Aadhaar Card: ಆಧಾರ್ ಕಾರ್ಡ್ ಮಾಡಿಸುವುದು ಇನ್ಮುಂದೆ ಪಾಸ್ಪೋರ್ಟ್ ಮಾಡಿಸಿದಷ್ಟೇ ಕಷ್ಟ; 180 ದಿನಗಳ ಕಾಲ ಕಾಯುವುದು ಅನಿವಾರ್ಯ
ಆಧಾರ್ ಕಾರ್ಡ್ಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರು ಇನ್ಮೇಲೆ ಕಾರ್ಡ್ ಪಡೆಯಲು 180 ದಿನಗಳ ಕಾಲ ಕಾಯಬೇಕಿದೆ. ಆಧಾರ್ ಕಾರ್ಡ್ ಅರ್ಜಿ ಸಲ್ಲಿಕೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಅರ್ಜಿದಾರರು ಈ ಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.
ಕೇಂದ್ರ ಸರ್ಕಾರವು ಪ್ರತಿಯೊಂದು ಸರ್ಕಾರಿ ಕಾರ್ಯಕ್ಕೂ ಆಧಾರ್ ಕಾರ್ಡ್ನ್ನು ಕಡ್ಡಾಯಗೊಳಿಸಿದೆ. ಇದೀಗ ಆಧಾರ್ ಕಾರ್ಡ್ಗೆ ಮೋದಿ ಸರ್ಕಾರವು ಹೊಸ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದೆ. ಇನ್ಮುಂದೆ ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ವಿವಿಧ ಬದಲಾವಣೆಗಳು ಉಂಟಾಗಲಿದೆ. ರಾಜ್ಯ ಸರ್ಕಾರವು ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡುವವರ ವೆರಿಫಿಕೇಷನ್ ಮಾಡಲಿದೆ. ಪಾಸ್ಪೋರ್ಟ್ ದೃಢೀಕರಣ ಮಾಡಲು ಯಾವೆಲ್ಲ ಹಂತಗಳನ್ನು ಅನುಸರಿಸಲಾಗುತ್ತದೆಯೋ ಅದೇ ಮಾದರಿಯಲ್ಲಿಯೇ ಆಧಾರ್ ಕಾರ್ಡ್ ವೆರಿಫಿಕೇಷನ್ ವ್ಯವಸ್ಥೆಯನ್ನೂ ಇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಆಧಾರ್ ಕಾರ್ಡ್ ವೆರಿಫಿಕೇಷನ್ ಮಾಡುತ್ತಿತ್ತು. ಇನ್ಮುಂದೆ ಈ ಜವಾಬ್ದಾರಿಯು ಆಯಾ ರಾಜ್ಯ ಸರ್ಕಾರಗಳ ಮೇಲೆ ಇರಲಿದೆ.
18 ವರ್ಷ ತುಂಬಿದವರಿಗೆ ಹೊಸ ವ್ಯವಸ್ಥೆ
ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರ ನೀಡಿರುವ ಸೂಚನೆಯ ಪ್ರಕಾರ 18 ವರ್ಷ ತುಂಬಿದವರಿಂದ ಈ ಹೊಸ ಪ್ರಕ್ರಿಯೆಯು ಆರಂಭಗೊಳ್ಳಲಿದೆ. ಆದರೆ ಈಗಾಗಲೇ ಯಾರ್ಯಾರ ಬಳಿಯಲ್ಲಿ ಆಧಾರ್ ಕಾರ್ಡ್ ಇದೆಯೋ ಅವರು ಈ ಹೊಸ ವ್ಯವಸ್ಥೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ.
ರಾಜ್ಯ ಸರ್ಕಾರದ ಅನುಮತಿ ಅನಿವಾರ್ಯ
ಭಾರತೀಯ ವಿಶಿಷ್ಠ ಗುರುತು ಪ್ರಾಧಿಕಾರದ ನಿರ್ದೇಶನದ ಅನುಸಾರ ರಾಜ್ಯ ಸರ್ಕಾರವು ಫಿಸಿಕಲ್ ವೆರಿಫಿಕೇಶನ್ಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ಸಬ್ ಡಿವಿಷನ್ ಮಟ್ಟದಲ್ಲಿ ಎಸ್ಡಿಎಂ ಅಧಿಕಾರಿಗಳಿಗೆ ಈ ಜವಾಬ್ದಾರಿಯನ್ನು ವಹಿಸಲಿದೆ. ಈ ಅಧಿಕಾರಿಗಳು ನಿಮ್ಮ ಹೊಸ ಆಧಾರ್ ಕಾರ್ಡ್ ಅರ್ಜಿಯ ವೆರಿಫಿಕೇಷನ್ ಮಾಡಲಿದ್ದಾರೆ, ಇಲ್ಲಿ ನಿಮ್ಮ ಆಧಾರ್ ಅರ್ಜಿಗೆ ದೃಢೀಕರಣ ಸಿಕ್ಕ ಬಳಿಕವೇ ಹೊಸ ಆಧಾರ್ ಕಾರ್ಡ್ ನಿಮ್ಮ ಕೈ ಸೇರಲಿದೆ.
ಇನ್ಮುಂದೆ ಆಧಾರ್ ಕಾರ್ಡ್ ಪಡೆಯಲು ಬೇಕಾಗಬಹುದು 180 ದಿನ
ಈ ಹೊಸ ನಿಯಮಗಳ ಬಳಿಕ ಇನ್ಮೇಲೆ ಆಧಾರ್ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್ನ್ನು ಪಡೆಯಲು 180 ದಿನಗಳ ಕಾಲ ಕಾಯಬೇಕಾಗಿ ಬರಲಿದೆ. ನೀವು ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ಬಳಿಕ ಯುಐಡಿಎಐ ಅರ್ಜಿಯನ್ನು ನೀವು ತಿಳಿಸಿದ ವಿಷಯವು ಸರಿಯಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಲಿದೆ. ಇದಾದ ಬಳಿಕ ಅರ್ಜಿಯನ್ನು ಸರ್ವೀಸ್ ಪ್ಲಸ್ ಪೋರ್ಟಲ್ಗೆ ವರ್ಗಾವಣೆ ಮಾಡಲಿದೆ. ಇದಾದ ಬಳಿಕ ನಿಮ್ಮ ಅರ್ಜಿಯ ಭೌತಿಕ ದೃಢೀಕರಣ ಕಾರ್ಯ ನಡೆಯಲಿದೆ. ಇದಾದ ಬಳಿಕ ಎಸ್ಡಿಎಂ ಮಟ್ಟದಲ್ಲಿ ನಿಮಗೆ ಆಧಾರ್ ಕಾರ್ಡ್ ನೀಡಲು ಅನುಮತಿ ಸಿಗಲಿದೆ. ಒಂದು ವೇಳೆ ಆಧಾರ್ಗಾಗಿ ನೀವು ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ದೋಷಗಳು ಕಂಡು ಬಂದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.
ಸ್ಥಳದಲ್ಲಿ ನಿಮ್ಮ ಉಪಸ್ಥಿತಿ ಮುಖ್ಯ
ಭೌತಿಕ ದೃಢೀಕರಣ ನಡೆಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು ಹಾಜರಿರುವುದು ಕಡ್ಡಾಯವಾಗಿದೆ. ಹೀಗಾಗಿ ನೀವು ನಿಮ್ಮ ಆಧಾರ್ ಅರ್ಜಿ ಸಲ್ಲಿಸಿದ ಸ್ಥಳದಿಂದ ದೂರದಲ್ಲಿ ವಾಸ್ತವ್ಯ ಹೂಡಿರುವ ವ್ಯಕ್ತಿಯಾಗಿದ್ದರೆ ನಿಮಗೆ ಭೌತಿಕ ವೆರಿಫಿಕೇಷನ್ಗೆ ಬರುವಂತೆ ಮೊದಲೇ ಸೂಚನೆ ನೀಡಲಾಗುತ್ತದೆ.