Recipes: 2023 ರಲ್ಲಿ ಹೆಚ್ಚು ಸರ್ಚ್‌ ಮಾಡಲಾದ ಟಾಪ್‌ 10 ರೆಸಿಪಿಗಳು; ಮೊದಲ ಸ್ಥಾನದಲ್ಲಿದೆ ಮಾವಿನಕಾಯಿ ಉಪ್ಪಿನಕಾಯಿ
ಕನ್ನಡ ಸುದ್ದಿ  /  ಜೀವನಶೈಲಿ  /  Recipes: 2023 ರಲ್ಲಿ ಹೆಚ್ಚು ಸರ್ಚ್‌ ಮಾಡಲಾದ ಟಾಪ್‌ 10 ರೆಸಿಪಿಗಳು; ಮೊದಲ ಸ್ಥಾನದಲ್ಲಿದೆ ಮಾವಿನಕಾಯಿ ಉಪ್ಪಿನಕಾಯಿ

Recipes: 2023 ರಲ್ಲಿ ಹೆಚ್ಚು ಸರ್ಚ್‌ ಮಾಡಲಾದ ಟಾಪ್‌ 10 ರೆಸಿಪಿಗಳು; ಮೊದಲ ಸ್ಥಾನದಲ್ಲಿದೆ ಮಾವಿನಕಾಯಿ ಉಪ್ಪಿನಕಾಯಿ

Food Recipes: ಪ್ರತಿದಿನ ನಮ್ಮ ನಾಲಗೆ ಒಂದಲ್ಲಾ ಒಂದು ರೀತಿಯ ರುಚಿಯನ್ನು ಸವಿಯುತ್ತದೆ. 2023 ಕಳೆಯುತ್ತಿದೆ. ಹೊಸ ವರ್ಷದ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ 2023 ವರ್ಷದಲ್ಲಿ ಜನರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ರೆಸಿಪಿಗಳ ಪಟ್ಟಿ ರಿವೀಲ್‌ ಆಗಿದೆ.

2023ರಲ್ಲಿ ಗೂಗಲ್‌ನಲ್ಲಿ ಹುಡುಕಲಾದ ಟಾಪ್‌ 10 ರೆಸಿಪಿಗಳು
2023ರಲ್ಲಿ ಗೂಗಲ್‌ನಲ್ಲಿ ಹುಡುಕಲಾದ ಟಾಪ್‌ 10 ರೆಸಿಪಿಗಳು (PC: Unsplash,‍ Freepik)

Food Recipes: ಪ್ರತಿದಿನ ಬೆಳಗ್ಗೆ ಎದ್ದು ಕಾಫಿ ಕುಡಿಯುಲು ಆರಂಭವಾದಾಗಿನಿಂದ ರಾತ್ರಿ ಒಂದು ಲೋಟ ಬೆಚ್ಚನೆ ಹಾಲು ಕುಡಿಯುವವರೆಗೂ ಏನೆಲ್ಲಾ ತಿನ್ನುತ್ತೇವೆ ಅನ್ನೋದು ನಮಗೇ ತಿಳಿದಿರುವುದಿಲ್ಲ. ಹಸಿವು ನೀಗಿಸಿಕೊಳ್ಳಲು, ಆತ್ಮೀಯರೊಂದಿಗೆ ಎಂಜಾಯ್‌ ಮಾಡಲು, ಪಾರ್ಟಿ, ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭೂರಿ ಭೋಜನ ಮಾಡದೆ ಇರೋರು ಯಾರು? ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕ ತಿನಿಸುಗಳನ್ನು ತಿನ್ನದೇ ಇರೋರ್ಯಾರು.

2023 ರಲ್ಲಿ ಹುಡುಕಲಾದ ರೆಸಿಪಿಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಮಾವಿನಕಾಯಿ ಉಪ್ಪಿನಕಾಯಿ. ಇನ್ನು ಯಾವೆಲ್ಲಾ ರೆಸಿಪಿಗಳು ಈ ವರ್ಷ ಹೆಚ್ಚು ಸರ್ಚ್‌ ಆಗಿದೆ ನೋಡೋಣ.

1. ಮಾವಿನಕಾಯಿ ಉಪ್ಪಿನಕಾಯಿ

ಮಾವಿನಕಾಯನ್ನು ನೇರವಾಗಿ ತಿನ್ನಲು ಬೇಸಿಗೆ ಸೂಕ್ತ ಕಾಲ. ಅದರೆ ಬೇಸಿಗೆ ಕಳೆದ ನಂತರವೂ ಎಲ್ಲಾ ಕಾಲದಲ್ಲೂ ನಮಗೆ ಮಾವು ಉಪ್ಪಿನಕಾಯಿ ರೂಪದಲ್ಲಿ ದೊರೆಯುತ್ತದೆ. ಊಟಕ್ಕೆ ಉಪ್ಪಿನಕಾಯಿ ಇದ್ದರೆ ಎಷ್ಟು ರುಚಿ, ಅದರಲ್ಲೂ ಮಾವಿನಕಾಯಿ ಉಪ್ಪಿನಕಾಯಿ ಇದ್ದರೆ ಊಟದ ರುಚಿ ದುಪ್ಪಟ್ಟಾಗುತ್ತದೆ. ಸಾಂಬಾರ್‌ ಮಾಡೋಕೆ ಆಗಲಿಲ್ವಾ, ಅನ್ನದ ಜೊತೆ ಈ ಬಾಯಲ್ಲಿ ನೀರೂರುವ ಉಪ್ಪಿನಕಾಯಿ ತಿನ್ನಬಹುದು. ದೋಸೆ, ಚಪಾತಿಗೆ ಚಟ್ನಿ, ಪಲ್ಯ ಮಾಡೋಕೆ ಟೈಮ್‌ ಇಲ್ವಾ, ಇದೇ ಮಾವಿನಕಾಯಿ ಉಪ್ಪಿನಕಾಯಿ ಜೊತೆ ತಿನ್ನಬಹುದು.

2. ಸೆಕ್ಸ್‌ ಆನ್‌ ದಿ ಬೀಚ್‌

ಅಯ್ಯೋ! ಇದೇನು ರೆಸಿಪಿ ಬಗ್ಗೆ ಮಾತನಾಡ್ತಾ ಈ ಹೆಸರು ಹೇಳ್ತಿದ್ದೀರ ಅನ್ಕೊಬೇಡಿ, ಇದೊಂದು ಕಾಕ್ಟೈಲ್‌ ಇದರ ಹೆಸರೇ ಸೆಕ್ಸ್‌ ಆನ್‌ ದಿ ಬೀಚ್‌, ಇದು ಸಿಹಿ ಹಾಗೂ ಹುಳಿ ರುಚಿಗೆ ಹೆಸರಾಗಿದೆ. ವೋಡ್ಕಾ, ಪೀಚ್‌, ಆರೆಂಜ್‌ ಜ್ಯೂಸ್, ಕ್ಯಾನ್‌ಬೆರಿ ಜ್ಯೂಸ್‌ ಮಿಶ್ರಣದ ಈ ಕಾಕ್ಟೈಲನ್ನು 1987ರಲ್ಲಿ ಮೊದಲ ಬಾರಿ ಫ್ಲೋರಿಡಾದ ಬಾರ್‌ವೊಂದರಲ್ಲಿ ತಯಾರಿಸಲಾಯ್ತು. 2023 ಗೂಗಲ್‌ ಸರ್ಚ್‌ನಲ್ಲಿ ಈ ರೆಸಿಪಿ ಎರಡನೇ ಸ್ಥಾನದಲ್ಲಿದೆ.

3. ಪಂಚಾಮೃತ ರೆಸಿಪಿ

ದೇವಸ್ಥಾನಗಳಲ್ಲಿ ಪ್ರಸಾದವಾಗಿ ದೊರೆಯುವ ಪಂಚಾಮೃತ ಎಲ್ಲರಿಗೂ ಬಹಳ ಇಷ್ಟ. ಪಂಚ ಎಂದು ರೆಸಿಪಿಯಲ್ಲಿ ಸೂಚಿಸಿರುವಂತೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆಯ ಮಿಶ್ರಣವೇ ಈ ಪಂಚಾಮೃತ. ಪಂಚಾಮೃತವನ್ನು ಜನರು ದೇವಸ್ಥಾನದಲ್ಲಿ ಪ್ರಸಾದವಾಗಿ ಮಾತ್ರವಲ್ಲದೆ ಮನೆಯಲ್ಲೂ ತಯಾರಿಸಿ ಸೇವಿಸಲು ಇಷ್ಟಪಡುತ್ತಾರೆ ಅನ್ನೋದಕ್ಕೆ ಇದು ಉದಾಹರಣೆ. ಗೂಗಲ್‌ ಹುಡುಕಾಟದಲ್ಲಿ ಇದು 3ನೇ ಸ್ಥಾನದಲ್ಲಿದೆ.

4. ಹಕುಸೈ ರೆಸಿಪಿ

ಇದೊಂದು ಜಪಾನೀಸ್‌ ರೆಸಿಪಿ. ನಾಪಾ ಎಲೆ ಕೋಸು, ಕ್ಯಾರೆಟ್‌, ಒಣ ಜಪೊನಿಸ್‌, ಕೊಂಬು ಸೇರಿದಂತೆ ಇನ್ನಿತರ ಇಂಗ್ರೀಡಿಯಂಟ್ಸ್‌ ಬಳಸಿ ತಯಾರಿಸಲಾಗುವ ಈ ರೆಸಿಪಿಯನ್ನು ಅನ್ನದೊಂದಿಗೆ ಅಥವಾ ಸೈಡ್‌ ಡಿಶ್‌ ಆಗಿ ಸರ್ವ್‌ ಮಾಡಲಾಗುತ್ತದೆ. ನಾಪಾ ಕ್ಯಾಬೇಜ್‌ , ಚೈನಾದಲ್ಲಿ ಬೆಳೆಯುವ ತರಕಾರಿ, ಆದರೆ ಇದು ಪೂರ್ವ ಏಷ್ಯಾ ಕ್ಯುಸಿನ್‌ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.

5. ಧನಿಯಾ ಪಂಜಿರಿ ಪ್ರಸಾದ ರೆಸಿಪಿ

ಉತ್ತರ ಭಾರತದ ಫೇಮಸ್‌ ರೆಸಿಪಿ ಇದು. ಧನಿಯಾ ಪಂಜಿರಿ, ಹಬ್ಬದ , ವ್ರತಾಚರಣೆ ಉಪವಾಸದ ಸಮಯದಲ್ಲಿ ತಯಾರಿಸುವ ಪ್ರಸಾದ. ತಾವರೆ ಬೀಜ, ತೆಂಗಿನಕಾಯಿ, ಬೆಲ್ಲ ಹಾಗೂ ಡ್ರೈ ಫ್ರೂಟ್‌ಗಳಿಂದ ತಯಾರಿಸಲಾಗುವ ಈ ರೆಸಿಪಿ ದೇಹಕ್ಕೆ ಅಗತ್ಯವಾದ ಫೈಬರ್‌, ಆಂಟಿ ಆಕ್ಸಿಡೆಂಟ್‌ ಹಾಗೂ ನ್ಯೂಟ್ರಿಷಿಯನ್‌ ಅಂಶಗಳನ್ನು ಹೊಂದಿದೆ.

6. ಕರಂಜಿ ರೆಸಿಪಿ

ಕರ್ನಾಟಕದಲ್ಲಿ ಇದನ್ನು ಕರ್ಜಿಕಾಯಿ ಎನ್ನುತ್ತೇವೆ, ಉತ್ತರ ಭಾರತದಲ್ಲಿ ಗುಜಿಯಾ, ಕರಂಜಿ ಎಂದು ಕರೆಯುತ್ತಾರೆ. ಗಣೇಶ ಚತುರ್ಥಿ, ದೀಪಾವಳಿ, ಹೋಳಿ ಹಬ್ಬದ ಸಮಯದಲ್ಲಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಮೈದಾ ಹಿಟ್ಟು, ರವೆ, ತುಪ್ಪದ ಹಿಟ್ಟಿಗೆ ಕೊಬ್ಬರಿ, ಕೋವಾ, ಡ್ರೈ ಫ್ರೂಟ್ಸ್‌, ಗಸಗಸೆ, ಹುರಿಗಡಲೆ, ಸಕ್ಕರೆ ಸ್ಟಫಿಂಗ್‌ ಸೇರಿಸಿ ಎಣ್ಣೆಯಲಿ ಕರಿಯಲಾಗುವ ಇದು ಸಾಂಪ್ರದಾಯಿಕ ರೆಸಿಪಿ.

7. ತಿರುವತ್ತಿರೈ ಕಲಿ

ಇದು ತಮಿಳುನಾಡಿನ ಫೇಮಸ್‌ ರೆಸಿಪಿ. ಅಕ್ಕಿತರಿ, ಹೆಸರುಬೇಳೆ, ಬೆಲ್ಲ, ಏಲಕ್ಕಿ , ತೆಂಗಿನಕಾಯಿ, ಡ್ರೈ ಫ್ರೂಟ್‌ಗಳಿಂದ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಹಬ್ಬ , ಹರಿದಿನದಂಥ ವಿಶೇಷ ಸಂದರ್ಭಗಳಲ್ಲಿ ಈ ರೆಸಿಪಿ ತಯಾರಿಸಲಾಗುತ್ತದೆ.

8. ಯುಗಾದಿ ಪಚಡಿ ರೆಸಿಪಿ

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮಿಶ್ರಣದ ಈ ರೆಸಿಪಿಯನ್ನು ಬೇವು, ಹಸಿ ಮಾವಿನಕಾಯಿ, ಬೆಲ್ಲ, ಕರಿಮೆಣಸು, ತೆಂಗಿನಕಾಯಿ ಹಾಗೂ ಉಪ್ಪು ಸೇರಿಸಿ ತಯಾರಿಸಲಾಗುತ್ತದೆ. ಇದೊಂದು ಸಾಂಪ್ರದಾಯಿಕ ರೆಸಿಪಿ.

9. ಕಡುಬು ರೆಸಿಪಿ

ವಿನಾಯಕ ಚತುರ್ಥಿಯಂದು ವಿಘ್ನ ನಿವಾರಕನಿಗಾಗಿ ತಯಾರಿಸುವ ರೆಸಿಪಿಗಳಲ್ಲಿ ಕಡುಬು ಕೂಡಾ ಪ್ರಮುಖವಾದದ್ದು. ಮಹಾರಾಷ್ಟ್ರ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಲ್ಲಿ ಕೂಡಾ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಬೆಲ್ಲ, ತೆಂಗಿನಕಾಯಿ , ಡ್ರೈ ಫ್ರೂಟ್‌ ಮಿಶ್ರಣ ಸೇರಿಸಿ ಹಬೆಯನ್ನು ಬೇಯಿಸಲಾಗುತ್ತದೆ.

10. ರವೆ ಲಡ್ಡು ರೆಸಿಪಿ

ಹಬ್ಬ, ಹರಿದಿನ, ನೆಂಟಿರಷ್ಟರ ಮನೆಗೆ ಕೊಂಡೊಯ್ಯಲು ರವೆ ಉಂಡೆ ಇರಲೇಬೇಕು. ಇದನ್ನು ನಾವು ಕರ್ನಾಟಕದಲ್ಲಿ ರವೆ ಉಂಡೆ ಎಂದರೆ, ಬೇರೆಡೆ ರವೆ ಲಡ್ಡು ಎಂದು ಕರೆಯುತ್ತಾರೆ. ರವೆ, ತುಪ್ಪ, ಸಕ್ಕರೆ, ಏಲಕ್ಕಿ, ಹಾಲು ಹಾಗೂ ಇನ್ನಿತರ ಸಾಮಗ್ರಿಗಳಿಂದ ಈ ರಸಿಪಿ ತಯಾರಿಸಲಾಗುತ್ತದೆ. ಇದು ಮಕ್ಕಳಿಗೂ ಇಷ್ಟವಾದ ರೆಸಿಪಿ.