ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ; ಲೋನ್‌ ಪಡೆಯುವ ಮುನ್ನ ಇಷ್ಟು ಯೋಚಿಸಿ-business news 5 mistakes you should avoid while taking loan against property lap personal finance savings jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ; ಲೋನ್‌ ಪಡೆಯುವ ಮುನ್ನ ಇಷ್ಟು ಯೋಚಿಸಿ

ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ; ಲೋನ್‌ ಪಡೆಯುವ ಮುನ್ನ ಇಷ್ಟು ಯೋಚಿಸಿ

ಆರ್ಥಿಕ ಸಾಮರ್ಥ್ಯವನ್ನು ಮೀರಿ ಯಾವ ಕೆಲಸಕ್ಕೂ ಕೈ ಹಾಕಬಾರದು. ಸಾಲ ಪಡೆಯುವ ವಿಚಾರದಲ್ಲೂ ಅಷ್ಟೇ, ಮುಂಚಿತವಾಗಿ ಯೋಚನೆ ಮಾಡದಿದ್ದರೆ, ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಿಸಬೇಕಾಗಬಹುದು. ಆಸ್ತಿ ಮೇಲೆ ಸಾಲ ಪಡೆಯುವ ಯೋಚನೆ ನಿಮಗಿದ್ದರೆ, ಈ ಅಂಶಗಳನ್ನು ತಪ್ಪದೆ ಓದಿ.

Loan Against Property: ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ
Loan Against Property: ಆಸ್ತಿ ಮೇಲಿನ ಸಾಲ ತೆಗೆದುಕೊಳ್ಳುವಾಗ ಈ 5 ತಪ್ಪುಗಳನ್ನು ಮಾಡದಿರಿ

ಹಣಕಾಸಿನ ಸಮಸ್ಯೆ ಎದುರಾಗುವುದು ಸಹಜ. ಹೆಚ್ಚಿನ ಸಂದರ್ಭಗಳಲ್ಲಿ ಲಭ್ಯವಿರುವ ಆದಾಯದ ಮೂಲಗಳಿಂದ ಎಲ್ಲಾ ಖರ್ಚುವೆಚ್ಚಗಳನ್ನು ಭರಿಸಲು ಕಷ್ಟಸಾಧ್ಯ. ಇಂಥಾ ಸಮಯದಲ್ಲಿ ಅಡಮಾನ ಸಾಲದ ಮೊರೆ ಹೋಗುವವರು ಹೆಚ್ಚು. ನಿಮ್ಮ ಅಥವಾ ನಿಮ್ಮ ಸಂಗಾತಿ ಹೆಸರಿನಲ್ಲಿ ಆಸ್ತಿ ಇದ್ದರೆ, ನೀವು ಆಸ್ತಿಯನ್ನು ಬ್ಯಾಂಕ್ ಅಥವಾ ಫೈನಾನ್ಸ್‌ನಲ್ಲಿ ಅಡವಿಡುವ ಮೂಲಕ, ಆಸ್ತಿಯ ಮೇಲಿನ ಸಾಲ (ಎಲ್ಎಪಿ - Loan Against Property) ಪಡೆಯಬಹುದು. ಈ ಸಾಲದ ಮೊತ್ತದೊಂದಿಗೆ ನಿಮ್ಮ ಹೆಚ್ಚುವರಿ ಖರ್ಚುಗಳನ್ನು ನಿರ್ವಹಿಸಬಹುದು. ಎಲ್ಎಪಿ ಅಥವಾ ಆಸ್ತಿ ಮೇಲಿನ ಸಾಲವು ಮನೆ, ಅಂಗಡಿ, ಕಚೇರಿ, ಕಾರ್ಖಾನೆ ಕಟ್ಟಡ ಸೇರಿದಂತೆ ವಸತಿ ಅಥವಾ ವಾಣಿಜ್ಯ ಆಸ್ತಿಯ ಮೇಲೆ ನೀಡಾಗುವ ಸುರಕ್ಷಿತ ಸಾಲವಾಗಿದೆ.

ಅಡಮಾನ ಸಾಲದಲ್ಲಿ ಬರುವ ಹಣವನ್ನು ಹೇಗೆ ಬಳಸಬಹುದು ಎಂಬುದರ ಮೇಲೆ ಬ್ಯಾಂಕ್‌ನಿಂದ ಯಾವುದೇ ನಿರ್ಬಂಧಗಳು ಇರುವುದಿಲ್ಲ. ತುರ್ತು ಪರಿಸ್ಥಿತಿ ಸಮಯದಲ್ಲಿ ಈ ಸಾಲ ತೆಗೆದುಕೊಳ್ಳಬಹುದು. ಹಾಗಂತಾ ಎಲ್ಲಾ ಸಂದರ್ಭಗಳಲ್ಲೂ ಆಸ್ತಿ ಮೇಲೆ ಸಾಲ ಮಾಡಿ ಹಣವನ್ನು ಮನಸೋ ಇಚ್ಛೆ ವಿನಿಯೋಗಿಸಿದರೆ, ನಷ್ಟ ಎದುರಿಸಬೇಕಾಗಬಹುದು. ನೀವೇನಾದರೂ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ನಿಮ್ಮ ಆಸ್ತಿಯ ಮಾಲೀಕತ್ವ ಕಳೆದುಕೊಳ್ಳಬೇಕಾಗಬಹುದು. ಹೀಗಾಗಿ ಎಚ್ಚರಿಕೆಯ ನಿರ್ಧಾರಗಳು ಅಗತ್ಯ.

ಆಸ್ತಿಯ ಮೇಲಿನ ಸಾಲ ತೆಗೆದುಕೊಳ್ಳುವ ಮುನ್ನ ಈ ತಪ್ಪುಗಳನ್ನು ಮಾಡದಿರಿ.

ಬಡ್ಡಿದರಗಳನ್ನು ಹೋಲಿಸದಿರುವುದು

ಸಾಲ ತೆಗೆದುಕೊಳ್ಳುವ ಮುನ್ನ ಬಡ್ಡಿದರಗಳನ್ನು ಪರಿಶೀಲಿಸಬೇಕು. ಇಂಟರೆಸ್ಟ್‌ ರೇಟ್ ನಿರ್ಲಕ್ಷಿಸುವುದು ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಹುದು. ಇದು ನಿಮ್ಮ ಮಾಸಿಕ ಪಾವತಿಗಳು (ಇಎಂಐ) ಮತ್ತು ಸಾಲದ ಪೂರ್ಣ ಅವಧಿಗೆ ನೀವು ಮರುಪಾವತಿ ಮಾಡುವ ಒಟ್ಟು ಮೊತ್ತದ ಮೇಲೆ ನೇರ ಪರಿಣಾಮ ಬೀರುತ್ತದೆ. ಬಡ್ಡಿದರಗಳಲ್ಲಿನ ಸಣ್ಣ ವ್ಯತ್ಯಾಸವಾದರೂ ಕೂಡಾ ಸಾಲದ ಅವಧಿಯಲ್ಲಿ ನೀವು ಪಾವತಿಸುವ ಒಟ್ಟು ಮೊತ್ತವು ಗಮನಾರ್ಹವಾಗಿ ಹೆಚ್ಚುತ್ತದೆ.

ಸಾಲದ ಮೊತ್ತವನ್ನು ನಿರ್ಲಕ್ಷಿಸುವುದು

ಆಸ್ತಿಯ ಮೇಲಿನ ಸಾಲ ತೆಗೆದುಕೊಳ್ಳುವಾಗ ಅಗತ್ಯಕ್ಕಿಂತ ಹೆಚ್ಚು ಮೊತ್ತವನ್ನು ಸಾಲ ಪಡೆಯುವುದು ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಅಗತ್ಯಕ್ಕಿಂತ ಹೆಚ್ಚಿನ ಸಾಲ ತೆಗೆಯುತ್ತೀರಿ ಎಂದರೆ, ನಿಮ್ಮ ಮರುಪಾವತಿಯ ಮೊತ್ತವೂ ಹೆಚ್ಚುತ್ತದೆ. ಇದು ನಿಮ್ಮ ಮಾಸಿಕ ಬಜೆಟ್ ಮೇಲೆ ಒತ್ತಡ ತರಬಹುದು. ಹೀಗಾಗಿ ಇತರ ವೆಚ್ಚ ಅಥವಾ ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸಲು ಕಷ್ಟವಾಗಬಹುದು. ನಿಮ್ಮಿದ್ದ ಮರುಪಾವತಿ ಮಾಡಲು ಎಷ್ಟು ಸಾಮರ್ಥ್ಯವಿದೆಯೋ ಅದನ್ನು ಮೀರಬೇಡಿ.

ಮರುಪಾವತಿ ಸಾಮರ್ಥ್ಯವನ್ನು ನಿರ್ಲಕ್ಷಿಸುವುದು

ಆದಾಯ ಎಷ್ಟಿದೆಯೋ, ಸಾಲ ಮರುಪಾವತಿಸುವ ಸಾಮರ್ಥ್ಯ ಎಷ್ಟಿದೆಯೋ ಅದಕ್ಕೆ ತಕ್ಕನಾಗಿ ಸಾಲ ಮಾಡಬೇಕು. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಇಎಂಐ (ಸಮಾನ ಮಾಸಿಕ ಕಂತುಗಳು) ಇರಬಾರದು. ಅಡಮಾನ ಸಾಲವನ್ನು ತೆಗೆದುಕೊಳ್ಳುವಾಗ ನಿಮ್ಮ ಮಾಸಿಕ ಬಜೆಟ್ ಮೇಲೆ ಒತ್ತಡ ಆಗದಂತೆ ನೋಡಿಕೊಳ್ಳಿ. ತುರ್ತು ಪರಿಸ್ಥಿತಿಗಳಿಗೆ ಹಣಕಾಸಿನ ಕೊರತೆ ಉಂಟಾಗದಂತೆ ಎಚ್ಚರವಹಿಸಿ. ಆರ್ಥಿಕ ಸಾಮರ್ಥ್ಯಗಳನ್ನು ಮೀರಿ ಇಎಂಐ ಇದ್ದರೆ, ನಿಗದಿತ ಸಮಯಕ್ಕೆ ಪಾವತಿ ಮಾಡಲು ನೀವು ಹೆಣಗಾಡಬಹುದು.

ಆಗ್ರಿಮೆಂಟ್‌ ಓದದಿರುವುದು

ಸಾಲ ಕೊಡುವ ಮುನ್ನ ಬ್ಯಾಂಕ್‌ಗಳು ಒಪ್ಪಂದ ಪತ್ರಕ್ಕೆ ಸಹಿ ಹಾಕಿಸುತ್ತವೆ. ವಿಶೇಷವಾಗಿ ಆಸ್ತಿಯ ಮೇಲಿನ ಸಾಲ ಒಪ್ಪಂದ ಪತ್ರ ಓದುವುದನ್ನು ಮರೆಯಬೇಡಿ ಅಥವಾ ಸ್ಕಿಪ್‌ ಮಾಡಬೇಡಿ. ಇದರಿಂದ ಸಾಲದ ಕುರಿತ ತಪ್ಪು ತಿಳುವಳಿಕೆ ಮತ್ತು ಸಮಸ್ಯೆಗಳಿಗೆ ಕಾರಣವಾಗಬಹುದು. ಸಂಸ್ಕರಣಾ ಶುಲ್ಕಗಳು, ಪೂರ್ವಪಾವತಿ ದಂಡಗಳು, ವಿಳಂಬ ಪಾವತಿ ಶುಲ್ಕಗಳು ಮತ್ತು ಇತರ ಆಡಳಿತಾತ್ಮಕ ವೆಚ್ಚಗಳು ಸೇರಿದಂತೆ ಎಲ್ಲಾ ವಿವರ ಈ ಪತ್ರದಲ್ಲಿ ಉಲ್ಲೇಖಿಸಲಾಗುತ್ತದೆ. ಹೀಗಾಗಿ ಈ ಮಾಹಿತಿಯನ್ನು ನಿರ್ಲಕ್ಷಿಸುವುದು ಅನಿರೀಕ್ಷಿತ ಶುಲ್ಕಗಳಿಗೆ ಕಾರಣವಾಗಬಹುದು.

ಪರ್ಯಾಯ ಆಯ್ಕೆಗಳನ್ನು ಹುಡುಕಿ

ಹಣದ ಅಗತ್ಯಕ್ಕಾಗಿ ಆಸ್ತಿ ಮೇಲಿನ ಸಾಲವೇ ಬೇಕಿಲ್ಲ. ಬದಲಿ ಆಯ್ಕೆಗಳೂ ಇರುತ್ತವೆ. ವಿವಿಧ ರೀತಿಯ ಸಾಲ ಸೌಲಭ್ಯಗಳ ಮೂಲಕ ವಿಭಿನ್ನ ಬಡ್ಡಿದರಗಳು ಹಾಗೂ ಸುಲಭ ಮರುಪಾವತಿ ವಿಧಾನ ಇರಬಹುದು. ವೈಯಕ್ತಿಕ ಸಾಲಗಳು, ಕುಟುಂಬ ಸದಸ್ಯರಿಂದ ಕೈಸಾಲ ಪಡೆಯುವಂತಹ ಪರ್ಯಾಯ ಆಯ್ಕೆಗಳನ್ನು ನೋಡಿ. ಅಲ್ಪಾವಧಿಯಲ್ಲಿ ಅನೇಕ ಸಾಲಗಳಿಗೆ ಅರ್ಜಿ ಸಲ್ಲಿಸುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ವಿವಿಧ ಪರ್ಯಾಯ ಆಯ್ಕೆಗಳನ್ನು ವಿಮರ್ಷಿಸಿದ ನಂತರವೇ ಸಾಲದ ನಿರ್ಧಾರಕ್ಕೆ ಬನ್ನಿ.