Indian Railways: ರೈಲ್ವೆ ಇಲಾಖೆ ಪಾಲಿಗೆ ಶುರುವಾಗಿದೆ ಸುವರ್ಣಯುಗ; 2023ರ ಟಾಪ್ 5 ಸಾಧನೆಗಳ ಪಟ್ಟಿ ಇಲ್ಲಿದೆ
Year Ender 2023: ವಿಮಾನಕ್ಕೆ ಸರಿಸಮನಾದ ಇಂಟೀರಿಯರ್ಸ್ ಹೊಂದಿರುವ 'ವಂದೇ ಭಾರತ್' ಇದೀಗ ಹಳಿಗಳ ಮೇಲೆ ಗರ್ಜಿಸುತ್ತಿದೆ. ಇದರ ಹೊರತಾಗಿ ಭಾರತೀಯ ರೈಲ್ವೆ 2023ರಲ್ಲಿ ಮಾಡಿರುವ ಟಾಪ್ 5 ಸಾಧನೆಗಳ ಪರಿಚಯ ಇಲ್ಲಿದೆ.
2023ರ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ. ಈ ವರ್ಷ ಭಾರತವು ಸಾಕಷ್ಟು ಸಾಧನೆಗಳನ್ನೂ ಮಾಡಿದೆ. ಅದರಲ್ಲೂ ಭಾರತೀಯ ರೈಲ್ವೆ ಇಲಾಖೆಯು ಈ ವರ್ಷ ಕ್ರಮಿಸಿದ ಮೈಲಿಗಲ್ಲನ್ನು ನಾವು ಮರೆಯುವಂತೆಯೇ ಇಲ್ಲ. ಅನೇಕ ನಗರಗಳಿಗೆ ವಂದೇ ಭಾರತ್ ರೈಲು ಸೇವೆ ಒದಗಿಸಿರುವುದು, ಸರಕು ಲೋಡ್ಗಳನ್ನು ಸಾಗಿಸುವುದರಲ್ಲಿ ಮಾಡಿದ ದಾಖಲೆಯಿಂದ ಹಿಡಿದು ರೈಲ್ವೆ ಹಳಿಗಳ ಅತ್ಯಧಿಕ ವಿದ್ಯುದೀಕರಣ ಸೇರಿದಂತೆ ಸಾಕಷ್ಟು ಸಾಧನೆಗಳನ್ನು ಭಾರತೀಯ ರೈಲ್ವೆ ಇಲಾಖೆ ಮಾಡಿದೆ. ಈ ಮೂಲಕ ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸುರಕ್ಷಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಪ್ರಯಾಣಿಕರಿಗೆ ಸುಖಕರ ಪ್ರಯಾಣದ ಅನುಭವ ನೀಡುವ ಜೊತೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು ಈ ವರ್ಷ ಮಾಡಿದ ಸಾಧನೆಗಳ ಪಟ್ಟಿ ಇಲ್ಲಿದೆ ನೋಡಿ..
1) ಸರಕು ಸಾಗಣೆಯಲ್ಲಿ ಐತಿಹಾಸಿಕ ಸಾಧನೆ :
ಭಾರತೀಯ ರೈಲ್ವೆ ಇಲಾಖೆಯು ಸರಕು ಸಾಗಣೆಯಲ್ಲಿ ಈ ವರ್ಷ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೇ ಇಲಾಖೆಯು ಅತೀ ಹೆಚ್ಚು ಸರಕು ಲೋಡ್ಗಳನ್ನು ಸಾಗಿಸಿದೆ. 2021-22ನೇ ಸಾಲಿನಲ್ಲಿ ಭಾರತೀಯ ರೈಲ್ವೆ ಇಲಾಖೆಯು 1418 ಮೆಟ್ರಿಕ್ ಟನ್ ಸರಕನ್ನು ಸಾಗಿಸಿತ್ತು. 2022-23ರ ಸಾಲಿನಲ್ಲಿ 1512 ಮೆಟ್ರಿಕ್ ಟನ್ ಸರಕು ಸಾಗಣೆ ಮಾಡಿ ದಾಖಲೆ ನಿರ್ಮಿಸಿದೆ.
ಇನ್ನು ಕಳೆದ ಹಣಕಾಸು ವರ್ಷಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಎಷ್ಟು ಸರಕು ಸಾಗಣೆ ಮಾಡಿದೆ ಎನ್ನುವುದನ್ನು ನೋಡುವುದಾದರೆ 2017-18 ರಲ್ಲಿ 1161 ಮೆ.ಟನ್, 2018-19 ರಲ್ಲಿ 1223 ಮೆ.ಟನ್ 2019-20 ರಲ್ಲಿ 1210 ಮೆ,ಟನ್ ಹಾಗೂ 2020-21 ರಲ್ಲಿ 1233 ಮೆ,ಟನ್ ಸರಕು ಸಾಗಣೆ ಮಾಡಿದೆ.
2) ಉತ್ತರ ಪ್ರದೇಶದ ಸಂಪೂರ್ಣ ಹಳಿ ವಿದ್ಯುದೀಕರಣ
ಉತ್ತರ ಪ್ರದೇಶವು ತಮ್ಮ ರಾಜ್ಯದಲ್ಲಿ ಸಂಪೂರ್ಣವಾಗಿ ರೈಲ್ವೆ ಹಳಿಗಳನ್ನು ವಿದ್ಯುದೀಕರಣಗೊಳಿಸಲಾಗಿದೆ ಎಂದು ಇತ್ತೀಚಿಗೆ ಘೋಷಣೆ ಮಾಡಿದೆ. ಸುಭಾಗ್‌ಪುರ-ಪಚ್‌ಪರ್ವಾ ಬ್ರಾಡ್ ಗೇಜ್ ಮಾರ್ಗದಲ್ಲಿ ರೈಲ್ವೆ ವಿದ್ಯುದೀಕರಣ ಕಾರ್ಯ ಪೂರ್ಣಗೊಳಿಸುವ ಮೂಲಕ ಉತ್ತರ ಪ್ರದೇಶವು ಈ ಮೈಲಿಗಲ್ಲನ್ನು ಸಾಧಿಸಿದೆ.
3) ದೇಶದ ಮೊದಲ ಬುಲೆಟ್ ಟ್ರೈನ್ಗೆ ಟರ್ಮಿನಲ್ ನಿರ್ಮಾಣ
ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅಹಮದಾಬಾದ್ನ ಸಬರಮತಿ ಮಲ್ಟಿ ಮಾಡೆಲ್ ಟ್ರಾನ್ಸ್ಪೋರ್ಟ್ ಹಬ್ನಲ್ಲಿ ಭಾರತದ ಬುಲೆಟ್ ರೈಲು ಟರ್ಮಿನಲ್ ನಿರ್ಮಾಣ ಸಂಬಂಧ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ರೈಲ್ವೆ ನಿಲ್ದಾಣದ ವಾಸ್ತು ಶಿಲ್ಪ ಮಾತ್ರ ಮನಸೂರೆಗೊಳ್ಳುವಂತಿತ್ತು. ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಟರ್ಮಿನಲ್ ಪ್ರಯಾಣಿಕರಿಗೆ ಸ್ಮರಣೀಯ ಪ್ರಯಾಣದ ಅನುಭವ ನೀಡುವಂತಿದೆ .
4) ಭಾರತೀಯ ರೈಲ್ವೆ ಇಲಾಖೆಗೆ ಮೊಟ್ಟ ಮೊದಲ ಮಹಿಳಾ ಸಿಇಓ ಆಯ್ಕೆ
ಭಾರತೀಯ ರೈಲ್ವೆ ಇಲಾಖೆಯು ತನ್ನ 166 ವರ್ಷಗಳ ಪ್ರಯಾಣದಲ್ಲಿ ಹೊಸದೊಂದು ಸಾಧನೆ ನಿರ್ಮಿಸಿದೆ. ಜಯ ವರ್ಮಾ ಸಿನ್ಹಾ ಎಂಬವರು ಭಾರತೀಯ ರೈಲ್ವೆ ಇಲಾಖೆಯ ಮೊದಲ ಮಹಿಳಾ ಸಿಇಓ ಹಾಗೂ ರೈಲ್ವೆ ಮಂಡಳಿಯ ಚೇರ್ಪರ್ಸನ್ ಆಗಿ ನೇಮಕಗೊಂಡಿದ್ದಾರೆ. 2023ರ ಸೆಪ್ಟೆಂಬರ್ 1 ರಿಂದ ಜಯಾ ವರ್ಮಾ ಭಾರತೀಯ ರೈಲ್ವೆ ಇಲಾಖೆಯ ಸಿಇಓ ಆಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ.
ಯಾರಿದು ಜಯಾ ವರ್ಮಾ..?
ಅಲಹಬಾದ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಜಯಾ ವರ್ಮಾ 1988ರಿಂದ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಉತ್ತರಮ ಆಗ್ನೇಯ ಹಾಗೂ ಪೂರ್ವ ರೈಲ್ವೆಯ ವಿವಿಧ ಕಚೇರಿಗಳಲ್ಲಿ ಜಯಾ ವರ್ಮಾ ಸೇವೆ ಸಲ್ಲಿಸಿದ್ದಾರೆ, ಭಾರತೀಯ ರೈಲ್ವೆ ಇಲಾಖೆಯ ಸಿಇಓ ಆಗಿ ಆಯ್ಕೆಯಾಗುವ ಮುನ್ನ ಜಯಾ ವರ್ಮಾ ಸಿನ್ಹಾ ರೈಲ್ವೆ ಬೋರ್ಡ್, ರೈಲ್ವೆ ಸಚಿವಾಲಯದಲ್ಲಿ ಕಾರ್ಯಾಚರಣೆ ಹಾಗೂ ವ್ಯವಹಾರ ಅಭಿವೃದ್ಧಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರತೀಯ ರೈಲ್ವೆ ಇಲಾಖೆಯಲ್ಲಿ ಸುದೀರ್ಘ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜಯಾ ವರ್ಮಾ ಇದೀಗ ದೇಶದ ಮೊದಲ ಭಾರತೀಯ ರೈಲ್ವೆ ಇಲಾಖೆಯ ಮಹಿಳಾ ಸಿಇಓ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ .
5) ಆನೆಗಳ ಜೀವ ರಕ್ಷಣೆಗಾಗಿ ‘ಗಜರಾಜ್’ ಸಾಫ್ಟ್ವೇರ್ ಅನಾವರಣ
ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಹಾಗೂ ಆನೆಗಳ ನಡುವೆ ಅಪಘಾತ ತಪ್ಪಿಸುವ ಸಲುವಾಗಿ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಗಜರಾಜ್ ಸಾಫ್ಟ್ವೇರ್ ಅನಾವರಣಗೊಳಿಸಿದ್ದಾರೆ. ಇದೊಂದು ಎಐ ಆಧಾರಿತ ಸಾಫ್ಟ್ವೇರ್ ಆಗಿದ್ದು ಆಸ್ಸಾಂನಲ್ಲಿ ಯಶಸ್ವಿ ಪ್ರದರ್ಶನ ತೋರಿಸಿದೆ. ಮುಂದಿನ ಎಂಟು ತಿಂಗಳ ಒಳಗಾಗಿ 181 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ದೇಶಾದ್ಯಂತ ಅಳವಡಿಸಲು ಉದ್ದೇಶಿಸಲಾಗಿದೆ.
ವಿಭಾಗ