ವಿದೇಶದಲ್ಲಿ ಅಧ್ಯಯನ ಮಾಡುವ ಆಸೆ-ಕನಸು ನಿಮ್ಮದಾ; ಈ 9 ಕೌಶಲ್ಯಗಳು ನಿಮ್ಮಲ್ಲಿದ್ದರೆ ಶೈಕ್ಷಣಿಕ ಹಾದಿ ಸುಗಮ
ಕನ್ನಡ ಸುದ್ದಿ  /  ಜೀವನಶೈಲಿ  /  ವಿದೇಶದಲ್ಲಿ ಅಧ್ಯಯನ ಮಾಡುವ ಆಸೆ-ಕನಸು ನಿಮ್ಮದಾ; ಈ 9 ಕೌಶಲ್ಯಗಳು ನಿಮ್ಮಲ್ಲಿದ್ದರೆ ಶೈಕ್ಷಣಿಕ ಹಾದಿ ಸುಗಮ

ವಿದೇಶದಲ್ಲಿ ಅಧ್ಯಯನ ಮಾಡುವ ಆಸೆ-ಕನಸು ನಿಮ್ಮದಾ; ಈ 9 ಕೌಶಲ್ಯಗಳು ನಿಮ್ಮಲ್ಲಿದ್ದರೆ ಶೈಕ್ಷಣಿಕ ಹಾದಿ ಸುಗಮ

ಪ್ರತಿ ವೃತ್ತಿ ಕ್ಷೇತ್ರವೂ ಒಂದಷ್ಟು ಕೌಶಲ್ಯಗಳನ್ನು ಬಯಸುತ್ತದೆ. ಕಲಿಕಾ ಹಂತದಲ್ಲೇ ಅಗತ್ಯ ಸ್ಕಿಲ್‌ ಇದ್ದರೆ ವೃತ್ತಿಜೀವನ ಸುಲಭ. ವಿದೇಶದಲ್ಲಿ ಉದ್ಯೋಗ ಮಾಡುವುದು ಮಾತ್ರವಲ್ಲದೆ ಅಧ್ಯಯನ ಮಾಡುವುದಾದರೂ ಒಂದಷ್ಟು ಕೌಶಲ್ಯಗಳು ಬೇಕು. ಆಗ ಶೈಕ್ಷಣಿಕ ಹಂತದಲ್ಲಿ ಯಶಸ್ಸು ಗಳಿಸಬಹುದು.

ಈ ಕೌಶಲ್ಯಗಳು ನಿಮ್ಮಲ್ಲಿದ್ದರೆ ವಿದೇಶದಲ್ಲಿ ಅಧ್ಯಯನ ಮಾಡುವ ಶೈಕ್ಷಣಿಕ ಹಾದಿ ಸುಗಮ
ಈ ಕೌಶಲ್ಯಗಳು ನಿಮ್ಮಲ್ಲಿದ್ದರೆ ವಿದೇಶದಲ್ಲಿ ಅಧ್ಯಯನ ಮಾಡುವ ಶೈಕ್ಷಣಿಕ ಹಾದಿ ಸುಗಮ (Reuters)

ಭಾರತೀಯರು ವಿದ್ಯಾಭ್ಯಾಸಕ್ಕಾಗಿ‌ ವಿದೇಶಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್‌ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಅಮೆರಿಕ, ಯುಕೆ ಸೇರಿದಂತೆ ಕೆಲವು ಯುರೋಪ್‌ ದೇಶಗಳು ಭಾರತೀಯರ ಫೇವರೆಟ್ ಆಗಿದೆ. ವಿದೇಶಗಳಲ್ಲಿ ಅಧ್ಯಯನ ಮಾಡಲು ಪ್ರತಿವರ್ಷವೂ ತಮಗಿಷ್ಟದ ದೇಶಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಂತಾ ಭಾರತದಿಂದ ಹೋಗಿ ವಿದೇಶಿ ನೆಲಕ್ಕೆ ಹೊಂದಿಕೊಳ್ಳುವುದು ಸುಲಭದ ಮಾತಲ್ಲ. ಅಲ್ಲಿನ ವಾತಾವರಣ, ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಆ ಸವಾಲುಗಳಿಗೆ ಮುಂಚಿತವಾಗಿ ತಯಾರಿ ನಡೆಸಿಕೊಂಡರೆ ಉತ್ತಮ. ಆಗ ವಿದೇಶದ ಶೈಕ್ಷಣಿಕ ಅವಕಾಶಗಳನ್ನು ಬಳಸಿಕೊಳ್ಳಲು ಸುಲಭವಾಗುತ್ತದೆ. ನಿಮಗೂ ವಿದೇಶದಲ್ಲಿ ಅಧ್ಯಯನ ಮಾಡುವ ಯೋಜನೆ ಇದ್ದರೆ, ಈ ಕೌಶಲ್ಯಗಳು ನಿಮ್ಮಲ್ಲಿರಲಿ.

ಭಾಷಾ ಪ್ರಾವೀಣ್ಯತೆ: ಭಾರತದ ಭಾಷೆಗಳಿಗಿಂತ ವಿದೇಶಗಳಲ್ಲಿ ಭಿನ್ನ ಭಾಷೆಗಳಿರುತ್ತವೆ. ಪ್ರಾಥಮಿಕ ಭಾಷೆ ಇಲ್ಲಿನ ಸ್ಥಳೀಯ ಭಾಷೆಗಿಂತ ಭಿನ್ನವಾಗಿರುವಾಗ, ಆ ಭಾಷೆಯಲ್ಲಿ ಮಾತನಾಡುವುದು ಮಾತ್ರವಲ್ಲದೆ ಅದರಲ್ಲಿ ಪ್ರಾವೀಣ್ಯತೆಯನ್ನು ಸಾಧಿಸುವುದು ಮುಖ್ಯ. ಇಂಗ್ಲೀಷ್‌ ಭಾಷೆಯಂತೂ ತುಂಬಾ ಮುಖ್ಯ.

ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ: ಬೇರೆ ದೇಶಗಳಿಗೆ ಹೋಗಿ ಅಧ್ಯಯನ ಮಾಡುವುದು ಎಂದರೆ ತಮ್ಮ ಮನೆ, ಕುಟುಂಬ ಮತ್ತು ಸ್ನೇಹಿತರಿಂದ ದೂರವಿರುವುದು ಎಂಬುದು ಸ್ಪಷ್ಟ. ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮತ್ತು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಯಬೇಕು. ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ಬದುಕು ನಡೆಸಲು ಅಭ್ಯಾಸ ಮಾಡಿಕೊಳ್ಳಬೇಕು.

ಹೊಸತನಕ್ಕೆ ಹೊಂದಿಕೊಳ್ಳುವುದು: ಭಾರತದ ಆಚಾರ-ವಿಚಾರಗಳು, ವಾತಾವರಣ, ಸಂಸ್ಕ್ರತಿಗಿಂತ ವಿದೇಶಗಳು ಸಾಂಸ್ಕೃತಿಕವಾಗಿ ವಿಭಿನ್ನವಾಗಿರುತ್ತದೆ. ಅಲ್ಲಿನ ಹೊಸ ಪರಿಸರಗಳು, ವಿವಿಧ ಪದ್ಧತಿಗಳು, ಆಹಾರ ಮತ್ತು ಸಾಮಾಜಿಕ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅಭ್ಯಾಸ ಮಾಡಬೇಕು.

ಸಮಯ ನಿರ್ವಹಣೆ: ಬದುಕಿನಲ್ಲಿ ಸಮಯ ನಿರ್ವಹಣೆ ಕಲೆ ಅಗತ್ಯ. ಓದು, ಶೈಕ್ಷಣಿಕ ಬದ್ಧತೆ, ಸಾಮಾಜಿಕ ಚಟುವಟಿಕೆಗಳು ಮತ್ತು ವೈಯಕ್ತಿಕ ಜವಾಬ್ದಾರಿಗಳನ್ನು ನಿಭಾಯಿಸಲು ಸಮಯ ನಿರ್ವಹಣೆ ಅತ್ಯಗತ್ಯ. ಇದು ವಿದ್ಯಾರ್ಥಿಗಳಿಗೆ ಗಡುವಿನ ಒಳಗೆ ಕೆಲಸ ಕಾರ್ಯಗಳನ್ನು ಪೂರೈಸಲು ಮತ್ತು ಆರೋಗ್ಯಕರ ಜೀವನ ಹೊಂದಲು ಸಹಾಯ ಮಾಡುತ್ತದೆ.

ಗೌರವ ಹಾಗೂ ಸಾಂಸ್ಕೃತಿಕ ಜಾಗೃತಿ: ನಿಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ದೇಶದ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಹೃದಯದಿಂದ ಗೌರವಿಸುವುದು ನಿಮ್ಮ ಜವಾಬ್ದಾರಿ. ಸ್ಥಳೀಯ ಪದ್ಧತಿಗಳು, ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಶಿಷ್ಟಾಚಾರಗಳ ಜ್ಞಾನವನ್ನು ಒಳಗೊಂದಿರುವುದು ಮುಖ್ಯ.

ಬೆರೆಯುವ ಕೌಶಲ್ಯ: ನೀವು ಓದುವ ಶಿಕ್ಷಣ ಸಂಸ್ಥೆಗಳಲ್ಲಿ ವೈವಿಧ್ಯಮಯ ಹಿನ್ನೆಲೆಯ ಜನರು ಬಂದಿರುತ್ತಾರೆ. ಅವರೊಂದಿಗೆ ಆರೋಗ್ಯಕರ ಸಂಬಂಧ ಬೆಳೆಸುವುದು ಒಂದು ಕೌಶಲ್ಯ. ಸಹಪಾಠಿಗಳು, ಪ್ರಾಧ್ಯಾಪಕರು ಮತ್ತು ಸ್ಥಳೀಯರೊಂದಿಗೆ ಸಂಪರ್ಕ ಹೊಂದಲು ಈ ಕೌಶಲ್ಯ ನೆರವಾಗುತ್ತದೆ.

ಆರ್ಥಿಕ ಸಾಕ್ಷರತೆ: ವಿದೇಶಕ್ಕೆ ಹೋಗಿ ಹಣಕಾಸು ನಿರ್ವಹಣೆ ಮಾಡುವುದು ಮನೆಯ ಬಜೆಟ್‌ ನಿರ್ವಹಣೆಗಿಂತ ಭಿನ್ನ. ಹೀಗಾಗಿ ವಿದ್ಯಾರ್ಥಿಗಳು ತಮ್ಮದೇ ಆದ ಬಜೆಟ್ ಪ್ಲಾನ್‌ ಮಾಡಲು ಕಲಿಯಬೇಕು. ವೆಚ್ಚಗಳನ್ನು ನಿರ್ವಹಿಸಬೇಕು ಮತ್ತು ಅಲ್ಲಿನ ಕರೆನ್ಸಿ ವಿನಿಮಯ ದರಗಳ ಬಗ್ಗೆ ತಿಳಿದಿರಬೇಕು.

ಸಂಶೋಧನಾ ಕೌಶಲ್ಯಗಳು: ವಿದೇಶಕ್ಕೆ ನೀವು ಹೋಗಿರುವ ಒಟ್ಟಾರೆ ಉದ್ದೇಶ ಉತ್ತಮ ಶಿಕ್ಷಣ ಪಡೆಯುವುದು. ಅದಕ್ಕೆ ತಕ್ಕನಾಗಿ ಶ್ರಮವನ್ನೂ ಹಾಕಬೇಕು. ಶೈಕ್ಷಣಿಕ ಯಶಸ್ಸಿಗೆ ಪರಿಣಾಮಕಾರಿ ಸಂಶೋಧನಾ ಕೌಶಲ್ಯ ಅವಶ್ಯಕ. ಆಳವಾದ ಮಾಹಿತಿ ಕಲೆ ಹಾಕುವುದು, ಮೌಲ್ಯಮಾಪನ ಮಾಡುವುದು, ಸಂಶೋಧನಾ ಪ್ರಬಂಧಗಳನ್ನು ಬರೆಯುವುದು ಮತ್ತು ಮೂಲಗಳನ್ನು ಸರಿಯಾಗಿ ಉಲ್ಲೇಖಿಸುವುದು ಹೇಗೆ ಎಂಬುದನ್ನು ವಿದ್ಯಾರ್ಥಿಗಳು ಕಲಿಯಬೇಕು.

ಸಮಸ್ಯೆ ಬಗೆಹರಿಸುವ ಕೌಶಲ್ಯ: ಮನೆಯಲ್ಲಿ ಸಮಸ್ಯೆಗಳಾದರೆ ನಿಭಾಯಿಸಲು ಮನೆಯವರು ಇರುತ್ತಾರೆ. ಆದರೆ, ವಿದೇಶದಲ್ಲಿ ಅಧ್ಯಯನ ಮಾಡುವಾಗ ಅನಿರೀಕ್ಷಿತ ಸವಾಲುಗಳು ಎದುರಾಗಬಹುದು. ದಿಢೀರ್ ಆರೋಗ್ಯ ಸಮಸ್ಯೆ, ಯಾವುದಾದರೂ ತುರ್ತುಸ್ಥಿತಿಗಳು, ವೀಸಾ ಸಮಸ್ಯೆಗಳು ಅಥವಾ ಶೈಕ್ಷಣಿಕ ತೊಂದರೆ ಎದುರಾದಾಗ ಅದನ್ನು ನಿಭಾಯಿಸಬೇಕು. ಒತ್ತಡ ನಿಭಾಯಿಸುವ ಕಲೆ ಬೆಳೆಸಿಕೊಳ್ಳಬೇಕು. ಚಿಂತೆ ಮಾಡದೆ ಸಮಸ್ಯೆ ಪರಿಹಾರ ಮಾಡಿಕೊಳ್ಳುವ ಕೌಶಲ್ಯ ಬೇಕು.

Whats_app_banner