ಭಾರಿ ಕುಸಿತದೊಂದಿಗೆ ಷೇರುಪೇಟೆ ವಹಿವಾಟು ಶುರು, ಸೆನ್ಸೆಕ್ಸ್‌ 700, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರಿ ಕುಸಿತದೊಂದಿಗೆ ಷೇರುಪೇಟೆ ವಹಿವಾಟು ಶುರು, ಸೆನ್ಸೆಕ್ಸ್‌ 700, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ

ಭಾರಿ ಕುಸಿತದೊಂದಿಗೆ ಷೇರುಪೇಟೆ ವಹಿವಾಟು ಶುರು, ಸೆನ್ಸೆಕ್ಸ್‌ 700, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ

ಭಾರತದ ಷೇರುಪೇಟೆ ಏರಿಕೆ ದಾಖಲಿಸುತ್ತ ಹೋಗುತ್ತಿರುವಾಗಲೇ ಪದೇಪದೆ ಮುಗ್ಗರಿಸುತ್ತಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಗುರುವಾರ ಭಾರಿ ಕುಸಿತದೊಂದಿಗೆ ಷೇರುಪೇಟೆ ವಹಿವಾಟು ಶುರುವಾಗಿದೆ. ಸೆನ್ಸೆಕ್ಸ್‌ 700ಕ್ಕೂ ಹೆಚ್ಚು, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ ಕಂಡಿದ್ದು, ಉಳಿದ ವಿವರ ಇಲ್ಲಿದೆ.

ಸೆನ್ಸೆಕ್ಸ್‌ 700, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ
ಸೆನ್ಸೆಕ್ಸ್‌ 700, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ

ಮುಂಬಯಿ: ಭಾರತೀಯ ಷೇರುಪೇಟೆ ಏರುಗತಿಯಲ್ಲಿದ್ದರೂ, ಪದೇಪದೇ ಮುಗ್ಗರಿಸುತ್ತಿರುವ ವಿದ್ಯಮಾನ ಹೂಡಿಕೆದಾರರಲ್ಲಿ ಕಳವಳವನ್ನು ಉಂಟುಮಾಡಿದೆ. ಗುರುವಾರದ (ಅಕ್ಟೋಬರ್ 3) ವಹಿವಾಟು ಶುರುವಾಗುತ್ತಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಪ್ರಮಾಣದ ಕುಸಿತ ದಾಖಲಿಸಿವೆ. ಸೆನ್ಸೆಕ್ಸ್‌ 700ಕ್ಕೂ ಹೆಚ್ಚು, ನಿಫ್ಟಿ 200ಕ್ಕೂ ಹೆಚ್ಚು ಅಂಕ ಕುಸಿತ ಕಂಡಿದೆ.ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ 30-ಷೇರುಗಳ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಕಗಳ ತೀವ್ರ ಕುಸಿತದೊಂದಿಗೆ 83,270.37 ಮಟ್ಟದಲ್ಲಿ ವಹಿವಾಟು ಶುರುಮಾಡಿತು. ಅದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿ ಕೂಡ 200ಕ್ಕೂ ಹೆಚ್ಚು ಪಾಯಿಂಟ್‌ ಕುಸಿದು 25,557 ನ ಮಟ್ಟಕ್ಕೆ ತಲುಪಿದೆ. ಮಾರುಕಟ್ಟೆಗಳು ತೆರೆದ ತಕ್ಷಣ ಈ ಅವಧಿಯಲ್ಲಿ, ಅನೇಕ ದೊಡ್ಡ ಕಂಪನಿಗಳ ಷೇರುಗಳ ಮೌಲ್ಯವೂ ಕುಸಿತ ಕಂಡವು.

ಶುಕ್ರವಾರ (ಸೆಪ್ಟೆಂಬರ್ 27) ಒಂದೇ ದಿನ ಸೆನ್ಸೆಕ್ಸ್ 1200ಕ್ಕೂ ಹೆಚ್ಚು ಅಂಕ ಕುಸಿತ ಕಂಡಕಾರಣ ಹೂಡಿಕೆದಾರರು 3 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದರು. ಸೋಮವಾರ (ಸೆಪ್ಟೆಂಬರ್ 30) ಷೇರುಪೇಟೆ ವಹಿವಾಟು ತುಸು ಏರಿಕೆ ಕಂಡಿತಾದರೂ ಮಂಗಳವಾರ ಹಾಗೆಯೇ ಮುಂದುವರಿದಿತ್ತು. ಬುಧವಾರ ಗಾಂಧಿ ಜಯಂತಿ ನಿಮಿತ್ತ ಪೇಟೆಗೆ ರಜೆ ಇತ್ತು.

ಭಾರತದ ಷೇರುಪೇಟೆ ಕುಸಿತಕ್ಕೇನು ಕಾರಣ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ಜಗತ್ತು ಉದ್ವಿಗ್ನವಾಗಿದೆ. ಮಂಗಳವಾರ (ಅಕ್ಟೋಬರ್ 2) ಇರಾನ್ ದೇಶವು ಇಸ್ರೇಲ್ ದೇಶದ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಈ ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಯುದ್ಧಕ್ಕೆ ಪ್ರಚೋದಿಸಿತು. ಈ ಪರಿಣಾಮದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಪ್ರಪಂಚದಾದ್ಯಂತದ ಷೇರುಪೇಟೆಗಳ ಮೇಲೆ ಆಗಿರುವುದು ಕಂಡುಬಂದಿದೆ. ಇದರಿಂದ ಭಾರತದ ಷೇರುಪೇಟೆಯೂ ಹೊರತಲ್ಲ. ಬುಧವಾರ ಗಾಂಧಿ ಜಯಂತಿ ರಜೆಯ ನಂತರ ಇಂದು ಭಾರತೀಯ ಷೇರು ಮಾರುಕಟ್ಟೆ ತೆರೆದಾಗ, ಇರಾನ್-ಇಸ್ರೇಲ್ ಯುದ್ಧದ ಪ್ರಭಾವ ಇಲ್ಲಿಯೂ ಕಂಡುಬಂದಿದೆ.

ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ ಜೆಎಸ್‌ಡಬ್ಲ್ಯು ಸ್ಟೀಲ್‌, ಸನ್ ಫಾರ್ಮಾ, ಟಾಟಾ ಸ್ಟೀಲ್ ಹೊರತು ಪಡಿಸಿ 27 ಷೇರುಗಳ ಮೌಲ್ಯ ಕುಸಿತ ಕಂಡಿದೆ. ಮಹೀಂದ್ರಾ ಮತ್ತು ಮಹೀಂದ್ರಾ, ಏಷ್ಯನ್ ಪೇಂಟ್ಸ್ ಮತ್ತು ಟಾಟಾ ಮೋಟಾರ್ಸ್ ಷೇರು ಮೌಲ್ಯವು ತಲಾ ಶೇ.2ರಷ್ಟು ಕುಸಿದಿದೆ.

ಗುರುವಾರ ಷೇರುಪೇಟೆಯ ಕುಸಿತದ ನಡುವೆ ಹೆಚ್ಚು ಕುಸಿದ ಷೇರುಗಳನ್ನು ಗಮನಿಸುವುದಾದರೆ, ದೊಡ್ಡ ಕ್ಯಾಪ್ ಕಂಪನಿಗಳ ಪೈಕಿ ಬಿಪಿಸಿಎಲ್ ಷೇರುಗಳು ಶೇಕಡ 2.81 ರಷ್ಟು ಕುಸಿದು 357.65 ರೂಪಾಯಿಗೆ ತಲುಪಿದರೆ, ಐಷರ್ ಮೋಟಾರ್ಸ್ ಷೇರು ಶೇಕಡ 2.62 ರಷ್ಟು ಕುಸಿದು 4842.75 ಕ್ಕೆ ತಲುಪಿದೆ. ಟಾಟಾ ಮೋಟಾರ್ಸ್ ಶೇರು ಶೇ. 2.42ರಷ್ಟು ಇಳಿಕೆಯಾಗಿ 942 ರೂ.ಗಳಲ್ಲಿ ವಹಿವಾಟು ನಡೆಸುತ್ತಿದ್ದರೆ, ವಿಪ್ರೋ ಷೇರು ಶೇ. 2ರಷ್ಟು ಇಳಿಕೆಯಾಗಿ 537ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.

ಕುಸಿತದ ಸುಳಿವು ನೀಡಿದ್ದ ಜಾಗತಿಕ ಮಾರುಕಟ್ಟೆ

ಏಷ್ಯನ್ ಮಾರುಕಟ್ಟೆಗಳು: ವಾಲ್ ಸ್ಟ್ರೀಟ್‌ನಲ್ಲಿ ರಾತ್ರಿಯ ಲಾಭದ ನಂತರ ಏಷ್ಯಾದ ಮಾರುಕಟ್ಟೆಗಳು ಗುರುವಾರ ಹೆಚ್ಚಿನ ವಹಿವಾಟು ನಡೆಸಿದವು. ಜಪಾನ್‌ನ ನಿಕ್ಕಿ 225 ಶೇಕಡಾ 2.57 ರಷ್ಟು ಏರಿಕೆ ಕಂಡರೆ, ಟೋಪಿಕ್ಸ್ ಶೇಕಡಾ 2 ರಷ್ಟು ಜಿಗಿತವನ್ನು ದಾಖಲಿಸಿದೆ. ಚೀನಾ ಮತ್ತು ದಕ್ಷಿಣ ಕೊರಿಯಾದ ಮಾರುಕಟ್ಟೆಗಳಿಗೆ ರಜಾದಿನ.

ವಾಲ್ ಸ್ಟ್ರೀಟ್ : ಟೆಕ್ ಶೇರುಗಳ ಏರಿಕೆಯಿಂದಾಗಿ ಅಮೆರಿಕಷೇರುಪೇಟೆ ವಹಿವಾಟು ಬುಧವಾರ ಅಲ್ಪ ಏರಿಕೆಯೊಂದಿಗೆ ಮುಕ್ತಾಯವಾಯಿತು. ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 39.55 ಪಾಯಿಂಟ್‌ಗಳು ಅಥವಾ ಶೇಕಡಾ 0.09 ರಷ್ಟು ಏರಿ 42,196.52 ಕ್ಕೆ ತಲುಪಿತು. ಆದರೆ ಎಸ್ & ಪಿ 500 0.79 ಪಾಯಿಂಟ್ ಏರಿಕೆಯಾಗಿ 5,709.54 ಕ್ಕೆ ತಲುಪಿತು. ನಾಸ್ಡಾಕ್ ಕಾಂಪೋಸಿಟ್ 14.76 ಪಾಯಿಂಟ್‌ ಏರಿಕೆಯಾಗಿ 17,925.12 ಕ್ಕೆ ತಲುಪಿ ಮುಕ್ತಾಯಗೊಂಡಿತು.

Whats_app_banner