Aadhaar Update: ಆಧಾರ್ ಕಾರ್ಡ್ ಉಚಿತವಾಗಿ ಅಪ್‌ಡೇಟ್ ಮಾಡಲು ಕೊನೆಯ ಅವಕಾಶ, ಸೆಪ್ಟೆಂಬರ್ 14 ಅಂತಿಮ ಗಡುವು
Aadhaar update last date september 14: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಪ್ರತಿ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದನ್ನು ಕಡ್ಡಾಯ ಮಾಡಿದೆ. ನಿಮ್ಮ ಹಳೆಯ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್‌ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನವಾಗಿರುತ್ತದೆ.
ಆಧಾರ್ ಕಾರ್ಡ್ ಉಚಿತವಾಗಿ ಅಪ್‌ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನವಾಗಿದೆ. ಅದಾದ ಬಳಿಕ ಶುಲ್ಕ ಪಾವತಿಸಿ ಅಪ್‌ಡೇಟ್ ಮಾಡಲು ಅವಕಾಶವುಂಟು. ಮೊದಲನೆಯದಾಗಿ, ಯಾರು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕೆಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಯಾರು ಆಧಾರ್ ಕಾರ್ಡ್ ಪಡೆದು ಹತ್ತು ವರ್ಷವಾಗಿದೆಯೋ ಅವರು ಕಡ್ಡಾಯವಾಗಿ ಇದೇ ಸೆಪ್ಟೆಂಬರ್ 14ರ ಮೊದಲು ಪರಿಷ್ಕರಿಸಬೇಕು. ಈ ರೀತಿ ಅಪ್‌ಡೇಟ್ ಮಾಡಲು ಹಲವು ತಿಂಗಳ ಹಿಂದೆಯೇ ಕೊನೆಯ ದಿನವಾಗಿತ್ತು. ಆದರೆ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಈ ರೀತಿ ಉಚಿತವಾಗಿ ಅಪ್‌ಡೇಟ್ ಮಾಡುವ ಅವಕಾಶವನ್ನು ಸೆಪ್ಟೆಂಬರ್ 14ರ ವರೆಗೆ ವಿಸ್ತರಿಸಿತ್ತು. ಹೀಗಾಗಿ, ಆಧಾರ್ ಅಪ್‌ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ಗಡುವು.
ಏಕೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕು?
ಪ್ರತಿಯೊಬ್ಬರ ಜೀವನದಲ್ಲಿಯೂ ಹತ್ತು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿರಬಹುದು. ಮದುವೆ, ಉದ್ಯೋಗ ಇತ್ಯಾದಿಗಳ ಕಾರಣದಿಂದ ವಾಸಸ್ಥಳ ಬದಲಾಯಿಸಿರಬಹುದು. ಆಧಾರ್‌ನಲ್ಲಿ ನೀವು ನೀಡುವ ಮಾಹಿತಿ ಅಪ್‌ಡೇಟ್ ಆಗಿರುವ ಸಲುವಾಗಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ವಾಸಸ್ಥಳ ಮಾಹಿತಿ ಮಾತ್ರವಲ್ಲದೆ ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಇಮೇಲ್ ಸಂಖ್ಯೆ ಇತ್ಯಾದಿಗಳನ್ನೂ ಬದಲಾವಣೆ ಮಾಡಲು ಅವಕಾಶವಿದೆ.
ಸೆಪ್ಟೆಂಬರ್ 14ರ ಮೊದಲು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದೆ ಇದ್ದರೆ ಏನಾಗುತ್ತದೆ?
ಆಧಾರ್ ಅಪ್‌ಡೇಟ್ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹತ್ತು ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿಕೊಂಡಿರುವವರು, ಇನ್ನೂ ಅಪ್‌ಡೇಟ್ ಮಾಡದೆ ಇದ್ದರೆ ಈ ಅವಧಿಯೊಳಗೆ ಉಚಿತವಾಗಿ ಅಪ್‌ಡೇಟ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಗುರುತಿನ ಮತ್ತು ವಿಳಾಸದ ದಾಖಲೆ ನೀಡಬೇಕಿರುತ್ತದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು 50 ರೂಪಾಯಿ ಖರ್ಚು ಇರುತ್ತದೆ. ಆದರೆ, ಸೆಪ್ಟೆಂಬರ್ 14ರೊಳಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬಹುದು. ಸೆಪ್ಟೆಂಬರ್ 14ರ ಬಳಿಕವೇ ಅಪ್‌ಡೇಟ್ ಮಾಡುವೆ ಎನ್ನುವವರು 50 ರೂಪಾಯಿ ಶುಲ್ಕ ನೀಡಿ ಆಧಾರ್ ಅಪ್‌ಡೇಟ್ ಮಾಡಬಹುದು.
ಆಧಾರ್ ಕಾರ್ಡ್ ಅಪ್‌ಡೇಟ್ ಹೇಗೆ?
ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಮಾಡುವುದು ಕಷ್ಟ ಎನ್ನುವವರು ಮನೆಯ ಸಮೀಪದ ಪರ್ಮನೆಂಟ್ ಎನ್‌ರೋಲ್‌ಮೆಂಟ್ ಕೇಂದ್ರಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅಪ್‌ಡೇಟ್ ಮಾಡಬಹುದು. ಆದರೆ, ಆನ್‌ಲೈನ್‌ನಲ್ಲಿ ಬಿಡುವಿನ ವೇಳೆಯಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಬಯಸುವವರು ಈ ಮುಂದಿನ ಸರಳ ವಿಧಾನದ ಮೂಲಕ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬಹುದು.
- ಮೊದಲಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವೆಬ್‌ಸೈಟ್‌ಗೆ ಹೋಗಿ. ವೆಬ್‌ಸೈಟ್ ವಿಳಾಸ: myaadhaar.uidai.gov.in
- ಆಧಾರ್ ವೆಬ್‌ಸೈಟ್‌ಗೆ ಲಾಗಿನ್ ಆಗಿ. ಆಧಾರ್ ಸಂಖ್ಯೆ, ಒಟಿಪಿ ಬಳಸಿಕೊಂಡು ಲಾಗಿನ್ ಆಗಬಹುದು.
- ಅಪ್‌ಡೇಟ್ ಆಧಾರ್ ವಿಭಾಗ ಕ್ಲಿಕ್ ಮಾಡಿ. ಅಲ್ಲಿ ವಿಳಾಸ ಇತ್ಯಾದಿ ಬದಲಾವಣೆಯ ಅವಕಾಶಗಳು ಇರುತ್ತವೆ. ಸೂಕ್ತ ದಾಖಲೆಗಳನ್ನು ನೀಡಿ ಮಾಹಿತಿ ಅಪ್‌ಡೇಟ್ ಮಾಡಿ.
- ಈ ರೀತಿ ಅರ್ಜಿ ಸಲ್ಲಿಸಿದ ಬಳಿಕ ಯುಆರ್‌ಎನ್ ಸೃಜನೆಯಾಗುತ್ತದೆ. ಅಲ್ಲಿ ಬಿಪಿಒ ಆಯ್ಕೆ ಮಾಡಿಕೊಂಡು ದಾಖಲೆಗಳ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಬೇಕು.
- ಮುಂದಿನ ದಿನಗಳಲ್ಲಿ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಸ್ಟೇಟಸ್ ಪರಿಶೀಲಿಸಲು ಈ ಯುಆರ್‌ಎನ್ ಸಂಖ್ಯೆ ಅಗತ್ಯವಾಗಿರುತ್ತದೆ.
ಗಮನಿಸಿ, ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಅಗತ್ಯ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಈಗ ಆಧಾರ್ ಬೇಕೇಬೇಕು. ಇಂತಹ ಸಂದರ್ಭದಲ್ಲಿ ನೀವು ಆಧಾರ್‌ನಲ್ಲಿ ನೀಡಿರುವ ಮಾಹಿತಿಗೂ ಈಗ ಇರುವ ಮಾಹಿತಿಗೂ ಹೋಲಿಕೆಯಾಗದೆ ಇದ್ದರೆ ಅನಗತ್ಯ ತೊಂದರೆಗಳು ಉಂಟಾಗಬಹುದು. ಹೀಗಾಗಿ, ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿ.