Ayudha Pooja 2022: ಮನೆಯಲ್ಲೇ ಆಯುಧ ಪೂಜೆ, ವಾಹನ ಪೂಜೆ ಮಾಡುವುದು ಹೇಗೆ? ಇಲ್ಲಿದೆ ಪೂಜಾ ವಿಧಾನ
ಮನೆಯಲ್ಲಿರುವ ವಾಹನ, ಕಂಪ್ಯೂಟರ್, ಲ್ಯಾಪ್‌ಟಾಪ್, ಹೊಲಿಗೆ ಯಂತ್ರ, ಕತ್ತಿ, ಇತರೆ ಉಪಕರಣಗಳಿಗೆ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿಯೇ ಪೂಜೆ ಸಲ್ಲಿಸಬಹುದು. ಸುರಕ್ಷಿತ ಪ್ರಯಾಣಕ್ಕೆ ಪ್ರಾರ್ಥಿಸಿ ವಾಹನ ಪೂಜೆ ಕೈಗೊಳ್ಳಬಹುದು.
Ayudha Pooja 2022: ನಾಳೆ ಎಲ್ಲೆಡೆ ಆಯುಧ ಪೂಜೆಯ ಸಂಭ್ರಮ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡೋಣವೆಂದರೆ ಅಲ್ಲಿನ ಉದ್ದದ ಸರತಿ ಸಾಲು ನೋಡಿ ವಾಪಸ್ ಬರಬೇಕಾಗಬಹುದು ಅಥವಾ ದೇವಾಲಯಕ್ಕೆ ಹೋಗಲು ಸಮಯದ ಕೊರತೆಯೂ ಇರಬಹುದು. ಇದೇ ರೀತಿ ಮನೆಯಿಂದ ಹೊರಕ್ಕೆ ಕೊಂಡೊಯ್ಯಲಾಗದ ಕಂಪ್ಯೂಟರ್, ಮನೆಯ ಉಪಕರಣಗಳು, ಹೊಲಿಗೆ ಯಂತ್ರಗಳಿಗೆ ಹೊರಗೆ ಹೋಗಿ ಪೂಜೆ ಸಲ್ಲಿಸುವಂತೆ ಇಲ್ಲ. ಮನೆಯಲ್ಲಿ ಬೈಕ್, ಕಾರು, ಜೀಪು ಇತ್ಯಾದಿ ವಾಹನಗಳಿಗೆ ಪೂಜೆ ಮಾಡಲು ಬಹುತೇಕರು ಬಯಸಬಹುದು.
ನಾಳೆ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಆಯುಧ ಪೂಜೆ ನಡೆಸಲಾಗುತ್ತದೆ. ಕೆಲವರು ದೀಪಾವಳಿ ವೇಳೆಗೂ ಆಯುಧ ಪೂಜೆ ನಡೆಸುತ್ತಾರೆ. ಮೈಸೂರು ಅರಮನೆಯಲ್ಲಿ ನಾಳೆ ಆಯುಧ ಪೂಜೆ ವೈಭವದಿಂದ ನಡೆಯುತ್ತದೆ. ಅಲ್ಲಿರುವ ಹಳೆಯ ವಾಹನಗಳು, ವಿಂಟೇಜ್ ವಾಹನಗಳು, ಶಸ್ತ್ರಾಸ್ತ್ರಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ನಡೆಸಲಾಗುತ್ತದೆ.
ಮನೆಯಲ್ಲಿ ಆಯುಧ ಪೂಜೆ ಹೇಗೆ?
ದೇವರು ಎಲ್ಲೆಲ್ಲೂ ಇರುತ್ತಾನೆ. ದೇವರಿಗೆ ಮನೆಯಿಂದಲೇ ಪೂಜೆ ಸಲ್ಲಿಸಬಹುದು. ಮನೆಯಲ್ಲಿರುವ ವಾಹನ, ಕಂಪ್ಯೂಟರ್, ಲ್ಯಾಪ್‌ಟಾಪ್, ಹೊಲಿಗೆ ಯಂತ್ರ, ಕತ್ತಿ, ಇತರೆ ಉಪಕರಣಗಳಿಗೆ ಶ್ರದ್ಧಾ ಭಕ್ತಿಯಿಂದ ಮನೆಯಲ್ಲಿಯೇ ಪೂಜೆ ಸಲ್ಲಿಸಬಹುದು. ಸುರಕ್ಷಿತ ಪ್ರಯಾಣಕ್ಕೆ ಪ್ರಾರ್ಥಿಸಿ ವಾಹನ ಪೂಜೆ ಕೈಗೊಳ್ಳಬಹುದು.
ಆಯುಧ ಪೂಜೆಗೆ ಮಾಡುವ ಮುನ್ನ
ಮೊದಲಿಗೆ ದೇವರ ಕೋಣೆಯನ್ನು ಅಲಂಕಾರ ಮಾಡಿ. ದೇವರ ಕೋಣೆ ಇಲ್ಲದೆ ಇದ್ದರೆ ಬೇರೆ ಸ್ಥಳವನ್ನು ಆಯುಧ ಪೂಜೆಗಾಗಿ ಮೀಸಲಿಡಬಹುದು. ಒಂದು ಪೂಜಾ ಸ್ಥಳದಲ್ಲಿ ಪೂಜೆ ಮಾಡಬೇಕಾದ ವಸ್ತುಗಳನ್ನು ಇಡಿ. ಲ್ಯಾಪ್‌ಟಾಪ್ ಇತ್ಯಾದಿಗಳನ್ನು ಪೂಜಾ ಸ್ಥಳದಲ್ಲಿ ಇಡಬಹುದು. ಕಂಪ್ಯೂಟರ್ ಇದ್ದರೆ ಟೇಬಲ್ ಕ್ಲೀನ್ ಮಾಡಿ ಕಂಪ್ಯೂಟರ್ ಒರೆಸಿ. ಕಂಪ್ಯೂಟರ್‌ಗೆ ಗಂಧ ಹಚ್ಚಿ. ಹೂವು ಇಡಿ. ಹೊಲಿಗೆ ಯಂತ್ರಕ್ಕೂ ಇದೇ ರೀತಿ ಮಾಡಿ. ಇದೇ ರೀತಿ ಪೂಜಾ ಸ್ಥಳದಲ್ಲಿ ವಿವಿಧ ಆಯುಧಗಳನ್ನು ಇಡಿ. ಇದೇ ರೀತಿ ಪುಸ್ತಕಗಳು, ಪೆನ್ನು ಪೇಪರ್‌ಗಳನ್ನು ಇಟ್ಟು ಪೂಜಿಸಬಹುದು. ಪೂಜೆಗೆ ಬಳಸುವ ವಸ್ತುಗಳು ಶುಚಿಯಾಗಿರಲಿ.
ಆಯುಧ ಪೂಜೆಗೆ ಏನೇನು ಬೇಕು?
- ಸಿಂಧೂರ/ಕುಂಕುಮ ಮತ್ತು ಅರಸಿನ
- ಅಡಿಕೆ, ವೀಲ್ಯದೆಲೆ
- ಮಂಡಕ್ಕಿ
- ಕುಂಬಳಕಾಯಿ ಅಥವಾ ನಿಂಬೆಹಣ್ಣು (ವಾಹನ ಪೂಜೆಗೆ ಇದು ಅತ್ಯಂತ ಅಗತ್ಯ)
- ಹಣ್ಣುಗಳು: ಬಾಳೆಹಣ್ಣು, ಕಬ್ಬು
- ತೆಂಗಿನಕಾಯಿ
- ಬೆಲ್ಲಗಳ ತುಂಡು
- ಸಿಹಿತಿಂಡಿಗಳು
-ದೇವಿಗೆ ನೈವೇದ್ಯವನ್ನೂ ಅರ್ಪಿಸಬಹುದು.
- ಬಾಳೆ ಎಲೆ, ಅಗರಬತ್ತಿ, ಕರ್ಪೂರ, ದೀಪ, ಬತ್ತಿ ಇತ್ಯಾದಿ
ಆಯುಧ ಪೂಜೆ ಮಾಡುವ ವಿಧಾನ
ಪ್ರತಿಯೊಬ್ಬರೂ ಪೂಜಾ ಮಾಡುವ ವಿಧಾನ ಬೇರೆ ಬೇರೆ ರೀತಿ ಇರುತ್ತದೆ. ಸ್ನಾನ ಮಾಡಿ ಪರಿಶುದ್ಧವಾಗಿ ಪೂಜೆ ಆರಂಭಿಸಿ. ಅದಕ್ಕೂ ಮೊದಲು ಅರಶಿನ ಕುಂಕುಮ, ಸಿಂಧೂರ ಬೊಟ್ಟನ್ನು ಆಯುಧಗಳಿಗೆ ಹಚ್ಚಿ.
- ವಾಹನಗಳಿಗೆ ಬಾಳೆ ಗಿಡ ಕಟ್ಟಬಹುದು. ದೇವರಕೋಣೆಗೂ ಬಾಳೆ ಗಿಡಗಳನ್ನು ಬಳಸಬಹುದು.
- ಆಯುಧಗಳನ್ನು ಹೂವಿನಿಂದ ಅಲಂಕರಿಸಿ.
- ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಕಬ್ಬಿನ ತುಂಡುಗಳನ್ನು, ಹಣ್ಣುಗಳನ್ನು, ಸಿಹಿತಿಂಡಿಗಳನ್ನು ಬಾಳೆ ಎಲೆಯಲ್ಲಿ ಇಡಿ.
- ಮಡಕ್ಕಿ, ಬೆಲ್ಲದ ಚೂರುಗಳು ಕೂಡ ಬಾಳೆ ಎಲೆಯಲ್ಲಿ ಇರಲಿ.
-ತೆಂಗಿನಕಾಯಿ ಒಡೆದು ಬಾಳೆ ಎಲೆಯ ಮೇಲೆ ಇಡಿ.
- ಆರತಿ ಬೆಳಗಿ, ಕರ್ಪೂರ ಅಥವಾ ಅಗರಬತ್ತಿ, ಅಥವಾ ಆರತಿ ದೀಪದ ಮೂಲಕ ಆಯುಧಗಳಿಗೆ ಪೂಜೆ ಸಲ್ಲಿಸಬಹುದು.
- ವಾಹನಗಳ ಚಕ್ರಗಳಡಿಗೆ ನಿಂಬೆ ಹಣ್ಣು ಇಡಿ.
- ಕುಂಬಳಕಾಯಿಯನ್ನು ವಾಹನದ ಮುಂದೆ ಒಂದು ಕಲ್ಲು ಇಟ್ಟು ಒಡೆಯಬಹುದು.
- ನಿಂಬೆ ಹಣ್ಣಿನ ಮೇಲೆ ವಾಹನ ಚಲಾಯಿಸಿ.
- ಮನೆಯಲ್ಲಿರುವವರಿಗೆ, ಸ್ನೇಹಿತರಿಗೆ, ಇತರರಿಗೆ ತಿಂಡಿ, ನೈವೇದ್ಯ ನೀಡಬಹುದು.
- ಪೂಜಾ ಸಮಯದಲ್ಲಿ ನಿಮಗೆ ದುರ್ಗೆಯ ಮಂತ್ರಗಳು ತಿಳಿದಿದ್ದರೆ ಪಠಿಸಬಹುದು.