ಎಣ್ಣೆಯೇ ಇಲ್ಲದೆ ಗರಿಗರಿ ಪಾಲಕ್ ಚಿಪ್ಸ್ ಮಾಡುವುದು ಹೇಗೆ? ಸುಲಭ ಕಣ್ರೀ ಇದು
ಚಿಪ್ಸ್, ಎಲ್ಲರೂ ಇಷ್ಟಪಡುವ ಸ್ನಾಕ್ಸ್. ಆರೋಗ್ಯದ ಕಾಳಜಿವಹಿಸುವವರು ಎಣ್ಣೆಯುಕ್ತ ತಿಂಡಿಗಳನ್ನು ತಿನ್ನಲು ಇಷ್ಟ ಪಡುವುದಿಲ್ಲ. ಅವರೆಲ್ಲರೂ ಎಣ್ಣೆಯಿಲ್ಲದ ತಿಂಡಿಗಳನ್ನೇ ಹೆಚ್ಚಾಗಿ ಬಯಸುತ್ತಾರೆ. ಅಂತಹವರಿಗೆ ಇಲ್ಲಿದೆ ಗರಿಗರಿ ಪಾಲಕ್ ಚಿಪ್ಸ್. ಎಣ್ಣೆಯೇ ಇಲ್ಲದ ಈ ಚಿಪ್ಸ್ ಮಾಡೋದು ತುಂಬಾ ಸುಲಭ. ಮತ್ತೇನು ಯೋಚಿಸಬೇಡಿ, ಇಂದೇ ಪಾಲಕ್ ಚಿಪ್ಸ್ ಮಾಡಿ ಸವಿಯಿರಿ.
ಸಂಜೆಯ ವೇಳೆ ಚಹಾ, ಕಾಫಿಯ ಜೊತೆಗೆ ಏನಾದರೂ ಸ್ನಾಕ್ಸ್ ಬೇಕೆನಿಸುವುದು ಸಹಜ. ದಿನದ ಆಯಾಸಗಳನ್ನೆಲ್ಲಾ ದೂರ ಮಾಡಲು ಈ ಒಂದು ಪುಟ್ಟ ಬ್ರೆಕ್ ಎಲ್ಲರಿಗೂ ಬೇಕು. ಆರೋಗ್ಯದ ಬಗ್ಗೆ ಕಾಳಜಿವಹಿಸುವವರು ಆರೋಗ್ಯಕರ ಟೇಸ್ಟಿ ಸ್ನಾಕ್ಸ್‌ಗಳನ್ನೇ ಹುಡುಕುತ್ತಾರೆ. ನೀವೂ ಹಾಗೆ ಹುಡುಕುತ್ತಿದ್ದರೆ ಇದೋ ನಿಮಗಾಗಿ ಇಲ್ಲಿದೆ ಗರಿಗರಿ ಪಾಲಕ್ ಚಿಪ್ಸ್. ಹೌದು, ಅಂಗಡಿಗಳಲ್ಲಿ ಸಿಗುವ ಎಣ್ಣೆಯುಕ್ತ ಸ್ನಾಕ್ಸ್‌ಗಳು ಆರೋಗ್ಯಕ್ಕೆ ಉತ್ತಮವಲ್ಲ. ಅದರ ಬದಲಿಗೆ ಮನೆಯಲ್ಲೇ ತಯಾರಿಸಬಹುದಾದ ತಿನಿಸುಗಳು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಪಾಲಕ್ ಸೊಪ್ಪು ದೇಹಕ್ಕೆ ಉತ್ತಮವಾದ ಹಸಿರು ತರಕಾರಿಗಳಲ್ಲಿ ಒಂದು. ಗರಿಗರಿಯಾದ ಪಾಲಕ್ ಚಿಪ್ಸ್ ಅನ್ನು ಎಣ್ಣೆಯಿಲ್ಲದೇ ತಯಾರಿಸಬಹುದು. ಇದಕ್ಕೆ ಹೆಚ್ಚು ಸಮಯವೂ ಬೇಡ. ಕಡಿಮೆ ಸಮಯದಲ್ಲಿ ರುಚಿಯಾದ ಪಾಲಕ್ ಚಿಪ್ಸ್ ತಯಾರಿಸುವುದು ಹೇಗೆ ಎಂದು ನೋಡೋಣ.
ಎಣ್ಣೆಯಿಲ್ಲದ ಪಾಲಕ್ ಚಿಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು
ಪಾಲಕ್ ಸೊಪ್ಪು 1 ಕಟ್ಟು
ಎಲೆಕೋಸು (ಲೀಫ್ ಕ್ಯಾಬೇಜ್) 1/2 ಕಟ್ಟು
ಪೀನಟ್ ಬಟರ್- 2 ಚಮಚ
ಆಲೀವ್ ಎಣ್ಣೆ- 2 ಚಮಚ
ಅರಿಶಿನ- 1/4 ಚಮಚ
ಕಿತ್ತಳೆ ಹಣ್ಣಿನ ರಸ ಸ್ವಲ್ಪ
ಉಪ್ಪು
ತಯಾರಿಸುವ ವಿಧಾನ
1) ಮೊದಲಿಗೆ ಪಾಲಕ್ ಮತ್ತು ಎಲೆಕೋಸು, ಈ ಎರಡೂ ಸೊಪ್ಪುಗಳನ್ನು ಚೆನ್ನಾಗಿ ತೊಳೆದು, ಒಂದು ಒಣ ಬಟ್ಟೆಯ ಮೇಲೆ ಹರಡಿ.
2) ಒಣಗಿದ ನಂತರ ಎಲೆಗಳನ್ನು ಒಂದೇ ಆಕಾರದಲ್ಲಿ ನೀಟಾಗಿ ಕತ್ತರಿಸಿ.
3) ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದಕ್ಕೆ ಪೀನಟ್ ಬಟರ್, ಆಲೀವ್ ಎಣ್ಣೆ, ಅರಿಶಿನ, ಕಿತ್ತಳೆ ಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ.
4) ಈಗ ಎಲೆಗಳ ಮೇಲೆ ಈ ಮಿಶ್ರಣವನ್ನು ಹರಡಿ. ಎಲ್ಲಾ ಎಲೆಗಳಿಗೂ ಮಿಶ್ರಣ ತಾಗುವಂತೆ ನಿಧಾನಕ್ಕೆ ಚೆನ್ನಾಗಿ ಮಿಕ್ಸ್ ಮಾಡಿ.
5) ಈ ಎಲೆಗಳನ್ನು ಏರ್ ಫ್ರೈಯರ್‌ನಲ್ಲಿ 170 ಡಿಗ್ರಿಯಲ್ಲಿ 12 ನಿಮಿಷಗಳ ಕಾಲ ಇಡಿ.
6) ಎಣ್ಣೆಯೇ ಇಲ್ಲದ ಆರೋಗ್ಯಕರ ಗರಿಗರಿ ಪಾಲಕ್ ಚಿಪ್ಸ್ ರೆಡಿ.
ಚಹಾ, ಕಾಫಿಯ ಜೊತೆಗೆ ಬೆಸ್ಟ್ ಕಾಂಬಿನೇಷನ್ ಆಗಿರುವ ಪಾಲಕ್ ಚಿಪ್ಸ್ ಮಕ್ಕಳಿಗೂ ಇಷ್ಟವಾಗುತ್ತದೆ. ಇನ್ನೇಕೆ ತಡ ಗರಿಗರಿ ಚಿಪ್ಸ್ ತಯಾರಿಸಿ ನಿಮ್ಮ ಮೂಡ್ ರಿಫ್ರೆಶ್ ಮಾಡಿಕೊಳ್ಳಿ.