಕುಮಾರ್‌

Fri, 29 Sep 202310:37 AM IST

ಕರ್ನಾಟಕ ಬಂದ್ : ಕರ್ನಾಟಕ - ತಮಿಳುನಾಡು ಅಂತಾರಾಜ್ಯ ಬಸ್ ಸಂಚಾರಕ್ಕೆ ಅಡ್ಡಿ

ಕಾವೇರಿ ನದಿ ನೀರು ಹಂಚಿಕೆ ಕುರಿತ ಪ್ರತಿಭಟನೆ, ಕರ್ನಾಟಕ ಬಂದ್ ಜಾರಿಯಲ್ಲಿದ್ದ ಕಾರಣ ಇಂದು ತಮಿಳುನಾಡು ಕರ್ನಾಟಕ ಗಡಿ ಭಾಗದಲ್ಲಿ ಅಂತಾರಾಜ್ಯ ಬಸ್ ಸಂಚಾರಕ್ಕೆ ಅಡ್ಡಿ ಉಂಟಾಯಿತು.

Fri, 29 Sep 202310:25 AM IST

ಅಕ್ಟೋಬರ್ 5ರಂದು ಕೆಆರ್‌ಎಸ್ ಚಲೋಗೆ ವಾಟಾಳ್ ನಾಗರಾಜ್ ಕರೆ

ಕರ್ನಾಟಕ ಬಂದ್ ಮಾಡದಂತೆ ತಡೆಯಲು ಕರ್ನಾಟಕ ಸರ್ಕಾರ ಬಹಳ ಪ್ರಯತ್ನ ಮಾಡಿತು. ಆದಾಗ್ಯೂ ಜನ ಶಾಂತಿಯುತವಾಗಿ ಬಂದ್ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದ್ ತಡೆಯಲು ಪ್ರಯತ್ನಿಸಬಾರದಿತ್ತು. ಇದರಿಂದ ಅವರಿಗೆ ಕೆಟ್ಟ ಹೆಸರು. ನಾವು ಯಾರೂ ವೈಯಕ್ತಿಕ ಹಿತದೃಷ್ಟಿಯಿಂದ ಬಂದ್‌ ಮಾಡಲು ಕರೆ ಕೊಟ್ಟಿರಲಿಲ್ಲ ಎಂಬುದನ್ನು ಸರ್ಕಾರ ಗಮನಿಸಬೇಕಾಗಿತ್ತು ಎಂದು ವಾಟಾಳ್ ನಾಗರಾಜ್ ಹೇಳಿದರು.

ಇದೇ ವೇಳೆ, ಅಕ್ಟೋಬರ್ 5ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಕೆಆರ್‌ಎಸ್‌ ತನಕ ಬೈಕ್ ರಾಲಿ ನಡೆಸುವುದಾಗಿ ಹೇಳಿದರು. ಇದು ಕೆಆರ್‌ಎಸ್ ಚಲೋ ಪ್ರತಿಭಟನಾ ರಾಲಿ ಎಂದು ಅವರು ವಿವರಿಸಿದರು.

Fri, 29 Sep 202310:18 AM IST

ಅಕ್ಟೋಬರ್ 15ರ ತನಕ 3000 ಕ್ಯೂಸೆಕ್ ನೀರು ಬಿಡಲು ಆದೇಶ

ಕಾವೇರಿ ನೀರು ಹಂಚಿಕೆ ಸಮಿತಿ ನೀಡಿದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದೆ. ಈಗಾಗಲೇ ಸಮಿತಿ ನೀಡಿದ ಆದೇಶ ಪ್ರಕಾರ, ಕರ್ನಾಟಕವು ತಮಿಳುನಾಡಿಗೆ ಅಕ್ಟೋಬರ್ 15ರ ತನಕ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು. ಇದನ್ನೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು (ಸೆ.29) ಎತ್ತಿಹಿಡಿದೆ ಎಂದು ಮಾಧ್ಯಮ ವರದಿ ಹೇಳಿದೆ.

Fri, 29 Sep 202310:02 AM IST

ಕರ್ನಾಟಕ ಬಂದ್ ಮಾಡಬೇಕಾದ ಅವಶ್ಯಕತೆ ಇರಲಿಲ್ಲ - ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಇಂದು ನಡೆದ ಕರ್ನಾಟಕ ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು. ಪ್ರತಿಭಟನಾಕಾರರು ಸಹಕಾರ ನೀಡಿದ್ದಾರೆ. ನಾವು ಪ್ರತಿಯೊಬ್ಬರಿಗೂ ಪೂರ್ಣ ಪ್ರಮಾಣದ ರಕ್ಷಣೆ ನೀಡಿದ್ದೇವೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನಿಂದ ಬಂದ್‌ಗೆ ಒಪ್ಪಿಗೆ ಇಲ್ಲದ ಕಾರಣ ಬಂದ್‌ ಮಾಡದಂತೆ ನಮ್ಮ ಸಂಸ್ಥೆಗಳಿಗೆ ಸೂಚನೆ ನೀಡಿದ್ದೆವು. ಹಾಗಾಗಿ, ಬೆಂಗಳೂರು ಮತ್ತು ಕರ್ನಾಟಕ ಸುರಕ್ಷಿತವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

Fri, 29 Sep 202307:37 AM IST

ಮಾತುಕತೆಗೆ ಶಿವಣ್ಣ ಸಲಹೆ

ಬೆಂಗಳೂರು: ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸರ್ಕಾರ ಚರ್ಚೆ ಮಾಡಿ ಗೊಂದಲ ಬಗೆಹರಿಸಿಕೊಳ್ಳಲಿ ಎಂದು ನಟ ಶಿವರಾಜಕುಮಾರ್‌ ಸಲಹೆ ನೀಡಿದರು.

ಕರ್ನಾಟಕ ವಾಣಿಜ್ಯ ಮಂಡಳಿ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಶಿವರಾಜ್ ಕುಮಾರ್​, ನಾವೇ ಆಯ್ಕೆ ಮಾಡಿರುವ ಸರ್ಕಾರಗಳು ಇಂತಹ ವಿವಾದಗಳನ್ನು ಬಗೆಹರಿಸಿ ಜನ ನೆಮ್ಮದಿಂದ ಬದುಕಲು ಅವಕಾಶ ಮಾಡಿಕೊಡಬೇಕು. ನಮ್ಮ ಅನುಕೂಲಕ್ಕಾಗಿ ಪರಿಸ್ಥಿತಿ ಲಾಭ ಪಡೆದುಕೊಂಡು ಜನರಿಗೆ ತೊಂದರೆ ಕೊಡಬಾರದು ಎಂದರು.

Fri, 29 Sep 202307:18 AM IST

ಮೈಸೂರಲ್ಲಿ ಹೊಟೇಲ್‌ ಮಾಲೀಕರ ಬೆಂಬಲ

ಕಾವೇರಿ ವಿಚಾರವಾಗಿ ಕರೆ ನೀಡಲಾಗಿರುವ ಬಂದ್‌ ಬೆಂಬಲಿಸಿ ಮೈಸೂರಿನಲ್ಲಿ ಹೊಟೇಲ್‌ ಮಾಲೀಕರ ಸಂಘ ಪ್ರತಿಭಟನೆ ನಡೆಸಿತು. ಮೈಸೂರಲ್ಲಿ ಹೊಟೇಲ್‌ಗಳು ಬಂದ್‌ ಮಾಡಿ ಬೆಂಬಲ ಸೂಚಿಸಿದವು.

ನಾಡು, ನುಡಿ ವಿಚಾರದಲ್ಲಿ ನಮ್ಮ ಬೆಂಬಲ ಸದಾ ಇರಲಿದೆ ಎಂದು ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು. ಅಪರ ಜಿಲ್ಲಾಧಿಕಾರಿ ಶಿವರಾಜು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Fri, 29 Sep 202309:57 AM IST

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಪ್ರತಿಭಟನೆ

ಬೆಂಗಳೂರು: ಕಾವೇರಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯಿಂದ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು.

ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ನೇತೃತ್ವದಲ್ಲಿ ರಾಜಾಜಿನಗರದ ಭಾಷ್ಯಂ ಸರ್ಕಲ್‌ನಿಂದ ರಾಮಮಂದಿರವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

Fri, 29 Sep 202307:08 AM IST

ಕರ್ನಾಟಕ ಚಿತ್ರ ರಂಗ ಬೆಂಬಲ

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗ ಕನ್ನಡ ಚಿತ್ರ ರಂಗ ಸಂಪೂರ್ಣ ಬೆಂಬಲ ಘೋಷಿಸಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ನಡೆದ ಪ್ರತಿಭಟನೆಯಲ್ಲಿ ನಟ ಶಿವರಾಜಕುಮಾರ್‌, ಧೃವಸರ್ಜಾ, ಶ್ರೀಮುರುಳಿ, ನಟಿ ಶೃತಿ, ಗಿರಿಜಾ ಲೋಕೇಶ್‌ ಸಹಿತ ಹಲವರು ಭಾಗಿಯಾದರು.

Fri, 29 Sep 202306:38 AM IST

ಕರಾವಳಿ ಭಾಗದಲ್ಲಿ ಇಲ್ಲ ಬಂದ್‌ ಬಿಸಿ

ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಮತ್ತು ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್ ಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಕಾರವಾರ ಸಹಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್ ಸಹಿತ ಸಾರ್ವಜನಿಕ ವಾಹನಗಳು ಎಂದಿನಂತೆಯೇ ಸಂಚರಿಸಿದವು.

ಉಡುಪಿ ಜಿಲ್ಲೆಯಲ್ಲಿ ಇಂದು ಎಂದಿನಂತೆ ಜನಜೀವನ ಇದೆ. ಬಸ್ ಗಳ ಓಡಾಟ, ರಿಕ್ಷಾಗಳ ಸಂಚಾರ, ಮಾರುಕಟ್ಟೆ ಗಳು ಎಂದಿನಂತೆ ಚಟುವಟಿಕೆ ನಡೆಸಿದವು.

Fri, 29 Sep 202306:37 AM IST

ಮಂಡ್ಯದಲ್ಲಿ ರೈಲು ರೋಕೋ ಚಳವಳಿ

ರೈತಸಂಘದ ಕಾರ್ಯಕರ್ತರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ರೈಲ್‌ ರೋಕೋ ಚಳವಳಿ ಮಾಡಿದರು.

ಬೆಂಗಳೂರು ಮೈಸೂರು ರೈಲ್ವೆ ಟ್ರಾಕ್ ಮೇಲೆ ಕುಳಿತು ರೈಲು ತಡೆದು ಪ್ರತಿಭಟಿಸಿದರು. ಅನ್ನದಾತರು ಗೆಜ್ಜಲಗೆರೆ ರೈಲ್ವೆ ಟ್ರ್ಯಾಕ್‌ನತ್ತ ಬರುತ್ತಿದ್ದಂತೆ ಭದ್ರತೆಗೆ ಇದ್ದ ಪೊಲೀಸರು ರೈತರನ್ನು ತಡೆದರೂ ಪ್ರತಿಭಟನೆ ನಡೆಸಿದ್ದರಿಂದ ವಶಕ್ಕೆ ಪಡೆದರು.

Fri, 29 Sep 202306:33 AM IST

ನ್ಯಾಯದೇವತೆ ರೂಪದಲ್ಲಿ ಬಂದ ವಾಟಾಳ್‌ ಬಂಧನ

ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅವರನ್ನು ಪೊಲೀಸರು ಟೌನ್‌ ಹಾಲ್‌ ಬಳಿ ಬಂಧಿಸಿದರು.

ಬುರ್ಖಾ ಧರಿಸಿ ನ್ಯಾಯದೇವತೆ ರೂಪದಲ್ಲಿ ವಿಭಿನ್ನವಾಗಿಯೇ ಬಂದು ಸರ್ಕಾರದ ವಿರುದ್ದ ವಾಟಾಳ್‌ ಆಕ್ರೋಶ ಹೊರ ಹಾಕಿದರು.

ಪೊಲೀಸರು ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿರುವುದು ಸರಿಯಲ್ಲ. ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದರೂ ಬಂಧಿಸುತ್ತಿರುವ ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

Fri, 29 Sep 202306:28 AM IST

ಕೊಡಗಲ್ಲಿ ಇಲ್ಲ ಬಂದ್‌ ಗದ್ದಲ

ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್‌ ಗೆ ಕರೆ ನೀಡಲಾಗಿ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದರೆ, ಕಾವೇರಿ ತವರು ಕೊಡಗಿನಲ್ಲಿ ಇದರ ಬಿಸಿಯೇ ತಟ್ಟಿಲ್ಲ. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲಿಲ್ಲ. ಬಸ್‌ ಸೇವೆ ಎಂದಿನಂತೆ ಇದ್ದರೆ, ಶಾಲಾ ಕಾಲೇಜುಗಳೂ ಯಥಾರೀತಿಯಾಗಿದ್ದವು. ರಜೆ ಇರುವುದರಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

Fri, 29 Sep 202305:48 AM IST

ಚಿತ್ರದುರ್ಗದ ರಕ್ತ ಚೆಲ್ಲಿ ಆಕ್ರೋಶ

ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ರಾಜ್ಯದಲ್ಲಿ ಪ್ರತಿಭಟನೆ, ಹೋರಾಟದ ಕಿಚ್ಚು ಕಾವೇರಿದ್ದು, ಚಿತ್ರದುರ್ಗದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಪ್ರತಿಭಟನೆ ನಡೆಸಿದೆ.

ಚಿತ್ರದುರ್ಗದ ಗಾಂಧಿವೃತ್ತದಲ್ಲಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಸಿಎಂ ಸಿದ್ಧರಾಮಯ್ಯ, ತಮಿಳುನಾಡು ಸಿಎಂ ಸ್ಟಾಲಿನ್ ಚಿತ್ರದ ಮೇಲೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಡೆದ ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

Fri, 29 Sep 202305:42 AM IST

ರಾಮನಗರ: ನೀರಿನಲ್ಲಿ ಮುಳುಗಿ ಆಕ್ರೋಶ

ರಾಮನಗರದಲ್ಲಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನೀರಿನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದರು.

Fri, 29 Sep 202305:40 AM IST

ಮಂಡ್ಯದಲ್ಲೂ ಪ್ರತಿಭಟನೆ

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಗೌರೀಪುರ ಬಳಿ ರಸ್ತೆ ತಡೆ ನಡೆಸಲಾಯಿತು. ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ರೈತ ಸಂಘದ ಅಧ್ಕಕ್ಷ ಬಡಗಲಪುರ ನಾಗೇಂದ್ರ, ಪ್ರಸನ್ನಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾದರು.

ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯವರು ಮಂಡ್ಯದಲ್ಲಿ ಮೆರವಣಿಗೆ ನಡೆಸಿದರು. ಸುನಂದಾ ಜಯರಾಂ ಮತ್ತಿತರರು ಪಾಲ್ಗೊಂಡರು. ಸಮಿತಿ ಒಂದು ತಿಂಗಳಿಂದ ಧರಣಿ ನಡೆಸುತ್ತಿದೆ.

Fri, 29 Sep 202305:35 AM IST

ಚಿಕ್ಕಮಗಳೂರಲ್ಲಿ ಬೈಕ್‌ ರ್ಯಾಲಿ

ಕಾವೇರಿ ನೀರಿಗಾಗಿ ಕರೆ ನೀಡಿದ ಕರ್ನಾಟಕ ಬಂದ್ ನ ಚಿಕ್ಕಮಗಳೂರಿನಲ್ಲಿ ಪರಿಣಾಮ ಬೀರಿದೆ.

ಕಾವೇರಿಗಾಗಿ ಬೀದಿಗಿಳಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ದ್ವಿಚಕ್ರ ವಾಹನ ಗಳೊಂದಿಗೆ ಕಾವೇರಿನಮ್ಮದು ಎಂಬ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ನಗರ ಪ್ರದೇಶಗಳಲ್ಲಿ ಅಂಗಡಿಗಳನ್ನು ಮುಚ್ಚಿ ಈ ಪ್ರತಿಭಟನೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು.ಅದಕ್ಕೆ ಸ್ಪಂದಿಸಿದ ವರ್ತಕರು ಅಂಗಡಿಗಳ ಬಾಗಿಲು ಮುಚ್ಚಿ ಪ್ರತಿಭಟನೆಗೆ ಸಹಕರಿಸಿದರು.

Fri, 29 Sep 202305:33 AM IST

ತುಮಕೂರಲ್ಲೂ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ತುಮಕೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಚಾರ ದಟ್ಟಣೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಬಸ್ ಗಳ ಸಂಚಾರ ಕಂಡುಬಂದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ನಗರದ ಬಿ. ಎಚ್. ರಸ್ತೆ, ಎಂ. ಜಿ. ರಸ್ತೆ, ಜೆ. ಸಿ. ರಸ್ತೆ, ಅಶೋಕ ರಸ್ತೆ, ಮಂಡಿಪೇಟೆ ಭಾಗದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಲವು ಹೋಟೆಲ್, ಬೇಕರಿ, ದಿನಸಿ , ತರಕಾರಿ ಅಂಗಡಿಗಳು ತೆರೆದಿದ್ದವು. ಸರ್ಕಾರಿ ಶಾಲಾ ಕಾಲೇಜಿಗೆ ರಜೆ ನೀಡಿಲ್ಲ. ಆದರೆ ಬಹುತೇಕ ಖಾಸಗಿ ಶಾಲಾ ಕಾಲೇಜು ಗಳು ರಜೆ ಘೋಷಿಸಿದ್ದವು.

Fri, 29 Sep 202305:05 AM IST

ಬಂದ್‌ ಬೆಂಬಲಿಸಿ ಎಚ್‌ಡಿಕೆ ಟ್ವೀಟ್‌

ಕಾವೇರಿ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್ ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ, ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. @INCKarnataka ಸರಕಾರವೂ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

Fri, 29 Sep 202304:17 AM IST

ವಿಮಾನಗಳ ಸಂಚಾರ ರದ್ದು

ಕರ್ನಾಟಕ ಬಂದ್‌ ಕಾರಣದಿಂದ ಬೆಂಗಳೂರಿನಿಂದ ಸಂಚರಿಸುವ ಹಾಗೂ ಆಗಮಿಸುವ ವಿಮಾನಗಳ ಸಂಚಾರ ರದ್ದಾಗಿದೆ.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಾಗೂ ಆಗಮಿಸುವುದೂ ಸೇರಿ 44 ವಿಮಾನಗಳ ಸಂಚಾರ ರದ್ದಾಗಿದೆ. ಇದರಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾದ ವಿಮಾನಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ.

Fri, 29 Sep 202304:14 AM IST

ಮೈಸೂರಲ್ಲಿ ಬಸ್‌ಗಳು ವಿರಳ

ಕಾವೇರಿ ಬಂದ್‌ ಹಿನ್ನೆಲೆಯಲ್ಲಿ ಪ್ರತಿಭಟನೆ ಇರುವ ಕಾರಣದಿಂದ ಹೆಚ್ಚಿಬ ಬಸ್‌ಗಳು ಮೈಸೂರಿನಲ್ಲಿ ಸಂಚರಿಸುತ್ತಿಲ್ಲ. ನಗರ ಹಾಗೂ ಗ್ರಾಮಾಂತರ ಬಸ್ ಸೇವೆ ಸ್ಥಗಿತವಾಗಿದೆ.ಬಸ್ ಗಳು ರಸ್ತೆಗೆ ಇಳಿದಿಲ್ಲ.ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿಯು ಕಂಡು ಬಂದಿದೆ.

ಮೈಸೂರು ರೈಲು ನಿಲ್ದಾಣಕ್ಕೆ ಪ್ರತಿಭಟನಾಕಾರರು ಬರುವ ಹಿನ್ನಲೆ ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಒಂದು ಸಿಆರ್, ಇನ್ಸ್‌ಪೆಕ್ಟರ್ ಸೇರಿ ಮೂವತ್ತಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

Fri, 29 Sep 202304:07 AM IST

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಕ್ರೋಶ

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಕಾವೇರಿ ನೀರು ಬಿಡದಂತೆ ಘೋಷಣೆ ಕೂಗುತ್ತಾ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.

ವಿಮಾನ ನಿಲ್ದಾಣದ ಅರೈವಲ್ ಗೇಟ್ ಬಳಿ ಕರವೇ ಕಾರ್ಯಕರ್ತರು ಕನ್ನಡ ಬಾವುಟಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನಗೂ 20 ಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದರು.

Fri, 29 Sep 202304:00 AM IST

ಬೆಂಗಳೂರು ಮೆಟ್ರೋದಲ್ಲಿ ಜನರಿಲ್ಲ

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿನ ಮೆಟ್ರೋದ ಬಹುತೇಕ ಮಾರ್ಗಗಳಲ್ಲಿ ಪ್ರಯಾಣಿಕರು ಇರಲಿಲ್ಲ. ಬೆರಳೆಣಿಕೆಯಷ್ಟು ಮಾತ್ರ ಇದ್ದುದು ಕಂಡು ಬಂದಿತು.

Fri, 29 Sep 202303:55 AM IST

ಮೈಸೂರಲ್ಲೂ ಪ್ರತಿಭಟನೆ

ಕಾವೇರಿ ವಿಚಾರವಾಗಿ ಕರೆ ನೀಡಿದ ಕರ್ನಾಟಕ ಬಂದ್ ಮೈಸೂರಿನಲ್ಲಿ ಪರಿಣಾಮ ಜೋರಾಗಿಯೇ ಇದೆ.

ಕಾವೇರಿಗಾಗಿ ಬೀದಿಗಿಳಿದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕಾವೇರಿ ನಮ್ಮದು ಎಂಬ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Fri, 29 Sep 202303:51 AM IST

ಹಾಸನದಲ್ಲಿ ಕಾರ್ಯ ಕರ್ತರ ಬಂಧನ

ಕಾವೇರಿ ಹೋರಾಟದ ಭಾಗವಾಗಿ ನಡೆಯುತ್ತಿರುವ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಹಾಸನದಲ್ಲಿ ಪೊಲೀಸರು ಬಂಧಿಸಿದರು.

ಹಾಸನ ನಗರ ಬಸ್ ನಿಲ್ದಾಣದಲ್ಲಿ ಬಸ್ ಪಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಅಡ್ಡಿಪಡಿಸದಂತೆ ಸೂಚಿಸಿದರು. ಈ ವೇಳೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದವೇ ನಡೆಯಿತು. ಕೊನೆಗೆ ಪ್ರತಿಭಟನಾನಿರತರನ್ನು ಎತ್ತಿಕೊಂಡು ಪೊಲೀಸ್ ವಾಹನದಲ್ಲಿ ಪೊಲೀಸರು ಕರೆದೊಯ್ದರು.

ಪೊಲೀಸರ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ ಹೊರ ಹಾಕಿದರು.

Fri, 29 Sep 202303:46 AM IST

ಹಾವೇರಿಯಲ್ಲಿ ಪ್ರತಿಭಟನೆ

ಕಾವೇರಿಗಾಗಿ ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹಾವೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯಿಂದ ಪ್ರತಿಭಟನೆ ನಡೆಯಿತು.

ರಸ್ತೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಸಂಘಟನೆ ಪ್ರಮುಖರು, ರಾಜ್ಯ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Fri, 29 Sep 202303:42 AM IST

ಚಾಮರಾಜನಗರದಲ್ಲಿ ಉರುಳು ಸೇವೆ

ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಪ್ರಮುಖರು ಚಾಮರಾಜನಗರದಲ್ಲಿ ಉರುಳು ಸೇವೆ ನಡೆಸಿದರು, ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಚಳವಳಿ ನಡೆಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಕನ್ನಡ ಹೋರಾಟಗಾರ ಚಾ.ರಂ,ಶ್ರೀನಿವಾಸಗೌಡ, ರೈತ ಮುಖಂಡ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

Fri, 29 Sep 202303:10 AM IST

ಪ್ರಕಾಶ್‌ ರಾಜ್‌ ಟ್ವೀಟ್‌

ದಶಕಗಳಷ್ಟು ಹಳೆಯದಾದ ಕಾವೇರಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ಮುಖಂಡರನ್ನು ಪ್ರಶ್ನಿಸುವ ಬದಲು.. ಕೇಂದ್ರದ ಮಧ್ಯಸ್ಥಿಕೆಗೆ ಒತ್ತಡ ಹೇರದ ಅನುಪಯುಕ್ತ ಸಂಸದರನ್ನು ಪ್ರಶ್ನಿಸುವ ಬದಲು.. ಈ ರೀತಿ ಜನಸಾಮಾನ್ಯರಿಗೆ ಮತ್ತು ಕಲಾವಿದರಿಗೆ ತೊಂದರೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ .. ಕನ್ನಡಿಗರ ಪರವಾಗಿ ಕ್ಷಮಿಸಿ ಸಿದ್ಧಾರ್ಥ್‌" ಎಂದು ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿದ್ದಾರೆ.

Fri, 29 Sep 202302:42 AM IST

ಕರ್ನಾಟಕ ಬಂದ್‌ಗೆ ಬೆಂಬಲ: ಯಡಿಯೂರಪ್ಪ

ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಖಂಡಿಸಿ ಕರ್ನಾಟಕ ಬಂದ್‌ಗೆ ತಮ್ಮ ಬೆಂಬಲವಿದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಂದ್‌ಗೂ ಬೆಂಬಲ ನೀಡಿದ್ದೆವು. ಕರ್ನಾಟಕ ಬಂದ್‌ಗೂ ಬೆಂಬಲ ನೀಡುತ್ತೇವೆ. ಹೋರಾಟಗಾರರು ಶಾಂತಿಯುತವಾಗಿ ಬಂದ್‌ ನಡೆಸಬೇಕು. ಅಹಿತಕರ ಘಟನೆಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.

Fri, 29 Sep 202302:38 AM IST

ಕನ್ನಡ ಹೋರಾಟಗಾರರನ್ನು ಬಂಧಿಸಿದ ಪೊಲೀಸರು

Fri, 29 Sep 202302:37 AM IST

ಅತ್ತಿಬೆಲೆಯಲ್ಲಿ ಕನ್ನಡ ಹೋರಾಟಗಾರರ ಬಂಧನ

ಬೆಂಗಳೂರು ಹೊರ ವಲಯದ ಅತ್ತಿಬೆಲೆ ಬಳಿ ಶುಕ್ರವಾರ ಬೆಳಿಗ್ಗೆಯೇ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಇಳಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಈಗಾಗಲೇ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಹೆಚ್ಚು ಜನ ಸೇರದಂತೆ ಪೊಲೀಸರು ಮನವಿ ಮಾಡಿದರೂ ಪ್ರತಿಭಟನೆ ಆರಂಭಿಸಿದ್ದರಿಂದ ಹಲವರನ್ನು ಬಂಧಿಸಿದರು.

Fri, 29 Sep 202302:34 AM IST

ಬೆಂಗಳೂರಲ್ಲಿ ಬಂದ್‌ ಆರಂಭ

ಬೆಂಗಳೂರು:ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೇ ಬಿಸಿ ತಟ್ಟಿದೆ.

ಹೊಟೇಲ್‌ ಸೇವೆಯನ್ನು ಬಂದ್‌ ಮಾಡಲಾಗಿದ್ದು, ಆಟೋರಿಕ್ಷಾ, ಕ್ಯಾಬ್‌ ಸಹಿತ ಸಾರ್ವಜನಿಕ ವಾಹನ ಸೇವೆಯಲ್ಲಿ ವ್ಯತ್ಯಯವಾಗಿದೆ. ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವುದರಿಂದ ಶಾಲಾ ವಾಹನಗಳ ಗದ್ದಲವೂ ಇಲ್ಲ. ಬಿಎಂಟಿಸಿ ಬಸ್‌ಗಳು ಎಂದಿನಂತೆ ಸೇವೆಗೆ ಇಳಿದಿವೆ.

Fri, 29 Sep 202302:29 AM IST

ಸಿಎಂ ನಿವಾಸಕ್ಕೆ ಮುಖಂಡರ ಮುತ್ತಿಗೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ರೈತ ಮುಖಂಡರು ಶುಕ್ರವಾರ ಮುತ್ತಿಗೆ ಹಾಕಲಿದ್ದಾರೆ.

ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರಬೂರು ಶಾಂತಕುಮಾರ್‌, ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಚಂದ್ರು ಮತ್ತಿತರರ ನೇತೃತ್ವದಲ್ಲಿ ಬೆಳಿಗ್ಗೆ 11.30ಕ್ಕೆ ಮುತ್ತಿಗೆ ಹಾಕಲಾಗುತ್ತಿದೆ.

ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವುದರಿಂದ ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಪೊಲೀಸ್‌ ಭದ್ರತೆ ಹೆಚ್ಚಿಸಲಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಎರಡು ಕೆಎಸ್ ಆರ್​​​ಪಿ, ಕಾವೇರಿ ನಿವಾಸದ ಬಳಿ ಒಂದು ಕೆಎಸ್ ಆರ್​​​ಪಿ ತುಕಡಿ ಬಿಎಂಟಿಸಿ ಬಸ್, ನಿಯೋಜಿಸಲಾಗಿದೆ.

Fri, 29 Sep 202301:46 AM IST

ಬೆಂಗಳೂರು ವಿವಿ ಘಟಿಕೋತ್ಸವ ಮುಂದೂಡಿಕೆ

ಕಾವೇರಿ ಹೋರಾಟಗಾರರು ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಮುಂದೂಡಲಾಗಿದೆ.

ಶುಕ್ರವಾರ ನಡೆಯಬೇಕಿದ್ದ ಘಟಿಕೋತ್ಸವ ಮುಂದಕ್ಕೆ ಹಾಕಲಾಗಿದೆ ಎಂದು ವಿವಿ ಕುಲಸಚಿವರು ತಿಳಿಸಿದ್ದಾರೆ.

ಇದಲ್ಲದೇ ಕರ್ನಾಟಕ ಬಂದ್​ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ 2-4ನೇ ಸ್ನಾತಕೋತ್ತರ ಪರೀಕ್ಷೆ, ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಪರೀಕ್ಷೆಗಳು, ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷೆಗಳು, ಧಾರವಾಡ ಕರ್ನಾಟಕ ವಿವಿ ಪರೀಕ್ಷೆಗಳು, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ, ಕುವೆಂಪು ವಿವಿ ಪರೀಕ್ಷೆಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ , ಮೈಸೂರು ವಿಶ್ವವಿದ್ಯಾಲಯ, ತುಮಕೂರು ವಿಶ್ವ ವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಿ ಹೊಸ ದಿನಾಂಕ ಘೋಷಿಸಲಾಗಿದೆ.

Fri, 29 Sep 202301:42 AM IST

ಕಬಿನಿ ಜಲಾಶಯಕ್ಕೆ ಮುತ್ತಿಗೆ

ಮೈಸೂರು: ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್‌ ಬೆಂಬಲಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಕಬಿನಿ ಜಲಾಶಯ ಮುತ್ತಿಗೆ ಚಳವಳಿ ಹಮ್ಮಿಕೊಂಡಿದೆ.

ಸೆ.29 ರಂದು ಶುಕ್ರವಾರ ಬೆಳಗ್ಗೆ 11 30 ಗಂಟೆಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಮೈಸೂರು ಜಿಲ್ಲಾ ವತಿಯಿಂದ ಮೈಸೂರಿನ ಗನ್ ಹೌಸ್ ನಿಂದ ಬೈಕ್ ರ್ಯಾಲಿ ಹೊರಡಲಿದೆ. ಎಚ್‌ಡಿಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ತೆರಳಿ ಮುತ್ತಿಗೆ ಹಾಕಲಿದೆ ಎಂದು ಸಮಿತಿ ತಿಳಿಸಿದೆ.

ಈ ನಡುವೆ ಕಬಿನಿ ಜಲಾಶಯದ ಬಳಿ ಜನ ಸೇರುವುದನ್ನು ತಡೆಯಲು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಈಗಾಗಲೇ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

Fri, 29 Sep 202301:10 AM IST

ಚಾಮರಾಜನಗರದಲ್ಲೂ ರಜೆ

ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಶಾಲಾ ಕಾಲೇಜುಗಳಿಗೆ ರಜೆಯನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ನೀಡಿ ಆದೇಶ ಹೊರಡಿಸಿದ್ದಾರೆ.

ಕಾವೇರಿ ಚಳವಳಿ ಕಾರಣದಿಂದ ಬಂದ್‌ಗೆ ಕರೆ ನೀಡಿರುವುದರಿಂದ ಶುಕ್ರವಾರ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Fri, 29 Sep 202301:05 AM IST

ಬನ್ನೇರಘಟ್ಟ ಜೈವಿಕ ಉದ್ಯಾನಕ್ಕೂ ರಜೆ

ಬಂದ್‌ ಇರುವ ಕಾರಣದಿಂದ ಬೆಂಗಳೂರು ಹೊರ ವಲಯದ ಬನ್ನೇರಘಟ್ಟ ಜೈವಿಕ ಉದ್ಯಾನ ಶುಕ್ರವಾರ ತೆರೆಯುವುದಿಲ್ಲ. ಪ್ರವಾಸಿಗರ ಸುರಕ್ಷಿತ ಕ್ರಮದ ಭಾಗವಾಗಿ ಉದ್ಯಾನವನ್ನು ಒಂದು ದಿನದ ಮಟ್ಟಿಗೆ ಬಂದ್‌ ಮಾಡಲಾಗಿದೆ.

ಅಕ್ಟೋಬರ್‌ 3ರ ಮಂಗಳವಾರ ರಜಾದಿನ ಉದ್ಯಾನ ಯಥಾರೀತಿ ಕಾರ್ಯನಿರ್ವಹಿಸಲಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್‌ ತಿಳಿಸಿದ್ದಾರೆ.

Fri, 29 Sep 202301:41 AM IST

ಮೈಸೂರು ಜಿಲ್ಲೆ ಶಾಲಾ, ಕಾಲೇಜು ರಜೆ

ಮೈಸೂರು: ಕರ್ನಾಟಕ ಬಂದ್ ಇರುವ ಹಿನ್ನಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಸೆಪ್ಟೆಂಬರ್ 29 ರಂದು ಒಂದು ದಿನ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ, ಖಾಸಗಿ ವಿದ್ಯಾಸಂಸ್ಥೆಗಳನ್ನೊಳಗೊಂಡಂತೆ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಆದೇಶಿಸಿದ್ದಾರೆ

Fri, 29 Sep 202312:34 AM IST

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಿಷೇಧಾಜ್ಞೆ

ಮಂಡ್ಯ: ಕರ್ನಾಟಕ ಬಂದ್‌ ಕಾರಣದಿಂದಾಗಿ ಬೆಂಗಳೂರು -ಮೈಸೂರು ಹೆದ್ದಾರಿ ನಡುವೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ದೃಷ್ಟಿಯಿಂದ, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಸಂಚರಿಸುವ ವಾಹನಗಳು ಹಾಗೂ ರೈಲುಗಳು ಸಗುಮವಾಗಿ ಸಂಚರಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275 ರಸ್ತೆಯಲ್ಲಿ ಮದ್ದೂರ ತಾಲ್ಲೂಕಿನ ನಿಡಘಟ್ಟ ಬಾರ್ಡರ್ ರಿಂದ ಮಂಡ್ಯ ತಾಲ್ಲೂಕಿನ ತೂಬಿನಕೆರೆ ಬಾರ್ಡರ್ ರವರೆಗೆ ಹಾಗೂ ಮಂಡ್ಯ ಉಪವಿಭಾಗ ವ್ಯಾಪ್ತಿಯಲ್ಲಿರುವ ಎಲ್ಲಾ ರೈಲು ನಿಲ್ದಾಣದಲ್ಲಿ ಹಾಗೂ ಮಂಡ್ಯ ಉಪವಿಭಾಗ ವ್ಯಾಪ್ತಿಯಲ್ಲಿ ರೈಲು ಸಂಚರಿಸುವ ಪ್ರದೇಶದಲ್ಲಿ ಷರತ್ತು ವಿಧಿಸಿ ನಿಷೇಧಿತ ಪ್ರದೇಶವೆಂದು ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಆದೇಶಿಸಿದ್ದಾರೆ.

Fri, 29 Sep 202312:30 AM IST

ಮಂಡ್ಯ ಜಿಲ್ಲೆ ಶಾಲಾ ಕಾಲೇಜು ರಜೆ

ಮಂಡ್ಯ: ಕರ್ನಾಟಕ ಬಂದ್ ಇರುವ ಹಿನ್ನಲೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಸೆಪ್ಟೆಂಬರ್ 29 ರಂದು ಒಂದು ದಿನ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ, ಖಾಸಗಿ ವಿದ್ಯಾಸಂಸ್ಥೆಗಳನ್ನೊಳಗೊಂಡಂತೆ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆದೇಶಿಸಿದ್ದಾರೆ.

Fri, 29 Sep 202312:12 AM IST

ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಲ್ಲಿ ವರ್ತರ ನೈತಿಕ ಬೆಂಬಲ

ಉತ್ತರ ಕರ್ನಾಟಕದ ವರ್ತಕರು ಕರ್ನಾಟಕ ಬಂದ್‌ ಪ್ರತಿಭಟನೆಗೆ ನೈತಿಕ ಬೆಂಬಲ ಘೋಷಿಸಿದ್ದಾರೆ. ಬಳ್ಳಾರಿ, ಕಲಬುರಗಿ, ಬೀದರ್, ಬಾಗಲಕೋಟೆ, ವಿಜಯಪುರ, ಯಾದಗಿರಿ, ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ದಾವಣಗೆರೆಗಳಲ್ಲಿ ವರ್ತಕರು ಎಂದಿನಂತೆ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಲಿದ್ದಾರೆ. ಆದಾಗ್ಯೂ, ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ಘೋಷಿಸುತ್ತಿರುವುದಾಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Thu, 28 Sep 202304:52 PM IST

ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘದ ಬೆಂಬಲ

ಕಾವೇರಿ ನೀರಿಗಾಗಿ ವಿವಿಧ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ನಾಗರೀಕರ ಅಭಿವೃದ್ಧಿ ಸಂಘ ಬೆಂಬಲ ನೀಡಿದೆ. ಕಾವೇರಿ ನಮ್ಮ ನಾಡಿನ ಜೀವ ನದಿ. ಈ ವರ್ಷ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಮಳೆಯಾಗದೇ ಕಾವೇರಿ ಕಣಿವೆಯ ಡ್ಯಾಮ್ ಭರ್ತಿಯಾಗಿಲ್ಲ. ಈಗಾಗಲೇ ತಮಿಳುನಾಡು ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಳಸಿಕೊಂಡಿದೆ. ಆದರೆ, ಸರಿಯಾದ ಸಂಕಷ್ಟ ಸೂತ್ರ ಇಲ್ಲದಿರುವುದರಿಂದ ಕರ್ನಾಟಕಕ್ಕೆ ನಿರಂತರ ಅನ್ಯಾಯ ಆಗುತ್ತಲೇ ಬಂದಿದೆ. ಹೀಗಾಗಿ ಕಾವೇರಿಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ದಿ ಸಂಘದ ಅಧ್ಯಕ್ಷ ಮುರುಗೇಶ ಜವಳಿ ತಿಳಿಸಿದ್ದಾರೆ.

Thu, 28 Sep 202304:49 PM IST

ಕರ್ನಾಟಕ ಬಂದ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಕಾಲೇಜುಗಳಿಗೂ ನಾಳೆ ರಜೆ

ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ನಾಳೆಯ ಕರ್ನಾಟಕ ಬಂದ್‌ ಕಾರಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.

ನಾಳೆಯ ಕರ್ನಾಟಕ ಬಂದ್ ಕಾರಣದಿಂದಾಗಿ ಶಾಲಾ ಕಾಲೇಜು ಮಕ್ಕಳ ಹಿತದೃಷ್ಟಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ರುವುದಾಗಿ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thu, 28 Sep 202304:33 PM IST

ಕಾವೇರಿಗಾಗಿ ನಾಳೆ ರಾಜ್ಯ ಬಂದ್- ದಕ್ಷಿಣ ಕನ್ನಡದಲ್ಲಿ ಬೆಂಬಲ ಇಲ್ಲ

ಕರ್ನಾಟಕ ಬಂದ್‌ ಕರೆಗೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಂಘಟನೆಗಳು ಕರ್ನಾಟಕ ರಾಜ್ಯ ಬಂದ್ ಗೆ ಬೆಂಬಲ ಸೂಚಿಸಿಲ್ಲ. ದಕ್ಷಿಣ ಕನ್ನಡದಲ್ಲಿ ಬ್ಯಾಂಕ್, ಸರಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ನಿರಾತಂಕವಾಗಿ ನಡೆಯಲಿದೆ. ಬಂದ್‌ಗೆ ಬೆಂಬಲವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ವಿವಿಧ ಸಂಘಟನೆಗಳು ತಿಳಿಸಿವೆ. ಬಂದ್‌ಗೆ ಬೆಂಬಲ ಯಾಕಿಲ್ಲ ಎಂಬ ವಿವರಕ್ಕೆ ಈ ವರದಿ ಕ್ಲಿಕ್‌ ಮಾಡಿ - ದಕ್ಷಿಣ ಕನ್ನಡದಲ್ಲಿ ಬಂದ್ ಇರಲ್ಲ, ಕರ್ನಾಟಕ ಬಂದ್‌ಗೆ ಪ್ರತಿಭಟನೆಯ ಮೂಲಕ ಬೆಂಬಲ ಎಂದ ಸಂಘಟನೆಗಳು

Fri, 29 Sep 202312:12 AM IST

ಕರ್ನಾಟಕದಾದ್ಯಂತ ಭದ್ರತೆಗೆ 80,000 ಪೊಲೀಸರ ನಿಯೋಜನೆ

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಜ್ಯದ ಉದ್ದಗಲಕ್ಕೂ 80,000 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್ ಹಿತೇಂದ್ರ ಹೇಳಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ. ಬಲವಂತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಲು ಪ್ರಯತ್ನಿಸುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು ಕಂಡುಬಂದರೆ ಅದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Thu, 28 Sep 202303:32 PM IST

ಬೆಂಗಳೂರಲ್ಲಿ ನಾಳೆ ಹೋಟೆಲ್, ರೆಸ್ಟೋರೆಂಟ್‌ಗಳು ಕೂಡ ಬಂದ್

ಕರ್ನಾಟಕ ಬಂದ್‌ಗೆ ಬೆಂಗಳೂರು ಮಹಾನಗರದಲ್ಲಿ ನಾಳೆ ಬೆಂಬಲ ವ್ಯಕ್ತಪಡಿಸಿರುವ ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್, ಹೋಟೆಲ್ ಬಂದ್ ಮಾಡುತ್ತಿರುವುದಾಗಿ ಹೇಳಿದೆ. ಅಸೋಯೇಷನ್ ಅಧ್ಯಕ್ಷ ಪಿ ಸಿ ರಾವ್ ಇದನ್ನು ಸ್ಪಷ್ಟಪಡಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Thu, 28 Sep 202302:46 PM IST

ಚಿತ್ರದ ಪ್ರಚಾರಕ್ಕೆ ಆಗಮಿಸಿದ ತಮಿಳು ನಟ ಸಿದ್ಧಾರ್ಥ್‌ಗೆ ಪ್ರತಿಭಟನೆಯ ಬಿಸಿ

ತಮಿಳು ನಟ ಸಿದ್ಧಾರ್ಥ್‌ ತಮ್ಮ ಚಿಕ್ಕು ಸಿನಿಮಾ ಬಗ್ಗೆ ಬೆಂಗಳೂರಿನಲ್ಲಿ ಪ್ರಚಾರಕ್ಕೆ ಆಗಮಿಸಿದ್ದರು. ಕಾವೇರಿ ನೀರಿನ ವಿಚಾರದಲ್ಲಿ ಪ್ರತಿಭಟನೆ ನಡೆದಿರುವಾಗ, ನಾಳೆ ಬಂದ್ ಹಿನ್ನೆಲೆ ಇರುವಾಗ ಸಿನಿಮಾ ಪ್ರಚಾರಕ್ಕೆ ಸಿದ್ಧಾರ್ಥ್ ಮುಂದಾಗಿದ್ದು ಕನ್ನಡಪರ ಹೋರಾಟಗಾರರನ್ನು ಕೆರಳಿಸಿತ್ತು. ಹೀಗಾಗಿ ಸಿದ್ಧಾರ್ಥ್ ಕೂಡ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಗಿ ಬಂತು. ಸುದ್ದಿ ವಿವರಕ್ಕೆ ಮುಂದಿನ ಶೀರ್ಷಿಕೆ ಕ್ಲಿಕ್ ಮಾಡಿ - ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕನ್ನಡಪರ ಹೋರಾಟಗಾರರು VIDEO

Fri, 29 Sep 202312:15 AM IST

ಮಂಡ್ಯದ ಹಲವೆಡೆ ನಿಷೇಧಾಜ್ಞೆ ಜಾರಿ

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಮಂಡ್ಯದಲ್ಲೂ ವಿವಿಧೆಡೆ ಪ್ರತಿಭಟನೆ, ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮಂಡ್ಯದ ವಿವಿಧೆಡೆ ನಿಷೇಧಾಜ್ಞೆ ಜಾರಿಯಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ, ಮಂಡ್ಯ ತಾಲೂಕು ತೂಬಿನಕೆರೆವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಷೇಧಾಜ್ಞೆ ಚಾಲ್ತಿಯಲ್ಲಿರಲಿದೆ ಎಂದು ಮಂಡ್ಯ ವಿಭಾಗದ ಉಪವಿಭಾಗಾಧಿಕಾರಿ ತಿಳಿಸಿರುವುದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

Fri, 29 Sep 202312:15 AM IST

ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಶಿವಾನಂದ ಸರ್ಕಲ್‌ ಸಮೀಪ ಬಂದ್‌ ಬೆಂಬಲಿಸಿ ನಾಳೆ ಪ್ರತಿಭಟನೆ

ವಿವಿಧ ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ನಡೆಸುವಂತೆ ನೀಡಿರುವ ಕರೆಗೆ ಚಲನಚಿತ್ರ ರಂಗ ಸ್ಪಂದಿಸಿದೆ. ಬೆಂಗಳೂರಿನಲ್ಲಿ ಶಿವಾನಂದ ಸರ್ಕಲ್ ಸಮೀಪ ಬಂದ್‌ಗೆ ಬೆಂಬಲ ಸೂಚಿಸಿ ಚಿತ್ರರಂಗದವರು ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್‌ ಎಂ ಸುರೇಶ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.

Fri, 29 Sep 202312:15 AM IST

ಕಾವೇರಿ ವಿವಾದಕ್ಕೆ ನೂರಕ್ಕೂ ಹೆಚ್ಚು ವರ್ಷದ ಇತಿಹಾಸ

ಕರ್ನಾಟಕದಲ್ಲಿ ಈ ವರ್ಷ ಮಳೆಯ ಕೊರತೆ ಕಾಡಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್ 21ರಂದು ಎತ್ತಿಹಿಡಿಯಿತು. ಅದಾಗಿ, ಸೆಪ್ಟೆಂಬರ್ 27ರ ತನಕ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತ್ತು. ಇದು ಪ್ರತಿಭಟನೆಗೆ ಕಾರಣವಾಗಿದೆ. ಕಾವೇರಿ ವಿವಾದ ಶತಮಾನ ಹಳೆಯ ವಿವಾದವಾಗಿದೆ. ಇದರ ವಿವರ ಓದಿಗೆ ಕ್ಲಿಕ್ ಮಾಡಿ - ಶತಮಾನ ಹಳೆಯ ಕಾವೇರಿ ವಿವಾದದ 5 ಪಾಯಿಂಟ್ಸ್‌ ವಿವರ

Thu, 28 Sep 202301:03 PM IST

ಕಾವೇರಿಗೆ ಬಿಸ್ಲೇರಿ ನೀರು ಎರೆದು ಪ್ರತಿಭಟಿಸಿದ ಮಂಡ್ಯ ರೈತರು

ಕಾವೇರಿ ನೀರು ತಮಿಳುನಾಡಿಗೆ ಹರಿಸುವುದರ ವಿರುದ್ಧ ವಿವಿಧ ಸಂಘಟನೆಗಳು ನಾಳೆ (ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದರ ಮುನ್ನಾ ದಿನವಾದ ಇಂದು (ಸೆ.28) ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿದ ರೈತರು ಕ್ಯಾನ್ ಗಳಲ್ಲಿ ಬಿಸ್ಲರಿ ನೀರು ತಂದು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

Thu, 28 Sep 202312:42 PM IST

ಬೆಂಗಳೂರು ನಗರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ನಾಳೆ ರಜೆ

ವಿವಿಧ ಸಂಘಟನೆಗಳು ನಾಳೆ (ಸೆ.29) ಕರ್ನಾಟಕ ಬಂದ್ ಘೋಷಿಸಿರುವ ಕಾರಣ, ಮುಂಜಾಗರೂಕತಾ ಕ್ರಮವಾಗಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿರುವುದಾಗಿ ವರದಿಯಾಗಿದೆ.

Thu, 28 Sep 202312:33 PM IST

ಕರ್ನಾಟಕ ಬಂದ್‌ಗೆ ಅವಕಾಶ ಇಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎಸಗಿದರೆ ನಷ್ಟಭರ್ತಿ ಕ್ರಮ ಎಂದು ಎಚ್ಚರಿಸಿದ ಪೊಲೀಸ್ ಆಯುಕ್ತರು

ನಾಳೆ (ಸೆಪ್ಟೆಂಬರ್ 29 ರಂದು) ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದ ಹಲವಾರು ಸಂಘಟನೆಗಳು ರಾಜ್ಯಾದ್ಯಂತ ಬಂದ್‌ಗೆ ಕರೆಕೊಟ್ಟಿವೆ. ಈ ಹಿನ್ನೆಲೆಯಲ್ಲಿ 'ಎಲ್ಲಾ ರೀತಿಯ ಬಂದ್‌ಗಳನ್ನು ನಿಷೇಧಿಸಲಾಗಿದೆ' ಎಂಬ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಒತ್ತು ನೀಡಿದ್ದಾರೆ.

ನಾಳೆ ನಡೆಯುವ ಪ್ರತಿಭಟನೆ ಮತ್ತು ರ‍್ಯಾಲಿಗಳಿಗೆ ಮಂಜೂರಾಗಿರುವ ಏಕಮಾತ್ರ ಸ್ಥಳವೆಂದರೆ ಕೇವಲ ಫ್ರೀಡಂ ಪಾರ್ಕ್. ಅದಾಗ್ಯು ಪ್ರತಿಭಟನೆಗೆ ಯಾವುದೇ ಸಂಸ್ಥೆಯು ತಮ್ಮ ಬೆಂಬಲವನ್ನು ತಾವಾಗಿಯೇ ನೀಡಬಹುದೇ ಹೊರತು ಒತ್ತಾಯಪೂರ್ವಕವಾಗಿ ಅಲ್ಲ. ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಆಸ್ತಿಗೆ ಯಾವುದೇ ಬಗೆಯ ಹಾನಿ ಸಂಭವಿಸಿದಲ್ಲಿ, ಆಯಾ ಪ್ರತಿಭಟನಾನಿರತ ಸಂಘಟನೆಗಳೇ ಅದರ ವೆಚ್ಚಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.

Thu, 28 Sep 202312:23 PM IST

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ- ಕುರುಬೂರು ಶಾಂತಕುಮಾರ್

ಕರ್ನಾಟಕ ಬಂದ್ ಮಾಡುವುದಕ್ಕೆ ಹೋಗುವುದಿಲ್ಲ. ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ಮಾಡಿ ಬೆಂಬಲ ಸೂಚಿಸುತ್ತೇವೆ ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕುರುಮೂರು ಶಾಂತಕುಮಾರ್‌ ಹೇಳಿರುವುದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

Thu, 28 Sep 202311:40 AM IST

ಕರ್ನಾಟಕ ಬಂದ್‌ - ಇಂದು ರಾತ್ರಿಯಿಂದಲೇ ತಮಿಳುನಾಡಿಗೆ ಬಸ್‌ ಸಂಚಾರ ಸ್ಥಗಿತ

ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಇಂದು (ಸೆ.28) ರಾತ್ರಿಯಿಂದಲೇ ತಮಿಳುನಾಡು ಸಾರಿಗೆ ಬಸ್‌ಗಳ ಸಂಚಾರ ಬಂದ್ ಮಾಡಲಾಗುತ್ತದೆ. ಬೆಂಗಳೂರಿನಿಂದ ತಮಿಳುನಾಡಿನ ವಿವಿಧ ಭಾಗಗಳಿಗೆ ಸಂಚರಿಸುವ ತಮಿಳುನಾಡು ಸಾರಿಗೆಯ 350ಕ್ಕೂ ಹೆಚ್ಚು ಬಸ್‍ಗಳು ಇಂದು ರಾತ್ರಿ 10 ಗಂಟೆಗೆ ಓಡಾಟ ನಿಲ್ಲಿಸಲಿವೆ.

ತಮಿಳುನಾಡಿನಿಂದ ಆಗಮಿಸುವ ಬಸ್‍ಗಳು ರಾತ್ರಿ 10 ಗಂಟೆ ವೇಳೆಗೆ ಕರ್ನಾಟಕ ಗಡಿ ಪ್ರವೇಶಿಸಿ ಮತ್ತೆ ಹಿಂತಿರುಗಲಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಸ್ಯಾಟಲೈಟ್, ಶಾಂತಿನಗರ ಬಸ್ ನಿಲ್ದಾಣದಿಂದ ಸಂಚರಿಸುವ ತಮಿಳುನಾಡು ಸಾರಿಗೆ ಬಸ್ ಸಂಚಾರ ನಿಲ್ಲಿಸಲಿವೆ.

Thu, 28 Sep 202311:28 AM IST

ನಾಳೆ ಕರ್ನಾಟಕ ಬಂದ್ ಮಾಡಿಯೇ ಮಾಡ್ತೇವೆ, ಹತ್ತಿಕ್ಕುವ ಕ್ರಮ ಸರ್ಕಾರ ಮಾಡಬಾರದು ಎಂದ ವಾಟಾಳ್‌ ನಾಗರಾಜ್‌

ಇದು ಯಾವುದೇ ವೈಯಕ್ತಿಕ ಹಿತಾಸಕ್ತಿಯ ಪ್ರತಿಭಟನೆ ಅಲ್ಲ, ಕರ್ನಾಟಕ ಬಂದ್ ಕೂಡ ಅಲ್ಲ. ನಾಳೆ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ. ಬಂದ್ ಶಾಂತಿಯುತವಾಗಿಯೇ ನಡೆಯಲಿದೆ. ರಾಜ್ಯದ ಜನರಲ್ಲಿ, ಪ್ರತಿಯೊಂದು ಜಿಲ್ಲೆಯವರಲ್ಲೂ ಬಂದ್‌ಗೆ ಸಹಕಾರ ನೀಡುವಂತೆ ಕೈ ಮುಗಿದು ಮನವಿ ಮಾಡುತಿದ್ದೇನೆ. ಇದು ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್‌. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಕೂಡ ಬೆಂಬಲ ನೀಡಬೇಕು. ಇದು ಯಾರ ವಿರುದ್ಧವೂ ಮಾಡುತ್ತಿರುವ ಬಂದ್ ಅಲ್ಲ. ಸೆಕ್ಷನ್ 144 ಅಲ್ಲ, 544 ಸೆಕ್ಷನ್ ಹಾಕಿದರೂ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ವಾಟಾಳ್ ನಾಗರಾಜ್‌ ಹೇಳಿದರು.

Thu, 28 Sep 202311:18 AM IST

ಕರ್ನಾಟಕ ಬಂದ್‌ಗೆ ಅವಕಾಶ ಇಲ್ಲ, ಎಚ್ಚರಿಕೆ ನೀಡಲಾಗಿದೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ

ಬಲವಂತವಾಗಿ ಬಂದ್ ಮಾಡಿಸುವುದಕ್ಕೆ ಅವಕಾಶ ಇಲ್ಲ. ಈ ಕುರಿತು ಎಚ್ಚರಿಕೆ ನೀಡಲಾಗಿದೆ. ಪ್ರತಿಭಟನೆ ಮಾಡುವುದಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬಹುದು. ಈಗಾಗಲೇ ಬಂದ್‌ಗೆ ಕರೆ ಕೊಟ್ಟ ಸಂಘಟನೆಗಳ ಪ್ರಮುಖರಿಗೆ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಪೊಲೀಸ್ ಆಯುಕ್ತರು ಕೂಡ ಮಾತುಕತೆ ನಡೆಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Thu, 28 Sep 202311:16 AM IST

ಬಂದ್ ಮಾಡುವುದಕ್ಕೆ ಅವಕಾಶ ಇಲ್ಲ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ತಗೊಳ್ತೇವೆ - ಡಿಸಿಎಂ ಡಿಕೆ ಶಿವಕುಮಾರ್

ತಮಿಳುನಾಡಿಗೆ 2000 ಕ್ಯೂಸೆಕ್ ನೀರು ಹೇಗಿದ್ದರೂ ಹರಿದು ಹೋಗುತ್ತದೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ನಾಳೆ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ಕೊಟ್ಟಿವೆ. ಆದರೆ ಬಂದ್‌ಗೆ ಅವಕಾಶ ಇಲ್ಲ. ಪ್ರತಿಭಟನೆ ಮಾಡುವುದಕ್ಕೆ ಅಡ್ಡಿ ಮಾಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

Thu, 28 Sep 202311:05 AM IST

ನಾಳೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇದೆಯೇ ಇಲ್ಲವೇ?

ಕಾವೇರಿ ವಿವಾದಕ್ಕೆ ಸಂಬಂಧಿಸಿ ನಾಳೆ ನಡೆಯುವ ಬಂದ್‌, ಪ್ರತಿಭಟನೆ ರಾಜ್ಯದ ಹಿತದೃಷ್ಟಿಯಿಂದಲೇ ನಡೆಯುತ್ತಿರುವಂಥದ್ದು. ವಿಮಾನ, ರೈಲು ಸಂಚಾರ ಎಲ್ಲವೂ ಇರುತ್ತೆ. ಬರುವಂತಹ ಪ್ರಯಾಣಿಕರಿಗೆ ತೊಂದರೆ ಆಗಬಾರದು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೀಮಿತ ಬಸ್‌ ಸಂಚಾರ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಿಪಬ್ಲಿಕ್ ಕನ್ನಡ ಜತೆಗೆ ಮಾತನಾಡುತ್ತ ಹೇಳಿದರು.

Thu, 28 Sep 202311:03 AM IST

ಕರ್ನಾಟಕದ ಸಂಸದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಪ್ರತಿಭಟನೆ

ಕಾವೇರಿ ನೀರು ವಿವಾದದ ವಿಚಾರದಲ್ಲಿ ಕರ್ನಾಟಕ ಸಂಸದರು ಮೌನವಹಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸದಸ್ಯರು ಗುರುವಾರ (ಸೆ.28) ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

Thu, 28 Sep 202310:54 AM IST

ತಮಿಳರ ಮೇಲೆ ಹಲ್ಲೆ ಸುಳ್ಳು ಸುದ್ದಿ ಹರಡಿದ ಇಬ್ಬರ ವಿರುದ್ಧ ಪೊಲೀಸ್ ಕೇಸ್

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ವದಂತಿ ಹಬ್ಬಿಸುವುದರ ವಿರುದ್ಧ ತಮಿಳುನಾಡು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿವರಕ್ಕೆ ಕ್ಲಿಕ್‌ ಮಾಡಿ - ಕಾವೇರಿ ವಿವಾದ, ತಮಿಳರ ಮೇಲೆ ಹಲ್ಲೆ ಕುರಿತ ಸುಳ್ಳು ಸುದ್ದಿ ಹರಡಿದ ಆರೋಪಿಗಳ ಪತ್ತೆಗೆ ತಮಿಳುನಾಡು ಪೊಲೀಸರ ಶೋಧ

Thu, 28 Sep 202310:52 AM IST

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಬಂದ್‌ ಕಾರಣ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯವು ಸೆ. 29ರ ಎಲ್ಲ ಪರೀಕ್ಷೆಗಳನ್ನು ಮುಂದೂಡಿದೆ. 2, 4 ,6 ಸೆಮೆಸ್ಟರ್‌ ರಿಪೀಟರ್ಸ್‌ ಹಾಗೂ ರೆಗುಲರ್‌ ಪರೀಕ್ಷೆಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.

Thu, 28 Sep 202310:52 AM IST

ಮಂಡ್ಯದಲ್ಲಿ ರೈತರ ಪ್ರತಿಭಟನೆ

ಕರ್ನಾಟಕ ಬಂದ್‌ಗೆ ಮುನ್ನಾದಿನವಾದ ಗುರುವಾರ (ಸೆ.28) ಮಂಡ್ಯದಲ್ಲಿ ಕಾವೇರಿ ನದಿ ಸಮೀಪ ರೈತರು ಪ್ರತಿಭಟನೆ ನಡೆಸಿದರು.

Thu, 28 Sep 202310:03 AM IST

ಕಾವೇರಿ ಕರ್ನಾಟಕ ಬಂದ್‌ ನಾಳೆ: ಏನು ಇರುತ್ತೆ, ಏನೇನು ಇರೋಲ್ಲ

ಬೆಂಗಳೂರು ಮಾತ್ರವಲ್ಲದೆ, ಕಾವೇರಿ ಕೊಳ್ಳದ ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಂದ್‌ಗೆ ಬೆಂಬಲ ದೊರಕುವ ಸಾಧ್ಯತೆ ಅಧಿಕವಾಗಿದೆ. ಆದರೆ ಉತ್ತರ ಕರ್ನಾಟಕ, ಕರಾವಳಿ ಭಾಗದವರೂ ಹೋರಾಟಕ್ಕೆ ನೈತಿಕವಾಗಿ ಬೆಂಬಲ ಸೂಚಿಸಿ ಪ್ರತಿಭಟನೆ ನಡಸಬಹುದು ಎಂಬ ಅಂದಾಜಿದೆ. ಏನು ಇರುತ್ತೆ, ಏನೇನು ಇರೋಲ್ಲ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ

Thu, 28 Sep 202309:48 AM IST

ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ 40+ ಸಂಘಟನೆಗಳ ಬೆಂಬಲ

ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಶುಕ್ರವಾರ (ಸೆ.29) ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ ನಡೆಯಲಿದೆ. ಈ ಅವಧಿಯಲ್ಲಿ ಟೌನ್‌ ಹಾಲ್‌ನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಸಂಘಟನೆಗಳು ತೀರ್ಮಾನಿಸಿವೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಶುರುವಾಗುವ ನಿರೀಕ್ಷೆ ಇದೆ.

Thu, 28 Sep 202309:46 AM IST

ವಿಮಾನ ಯಾನ ಕೈಗೊಳ್ಳುವವರಿಗೆ ಕೆಂಪೇಗೌಡ ಏರ್‌ಪೋರ್ಟ್‌ ಸೂಚನೆ

ಕರ್ನಾಟಕ ಬಂದ್ ಇರುವ ಕಾರಣ ಸಾರಿಗೆ ವ್ಯತ್ಯಯವಾಗಲಿದೆ. ವಿಮಾನ ಯಾನ ಕೈಗೊಳ್ಳುವವರು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಬಹುದು. ಕೆಂಪೇಗೌಡ ವಿಮಾನ ನಿಲ್ದಾಣ ಕೂಡ ಎಕ್ಸ್ ಮೂಲಕ ಪ್ರಯಾಣಿಕರಿಗೆ ಸೂಚನೆ ನೀಡಿದೆ.

Thu, 28 Sep 202309:34 AM IST

ಬೆಂಗಳೂರಿನಲ್ಲಿ ಇಂದು ತಡರಾತ್ರಿಯಿಂದ ಸೆಕ್ಷನ್ 144 ಜಾರಿ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ 2,000 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಶನಿವಾರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 29) ಮಧ್ಯರಾತ್ರಿ 12 ಗಂಟೆಯಿಂದ ನಿರ್ಬಂಧ ಆರಂಭವಾಗಲಿದೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.

ಇದೇ ವೇಳೆ ಗುರುವಾರದಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.

Thu, 28 Sep 202309:33 AM IST

ಕರ್ನಾಟಕ ಬಂದ್‌ಗೆ 2000ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳು ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್‌ ನಡೆಸುವುದಕ್ಕೆ ಕರೆ ನೀಡಿವೆ. ಇದಕ್ಕೆ 2000ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಈ ನಡುವೆ, ಬಂದ್‌ಗೆ ಅವಕಾಶ ಇಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಈ ರೀತಿ ಕಡಿವಾಣ ಹಾಕುವ ಕ್ರಮಗಳ ವಿರುದ್ಧ ಕನ್ನಡಪರ ಸಂಘಟನೆಗಳ 'ಕನ್ನಡ ಒಕ್ಕೂಟ' ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಶುಕ್ರವಾರ (ಸೆ.29) ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ ಅಂಗವಾಗಿ ನಗರದ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಹೇಳಿದೆ.

Thu, 28 Sep 202309:26 AM IST

ನಮಸ್ಕಾರ !

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ (ಸೆ.29) ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ. ಈ ವಿದ್ಯಮಾನದ ಕ್ಷಣ ಕ್ಷಣದ ಅಪ್ಡೇಟ್ಸ್‌ ಅನ್ನು ನಾವು ಒದಗಿಸುವವರಿದ್ದೇವೆ. HT ಕನ್ನಡ ಲೈವ್‌ ಬ್ಲಾಗ್‌ಗೆ ತಮಗೆ ಸ್ವಾಗತ!

ಹಂಚಿಕೊಳ್ಳಲು ಲೇಖನಗಳು

  • twitter